Uncategorized

ನರಭಕ್ಷಕನ ಹತ್ಯೆ: ಸೋಲಿಗರ ಹುಲಿಯ ಜಾಡು-ಹೆಜ್ಜೆ ಗುರುತು ಪತ್ತೆ ಹಚ್ಚುವಿಕೆ ಆಸರೆ

Pinterest LinkedIn Tumblr

tiger

ಪಂಡರವಳ್ಳಿಯಿಂದ ಜಾಂಬೋಟಿಗೆ ತಂದು ಬಿಟ್ಟ ನರಭಕ್ಷಕನ ಜಾಡು ಹಿಡಿದು ಅದನ್ನು ಹೊಡೆದುರುಳಿಸುವಲ್ಲಿ ಚಾಮರಾಜ ನಗರ ಜಿಲ್ಲೆ ಪುಣಜನೂರಿನ ಸೋಲಿಗರು ಮತ್ತು ತಾಲೂಕಿನ ಪಶ್ಚಿಮ ಭಾಗದ ಅರಣ್ಯವಾಸಿಗಳು ನಿರ್ಣಾಯಕ ಪಾತ್ರ ವಹಿಸಿದರು. ಸ್ಥಳಿಯರ ಸಾಹಸವನ್ನು ಸ್ವತಃ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳೇ ಭಾನುವಾರ ರಾತ್ರಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದು ವಿಶೇಷ.

ಶಾರ್ಪ ಶೂಟರ್ಸ್ ,ಅರವಳಿಕೆ ತಜ್ಞರು ಮತ್ತು ಅರಣ್ಯ ಸಿಬ್ಬಂದಿ ಸೇರಿ ಒಟ್ಟಾರೆ ಕಾರ್ಯಾಚರಣೆ ಸಿಬ್ಬಂದಿ 400 ಸಂಖ್ಯೆ ದಾಟಿದರೂ ತಾಂತ್ರಿಕವಾಗಿ ಹುಲಿ ಇರುವ ಸ್ಥಳ ಗುರುತಿಸಲು ಸಾಧ್ಯವಾಗಲಿಲ್ಲ. ಆದರೆ ಸೋಲಿಗರ ತಂಡ ಕಾರ್ಯಾಚರಣೆಗೆ ಕೈ ಜೋಡಿಸಿದ ನಂತರ ಅದರ ದಿಕ್ಕು ದೆಸೆ ಬದಲಾಯಿತು. ಇವರೊಂದಿಗೆ ಸ್ಥಳೀಯ ಗ್ರಾಮಸ್ಥರೂ ಸೇರಿಕೊಂಡರು.

ಏನಿವರ ವಿಶೇಷತೆ?
ಹುಲಿಯ ಜಾಡು ಮತ್ತು ಹೆಜ್ಜೆ ಗುರುತುಗಳನ್ನು ಪತ್ತೆ ಹಚ್ಚುವಲ್ಲಿ ಈ ಸೋಲಿಗರು ನಿಸ್ಸೀಮರು. ಕಳೆದು 15 ರಿಂದ 20 ವರ್ಷದಿಂದ ಕಾಡಿನಲ್ಲಿ ಹುಲಿಯ ಚಲನವಲನಗಳನ್ನು ಇವರು ಬಲ್ಲರು. ಕಾಡಿನಲ್ಲೇ ವಾಸಿಸುವ ಇವರಿಗೆ ಹುಲಿಯ ವಾಸನೆ ಗುರುತಿಸುವ ವಿಶೇಷ ಸಾಮರ್ಥ್ಯವಿದೆ. ವಾಸನೆ ಆಧಾರವಾಗಿಟ್ಟುಕೊಂಡು ಹುಲಿ ಎತ್ತ ಸಾಗಿದೆ ಎಂಬುದನ್ನು ಖಚಿತವಾಗಿ ಇವರು ಹೇಳಬಲ್ಲರು. ಹುಲಿ ಹೆಜ್ಜೆ ಗುರುತು, ನೆಲ ಪರಚುವುದು, ಗಿಡದ ತೊಗಟೆ ಪರಚುವುದು, ಅದರ ಮಲ-ಮೂತ್ರ ವಾಸನೆ ಕಂಡು ಹಿಡಿಯಬಲ್ಲರು. ಇದರಿಂದ ಹುಲಿ ಇದ್ದ ಜಾಗ ಮತ್ತು ಎತ್ತ ಹೊರಟಿದೆ ಎನ್ನುವುದನ್ನು ಖಚಿತವಾಗಿ ಹೇಳಬಲ್ಲರು. ಕೊನೆಗೆ ಸೋಲಿಗರ ಪಾರಂಪರಿಕ ವಿದ್ಯೆಯೇ ಅರಣ್ಯ ಇಲಾಖೆಗೆ ಆಸರೆಯಾಯಿತು. ಕೊನೆಗೂ ನರಭಕ್ಷಕನ ಆರ್ಭಟ ಮುಗಿಯಿತು.

