ಕರಾವಳಿ

IAS, KAS ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ಶಿಬಿರ ಉದ್ಘಾಟನೆ

Pinterest LinkedIn Tumblr

ಉಡುಪಿ: ಪರೀಕ್ಷೆಗೆ ತಯಾರಾಗಲು ಯೋಜನೆ ಬೇಕಾಗಿದ್ದು, ಆಸಕ್ತಿ ಇರುವ ವಿಷಯ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬೇಕು. ಇಂಟರ್‌ನೆಟ್‌ನಲ್ಲಿ ಮಾಹಿತಿ ಸಿಗುತ್ತದೆ ಎಂದು ನಂಬುವ ಬದಲು ವಿಷಯಕ್ಕೆ ಸಂಬಂಧಿಸಿದ ವಿಶ್ವಾಸಾರ್ಹ ಪುಸ್ತಕಗಳ ಪರಾಮರ್ಶೆಯನ್ನು ವಿಸ್ತೃತವಾಗಿ ಮಾಡಬೇಕು ಎಂದು ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷ ಹೇಳಿದರು.

ಅವರು  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಏರ್ಪಡಿಸಿದ್ದ ಪ್ರಸಕ್ತ ಸಾಲಿನ ಐಎಎಸ್ ಮತ್ತು ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್‌ಲೈನ್ ಶಿಬಿರವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಇಂದಿನ ಕೋವಿಡ್ ಸಮಯದಲ್ಲೂ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದಲ್ಲಿ ಹಲವಾರು ಪರೀಕ್ಷೆಗಳ ಆನ್‌ಲೈನ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಪರೀಕ್ಷಾ ಅಧ್ಯಯನ ಕ್ರಮದ ಬಗ್ಗೆ ಮಾತನಾಡಿದ ಡಾ. ಎ.ಎನ್. ಪ್ರಕಾಶ್‌ಗೌಡ, ವೈದ್ಯಕೀಯ ಇಲ್ಲವೇ ಎಂಜಿನಿಯರಿಂಗ್ ಮುಗಿಸಿದವರು ಐಎಎಸ್ ಪಾಸಾಗಬಹುದು. ಬೇರೆ ವಿಷಯಗಳನ್ನು ವ್ಯಾಸಂಗ ಮಾಡಿದವರೆಲ್ಲ ದಡ್ಡರು ಎಂದು ಭಾವಿಸುವ ಅಗತ್ಯವಿಲ್ಲ. ನಮ್ಮಲ್ಲಿರುವ ಆಸಕ್ತಿ ಆಧರಿಸಿ, ಪದವಿ ಪಡೆದ ವಿಷಯಗಳನ್ನೆ ಅಲ್ಲದೆ ಇತರ ಮೂಲಗಳಿಂದ ವಿಷಯ ಸಂಗ್ರಹಣೆ ಮಾಡಿಕೊಂಡಾಗ ತಯಾರಿ ಸುಲಭವಾಗುತ್ತದೆ ಎಂದು ಸಲಹೆ ನೀಡಿದರು. ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಎಸ್.ಬಿ. ರವಿಕುಮಾರ್ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಸಿಸ್ಟೆಂಟ್ ಕಮಿಷನರ್ ಎಂ.ಬಿ ಚೆನ್ನಕೇಶವ, ನಗರ ಸಭೆ ಗ್ರೇಡ್-1 ಚೀಪ್ ಆಫೀಸರ್ ಎಂ. ಮಾನಸ ಪರೀಕ್ಷೆ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕರಾಮುವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ಲಾಕ್‌ಡೌನ್‌ನಿಂದ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಆಭ್ಯರ್ಥಿಗಳ ಸಿದ್ಧತೆ ತೊಡಕಾಗಬಾರದೆಂಬ ಉದ್ದೇಶದಿಂದ ಕೇವಲ ಒಂದೇ ವಾರದಲ್ಲಿ ಜೂಮ್‌ಗೆ ಪರ್ಯಾಯವಾಗಿ ಆ್ಯಪ್ ರೂಪಿಸಿದ್ದು, ಕೆಎಸ್‌ಓಯು ಸ್ಟೂಡೆಂಟ್ ಆ್ಯಪ್ ಎಂಬ ವಿಡಿಯೋ ಪ್ಲಾಟ್‌ಫಾರಂ ಸೃಷ್ಟಿಸಿದ್ದೇವೆ. ಈಗ ಆನ್‌ಲೈನ್ ಕಲಿಕೆಯಲ್ಲಿ ಅತ್ಯುತ್ತಮ ವೇದಿಕೆಯಾಗಿ ಕೆಎಸ್‌ಓಯು ಹೊರಹೊಮ್ಮಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಕರಾಮುವಿ ಕುಲಸಚಿವ ಪ್ರೊ. ಲಿಂಗರಾಜಗಾಂಧಿ, ಹಣಕಾಸು ಅಧಿಕಾರಿ ಡಾ. ಎ. ಖಾದರ್‌ಪಾಷ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿದ್ದರು.

 

Comments are closed.