ಕರಾವಳಿ

ಕುಂದಾಪುರದ ಕಾಳಾವರ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ಬಟ್ಟೆ ವ್ಯಾಪಾರಿಯ ಪುತ್ರಿ ರಾಜ್ಯಕ್ಕೆ ಟಾಪರ್..!

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇಂದು ಎಸ್‌ಎಸ್‌ಎಲ್‌ಸಿ‌ ಫಲಿತಾಂಶ ಪ್ರಕಟವಾಗಿದ್ದು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.‌ಅದರಲ್ಲೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರ ಸಾಧನೆಯೂ ಕೂಡ ಗಮನಾರ್ಹ ಸಂಗತಿಯಾಗಿದೆ. 625ಕ್ಕೆ‌ 625 ಅಂಕ ಪಡೆದ 145 ವಿದ್ಯಾರ್ಥಿಗಳ ಪೈಕಿ ಕುಂದಾಪುರದ ಕಾಳಾವರ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ನಿಶಾ ಕೂಡ ಒಬ್ಬರು.

ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಗ್ರಾಮೀಣ ಭಾಗವಾದ ಕಾಳಾವರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕಾಳಾವರ-ಸಳ್ವಾಡಿ ನಿವಾಸಿ ಶ್ರೀನಿವಾಸ ಜೋಗಿ, ಆಶಾ ದಂಪತಿಗಳ ಪುತ್ರಿ ನಿಶಾ 625 ಅಂಕ ಪಡೆದು ಸಾಧನೆ‌ ಮಾಡಿದವರು.

ತಂದೆ ಸಣ್ಣ ಪ್ರಮಾಣದ ಬಟ್ಟೆ ವ್ಯಾಪಾರಿಯಾಗಿದ್ದು ತಾಯಿ‌ ಗೃಹಿಣಿ. 9 ನೇ ತರಗತಿ ಓದುತ್ತಿರುವ ಸಹೋದರಿ ಮತ್ತು ಅಜ್ಜ ಅಜ್ಜಿ ಜೊತೆ ನಿಶಾ ವಾಸವಿದ್ದಾರೆ. ಮನೆಯಿಂದ ಅನತಿ ದೂರ ನಡೆದು ಸಾಗಿ ಬಳಿಕ 2 ಕಿ.ಮೀ ದೂರ ಬಸ್ಸಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು. ಬೆಳಿಗ್ಗೆ ಹಾಗೂ ಸಂಜೆ ಸಹಿತ ಬಿಡುವಿನ ವೇಳೆ ಓದುವ ಜೊತೆಗೆ ಕರಾಟೆಯಲ್ಲಿ‌ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಅಲ್ಲದೆ ಯಕ್ಷಗಾನ ಕಲಿಯುತ್ತಿದ್ದು‌ ವೇಷ ಕೂಡ ಮಾಡಿದ್ದಾರೆ.

625 ಅಂಕದಲ್ಲಿ ಒಂದೆರಡು ಅಂಕ ಕಳೆದುಕೊಳ್ಳುವ ಭಯವಿತ್ತು. 625 ಅಂಕ ಪಡೆದಿದ್ದಕ್ಕೆ ತುಂಬಾ ಸಂತಸವಾಗಿದೆ. ಮುಂದೆ ವಿಜ್ಞಾನ ವಿಭಾಗದಲ್ಲಿ ಓದಿ ವೈದ್ಯಯಾಗುವ ಮನದಿಂಗಿತವನ್ನು ‘ಕನ್ನಡಿಗವರ್ಲ್ಡ್’ ಪ್ರತಿನಿಧಿ ಬಳಿ ಮಾತನಾಡುತ್ತಾ ನಿಶಾ ಹಂಚಿಕೊಂಡಿದ್ದು ತನ್ನ ಓದಿಗೆ ಸಹಕರಿಸಿದ ಮನೆಯವರು, ಶಿಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಮಗಳ ಸಾಧನೆ ಬಗ್ಗೆ ಪೋಷಕರು ಖುಷಿಪಟ್ಟರು.

Comments are closed.