ಕರಾವಳಿ

ವೀಕೆಂಡ್ ಮಸ್ತಿಗೆ‌ ಬ್ರೇಕ್ ಹಾಕಿ ಸರಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಸೈ ಎನಿಸಿಕೊಂಡ ಕನ್ನಡ ಮನಸುಗಳು..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಇದು ನೂರೈವತ್ತು ಜನ ಯುವಕ ಯುವತಿಯರಿರುವ ಒಂದೊಳ್ಳೆ ತಂಡ. ಒಬ್ಬೊಬ್ಬರದ್ದು ಒಂದೊಂದು ವೃತ್ತಿ. ಬಹುತೇಕರು ಐಟಿ ವೃತ್ತಿಯವರು. ಆದರೆ ವೀಕೆಂಡ್ ಬಂತೆಂದರೆ ಇವರೆಲ್ಲಾ ತಂಡ ಕಟ್ಟಿಕೊಂಡು ಅಭಿಯಾನವೊಂದಕ್ಕೆ ಕೈಹಾಕುತ್ತಾರೆ. ಈ ಸಮಾನ ಮನಸ್ಥಿತಿಯ ‘ಕನ್ನಡ ಮನಸುಗಳು’ ತಂಡವು ಸರಕಾರಿ ಕನ್ನಡ ಶಾಲೆಗಳಿಗೆ ಕಾಯಕಲ್ಪ ನೀಡುವ ಮಹತ್ಕಾರ್ಯ ಮಾಡುತ್ತಿದೆ.

ಶಿಕ್ಷಣದ ಗುಣಮಟ್ಟ, ಕಲಿಯುವ ವಿದ್ಯಾರ್ಥಿಗಳ ಸಂಖ್ಯೆ, ಉನ್ನತ ಮತ್ತು ವೃತ್ತಿಪರ ಶಿಕ್ಷಣವನ್ನು ಪಡೆಯುವವರ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದರೂ ಕೂಡ ಇತ್ತೀಚಿನ ವರ್ಷಗಳ ತನಕ ಊರಿನ ಶ್ರೀಮಂತ, ಬಡವರು, ಜಾತಿ, ಧರ್ಮಗಳ ಭೇದವಿಲ್ಲದೆ ಎಲ್ಲರಿಗೂ ಶಿಕ್ಷಣ ನೀಡಿ ನಮ್ಮನ್ನೆಲ್ಲ ಸುಶಿಕ್ಷಿತರನ್ನಾಗಿಸಿದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಇಂದು ಸರ್ಕಾರ ಮತ್ತು ಸಾರ್ವಜನಿಕರ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಕೆಲವೆಡೆ ವಾಸ್ತವಾಗಿರುವ ಹಿನ್ನೆಲೆ ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಲ್ಲ, ಆಧುನಿಕ ಕಲಿಕೆಯ ಪರಿಕರಗಳಿಲ್ಲ. ಹಲವು ಶಾಲೆಗಳು ಸುಣ್ಣಬಣ್ಣ ಕಾಣದೇ ಅದೆಷ್ಟೋ ವರ್ಷಗಳಾಗಿದೆ. ಗ್ರಾಮೀಣ ಭಾಗದಲ್ಲಿ ತಾವು ಹಿಂದೆ ಕಲಿತ, ತಮ್ಮ ಬದುಕಿಗೆ ಭದ್ರ ಬುನಾದಿ ಒದಗಿಸಿಕೊಟ್ಟ ಇಂತಹ ಶಾಲೆಗಳು ಈಗ ಸೊರಗುತ್ತಿರುವುದನ್ನು, ದುರಸ್ಥಿಗೆ, ದುರವಸ್ಥೆಗೆ ತಲುಪಿರುವುದನ್ನು ಕಂಡಿರುವ ಯುವಜನರ ತಂಡವೊಂದು ಇಂತಹ ಶಾಲೆಗಳ ಏಳಿಗೆಗೆ ಕೆಲಸ ಮಾಡುವ ಗಟ್ಟಿ ಮನಸ್ಸು ಮಾಡಿದೆ. ಕಳೆದ ಐದು ವರ್ಷಗಳ ಹಿಂದೆ ಹುಟ್ಟಿಕೊಂಡ ಸಮಾನಮನಸ್ಕ ‘ಕನ್ನಡ ಮನಸುಗಳು ಪ್ರತಿಷ್ಟಾನ’ ಎಂಬ ಯುವಜನರ ಪಡೆ ಮೂರುವರೆ ವರ್ಷಗಳಿಂದ ‘ಸರ್ಕಾರಿ ಶಾಲೆ ಉಳಿಸಿ ಅಭಿಯಾನ’ ಆರಂಭಿಸಿದೆ.

