ಕರ್ನಾಟಕ

ಬಿಳಿಗಿರಿರಂಗನಾಥ ಹುಲಿ ರಕ್ಷಿತಾರಣ್ಯದ ಗೊಂಬೆಗಲ್ಲು ಪೋಡಿ: 50 ವರ್ಷಗಳಲ್ಲಿ ಶಾಲೆಗೆ ಹೋಗಿದ್ದು 20 ಮಕ್ಕಳು!

Pinterest LinkedIn Tumblr

biligi

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿರುವ ಗೊಂಬೆಗಲ್ಲು ಪೋಡಿನಲ್ಲಿ 5 ದಶಕದಿಂದಲೂ ಸೋಲಿಗರು ವಾಸಿಸುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಶಾಲೆಯ ಮೆಟ್ಟಿಲು ಹತ್ತಿದ ಮಕ್ಕಳ ಸಂಖ್ಯೆ 20 ದಾಟಿಲ್ಲ.

ಸಿದ್ದ ಕೇತೇಗೌಡ ಎಂಬ ವಿದ್ಯಾರ್ಥಿ ಚಾಮರಾಜನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದು, ಪದವಿ ಪಡೆಯುವ ಹಂತದಲ್ಲಿದ್ದಾನೆ. ಗೊಂಬೆಗಲ್ಲು ಮೂಲ ಸೌಕರ್ಯದಿಂದ ವಂಚಿತವಾ­ಗಿದೆ. ಇಂದಿಗೂ ಇಲ್ಲಿ ಶಾಲೆ ತೆರೆದಿಲ್ಲ. ಇಲ್ಲಿಂದ ಸುಮಾರು ಎರಡೂವರೆ ಕಿ.ಮೀ. ದೂರದಲ್ಲಿರುವ ಕೆರೆದಿಂಬದಲ್ಲಿ ವಸತಿಯುಕ್ತ ಕಲಿಕಾ ಕೇಂದ್ರ ತೆರೆಯಲಾಗಿದೆ. ಇಲ್ಲಿಗೆ ತೆರಳಿ ಮಕ್ಕಳು ವಿದ್ಯಾಭ್ಯಾಸ ಮಾಡಬೇಕಿದೆ.

9 ತಿಂಗಳು ಮಾತ್ರವೇ ಈ ಕೇಂದ್ರ ಕಾರ್ಯ ನಿರ್ವಹಿಸುತ್ತದೆ. ನಂತರ, ಮಕ್ಕಳ ಕಲಿಕಾ­ಮಟ್ಟ ಆಧರಿಸಿ ಬಿಳಿಗಿರಿರಂಗನಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲೆಗೆ (ವಿಜಿಕೆಕೆ) ದಾಖಲಿಸಲಾಗುತ್ತದೆ.

ಪ್ರಸ್ತುತ ವಿಜಿಕೆಕೆಯಲ್ಲಿ ಗೊಂಬೆಗಲ್ಲು ಪೋಡಿನ 2 ಮಕ್ಕಳು 1ನೇ ತರಗತಿಯಲ್ಲಿ ಓದುತ್ತಿದ್ದಾರೆ. 2, 3ನೇ ತರಗತಿ­ಯಲ್ಲಿ ಯಾವುದೇ ಮಕ್ಕಳಿಲ್ಲ. 4ನೇ ತರಗತಿ– 1, 5ನೇ ತರಗತಿ– 1, 6ನೇ ತರಗತಿ– 6, 7ನೇ ತರಗತಿ– 2, 8ನೇ ತರಗತಿ– 2 ಹಾಗೂ 9ನೇ ತರಗತಿಯಲ್ಲಿ ನಾಲ್ವರು ಮಕ್ಕಳು ಓದುತ್ತಿದ್ದಾರೆ. ವಿದ್ಯಾರ್ಥಿನಿ ಸೌಮ್ಯಾ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದಾಳೆ.