ಅರಣ್ಯವಾಸಿ ತಾನಾಜಿ ಪಾಟೀಲ ಹುಲಿಗೆ ಇಟ್ಟ ಗುರಿ ತಪ್ಪಲಿಲ್ಲ. ಸತ್ತು ಬಿದ್ದಿ ಹುಲಿಗೆ ನಂತರ ಅರಣ್ಯ ಇಲಾಖೆ ಸಿಬ್ಬಂದಿಯೂ ಗುಂಡು ಹಾರಿಸಿದೆ ಎಂದು ಹೇಳಲಾಗುತ್ತಿದೆ. ಅರಣ್ಯ ಇಲಾಖೆಗೆ ಮಾನ ಉಳಿಸಿ ಕೊಳ್ಳುವುದು ಅಗತ್ಯವಾಗಿದೆ. ಹುಲಿ ಹಿಡಿದು ಮಗಾಲಯಕ್ಕೆ ಬಿಡ ಬೇಕಾದ ಅರಣ್ಯ ಇಲಾಖೆ ಹುಲಿ ಸಾವಿನೊಂದಿಗೆ ಎಲ್ಲ ಸತ್ಯವನ್ನು ಮುಚ್ಚಿ ಹಾಕಲು ಸಾಧ್ಯ ಎಂದು ನಂಬಿದೆ. ಹುಲಿ ಸಾವು ಕೂಡ ಎಷ್ಟು ನ್ಯಾಯ ಸಮ್ಮತ ಎನ್ನುವ ಪ್ರಶ್ನೆ ಮಧ್ಯೆಯೇ ಅರಣ್ಯವಾಸಿಗಳಿಗೆ ಇಂದಿಗೂ ಇಲ್ಲಿ ಹುಲಿ ಬಿಡಲು ಕಾರಣ ಅರ್ಥವಾಗಿಲ್ಲ.

ನಿರಾಳವಾದ ಅರಣ್ಯವಾಸಿಗಳು
ಹುಲಿಯಿಂದ ಕೆಂಗೆಟ್ಟು ಗೃಹ ಬಂಧಿಗಳಾಗಿದ್ದ ಗ್ರಾಮಸ್ಥರು ಈಗ ನಿರಾಳರಾಗಿದ್ದಾರೆ. ಎರಡು ತಿಂಗಳಿಂದ ಭೀಮಗಡ ಅಭಯಾರಣ್ಯ ಪ್ರದೇಶ ಸುತ್ತ ಮುತ್ತ ತಳೆವಾಡಿ,ಕಬನಾಳಿ,ದೇಗಾಂವ ಮೆಂಡಿಲ್,ಕೊಂಗಳಾ ಮತ್ತು ನೇರಸಾ ಭಾಗದಲ್ಲಿ ನರಭಕ್ಷಕ ಹುಲಿ ಬಿಟ್ಟಿದ್ದು ನೇರವಾಗಿ ಪರಿಣಾಮ ಬೀರಿತ್ತು. ಈ ಭಾಗದ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತಿರುಗಿ ಬೀಳುವಂತೆ ಮಾಡಿತ್ತು. ಎರಡು ತಿಂಗಳು ಇಲ್ಲಿಯ ಜೀವನ ಭಯದ ವಾತಾವರಣದಲ್ಲಿ ಮೂಡಿತ್ತು. ಮಕ್ಕಳು ಶಾಲೆಗೆ ಚಕ್ಕರ ಹಾಕಿದರೆ ಅರಣ್ಯವಾಸಿಗಳು ಒಂಟಿಯಾಗಿ ಸುತ್ತುವದಿರಲಿ ಹೊಲ ಗದ್ದೆಗಳಿಗೆ ಹೋಗಲು ಭಯ ಪಡತೊಡಗಿದರು. ದಿನ ಬೆಳಗಾದರೆ ಅರಣ್ಯ ಇಲಾಖೆಗೆ ಹುಲಿ ಕಾಯುವ ಕೆಲಸವಾದರೆ ಅರಣ್ಯ ವಾಸಿಗಳಿಗೆ ತಮ್ಮ ಬದುಕಿನ ಭಯದಿಂದ ಜೀವ ಅಂಗೈಯಲ್ಲಿ ಹಿಡಿದು ಕೊಂಡು ಓಡಾಡಿದರು. ನರಭಕ್ಷಕ ಹುಲಿಯನ್ನು ಅದೊಂದು ಸಾಮಾನ್ಯ ಹುಲಿ ಎಂದು ಅರಣ್ಯ ಇಲಾಖೆ ನಂಬಿಸಲು ಪ್ರಯತ್ನಿಸಿದರೂ ಜನರಿಗೆ ಮಾತ್ರ ಭಯದ ನೆರಳಿನಲ್ಲಿ ದಿನ ನೂಕಿದರು. ಆರಂಭದಲ್ಲೇ ನಮಗೆ ಹುಲಿ ಕೊಲ್ಲುವ ಅಧಿಕಾರ ನೀಡಿ. ನೀವು ಯಾರು ಬೇಡ ನಾವೆ ಅದನ್ನು ಕೊಂದು ನಿಮಗೆ ಒಪ್ಪಿಸುತ್ತೇವೆ ಎಂದು ಅರಣ್ಯವಾಸಿಗಳು ದುಂಬಾಲು ಬಿದ್ದರೂ ಗ್ರಾಮಸ್ಥರು ಅರಣ್ಯದೊಳಗೆ ಹೋಗಲು ಬಿಡದೆ ಅವರನ್ನು ದೂರ ಇಡುವಲ್ಲಿ ಸಫಲರಾಗಿದ್ದರು.

