ಕರಾವಳಿ

ಕಾಲೇಜು ದಿನಗಳಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಅಕೌಂಟ್ ಮಾಡೋದು ಒಳ್ಳೆಯದಲ್ಲ: ಡಿವೈಎಸ್ಪಿ ಕೆ. ಶ್ರೀಕಾಂತ್

Pinterest LinkedIn Tumblr

ಕುಂದಾಪುರ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಿಂದಲೇ ಅತೀ ಹೆಚ್ಚು ಅಪರಾಧಗಳು ಬೆಳಕಿಗೆ ಬರುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಕೇವಲ ಫೇಸ್ಬುಕ್, ಇನ್ಸ್ಟಾಗ್ರಾಮ್‌ನಲ್ಲಿ ಸಮಯ ಕಳೆಯಬೇಡಿ. ಸೋಶಿಯಲ್ ಮೀಡಿಯಾವನ್ನು ಮನೋರಂಜನೆಗಾಗಿ ಬಳಸಿಕೊಳ್ಳದೇ ಓದಲು ಪೂರಕವಾಗುವ ಅಂಶಗಳಿಗೆ ಮಾತ್ರ ಬಳಸಿಕೊಳ್ಳಿ. ಕಾಲೇಜು ದಿನಗಳು ಮುಗಿಯುವವರೆಗೂ ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆ ತೆರೆಯದಿರಿ ಎಂದು ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಕೆ ಶ್ರೀಕಾಂತ್ ಹೇಳಿದರು.

ಅವರು ಕುಂದಾಪುರ ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇತ್ರಪಾಲನಾ ಸಮಿತಿ, ಕುಂದಾಪುರ ಪೊಲೀಸ್ ಠಾಣೆ, ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಸಹಯೋಗದೊಂದಿಗೆ ನಡೆದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಪರಾಧವನ್ನು ಹೇಗೆ ತಡೆಯಬೇಕು ಎನ್ನುವ ಮಾಹಿತಿ ವಿದ್ಯಾರ್ಥಿ ಜೀವನದಲ್ಲಿ ಬಹುಮುಖ್ಯವಾಗಿ ಬೇಕಾಗುತ್ತದೆ. ವಿದ್ಯಾರ್ಥಿಗಳು ಗೊತ್ತಿಲ್ಲದೇ ಕೆಲವು ಅಪರಾಧಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ಇನ್ನಿತರ ಜಾಲಗಳಿಗೆ ಅವರನ್ನು ತಳ್ಳುವ ಗುಂಪುಗಳು ನಿರಂತರವಾಗಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಅವರು ನೀಡುವ ಆಮೀಶಗಳಿಗೆ ಬಲಿಯಾಗಬಾರದು. ಎಲ್ಲರಿಗೂ ಕಾನೂನಿನ ಅರಿವು ಮುಖ್ಯವಾಗಿ ಬೇಕಾಗುತ್ತದೆ. ಕೋಮು ಭಾವನೆಗಳನ್ನು ಕೆರಳಿಸುವ ವಿಡಿಯೋಗಳನ್ನು ಫಾರ್ವರ್ಡ್ ಮಾಡುವುದು ಕೂಡ ಅಪರಾಧ. ಒಂದು ಸಲ ಕೇಸು ದಾಖಲಾದರೆ ಅದು ಅಂತಿಮ ಹಂತಕ್ಕೆ ತಲುಪುವುದು ಮೂರಕ್ಕೂ ಅಧಿಕ ವರ್ಷಗಳು ಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಬಗ್ಗೆ ಜಾಗ್ರತೆ ವಹಿಸಬೇಕು. ಪ್ರತಿಯೊಬ್ಬರಿಗೂ ಕಾನೂನು ಅರಿವು ಮೂಡಿಸುವ ದಿಸೆಯಲ್ಲಿ ಪ್ರತೀ ವರ್ಷ ಡಿಸೆಂಬರ್ ತಿಂಗಳ ಕೊನೆಯಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತೇವೆ ಎಂದರು.

ಠಾಣಾಧಿಕಾರಿ ಸದಾಶಿವ ಆರ್ ಗವರೋಜಿ ಮಾತನಾಡಿ, ಅಪರಾಧ ಆದ ನಂತರ ಕ್ರಮ ಕೈಗೊಳ್ಳುವ ಬದಲು ಅಪರಾಧಗಳಾಗದಂತೆ ಯಾವ ರೀತಿ ಕ್ರಮ ಕೈಗೊಳ್ಳಬಹುದೆಂದು ಜನಸಾಮಾನ್ಯರಿಗೆ ಅರಿವು ಮೂಡಿಸಲಿಕ್ಕಾಗಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ವಯಕ್ತಿಕ ಮಾಹಿತಿಗಳನ್ನು ನಾವೇ ಸಾರ್ವಜನಿಕವಾಗಿ ಬಿಟ್ಟುಕೊಡುವುದರಿಂದ ಅಪರಾಧಗಳಿಗೆ ಅದು ದಾರಿ ಮಾಡಿಕೊಡುತ್ತದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಉಮೇಶ್ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುಧಾ ಪ್ರಭು ಇದ್ದರು.

ಉಪನ್ಯಾಸಕ ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿದರು. ಇಂಗ್ಲೀಷ್ ಉಪನ್ಯಾಸಕಿ ಲೋನ ಲೂವಿಸ್ ಡಿಸೋಜ ಧನ್ಯವಾದವಿತ್ತರು. ಕನ್ನಡ ಉಪನ್ಯಾಸಕಿ ರೇಷ್ಮಾ ಶೆಟ್ಟಿ ನಿರೂಪಿಸಿದರು.

Comments are closed.