ಕರಾವಳಿ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಶ್ರೀಲಹರಿ ದೇವಾಡಿಗರಿಗೆ ಡಾಕ್ಟರ್ ಆಗುವ ಕನಸು

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು ಕುಂದಾಪುರ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಲಹರಿ ದೇವಾಡಿಗ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಹೆಮ್ಮಾಡಿ ಸಮೀಪದ ಜಾಲಾಡಿ ನಿವಾಸಿ ಉದ್ಯಮಿ, ವಾದ್ಯ ತಂಡ ನಡೆಸುತ್ತಿರುವ ಶ್ರೀಧರ್ ದೇವಾಡಿಗ ಮತ್ತು ಕುಂದಾಪುರ ನಗರ ಯೋಜನಾ ಪ್ರಾಧಿಕಾರದಲ್ಲಿ ಬೆರಳಚ್ಚುಗಾರರಾಗಿರುವ ಲಲಿತಾ ಎಸ್. ದೇವಾಡಿಗ ದಂಪತಿಗಳ ಇಬ್ಬರು ಪುತ್ರಿಯರ ಪೈಕಿ ಶ್ರೀಲಹರಿ ಕಿರಿಯವಳು. ಒಂದನೇ ತರಗತಿಯಿಂದ ವೆಂಕಟರಮಣ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಕೃತದಲ್ಲಿ 125, ಕನ್ನಡ 100, ಇಂಗ್ಲೀಷ್ 100, ವಿಜ್ಞಾನ 100, ಸಮಾಜ 100, ಗಣಿತದಲ್ಲಿ 99 ಅಂಕ ಪಡೆದಿದ್ದಾರೆ.

ಡಾಕ್ಟರ್ ಆಗುವಾಸೆ..
ಯಾವುದೇ ಟ್ಯೂಷನ್ ಹೋಗಿಲ್ಲ. ನಿತ್ಯ ಓದುತ್ತಿದ್ದೆ. ಪರೀಕ್ಷೆ ಸಂದರ್ಭ ಹೆಚ್ಚು ಓದುತ್ತಿದ್ದೆ. ತಂದೆ-ತಾಯಿ, ಮನೆಯವರು ಹಾಗೂ ಶಿಕ್ಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ. 620 ಅಧಿಕ ಅಂಕದ ನಿರೀಕ್ಷೆಯಿತ್ತು. ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿರುವುದು ಖುಷಿಯಾಗಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಮುಂದುವರಿದು ವೈದ್ಯಳಾಗುವಾಸೆ ಇದೆ ಎಂದು ಶ್ರಿಲಹರಿ ಹೇಳಿದರು‌.

ಮಗಳ ಸಾಧನೆಯಿಂದ ಬಹಳ ಸಂತಸವಾಗಿದೆ. ನಿತ್ಯವು ಪರಿಶ್ರಮಪಡುತ್ತಿದ್ದಳು. ಅಂದಿನ ಪಾಠ ಅಂದಿನ ದಿನವೇ ಶ್ರದ್ಧೆಯಿಂದ ಓದುತ್ತಿದ್ದು ಮನೆ ಪಾಠ ಹೊರತುಪಡಿಸಿ ಟ್ಯೂಷನ್ ಗೆ ಹೋಗಿಲ್ಲ ಎಂದು ಶ್ರೀಲಹರಿ ತಾಯಿ ಲಲಿತಾ ಶ್ರೀಧರ್ ದೇವಾಡಿಗ ತಿಳಿಸಿದ್ದಾರೆ.

Comments are closed.