ಚಂಡವ್ಯಾಘ್ರನ ಅಂತ್ಯಕ್ರಿಯೆ
ಬೆಳಗಾವಿ: ಖಾನಾಪುರ ತಾಲೂಕಿನ ಕೊಂಗಳಾ ಅರಣ್ಯ ಬಳಿ ಭಾನುವಾರ ಸಂಜೆ ಗುಂಡೇಟಿಗೆ ಬಲಿಯಾದ ಪಂಡರವಳ್ಳಿಯ ಹುಲಿಯ ಅಂತ್ಯಕ್ರಿಯೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ(ಎನ್‌ಟಿಸಿಎ)ದ ನಿಯಮಾವಳಿಗಳ ಪ್ರಕಾರ ಸೋಮವಾರ ಬೆಳಗ್ಗೆ ನಡೆಯಿತು.

ಎನ್‌ಟಿಸಿಎ ನಿಯಮಾವಳಿ ಪ್ರಕಾರ ಹುಲಿಯ ಕಳೇಬರವನ್ನು ರಾತ್ರಿ ವೇಳೆ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ನಾಗರಗಾಳಿ ಅರಣ್ಯ ಅತಿಥಿ ಗೃಹದ ಬಳಿಯ ಬೆಟ್ಟದಲ್ಲಿ ರಾಜ್ಯ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ ಲೂಥ್ರಾ, ಬೆಳಗಾವಿ ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಮೋಹನರಾಜ್, ಬೆಳಗಾವಿ ಡಿಸಿಎಫ್ ಅಂಬಾಡಿ ಮಾಧವ ಹಾಗೂ ವನ್ಯವೈದ್ಯರು ಸೇರಿದಂತೆ ಸಿಬ್ಬಂದಿ ಸಮ್ಮುಖದಲ್ಲಿ ದಹನ ಮಾಡಲಾಯಿತು. ಬೆಳಗ್ಗೆ 7ರಿಂದ 9ರ ವರೆಗೆ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಹುಲಿಯ ತೂಕ, ಉದ್ದ, ಅಗಲ, ಎತ್ತರ, ಬಣ್ಣ, ಮೈ ಮೇಲಿನ ಪಟ್ಟೆಗಳು ಸೇರಿದಂತೆ ಎಲ್ಲ ದೈಹಿಕ ಅಳತೆಗಳನ್ನು ದಾಖಲಿಸಿಕೊಳ್ಳಲಾಯಿತು.

