ಕರಾವಳಿ

ನಿರ್ಭಯವಾಗಿ ಪರೀಕ್ಷೆ ಬರೆದು ‘ಕೊರೋನಾ ಬ್ಯಾಚ್ ಪಾಸ್’ ಎಂಬ ಹಣೆಪಟ್ಟಿ ಕಳಚಿಕೊಂಡ SSLC ವಿದ್ಯಾರ್ಥಿಗಳು

Pinterest LinkedIn Tumblr

ಕುಂದಾಪುರ: ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೆ ಪಾಸಾದ ವಿದ್ಯಾರ್ಥಿಗಳು ಎನ್ನುವ ಹಣೆಪಟ್ಟಿ ತಪ್ಪಿದೆ.. ಓದಿ ಪರೀಕ್ಷೆ ಎದುರಿಸುವ ಮೂಲಕ ಕೊರೋನಾ ಸಮಯದಲ್ಲಿ ಪರೀಕ್ಷೆ ಇಲ್ಲದೆ ಪಾಸಾದ ವಿದ್ಯಾರ್ಥಿಗಳು ಎನ್ನುವ ಕಳಂಕವಿಲ್ಲದ ಆತ್ಮತೃಪ್ತಿ‌ ಖುಷಿಕೊಟ್ಟಿದೆ. ಪರೀಕ್ಷೆ ಭಯ, ಒತ್ತಡ ಇಲ್ಲದೆ ನಿರಾಳವಾಗಿ ಬರೆದಿದ್ದೇವೆ.. ನಮ್ಮ ಅಭ್ಯಾಸಕ್ಕೆ ನ್ಯಾಯ ಸಿಕ್ಕಿದೆ. ಪ್ರಶ್ನೆಪತ್ರಿಕೆ ಸುಲಭವಾಗಿದ್ದು, ಉನ್ನತ ಶ್ರೇಣಿಯಲ್ಲಿ ಪಾಸಾಗುತ್ತೇವೆ. ಮೊದಲಿಗೆ ಕೊರೋನಾ ಸೋಂಕಿನ ಭಯ ಮೊದಲಿಗೆ ಇತ್ತು. ಆದರೆ ಸರಕಾರದ ನಿಯಮಾವಳಿಯಂತೆ ಪರೀಕ್ಷಾ ಕೇಂದ್ರದಲ್ಲಿ ಮಾಡಿಕೊಂಡ ಮುನ್ನೆಚ್ಚರಿಕಾ ಕ್ರಮದಿಂದ ನಿರ್ಭಯವಾಗಿ ಪರೀಕ್ಷೆ ಬರೆದಿದ್ದೇವೆ.- ಇದಿಷ್ಟು ಕುಂದಾಪುರ ಜ್ಯೂನಿಯರ್ ಕಾಲೇಜ್ ಪರೀಕ್ಷಾ ಕೇಂದ್ರದಲ್ಲಿ ಗುರುವಾರ ಎಸ್ಎಸ್ಎಲ್ಸಿ ಕೊನೆಯ ಪರೀಕ್ಷೆ ಬರೆದು ಹೊರಬಂದ ವಿದ್ಯಾರ್ಥಿಗಳು ಹಂಚಿಕೊಂಡ ಅಭಿಪ್ರಾಯ.

ಮಾರ್ಗಸೂಚಿಯಂತೆ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಉಡುಪಿ ಜಿಲ್ಲಾಡಳಿತ ಉತ್ತಮ ಕ್ರಮಕೈಗೊಂಡಿತ್ತು. ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ಮಾರ್ಗದರ್ಶನ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು, ತಾಲ್ಲೂಕು ಆಡಳಿತ, ಶಿಕ್ಷಣ ಇಲಾಖೆ ಕಾರ್ಯಕ್ಕೆ ಪೋಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ಜ್ಯೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಹಾಜರಾತಿ ನೂರಕ್ಕೆ ನೂರು ಇದ್ದರೆ, ಕೋಟೇಶ್ವರ ಪರೀಕ್ಷಾ ಕೇಂದ್ರದಲ್ಲಿ ಓರ್ವ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾಗಿಲ್ಲ. ತಾಲೂಕಿನಲ್ಲಿ ಒಟ್ಟು 2738 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ತಾಲೂಕಿನಲ್ಲಿ ಒಟ್ಟು 11 ಜನ ಅಂಗವಿಕಲರು ಪರೀಕ್ಷೆ ಬರೆದಿದ್ದು, ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಓರ್ವ ವಿಶೇಷ ಸಾಮರ್ಥ್ಯ ವಿದ್ಯಾರ್ಥಿನಿ ಮತ್ತೊಬ್ಬ ವಿದ್ಯಾರ್ಥಿ ಸಹಾಯದಲ್ಲಿ ಪರೀಕ್ಷೆ ಬರೆದಿದ್ದು, ಓರ್ವ ಕರೋನಾ ಪಾಸಿಟಿವ್ ವಿದ್ಯಾರ್ಥಿಗೆ ಕೋವಿಡ್ ಸೆಂಟರ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.

ಪರೀಕ್ಷಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಪರೀಕ್ಷೆ, ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಕಡ್ಡಾಯ ಮಾಡಿದ್ದು, ಮಾಸ್ಕ್ ಹಾಕಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರ ನ್ಯಾನಿಟೈಸರ್ ಮಾಡಿದ್ದು, ಕೊಠಡಿಯಲ್ಲಿ ಜಿಗ್‌ಜಾಗ್ ಮಾದರಿಯಲ್ಲಿ ಒಂದು ಬೆಂಚಿಗೆ ಒಬ್ಬರಂತೆ 12 ವಿದ್ಯಾರ್ಥಿಗಳ ಕೂರಿಸಲಾಗಿತ್ತು. ವಿದ್ಯಾರ್ಥಿಗಳಿಗೆ ಗೊಂದಲ ಆಗದಂತೆ ದ್ವನಿವರ್ಧಕದ ಮೂಲಕ ಮಾಹಿತಿ ನೀಡಲಾಗುತ್ತಿತ್ತು. ರಾಜ್ಯದಲ್ಲೆ ದೊಡ್ಡ ಪರೀಕ್ಷಾ ಕೇಂದ್ರ ಎನ್ನಲಾದ ಕುಂದಾಪುರ ಜ್ಯೂನಿಯರ್ ಕಾಲೇಜಿನ 42 ಕೊಠಡಿಯಲ್ಲಿ 511 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮತ್ತೆರಡು ಕೊಠಡಿ ವಿಶೇಷ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿತ್ತು. ಓರ್ವ ವಿದ್ಯಾರ್ಥಿ ಹೊರತು ಪಡಿಸಿ ಮತ್ತೆಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಸ್ಸೆಸ್‌ಎಲ್ಸಿ ಪರೀಕ್ಷೆ ಯಾವುದೇ ವಿಘ್ನವಿಲ್ಲದೆ ನಡೆಯಿತು ಎಂದು ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ ತಿಳಿಸಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.