ಮನೋರಂಜನೆ

ಸಾಧನೆ–ಶ್ರಮ ಸ್ಥಾಯಿ ಗೆಲುವು ಸಂಚಾರಿ

Pinterest LinkedIn Tumblr

san

– ಅಮಿತ್.ಎಂ.ಎಸ್.

ಎರಡು ಸಂಭ್ರಮಗಳ ಪುಳಕದಲ್ಲಿದ್ದಾರೆ ನಟ ‘ಸಂಚಾರಿ’ ವಿಜಯ್. ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದ ಖುಷಿ ಒಂದೆಡೆಯಾದರೆ, ಮುಖ್ಯಪಾತ್ರದಲ್ಲಿ ನಟಿಸಿದ ಮತ್ತೊಂದು ಚಿತ್ರ ‘ಹರಿವು’ ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿರುವ ಸಂಭ್ರಮ ಇನ್ನೊಂದೆಡೆ.

ಹಿಜಡಾಗಳಿಂದಲೇ ಮುಖ್ಯ ಪಾತ್ರ ಮಾಡಿಸುವ ಉದ್ದೇಶ ಹೊಂದಿದ್ದರು ನಿರ್ದೇಶಕ ಲಿಂಗದೇವರು. ಅದಕ್ಕಾಗಿ ಆಡಿಷನ್‌ಗಳನ್ನೂ ನಡೆಸಿದ್ದರು. ಆದರೆ ಅವರಿಗೆ ಸರಿ ಬರದ ಕಾರಣ ಬೇರೆ ನಟರ ಹುಡುಕಾಟದಲ್ಲಿದ್ದರು. ‘ಸಮುದಾಯ’ದ ವೆಂಕಟೇಶ್ ಪ್ರಸಾದ್ ಮತ್ತು ಮಾಧುರಿ ಶಿವಾಂಗಿ ಈ ಪಾತ್ರಕ್ಕೆ ವಿಜಯ್ ಅವರ ಹೆಸರು ಸೂಚಿಸಿದರು. ನಿರ್ದೇಶಕರಿಂದ ಆಹ್ವಾನ ಬಂದಾಗ ತಕ್ಷಣ ಒಪ್ಪಿಕೊಳ್ಳಲು ವಿಜಯ್ ಅವರಿಗೂ ಮನಸಿರಲಿಲ್ಲ.

ನಾಟಕವೊಂದರಲ್ಲಿ ಹಾಗೂ ‘ಒಗ್ಗರಣೆ’ ಸಿನಿಮಾದಲ್ಲಿ ಈ ರೀತಿಯ ಪಾತ್ರದಲ್ಲಿ ಅವರು ನಟಿಸಿದ್ದರು. ಏಕತಾನತೆಯ ಪಾತ್ರಗಳಿಗೆ ಸಿಲುಕುವುದು ಇಷ್ಟವಿಲ್ಲದ ಕಾರಣ ತೆಲುಗು ಮತ್ತು ತಮಿಳು ಚಿತ್ರಗಳಿಂದ ಬಂದಿದ್ದ ಅಂತಹ ಅವಕಾಶಗಳನ್ನು ನಿರಾಕರಿಸಿದ್ದರು. ಆದರೆ ಈ ಚಿತ್ರದ ವಸ್ತು, ಸ್ವರೂಪ ಎರಡೂ ವಿಭಿನ್ನ. ನಾಲ್ಕಾರು ಹಿರಿಯರನ್ನು ಕೇಳಿದಾಗ ಒಳ್ಳೆಯ ಅವಕಾಶ ತಪ್ಪಿಸಿಕೊಳ್ಳಬೇಡ ಎಂಬ ಸಲಹೆ ನೀಡಿದರು. ತಮಗೆ ರಾಷ್ಟ್ರಮಟ್ಟದ ಗೌರವ ತಂದಿದ್ದ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಗೆಯನ್ನು ವಿಜಯ್ ಹೇಳುವುದು ಹೀಗೆ.

