Uncategorized

ಸಿಬಿಐನಿಂದ ಡಿ.ಕೆ.ರವಿ ಮಾವನ ವಿಚಾರಣೆ

Pinterest LinkedIn Tumblr

DKRavi-CBI

ಬೆಂಗಳೂರು, ಏ.23- ನಿಷ್ಠಾವಂತ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಸದ್ದಿಲ್ಲದೆ ಆರಂಭಿಸಿರುವ ಸಿಬಿಐ  ಅಧಿಕಾರಿಗಳು ರವಿ ಅವರ ಮಾವ ಹನುಮಂತರಾಯಪ್ಪ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದೆ. ರವಿ ನಿಗೂಢ ಸಾವು ಕುರಿತಂತೆ ಸಿಐಡಿ ಅಧಿಕಾರಿಗಳಿಂದ ಮಾಹಿತಿ  ಪಡೆದು ಅಖಾಡಕ್ಕಿಳಿದಿರುವ ಸಿಬಿಐ ಅಧಿಕಾರಿಗಳು ನಿನ್ನೆ ಹನುಮಂತರಾಯಪ್ಪ ಅವರನ್ನು ವಿಚಾರಣೆಗೊಳಪಡಿಸಿ ಕೆಲ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.  ಸಿಬಿಐ ಕಚೇರಿಗೆ ಹನುಮಂತರಾಯಪ್ಪ ಅವರನ್ನು ಕರೆಸಿಕೊಂಡು

ರವಿ ನಿಗೂಢ ಸಾವಿನ ಬಗೆಗಿನ ಕೆಲ ಅನುಮಾನಗಳಿಗೆ ಉತ್ತರ ಪಡೆದುಕೊಳ್ಳಲಾಗಿದ್ದು, ಅಗತ್ಯಬಿದ್ದಾಗ ನಿಮ್ಮ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಕರೆತರುವಂತೆ ಅಧಿಕಾರಿಗಳು ಹುಕುಂ ಹೊರಡಿಸಿದ್ದಾರೆ.  ಹನುಮಂತರಾಯಪ್ಪ ಅವರಿಂದ ಕೆಲ ಮಾ ಹಿತಿ ಪಡೆದುಕೊಂಡಿರುವ ಸಿಬಿಐ ಅಧಿಕಾರಿಗಳು ಇಂದು ಸಂಜೆ ಡಿ.ಕೆ.ರವಿ ಹುಟ್ಟೂರಾದ ದೊಡ್ಡಕೊಪ್ಪಲಿಗೆ ಭೇಟಿ ನೀಡಲಿದ್ದಾರೆ.

ರವಿ ಪೋಷಕರು ಹಾಗೂ ಸಂಬಂಧಿಕರಿಂದ ನಿಗೂಢ ಸಾವಿನ ಬಗ್ಗೆ ಮಾಹಿತಿ ಪಡೆದ ನಂತರ ತನಿಖೆಯನ್ನು ಯಾವ ದಿಕ್ಕಿನಿಂದ ಆರಂಭಿಸಬೇಕು ಎಂಬ ಬಗ್ಗೆ ಸಿಬಿಐ ಅಧಿಕಾರಿಗಳು ನಿರ್ಧರಿಸಲಿದ್ದಾರೆ.  ಸಾರ್ವಜನಿಕರು, ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಡಿ.ಕೆ.ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿ ಕೆಲ ಷರತ್ತುಗಳನ್ನು ವಿಧಿಸಿತ್ತು.  ರಾಜ್ಯ ಸರ್ಕಾರದ ಷರತ್ತು ಪಾಲಿಸಲು ಸಾಧ್ಯವಿಲ್ಲ ಎಂಬುದನ್ನು ಸಿಬಿಐ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಸರ್ಕಾರ ಷರತ್ತುಗಳನ್ನು ರದ್ದುಗೊಳಿಸಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತ್ತು.
ಹೀಗಾಗಿ ಡಿ.ಕೆ.ರವಿ ಸಾವಿನ ಪ್ರಕರಣದ ತನಿಖೆ ವಿಳಂಬವಾಗಿತ್ತು. ಅಂತಿಮವಾಗಿ ಸಿಬಿಐ ಅಖಾಡಕ್ಕಿಳಿದಿದೆ.

Write A Comment