ಕೆಲವರಿಗೆ ನಿಟ್ಟುಸಿರು, ಕೆಲವರಿಗೆ ಕನಿಕರ
ಹುಲಿ ನಿಗ್ರಹ ತಳೇವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಸಮಾಧಾನವೇನೋ ತಂದಿದೆ. ಆದರೆ ಹುಲಿಯನ್ನು ಜೀವಂತ ಹಿಡಿಯಬಹುದಿತ್ತು ಎಂಬ ಅಭಿಪ್ರಾಯಗಳೂ ಈಗ ವ್ಯಕ್ತವಾಗಿವೆ. ಒಂದೂವರೆ ತಿಂಗಳ ಕಾಲ ಸಾಕುಪ್ರಾಣಿಗಳು, ಗರ್ಭಿಣಿಯೊಬ್ಬಳನ್ನು ಭಕ್ಷಿಸಿ ರೌದ್ರಾವತಾರ ಮೆರೆದು ಪೀಡಕ ಪಟ್ಟ ಕಟ್ಟಿಕೊಂಡಿದ್ದ ಹುಲಿ ಗುಂಡೇಟಿಗೆ ಹತವಾಗಿ ಬಿದ್ದಾಗ ಕಳೆಬರದ ಮುಖಚಹರೆ ಶಾಂತವಾಗಿತ್ತು. ಅಟ್ಟಹಾಸ ಮೆರೆದ ಹುಲಿ ಇದೇ ಇರಬಹುದೇ ಎಂಬ ಜಿಜ್ಞಾಸೆ ಮೂಡಿಸುವಷ್ಟು ಅದರ ‘ಕಳೆ’ ಇತ್ತು. ಕೆಲವರು ಅಯ್ಯೋಪಾಪ ಎಂದರೆ ಮತ್ತೆ ಕೆಲವರು ಗಂಡಾಂತರ ದೂರವಾಯಿತು ಎಂದು ನಿಟ್ಟುಸಿರು ಬಿಟ್ಟರು.

ಗುಂಡು ಹೊಡೆದವರು ಯಾರು?
ಹುಲಿಗೆ ಮೊದಲ ಗುಂಡು ಹಾರಿಸದವರಾರು ಎಂಬ ಬಗ್ಗೆ ಅರಣ್ಯ ಇಲಾಖೆ ಹಾಗೂ ತಾನಾಜಿ ಪಾಟೀಲ್ ಮಧ್ಯೆ ಜಟಾಪಟಿ ಮುಂದುವರಿದಿದೆ. ಅರಣ್ಯ ಅಧಿಕಾರಿಗಳು ತಮಗೆ ತಾನಾಜಿ ಪಾಟೀಲ ಎಂಬ ವ್ಯಕ್ತಿಯೇ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದರೆ, ಶಾಸಕ ಅರವಿಂದ ಪಾಟೀಲ ಅವರು ತಾನಾಜಿಯೇ ಶಿಕಾರಿ ಮಾಡಿದ್ದು ಎಂದು ಹೇಳಿದ್ದಾರೆ.

ಈ ನಡುವೆ ತಾನಾಜಿ ಹುಲಿ ನಿಗ್ರಹ ಕಾರ್ಯಾಚರಣೆಯ ಭಾಗವಾಗಿದ್ದರೆ, ಅವರು ಗನ್ ಎಲ್ಲಿಂದ ತಂದರು, ಅದನ್ನು ಚಲಾಯಿಸಲು ಅರಣ್ಯ ಇಲಾಖೆ ಪರವಾನಗಿ ನೀಡಿತ್ತೇ ಎಂಬೆಲ್ಲ ವಿಷಯಗಳು ಚರ್ಚೆಗೆ ಗ್ರಾಸವಾಗಿದೆ. ಈ ಪ್ರತಿಷ್ಠೆಯ ಹಗ್ಗ ಜಗ್ಗಾಟಕ್ಕಿಂತ ಹುಲಿ ದೇಹ ಸೇರಿದ ಗುಂಡು ಯಾವ ಗನ್‌ನಿಂದ ಸಿಡಿದಿದೆ ಎಂಬುದನ್ನು ವಿಧಿವಿಜ್ಞಾನ ಪ್ರಯೋಗಾಲಯದ ಮೂಲಕ ಕಂಡುಕೊಂಡರೆ ವಿವಾದ ಅಂತ್ಯವಾಗುತ್ತದೆ ಎಂಬ ಸಲಹೆಯನ್ನೂ ಕೆಲ ಪ್ರಜ್ಞಾವಂತರು ನೀಡಿದ್ದಾರೆ.

Write A Comment