‘ಒಗ್ಗರಣೆ’ ಚಿತ್ರದಲ್ಲಿನ ಅನುಭವ ಇಲ್ಲಿಯೂ ಅವರಿಗೆ ನೆರವಾಯಿತು. ಪಾತ್ರಕ್ಕಾಗಿ ವಿಡಿಯೊಗಳ ಮೂಲಕ ಲೈಂಗಿಕ ಅಲ್ಪಸಂಖ್ಯಾತರ ಬದುಕು, ಜೀವನಶೈಲಿಯನ್ನು ಅರ್ಥ ಮಾಡಿಕೊಳ್ಳಲು ಅವರು ಪ್ರಯತ್ನಿಸಿದರು. ಸಿನಿಮಾ ತಯಾರಿಗೆ ಇದ್ದ ತೀರಾ ಕಡಿಮೆ ಕಾಲಾವಕಾಶದಲ್ಲೇ ಹಿಜಡಾಗಳ ಬಗ್ಗೆ ಒಂದಷ್ಟು ಅಧ್ಯಯನ ನಡೆಸಿದರು. ಅವರ ಗುಂಪಿನಲ್ಲಿ ಬೆರೆತು ಮಾತನಾಡಿ ಅವರ ಭಾವನೆಗಳನ್ನು ಅರಿತುಕೊಂಡರು.

ಪ್ರಶಸ್ತಿ ಪಡೆದ ಪಾತ್ರವಾದರೂ, ಪ್ರತಿ ಸನ್ನಿವೇಶದ ಚಿತ್ರೀಕರಣ ಮುಗಿದಾಗಲೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂದು ಅವರಿಗೆ ಅನಿಸುತ್ತಿತ್ತು. ಅದು ಪ್ರತಿ ಚಿತ್ರದ ಪ್ರತಿ ಪಾತ್ರದಲ್ಲಿಯೂ ಕಾಡುವ ಅತೃಪ್ತಿಯಾದರೂ, ಈ ಚಿತ್ರದಲ್ಲಿ ಇನ್ನಷ್ಟು ಒಳಗೊಳ್ಳುವಿಕೆ ಬೇಕಿತ್ತು ಎಂಬ ಅಭಿಪ್ರಾಯ ಅವರದು.

ಗಂಡು ಹೆಣ್ಣಾಗಿ ಪರಿವರ್ತನೆ ಆಗಲು ಚಿಕಿತ್ಸೆ ಮಾಡಿಸಿಕೊಳ್ಳುವ ದೃಶ್ಯ ವಿಜಯ್ ಅವರನ್ನು ತೀವ್ರವಾಗಿ ಕಾಡಿತ್ತು. ಆದರೆ ಸೆನ್ಸಾರ್ ಸಮಸ್ಯೆಗೆ ಸಿಲುಕಬಹುದು ಎಂಬ ಕಾರಣಕ್ಕೆ ಆ ದೃಶ್ಯಕ್ಕೆ ಕತ್ತರಿ ಹಾಕಲಾಯಿತು. ಆಕೆಯನ್ನು ರೈಲಿನಿಂದ ಹೊರಕ್ಕೆ ಎಸೆಯುವ ಸನ್ನಿವೇಶ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿತ್ತು. ಚಿತ್ರದಲ್ಲಿ ಇಂತಹ ಸಂಗತಿಗಳು ಸಾಕಷ್ಟಿವೆ. ತೀರ್ಪುಗಾರರಿಗೂ ಅವು ಬಹುವಾಗಿ ಕಾಡಿರಬಹುದು. ಈ ಕಾರಣಕ್ಕೇ ತಮಗೆ ಪ್ರಶಸ್ತಿಯೂ ಲಭಿಸಿರಬಹುದು ಎನ್ನುತ್ತಾರೆ ವಿಜಯ್.

