ಕರಾವಳಿ

ಸೈನಿಕರಾಗಲು ಯುವಕರ ಉತ್ಸಾಹ; ಉಡುಪಿಯಲ್ಲಿ ಸೇನಾ ನೇಮಕಾತಿ ರ್‍ಯಾಲಿಗೆ ಚಾಲನೆ

Pinterest LinkedIn Tumblr

ಉಡುಪಿ: ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭಗೊಂಡ ಸೇನಾ ನೇಮಕಾತಿ ರ್‍ಯಾಲಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಚಾಲನೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸೇನಾ ನೇಮಕಾತಿಗಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಯುವಕರಿಗೆ ಎಲ್ಲಾ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಜಿಲ್ಲಾಡಳಿತದ ಮೂಲಕ ಒದಗಿಸಲಾಗಿದೆ. ಸೇನೆಯ ಅಧಿಕಾರಿಗಳಿಗೆ ನೇಮಕಾತಿ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ಅಭ್ಯರ್ಥಿಗಳಿಗೆ ಉಚಿತವಾಗಿ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಶ್ರೀಕೃಷ್ಣ ಮಠ ಹಾಗೂ ಮೆಸ್ಕಾಂ ಗುತ್ತಿಗೆ ನೌಕರರ ಸಂಘದ ನೆರವಿನಿಂದ ಕಲ್ಪಿಸಲಾಗಿದ್ದು, ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಈ ರ್ಯಾಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸೇರ್ಪಡೆಯಾಗಿ, ದೇಶಸೇವೆ ಮಾಡುವಂತಾಗಲಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹಾರೈಸಿದರು.

ಸೇನಾ ನೇಮಕಾತಿ ವಿಭಾಗದ ಮುಖ್ಯಸ್ಥರಾದ ಕರ್ನಲ್ ದುಭಾಶ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಇದ್ದರು.

ಮೊದಲ ದಿನ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯ 3 ಸಾವಿರ ಮಂದಿ ಭಾಗವಹಿಸಿದ್ದಾರೆ. 1600 ಮೀಟರ್ ಓಟ, ಜಿಗ್ಜಾಗ್ ನಡಿಗೆ, ಪುಲ್ ಅಪ್ಸ್, ಉದ್ದ ಜಿಗಿತ ಅರ್ಹತಾ ಪರೀಕ್ಷೆಯಲ್ಲಿ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು. ಬುಧವಾರ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಗುರುವಾರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ರ್ಯಾಲಿಯಲ್ಲಿ ಭಾಗವಹಿಸಲು ಯುವಕರು ದೂರದ ಊರುಗಳಿಂದ ಮಧ್ಯರಾತ್ರಿಯೇ ಉಡುಪಿಗೆ ಬಂದಿಳಿದಿದ್ದರು. ಕೋವಿಡ್ ಮಾರ್ಗಸೂಚಿಯಂತೆ ಅಭ್ಯರ್ಥಿಗಳಿಗೆ ಮಾಸ್ಕ್ ಧರಿಸುವಿಕೆ ಕಡ್ಡಾಯ ಮಾಡಲಾಗಿದ್ದು, ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರ್ಯಾಲಿಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ. ಬಿಸಿಲಿನ ಝಳ ಹೆಚ್ಚಿದ್ದರೂ ಯುವಕರು ರ್ಯಾಲಿಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಮಾರ್ಚ್ 27 ರವರೆಗೆ ರ್‍ಯಾಲಿ ನಡೆಯಲಿದ್ದು, ಸುಮಾರು 37 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ.

Comments are closed.