ಕರಾವಳಿ

ನಿರ್ಜನ ಕಾಡು ಗುಡ್ಡದಲ್ಲಿನ ಗುಡಾರದಲ್ಲಿ ಅಕ್ಕ-ತಮ್ಮನ ಆನ್‌ಲೈನ್ ಪಾಠ..!(Video)

Pinterest LinkedIn Tumblr

ಕುಂದಾಪುರ: ಆ ಮಕ್ಕಳಿಗೋ ಓದುವ ಕನಸು….ತಮ್ಮ ಮಕ್ಕಳಿಗೆ ಓದಿಸಿ ವಿದ್ಯಾವಂತರನ್ನಾಗಿ ಮಾಡುವ ಹಂಬಲ ಆ ಬಡ ತಂದೆ ತಾಯಿಯದ್ದು…ಸಾಲ ಸೂಲ ಮಾಡಿ ಆನ್ಲೈನ್ ಕ್ಲಾಸಿಗಂತ ಮೊಬೈಲ್ ಕೊಡಿಸಿದ್ರೂ ಅಲ್ಲಿ ನೆಟ್ವರ್ಕ್ ಪ್ರಾಬ್ಲಮ್..ಹಾಗಂತಾ ಆ ಮಕ್ಕಳು ಸುಮ್ಮ‌ನೆ ಕೂರಿಲ್ಲ….ಆ ಹಳ್ಳಿಗಾಡಿನ ಅಕ್ಕ‌-ತಮ್ಮನ ವಿದ್ಯಾರ್ಜನೆಯ ಛಲದ ಕುರಿತ ಇಂಟರೆಸ್ಟಿಂಗ್ ಸ್ಟೋರಿಯಿದು.

ಎತ್ತ ನೋಡಿದರೂ ಬಯಲು ಒಂದೆಡೆಯಾದರೆ…ಇನ್ನೊಂದು‌ ಮಗ್ಗುಲಲ್ಲಿ ಮೂಕಾಂಬಿಕಾ ಅಭಯಾರಣ್ಯ..ತೆಂಗಿನ ಮಡಿಲ ಚಪ್ಪರದಂತಹ ಗೂಡು, ಪ್ಲಾಸ್ಟಿಕ್ ಹಾಸು..ಅದರಲ್ಲಿಬ್ಬರು ಮಕ್ಕಳು…ಯಾರೂ ಓಡಾಡದ ನಿರ್ಜನ ಪ್ರದೇಶವಿದೆ. ಕಾಡು ಗುಡ್ಡದ ಮಧ್ಯ ಇಂತಾದ್ದೊಂದು ವ್ಯವಸ್ಥೆಯಲ್ಲಿ ಸೋದರಿ ಜೊತೆ ಸಹೋದರನ ಆನ್‌ಲೈನ್ ಕ್ಲಾಸ್!

ಕೊರೋನಾ ಮಹಾಮಾರಿಯಂತಹ ಸೋಂಕು ಜಗತ್ತನ್ನೇ ಮಂಕಾಗಿಸಿದೆ. ಬೇಸಿಗೆ ರಜೆ ಮುಗಿದು ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳುಗಳೇ ಕಳೆಯಬೇಕಾಗಿದ್ದರೂ ಇನ್ನೂ ಕೊರೋನಾ ಹಿನ್ನೆಲೆ ಶಾಲೆಗಳು ಆರಂಭವಾಗಿಲ್ಲ. ಆದರೆ ಮಕ್ಕಳ ಪಠ್ಯ ಚಟುವಟಿಕೆಗೆ ಅನುಕೂಲ ಕಲ್ಪಿಸಲು ಆನ್‌ನೈನ್ ತರಗತಿಗಳು ಆರಂಭವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಮೊಬೈಲ್, ವಿದ್ಯುತ್, ಇಂಟರ್‌ನೆಟ್ ಮುಂತಾದ ಥರಹೇವಾರಿ ಸಮಸ್ಯೆಗಳ ಎದುರಿಸಿ ತರಗತಿಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ ಎನ್ನುವುದಕ್ಕೆ