ಪೋಡಿನಲ್ಲಿ ಒಟ್ಟು 29 ಕುಟುಂಬಗಳಿದ್ದು, 190 ಜನರಿದ್ದಾರೆ. ಸೂಕ್ತ ಆರೋಗ್ಯ ಸೇವೆ ಇಲ್ಲದೆ ಪ್ರತಿದಿನ ಸೋಲಿ­ಗರು ನರಳುವಂತಾಗಿದೆ. 16 ಕುಟುಂಬಗಳು ಮಾತ್ರ ಮನೆ ನಿರ್ಮಿಸಿಕೊಂಡಿವೆ. ಉಳಿದ ಕುಟುಂಬಗಳಿಗೆ ತೆಳು­ವಾದ ಕಟ್ಟಿಗೆ ಪಟ್ಟಿ ಜೋಡಿಸಿ ಮಣ್ಣು ಮೆತ್ತಿರುವ ಗೋಡೆ, ತೇಗದ ಎಲೆ ಹಾಗೂ ಬಾಣೆಹುಲ್ಲು ಜೋಡಿಸಿ ಹೊದಿಸಿ­ರುವ ಛಾವಣಿಗಳೇ ಮನೆಗಳಾಗಿವೆ!

ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ– 2006ರ ಅಡಿ ಇನ್ನೂ ಹಲವು ಕುಟುಂಬಗಳಿಗೆ ಭೂಹಕ್ಕುಪತ್ರ ಸಿಕ್ಕಿಲ್ಲ. 6 ಕುಟುಂಬ ಪಡಿತರ ಸೌಲಭ್ಯದಿಂದ ವಂಚಿತವಾಗಿವೆ. ಮಳೆ­ಗಾಲ­ದಲ್ಲಿ ಗಿರಿಜನ ಕಲ್ಯಾಣ ಇಲಾಖೆಯಿಂದ ನೀಡುವ ಪೌಷ್ಟಿಕ ಆಹಾರ ವಿತರಣಾ ಪಟ್ಟಿಯಿಂದ 5 ಕುಟುಂಬಗಳು ಹೊರಗುಳಿದಿದ್ದು, ಸೇರ್ಪಡೆಗೆ ಸೋಲಿಗರು ಹರಸಾಹಸ­ಪಡುತ್ತಿದ್ದಾರೆ.

‘ಶಾಲೆ ತೆರೆಯಲು ಹಲವು ವರ್ಷದಿಂದ ಒತ್ತಾಯಿಸು­ತ್ತಿದ್ದೇವೆ. ಆದರೆ, ಸರ್ಕಾರ, ಶಿಕ್ಷಣ ಇಲಾಖೆ ಗಮನಹರಿ-­ಸಿಲ್ಲ. ಡಿ.ಇಡಿ ವಿದ್ಯಾಭ್ಯಾಸ ಮಾಡಿರುವ 11 ಮಂದಿ ಸೋಲಿಗರಿದ್ದಾರೆ. ಈ ಪೈಕಿ ಮೂವರು ಮಹಿಳೆಯರಿದ್ದಾರೆ. ಕಾಡಿನಲ್ಲಿ ಶಾಲೆ ತೆರೆದರೆ ಡಿ.ಇಡಿ ಶಿಕ್ಷಣ ಪಡೆದಿರುವ ಸೋಲಿಗರನ್ನು ನೇಮಿಸಬಹುದು. ಅಗತ್ಯವಿರುವೆಡೆ ಸೋಲಿಗ ಮಕ್ಕಳಿಗೆ ಶಾಲೆ ತೆರೆಯಲು ಸರ್ಕಾರ ಮುಂದಾಗಬೇಕು’ ಎಂಬುದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ. ಮಾದೇಗೌಡ ಅವರ ಒತ್ತಾಯ.

ಅಂದಹಾಗೆ ಇದೇ ಪೋಡಿಯಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಬುಧವಾರ ವಾಸ್ತವ್ಯ ಮಾಡಲಿದ್ದಾರೆ.

Write A Comment