ಕರ್ನಾಟಕ

ರಾಷ್ಟ್ರಕವಿ ಕುವೆಂಪು ಜನ್ಮದಿನ: ವಿಶ್ವಮಾನವನಿಗೆ ವಿಧವಿಧ ನಮನ

Pinterest LinkedIn Tumblr

kuvempu

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನವನ್ನು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಗರದ ವಿವಿಧೆಡೆ ಸೋಮವಾರ ಆಚರಿಸಲಾಯಿತು.

ಕುವೆಂಪು ಅವರ ಜನ್ಮದಿನದ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬಿಬಿಎಂಪಿ ಮತ್ತು ಅನಿಕೇತನ ಕನ್ನಡ ಬಳಗ ಜಂಟಿಯಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ‘ಕನ್ನಡ ಜಾಗೃತಿ ದಿನ’ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕುವೆಂಪು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ನಂತರ ಮಾತನಾಡಿದ ಅವರು, ‘ತಮ್ಮ ಸಾಹಿತ್ಯ ಕೃಷಿಯ ಮೂಲಕ ಕನ್ನಡ ಚಳವಳಿಗಳಿಗೆ ಸ್ಫೂರ್ತಿ ತುಂಬಿದ ಕುವೆಂಪು ಅವರು ಜನ್ಮದಿನವನ್ನು ಜಾಗೃತಿ ದಿನವನ್ನಾಗಿ ಆಚರಿಸುತ್ತಿರುವುದು ಅರ್ಥಪೂರ್ಣ­ವಾಗಿದೆ’ ಎಂದು ಅಭಿಪ್ರಾಯಪಟ್ಟರು. ಶಾಸಕ ಅಶ್ವತ್ಥ್ ನಾರಾಯಣ್‌, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಮಾಯಣ್ಣ, ಕಾರ್ಯಕ್ರಮ ಸಂಚಾಲಕ ಕೆ.ವಿ. ನಾಗರಾಜಮೂರ್ತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ ಮತ್ತಿತರರು ಭಾಗವಹಿಸಿದ್ದರು.

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ನಂತರ ಹೇಮಾ ಪ್ರಸಾದ್ ತಂಡದವರಿಂದ ಕುವೆಂಪು ಗೀತ ಗಾಯನ ಕಾರ್ಯಕ್ರಮ ನಡೆಯಿತು. ರಾಜ್ಯ ಸರ್ಕಾರಿ ನೌಕರರ ಸಂಘ: ರಾಜ್ಯ ಸರ್ಕಾರಿ ನೌಕರರ ಸಂಘವು ಕಬ್ಬನ್‌ ಉದ್ಯಾನದಲ್ಲಿರುವ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕುವೆಂಪು ನಮನ ಕಾರ್ಯಕ್ರಮವನ್ನು ಡಾ.ದೊಡ್ಡರಂಗೇಗೌಡ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮೂರು ಕಾಲೇಜುಗಳ ಗ್ರಂಥಾಲಯಗಳಿಗೆ ಕುವೆಂಪು ಸಮಗ್ರ ಸಾಹಿತ್ಯ ಸಂಪುಟವನ್ನು ಉಡುಗೊರೆಯಾಗಿ ನೀಡಲಾಯಿತು. ಸರ್ಕಾರಿ ನೌಕರರಿಂದ ಗೀತ ಗಾಯನ ನಡೆಯಿತು. ಸಂಘದ ರಾಜ್ಯಾಧ್ಯಕ್ಷ ಬಿ.ಪಿ. ಮಂಜೇಗೌಡ, ಗೌರವಾಧ್ಯಕ್ಷ ಎಚ್‌.ಕೆ. ರಾಮು, ಪ್ರಧಾನ ಕಾರ್ಯ­ದರ್ಶಿ ಬಿ.ಎಂ.ಪಟೇಲ್‌ಪಾಂಡು ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಸಂಘರ್ಷ ಸಮಿತಿ: ಕನ್ನಡ ಸಂಘರ್ಷ ಸಮಿತಿ ಲಾಲ್‌ಬಾಗ್‌ ಪಶ್ಚಿಮ ದ್ವಾರದ ಬಳಿ ಕುವೆಂಪು ಪುತ್ಥಳಿ ಬಳಿ ಸೋಮವಾರ ಜನ್ಮದಿನಾಚರಣೆ ಕಾರ್ಯಕ್ರಮ ಆಯೋಜಿಸಿತ್ತು.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮಾಜಿ ಅಧ್ಯಕ್ಷ ಡಾ. ಆರ್.ಕೆ.ನಲ್ಲೂರು ಪ್ರಸಾದ್, ಮಾಜಿ ಉಪ ಮೇಯರ್‌ ಶ್ರೀರಾಮೇ­ಗೌಡ, ಮಾಜಿ ಪಾಲಿಕೆ ಸದಸ್ಯ ಗುಡ್ಡದಹಳ್ಳಿ ಕೃಷ್ಣಪ್ಪ, ಪಾಲಿಕೆ ಸದಸ್ಯ ಅನಿಲ್‌ ಕುಮಾರ್, ಕುವೆಂಪು ನಗರ ವಿಧಾನಸಭಾ ಕ್ಷೇತ್ರದ ಕಸಾಪ ಅಧ್ಯಕ್ಷ ಮ.ಚಂದ್ರಶೇಖರ್‌, ದಂಡು ಪ್ರದೇಶದ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಸಿ.ಜಗನ್ನಾಥ ರೆಡ್ಡಿ, ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ವಿಶ್ವಮಾನವ ಬಳಗ: ವಿಶ್ವಮಾನವ ಬಳಗವು ಸೋಮವಾರ ಹಂಪಿನಗರದ ವಿದ್ಯಾರಣ್ಯ ಭವನದಲ್ಲಿ ಸಂಘದ ಸಂಸ್ಥಾಪನೆ ಮತ್ತು ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮ ಹಮ್ಮಿ­ಕೊಂಡಿತ್ತು. ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಠದ ವಿಜಯನಗರ ಶಾಖೆಯ ಸೌಮ್ಯನಾಥ ಸ್ವಾಮೀಜಿ ಉದ್ಘಾಟಿಸಿದರು. ಬಿಡದಿ ಸರ್ಕಾರಿಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೊಡ್ಡರಸ­ನ­ಕೆರೆ ಮಾಯಪ್ಪ, ನಿವೃತ್ತ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎನ್‌.ಶ್ರೀಕಂಠಯ್ಯ, ಸಂಘದ ಕಾರ್ಯಾಧ್ಯಕ್ಷ ಸಿ.ಆರ್‌. ಗೋಪಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ನೃತ್ಯ ಗಂಗೋತ್ರಿ ತಂಡದ ಕಲಾವಿದರು ಕುವೆಂಪು ವಿರಚಿತ ‘ಕರಿಸಿದ್ದ’ ಕಥನ ಗೀತೆಯ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು.