ಈಗಾಗಾಲೇ 10 ಶಾಲೆಗಳಲ್ಲಿ ಅಭಿಯಾನ…
ಕರ್ನಾಟಕ ರಾಜ್ಯಾದ್ಯಂತ ಈವರೆಗೆ 10 ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು, ಆಯಾ ಶಾಲೆಗಳಿಗೆ ಅಗತ್ಯವಿರುವ ನೀರು, ಟಾಯ್ಲೆಟ್ ಸೇರಿ ಇತರೆ ಎಲ್ಲ ಮೂಲ ಸೌಕರ್ಯಗಳನ್ನು ನೀಡಿ ಹಳೇ ಶಾಲಾ ಕಟ್ಟಡಕ್ಕೆ ಹೊಸ ಮೆರಗು ನೀಡಿದ್ದಾರೆ. ಶಾಲೆಗಳನ್ನು ಉಳಿಸಿ ಎನ್ನುವ ಅಭಿಯಾನ ಆರಂಭಿಸಿದೆ. ರಾಜ್ಯದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸರ್ಕಾರಿ ಶಾಲೆಗಳನ್ನು ಈ ತಂಡ ಗುರುತಿಸಿ ಲಕ್ಷಗಟ್ಟಲೇ ವೆಚ್ಚದಲ್ಲಿ ದಾನಿಗಳ ಸಹಕಾರದೊಂದಿಗೆ ಸುಣ್ಣ ಬಣ್ಣ ಮತ್ತು ಅಗತ್ಯವಿರುವ ವಸ್ತುಗಳನ್ನು ನೀಡುವ ವ್ಯವಸ್ಥೆ ಮಾಡುತ್ತಿದ್ದಾರೆ. ಈಗಾಗಾಲೇ ಕಾಸರಗೋಡು, ಬೆಂಗಳೂರು, ದಕ್ಷಿಣಕನ್ನಡದ ಸುಳ್ಯ, ಉಡುಪಿ, ರಾಮನಗರ, ಹಾಸನ, ಮಂಡ್ಯ, ಶಿವಮೊಗ್ಗ ಜಿಲ್ಲೆಯ ಶಾಲೆಗಳಲ್ಲಿ ಈ ಅಭಿಯಾನ ನಡೆದಿದೆ.

ವಿವಿಧ ವೃತ್ತಿಯವರು..ವೀಕೆಂಡ್ ಇದಕ್ಕಾಗಿ ಸೀಮಿತ…
ಕನ್ನಡ ಮನಸುಗಳು ಪ್ರತಿಷ್ಟಾನದಲ್ಲಿ ಬರೋಬ್ಬರಿ 150 ಮಂದಿ ಸದಸ್ಯರಿದ್ದಾರೆ. ಸರಕಾರಿ ಉದ್ಯೋಗಿಗಳಿಂದ ಹಿಡಿದು ಐಟಿಬಿಟಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿದ್ದಾರೆ. ನಟ ನಟಿಯರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕೋವಿಡ್ ಲಾಕ್ಡೌನ್ ಹೊರತುಪಡಿಸಿ ಕಳೆದ ಮೂರು ವರ್ಷದಿಂದ ಇವರಿಗೆ ವಾರಾಂತ್ಯ ರಜೆ ಕಳೆಯಲು ಈ ಅಭಿಯಾನ ನೆಚ್ಚಿಕೊಂಡಿದ್ದಾರೆ. ತಿಂಗಳಲ್ಲಿ ಮೂರು ವೀಕೆಂಡ್ ಅಭಿಯಾನಕ್ಕೆ ಸೀಮಿತ. ದೂರದ ಕಾಸರಗೋಡು ಮಂಜೇಶ್ವರದ ಕನ್ನಡ ಶಾಲೆಯಿಂದ ಹಿಡಿದು ಈವರೆಗೆ ರಾಜ್ಯದ ಹನ್ನೊಂದು ಶಾಲೆಗಳಲ್ಲಿ ಈ ಯಶಸ್ವಿ ಅಭಿಯಾನ ನಡೆದಿದೆ. ಸಿನೆಮಾ ನಟಿ ನೀತು ಕೂಡ ಹಲವೆಡೆ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.