‘ನಾನು ಅವನಲ್ಲ ಅವಳು’ ಬರಿಯ ಸಿನಿಮಾವಾಗಿ ಅವರಿಗೆ ಕಂಡಿಲ್ಲ. ಇದು ಸಮಾಜದ ಮೇಲೆ ಪರಿಣಾಮ ಬೀರುವ ಪ್ರಭಾವಿ ಸಿನಿಮಾ ಎನ್ನುವುದು ಅವರ ಅನಿಸಿಕೆ. ಹಿಜಡಾಗಳ ಕುರಿತು ಅನೇಕ ಸಿನಿಮಾ ಬಂದಿರಬಹುದು. ಆದರೆ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ ಬಂದಿಲ್ಲ. ಹಿಜಡಾಗಳ ಬದುಕಿನ ಕಷ್ಟಗಳು, ತುಮುಲಗಳು, ಅವರು ಎದುರಿಸುವ ಸಮಸ್ಯೆಗಳನ್ನು ಅತ್ಯಂತ ಆರ್ದ್ರವಾಗಿ ಚಿತ್ರಿಸಲಾಗಿದೆ. ಈ ಚಿತ್ರ ನೋಡಿದ ಬಳಿಕ ಹಿಜಡಾಗಳ ಕುರಿತು ನಮ್ಮ ಮನಸಿನಲ್ಲಿರುವ ಭಾವನೆ ಬದಲಾಗುತ್ತದೆ. ಎಲ್ಲರಲ್ಲಿಯೂ ಇದ್ದಂತೆ ನನಗೂ ಅಂತಹ ನೇತ್ಯಾತ್ಮಕ ಭಾವನೆ ಇತ್ತು. ಅವರನ್ನು ನೋಡಿದರೆ ಮುಜುಗರ ಪಟ್ಟುಕೊಳ್ಳುತ್ತಿದ್ದೆ. ಆದರೆ ಈಗ ಅವರ ಕಷ್ಟಗಳು ಅರ್ಥವಾಗಿದೆ. ಹೆಣ್ಣಾಗಿ ಬದಲಾಗಬೇಕು ಎಂದು ಮಾನಸಿಕವಾಗಿ ಸಿದ್ಧವಾಗಿರುವ ಅವರ ಗಟ್ಟಿತನ ವಿಸ್ಮಯ ಮೂಡಿಸುತ್ತದೆ. ಅವರೂ ನಮ್ಮಂತೆಯೇ ಮನುಷ್ಯರೇ ಎಂದು ಪ್ರತಿಯೊಬ್ಬನಿಗೂ ಮನವರಿಕೆ ಮಾಡಿಕೊಡುವಂತಿದೆ ಈ ಚಿತ್ರ ಎಂದು ಅವರು ವಿವರಿಸುತ್ತಾರೆ.

ಪ್ರಶಸ್ತಿ ಪ್ರಕಟಗೊಂಡ ಬಳಿಕ ಅಭಿನಂದನೆಗಳ ಮಹಾಪೂರವೇ ವಿಜಯ್‌ ಅವರಿಗೆ ಹರಿದು ಬಂದಿದೆ. ಅಮೀರ್ ಖಾನ್, ಶಾಹಿದ್ ಕಪೂರ್, ಮಮ್ಮುಟ್ಟಿಯಂತಹ ನಟರ ಎದುರು ಸ್ಪರ್ಧಿಸಿ ಪ್ರಶಸ್ತಿ ಗೆಲ್ಲುವುದು ಸಾಮಾನ್ಯ ಸಂಗತಿಯಲ್ಲ. ‘ನನಗೇ ನಿಜವಾಗಿಯೂ ಪ್ರಶಸ್ತಿ ಬಂದಿದೆಯೇ ಎಂದು ನಂಬಿಕೆಯೇ ಬರುತ್ತಿಲ್ಲ’ ಎನ್ನುತ್ತಾರೆ.

