ಕರ್ನಾಟಕ

ಬಾಂಬ್‌ ಸ್ಫೋಟ: ಚರ್ಚ್‌ಸ್ಟ್ರೀಟ್‌ನಲ್ಲಿ ವಹಿವಾಟು ಪುನರಾರಂಭ

Pinterest LinkedIn Tumblr

charch

ಬೆಂಗಳೂರು: ಬಾಂಬ್‌ ಸ್ಫೋಟದ ನಂತರ ಬಂದ್‌ ಆಗಿದ್ದ ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಮಂಗಳವಾರದಿಂದ ವಾಹನ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಪೊಲೀಸರು ಅವಕಾಶ ನೀಡಿದ್ದು, ಘಟನಾ ಸ್ಥಳದ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳಲ್ಲಿ ವಹಿವಾಟು ಪುನರಾರಂಭವಾಗಿದೆ.
ಚರ್ಚ್‌ ಸ್ಟ್ರೀಟ್‌ನ ಎರಡು ಕಡೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಬೆಳಿಗ್ಗೆಯೇ ತೆರವುಗೊಳಿಸಿದ್ದು, ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿದೆ.

ಘಟನೆ ನಂತರ ಮೂರು ದಿನಗಳಿಂದ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್‌ ಸಿಬ್ಬಂದಿಯನ್ನು ವಾಪಸ್‌ ಕರೆಸಿಕೊಳ್ಳಲಾಗಿದೆ. ಕೋಕೊನಟ್‌ ಗ್ರೋವ್‌ ರೆಸ್ಟೋರೆಂಟ್‌ ಪ್ರವೇಶದ್ವಾರದ ಬಳಿ ಬಾಂಬ್‌ ಸ್ಫೋಟಗೊಂಡ ಸ್ಥಳದಲ್ಲಿದ್ದ ಹೂಕುಂಡಗಳನ್ನು ತೆರವುಗೊಳಿಸಿ, ಆ ಜಾಗಕ್ಕೆ ಮಾತ್ರ ಬ್ಯಾರಿಕೇಡ್ ಹಾಕಲಾಗಿದೆ.

ಸ್ಫೋಟದ ಕಾರಣ ಎಂ.ಜಿ.ರಸ್ತೆ ಸುತ್ತಮುತ್ತ ಬುಧವಾರ (ಡಿ.31) ರಾತ್ರಿ ಒಂದು ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ ನೀಡಲಾಗಿದೆ. ಈ ಸಂಬಂಧ ನಗರ ಪೊಲೀಸ್ ಕಮೀಷನರ್ ಎಂ.ಎನ್. ರೆಡ್ಡಿ ಸಹ ಈಗಾಗಲೇ ಪ್ರಕಟಣೆ ಸಹ ಹೊರಡಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ಡಿಜಿಪಿ ನವನೀತ್‌ ವಾಸನ್‌ ಹಾಗೂ ಹಿರಿಯ ಅಧಿಕಾರಿಗಳು ಮೂರು ತಾಸಿಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.

ಜತೆಗೆ ಕೋಕೊನಟ್‌ ಗ್ರೋವ್‌ ರೆಸ್ಟೋರೆಂಟ್‌ನ ಸಿಬ್ಬಂದಿ ಮತ್ತು ಘಟನೆಯ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಿ, ಹೆಚ್ಚಿನ ಮಾಹಿತಿ ಪಡೆದು ಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನವನೀತ್‌ ವಾಸನ್‌, ‘ಪ್ರಕರಣದ ತನಿಖೆಗೆ ಸಂಬಂಧಪಟ್ಟಂತೆ ರಾಜ್ಯದ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ರಾಜ್ಯದ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತೇವೆ’ ಎಂದು ತಿಳಿಸಿದರು.

ತನಿಖಾ ಪ್ರಗತಿ: ‘ಪ್ರಕರಣದ ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಆರೋಪಿಗಳ ಪತ್ತೆಗಾಗಿ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ ಪಾಟೀಲ್‌ ಹೇಳಿದ್ದಾರೆ.
‘ಹೊಸ ವರ್ಷಾಚರಣೆಯ ಹೊಸ್ತಿಲಲ್ಲೇ ಬಾಂಬ್‌ ಸ್ಫೋಟ ಸಂಭವಿಸಿರುವುದರಿಂದ ಭದ್ರತಾ ಕಾರ್ಯ ನಿಜಕ್ಕೂ ಸವಾಲೆನಿಸಿದೆ. ಆದರೆ, ಆ ಸವಾಲನ್ನು ನಿಭಾಯಿಸಲು ಸಮರ್ಥರಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.

ವಿನಯ್ ಮನೆಗೆ
ಬೆಂಗಳೂರು: ಚರ್ಚ್‌ಸ್ಟ್ರೀಟ್‌  ಬಾಂಬ್  ಪ್ರಕರಣದಲ್ಲಿ ಗಾಯಗೊಂಡಿದ್ದ  ವಿನಯ್ ಅವರು ಗುಣಮುಖರಾಗಿ  ಹ್ಯಾಸ್‌ಮ್ಯಾಟ್ ಆಸ್ಪತ್ರೆಯಿಂದ  ಮಂಗಳವಾರ ಮನೆಗೆ ತೆರಳಿದ್ದಾರೆ

ಇತರರು ಗಾಯಾಳು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ.  ವಿನಯ್ ಜೊತೆ ಸಂದೀಪ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.   ಈ  ಸಂಬಂಧ ಬುಧವಾರವು  ಅವರನ್ನು ಮತ್ತೊಮ್ಮೆ ಆರೋಗ್ಯ ತಪಾಸಣೆ ಮಾಡಲಾಗುವುದು.

ಅರೋಗ್ಯದಲ್ಲಿ ಸುಧಾರಿತ ಕಂಡು ಬಂದಲ್ಲಿ ಅವರನ್ನು ಸಹ ಬಿಡುಗಡೆ ಮಾಡಲಾಗುವುದು  ಎಂದು  ಆಸ್ಪತ್ರೆಯ ಉಪಾಧ್ಯಕ್ಷ ಡಾ.ಅಜಿತ್ ಬೆನೆಡಿಕ್ಟ್‌ ಅವರು ತಿಳಿಸಿದ್ದಾರೆ’ ಎಂದು ‘ಸ್ಪೋಟದಲ್ಲಿ ಸಿಡಿದ ಬಾಂಬಿನ ಚೂರುಗಳು ಸಂದೀಪ್ ಅವರ ಎಡಗಾಲಿನ ಮಂಡಿಗೆ ತಿವಿದಿದ್ದ ಕಾರಣ  ಏಟು ಬಿದ್ದ ಸ್ಥಳಕ್ಕೆ ಹೋಲಿಗೆ ಹಾಕಲಾಗಿತ್ತು.  ಹೋಲಿಗೆಯನ್ನು ಮುಂದಿನ ಹತ್ತು ದಿನಗಳಲ್ಲಿ ತೆಗೆದು ಹಾಕಲಾಗುವುದು’ ಎಂದು ತಿಳಿಸಿದರು.

‘ಮಲ್ಯ ಆಸ್ಪತ್ರೆಯಲ್ಲಿ  ದಾಖಲಾಗಿರುವ   ಕಾರ್ತಿಕ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ವೈದ್ಯರು ಮೂರು ದಿನಗಳಲ್ಲಿ  ಕಾರ್ತಿಕ್ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ಭರವಸೆ ನೀಡಿದ್ದಾರೆ’   ಸ್ನೇಹಿತ ಮಣಿಕಾಂತನ್  ಅವರು ತಿಳಿಸಿದ್ದಾರೆ.

Write A Comment