ಕುಂದಾಪುರದ ಎರಡು ಶಾಲೆಗಳಲ್ಲಿ ಅಭಿಯಾನ..
ಕನ್ನಡ ಮನಸುಗಳು ತಂಡದ ಈ ಅಭಿಯಾನವನ್ನು ಕಳೆದ ಮೂರು ವರ್ಷಗಳಿಂದ ನಡೆಸುತ್ತಿದೆ. ತಂಡದ ಸದಸ್ಯರಾದ ಗಣೇಶ್ ಕೊಡ್ಲಾಡಿ ಅವರ ಕೋರಿಕೆಯಂತೆ ಶನಿವಾರ ಹಾಗೂ ಭಾನುವಾರ ಈ 11ನೇ ಅಭಿಯಾನ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆಯುತ್ತಿದೆ. ಕುಂದಾಪುರ ತಾಲೂಕಿನ ಬೈಂದೂರು ಕ್ಷೇತ್ರ ಶಿಕ್ಷಣ ವಲಯದ ಕರ್ಕುಂಜೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕೂಡಿಗೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿಕೊಂಡಿದೆ. ಬೆಂಗಳೂರಿನಿಂದ ಆಗಮಿಸಿದ 50ಕ್ಕೂ ಹೆಚ್ಚು ಮಂದಿಯ ತಂಡ ಕರ್ಕುಂಜೆ ಶಾಲೆಯಲ್ಲಿ ಶನಿವಾರ ಅಭಿಯಾನ ನಡೆಸಿತು. ಜ.30 ಭಾನುವಾರದಂದು ಕೂಡಿಗೆ ಶಾಲೆಯಲ್ಲಿ ನಡೆಯಲಿದೆ. ಶಾಲೆಗೆ ಆಧುನಿಕ ಕಲಿಕಾ ಪರಿಕರಗಳನ್ನು, ವಾಟರ್ ಫಿಲ್ಟರ್,ಫ್ಯಾನ್ ಸಹಿತ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. ಮಕ್ಕಳಿಗೆ ಪುಸ್ತಕ, ಪೆನ್ನು, ಮಾಸ್ಕ್ ಹೀಗೆ ಅಗತ್ಯವಿರುವ ವಸ್ತುಗಳನ್ನು ನೀಡಲಾಗಿದೆ. ಬೆಂಗಳೂರಿನಲ್ಲಿನ ದಾನಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಕರ್ಕುಂಜೆ ಶಾಲೆ ಮುಖ್ಯ ದ್ವಾರದ ಕಾಂಪೌಂಡ್ ಗೋಡೆಗೆ ವರ್ಲಿ ಆರ್ಟ್, ಒಳಭಾಗದಲ್ಲಿ ಶಾಲೆ ಗೋಡೆಗಳಿಗೆ ಸುಣ್ಣಬಣ್ಣ, ಮುಖ್ಯ ರಸ್ತೆಗೆ ಕಾಣುವ ಹಾಗಿರುವ ಕೊಠಡಿಯ ಗೋಡೆಯಲ್ಲಿ ಪೇಂಟಿಂಗ್ ಮೂಲಕ ಯಕ್ಷಗಾನದ ಕಲಾಕೃತಿ, ಪಿಲ್ಲರ್’ಗಳಿಗೆ ಬಣ್ಣ, ಧ್ವಜಸ್ತಂಭಕ್ಕೆ ಬಣ್ಣ ಬಳಿಯಲಾಯಿತು. ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಅಭಿಯಾನಕ್ಕೆ ಆಗಮಿಸಿದ ತಂಡದವರಿಗೆ ಸಹಕರಿಸಿದರು.

‘ಯಾವುದೇ ಸ್ವಾರ್ಥವಿಲ್ಲದೆ ಪ್ರೀತಿಯಿಂದ ಮಾಡುವ ಈ ಕೆಲಸ ಮಾದರಿ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ಸ್ನೇಹಿತರು ಕರೆಯುತ್ತಾರೆ, ಬಿಡುವಿದ್ದಾಗ ತೆರಳಿ‌ ನಾನು ಕೂಡ ಭಾಗವಹಿಸುವೆ. ಕರಾವಳಿ ಎಂದರೆ ಇಷ್ಟ. ಕುಂದಾಪುರದಲ್ಲಿ ನಡೆಯುತ್ತಿರುವ ಶಾಲೆ ಉಳಿಸುವ ಈ ಅಭಿಯಾನಕ್ಕೆ ಆಗಮಿಸಿ ಸಂತಸವಾಗಿದೆ. ಕನ್ನಡ ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಖಾಸಗಿ ಶಾಲೆಗಳ ಅಭಿವೃದ್ಧಿಯನ್ನು ಅಡಳಿತ ಮಂಡಳಿ ಮಾಡುತ್ತವೆ, ಸರ್ಕಾರಿ ಶಾಲೆಗಳು ಅಭಿವೃದ್ಧಿಯಲ್ಲಿ ಕಡೆಗಣನೆಯಾಗುತ್ತವೆ. ಯಾವ ಕಾರಣಕ್ಕೆ ಖಾಸಗಿ ಶಾಲೆ ಸರ್ಕಾರಿ ಶಾಲೆ ತಾರತಮ್ಯ ಆಗಬಾರದು ಎಂದು ಸ್ಯಾಂಡಲ್ ವುಡ್ ನಟಿ ನೀತು ಹೇಳಿದರು.