ಪ್ರಶಸ್ತಿಯ ಬೆನ್ನಲ್ಲೇ ಕಲಾತ್ಮಕ ಸಿನಿಮಾಗಳಿಗೇ ಸೀಮಿತಗೊಳ್ಳುವ ಅಪಾಯವಿದೆ ಎಂಬ ಸವಾಲೂ ಅವರಿಗೆ ಎದುರಾಗಿದೆ. ‘ನಾನೊಬ್ಬ ನಟ ಅಷ್ಟೇ. ಕಲಾತ್ಮಕ ಅಥವಾ ವ್ಯಾಪಾರಿ ಸಿನಿಮಾಗಳ ವ್ಯತ್ಯಾಸ ನನಗೆ ಬೇಕಿಲ್ಲ. ಎಲ್ಲಾ ಕಡೆಯೂ ನಟಿಸಬೇಕು. ಎಲ್ಲಿ ನಟಿಸಿದರೂ ನಟನೆ ಒಂದೇ. ಆದರೆ ಕಲಾತ್ಮಕ ಚಿತ್ರಗಳಲ್ಲಿ ಪ್ರಯೋಗಕ್ಕೆ ಹೆಚ್ಚು ಅವಕಾಶ ಇರುತ್ತದೆ’ ಎನ್ನುತ್ತಾರೆ. ತಮ್ಮ ಈ ಸಾಧನೆ ಎಲ್ಲವೂ ರಂಗಭೂಮಿಯ ಕೊಡುಗೆ ಎಂದು ನಟನೆಯನ್ನು ತಿದ್ದಿ ತೀಡಿದ ರಂಗಭೂಮಿಯನ್ನು ನೆನೆಯುತ್ತಾರೆ ಅವರು.

ಯಾವುದೇ ಸಿನಿಮಾ ಮಾಡಿದರೂ ರಂಗಭೂಮಿಯಲ್ಲಿ ಸಿಗುವ ತೃಪ್ತಿ ದಕ್ಕುವುದಿಲ್ಲ. ಸಿನಿಮಾ ಮತ್ತು ರಂಗಭೂಮಿ ನಡುವೆ ಈಗ ಸಮತೋಲನ ಕಾಯ್ದುಕೊಂಡಿರುವಂತೆ ಮುಂದೆಯೂ ಎರಡರಲ್ಲಿಯೂ ಪಾಲ್ಗೊಳ್ಳುವುದು ಕಷ್ಟವೇನಲ್ಲ. ನಾಟಕಗಳಲ್ಲಿ ಬಣ್ಣಹಚ್ಚದೆ ಇದ್ದರೂ ಹಿನ್ನೆಲೆಯ ಕೆಲಸದಲ್ಲಿ ತೊಡಗಿಸಿಕೊಂಡರೂ ಹೊಸ ಶಕ್ತಿ ದಕ್ಕುತ್ತದೆ ಎನ್ನುವ ಅವರು, ‘ಯಾವ ವ್ಯಕ್ತಿಯಾದರೂ, ಪ್ರತಿಭೆ ಮತ್ತು ಶ್ರಮ ಹಾಕಿದರೆ ಆತ ಖಂಡಿತಾ ಮುಂದೆ ಬರುತ್ತಾನೆ’ ಎಂಬ ತಮ್ಮ ಗುರುಗಳಾದ ರಂಗಾಯಣ ರಘು ಅವರ ಮಾತನ್ನು ನೆನಪಿಸಿಕೊಳ್ಳುತ್ತಾರೆ. ‘ಗಾಡ್‌ಫಾದರ್ ಇಲ್ಲದ ಕಲಾವಿದರಿಗೂ ಮನ್ನಣೆ ಸಿಗುತ್ತದೆ ಎಂಬ ಭರವಸೆಯೇ ದೊಡ್ಡ ಆತ್ಮವಿಶ್ವಾಸ ಮೂಡಿಸುತ್ತದೆ’ ಎನ್ನುವ ಅವರ ಮಾತಿನಲ್ಲಿ, ಖುಷಿಯೂ ಇದೆ, ಉದ್ವೇಗವೂ ಕಾಣಿಸುತ್ತದೆ.

Write A Comment