ಕನ್ನಡ ಚಳವಳಿ ವಾಟಾಳ್‌ ಪಕ್ಷ
ಕುವೆಂಪು ಅವರ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಳವಳಿ ವಾಟಾಳ್‌ ಪಕ್ಷವು ಸೋಮವಾರ ಮೈಸೂರು ಬ್ಯಾಂಕ್‌ ವೃತ್ತದಿಂದ ಕುದುರೆ ಸಾರೋಟಿನಲ್ಲಿ ಕುವೆಂಪು ಅವರ ಭಾವಚಿತ್ರ ಮತ್ತು ರಾಮಾಯಣ ದರ್ಶನಂ ಗ್ರಂಥವನ್ನು ಇಟ್ಟು ಕೆಂಪೇಗೌಡ ಬಸ್‌ ನಿಲ್ದಾಣದ ವರೆಗೆ ಮೆರವಣಿಗೆ ನಡೆಸಿತು.

ಕನ್ನಡ ಕಟ್ಟೆ: ಕನ್ನಡ ಕಟ್ಟೆ ತಂಡ ನಗರದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಆಚರಿಸ­ಲಾಯಿತು. ಸಂಜೆ ಏರ್ಪಡಿಸಿದ್ದ ಸಮಾರಂಭದಲ್ಲಿ ನಟ ಸದಾಶಿವ ಬ್ರಹ್ಮಾವರ ಅವರಿಗೆ 2014ನೇ ಸಾಲಿನ ‘ಕನ್ನಡ ಕಟ್ಟೆ ಪ್ರಶಸ್ತಿ’ ಪ್ರದಾನ ಮಾಡಲಾ­ಯಿತು. ನಂತರ ಭಾವಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕುವೆಂಪು ಜಯಂತ್ಯುತ್ಸವ ಸಮಿತಿ: ಕುವೆಂಪು ಜಯಂತ್ಯುತ್ಸವ ಸಮಿತಿ ವತಿಯಿಂದ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಸಭಾಂಗಣದಲ್ಲಿ ಕುವೆಂಪು ಜನ್ಮದಿನಾಚರಣೆ ಆಯೋಜಿಸಲಾಯಿತು.

Write A Comment