ಕನ್ನಡ ನಾಡು, ನುಡಿ, ನೆಲ, ಜಲ ಹೀಗೆ ಕನ್ನಡ ಪರ ಕೆಲಸಗಳನ್ನು ಮಾಡುತ್ತಾ ಒಂದಷ್ಟು ಯುವಕ ಯುವತಿಯರು ಒಂದಾಗಿ ‘ಕನ್ನಡ ಮನಸುಗಳು’ ತಂಡ ಹುಟ್ಟಿಕೊಂಡಿದೆ. ಈ ತಂಡದಲ್ಲಿರುವ ಬಹುತೇಕರು ಕರ್ನಾಟಕದ ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲಿತು, ಬಳಿಕ ವಿವಿಧ ಕ್ಷೇತ್ರಗಳಲ್ಲಿ ಪದವಿ, ಉನ್ನತ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದೇವೆ. ತಾವು ಕಲಿತ ಗ್ರಾಮೀಣ ಭಾಗದ ಶಾಲೆಗಳ ಬಗ್ಗೆ ಅದೇ ಕಾಳಜಿ, ಅಭಿಮಾನ ಮತ್ತು ಪ್ರೀತಿಯನ್ನು ಈಗಲೂ ಇಟ್ಟುಕೊಂಡಿದ್ದೇವೆ. ಇಂತಹ ಶಾಲೆಗಳಿಗೆ ತಮ್ಮ ಕೈಲಾದಷ್ಟು ಒಳಿತು ಮಾಡಬೇಕು ಎಂಬ ಆಸೆಯೊಂದಿಗೆ ಒಂದಾಗಿ ಶುರು ಮಾಡಿದ ಕನ್ನಡ ಶಾಲೆ ಉಳಿಸಿ ಅಭಿಯಾನ ರಾಜ್ಯದ ವಿವಿಧೆಡೆಯ ಹಲವು ಸರ್ಕಾರಿ ಶಾಲೆಗಳನ್ನು ಆಧುನಿಕಗೊಳಿಸಿದೆ ಮತ್ತು ಅಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೊಸ ಹುರುಪು, ಉತ್ಸಾಹ ಮೂಡಿಸುವ ವಾತಾವರಣವನ್ನು ರೂಪಿಸಿಕೊಟ್ಟಿದೆ. ಕೊರೋನಾ ತರುವಾಯ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ನೋಂದಾಯಿಸಿದ್ದು, ಮುಂಚಿಗಿಂತ ಇದೀಗ ಸರಕಾರಿ ಶಾಲೆಗಳ ಬೇಡಿಕೆಗೆ ಹೆಚ್ಚಾಗಿದೆ. ಇನ್ನಾದರೂ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸರಕಾರಿ ಶಾಲೆಗಳ ಪೋಷಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಂಡದ ಮುಖ್ಯಸ್ಥ ಪವನ್ ಹೇಳುತ್ತಾರೆ.

ಶ್ರಮದಾನ ಜೊತೆಗೆ ಶಾಲೆಗಳಿಗೆ ನೀಡಲಿರುವ ಕೊಡುಗೆಗಳು ಸರಕಾರಿ ಶಾಲೆಯ ಮಕ್ಕಳಲ್ಲಿ ಕಲಿಕೆಯ ಕುರಿತು ಇನ್ನಷ್ಟು ಆಸಕ್ತಿ ಹುಟ್ಟಿಸಲಿದೆ. ಉತ್ಸಾಹ ಮೂಡಿಸಲಿದೆ. ಜೊತೆಗೆ ರಾಜ್ಯದ ಯಾವುದೋ ಮೂಲೆಗಳಿಂದ ಬಂದು ನಮ್ಮೂರಿನ ಶಾಲೆಗಳ ಕುರಿತು ಕಾಳಜಿ ತೋರಿಸಿದ ಕನ್ನಡ ಮನಸುಗಳು ತಂಡವನ್ನು ಈ ಊರು, ಶಾಲೆಯವರು ಬಹುಕಾಲ ನೆನೆಯಲಿದ್ದಾರೆ. ಈ ತಂಡದ್ದು ನಿಜಕ್ಕೂ ಮಾದರಿ ಕಾರ್ಯ ಎಂದು ಕರ್ಕುಂಜೆ ಶಾಲೆ ಮುಖ್ಯ ಶಿಕ್ಷಕ ಮೋತಿಲಾಲ್ ಲಮಾಣಿ ಹೇಳುತ್ತಾರೆ.

Comments are closed.