ಪ್ರತಿಭಾನ್ವಿತ ಚಿಣ್ಣರು….
ಬೈಂದೂರು ತಾಲೂಕು ಇಡೂರು ಕುಂಜ್ಞಾಡಿ ಗ್ರಾಮ ಗೋಳಿಕೆರೆ ವಿದ್ಯಾರ್ಥಿಗಳಿಬ್ಬರ ನಿತ್ಯ ಸಮಸ್ಯೆಯೇ ಸಾಕ್ಷಿ. ಗೋಳಿಕೆರೆಯ ಗೋಪಾಲ ಗೌಡ ಮತ್ತು ಗೀತಾ ಎನ್ನುವರ ಮೂವರು‌ ಮಕ್ಕಳಲ್ಲಿ‌ ಮೊದಲಿನವಳಾದ ಭೂಮಿಕಾ ಮತ್ತು ಎರಡನೇ ಮಗ ಭರತ್ ವಿದ್ಯಾರ್ಜನೆಗಾಗಿ ಆನ್‌ಲೈನ್ ತರಗತಿಯನ್ನು ಕಷ್ಟದಲ್ಲೂ ಇಷ್ಟಪಟ್ಟು ತೊಡಗಿಸಿಕೊಳ್ಳುತ್ತಿದ್ದಾರೆ. ಹೆಬ್ರಿಯ ನವೋದಯ ಶಾಲೆಯಲ್ಲಿ ಓದಿ ಭೂಮಿಕಾ ಒಂಬತ್ತನೇ ತರಗತಿ ಪಾಸ್ ಆಗಿ ಈ ಬಾರಿ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದರೆ, ಭರತ್ 9ನೇ ತರಗತಿ ವಿದ್ಯಾರ್ಥಿ. ಈ ಇಬ್ಬರು ವಿದ್ಯಾರ್ಥಿಗಳು ಕುಂಜಾಡಿ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿ ಕಲಿಯುತ್ತಿರುವಾಗಲೇ ಪರೀಕ್ಷೆ ಬರೆದು ನವೋದಯ ಶಾಲೆಗೆ ಪ್ರವೇಶ ಗಿಟ್ಟಿಸಿಕೊಂಡ ಪ್ರತಿಭಾವಂತರು.

ವಿದ್ಯೆಗಾಗಿ ಸಿದ್ದವಾದ ಚಪ್ಪರ..!
ಅಂದ ಹಾಗೆ ಈ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾದ್ದರಿಂದ ಸೂಕ್ತ ನೆಟ್ವರ್ಕ್ ಸಿಗದೆ ಕಷ್ಟ ಪಡುವಂತಾಗಿದೆ. ನೆಟ್‌ವರ್ಕ್ ಎಲ್ಲಿಸಿಗುತ್ತದೆ ಎಂಬ ಹುಡುಕಾಟದಲ್ಲಿ ಮನೆಯಿಂದ 300 ಮೀಟರ್ ಅಂತರ ಬೆಟ್ಟದ ನೆತ್ತಿಮೇಲೆ ನೆಟ್‌ವರ್ಕ್ ಸಿಕ್ಕಿದೆ. ನೆಟ್‌ವರ್ಕ್ ಸಿಕ್ಕ ಸ್ಥಳದಲ್ಲಿ ಸಣ್ಣದೊಂದು ಚಪ್ಪರ ಮಾಡಿ ಅದರೊಳಗೆ ಮಕ್ಕಳಿಗೆ ಓದಲು ತಂದೆ ತಾಯಿ ವ್ಯವಸ್ಥೆ ಮಾಡಿಕೊಟ್ಟಿದ್ದು, ಸುತ್ತಾ ಕಾಡಿದ್ದರಿಂದ ಪೋಷಕರು ಕಾದು ಕೂರುತ್ತಾರೆ. ಬಹುತೇಕ ಬೆಳಿಗ್ಗೆನಿಂದ ಸಂಜೆ‌ ತನಕ ಆನ್ಲೈನ್ ಕ್ಲಾಸ್ ನಡೆಯಲಿದ್ದು ಈ ವಿದ್ಯಾರ್ಥಿಗಳಿಬ್ಬರ ಕಿರಿಯ ಸಹೋದರಿ ತಿನ್ನೋದಕ್ಕೆ ಕುಡಿಯೋಕೆ ಬೇಕಾದ್ದನ್ನು ಮನೆಯಿಂದ ಕೊಟ್ಟು ಬರುತ್ತಾಳೆ.

ಸಾಲ ಮಾಡಿದ ಪಾಲಕರು..!
ಮಕ್ಕಳನ್ನು ಹೇಗಾದರೂ ಮಾಡಿ ಓದಿಸುವ ಹಟದಿಂದ ಸ್ವಸಹಾಯ ಸಂಘದಲ್ಲಿ ತಂದೆ ಗೋಪಾಲ ಗೌಡ 50 ಸಾವಿರ ಸಾಲ ಮಾಡಿ ಮಕ್ಕಳಿಗೆ ಎರಡು ಮೊಬೈಲ್ ಕೊಡಿಸಿದ್ದಾರೆ. ವಿದ್ಯುತ್ ಕಣ್ಣಮುಚ್ಚಾಲೆ, ಲೋ ವೋಲ್ಟೇಜ್ ಹಾಗೂ ಗೂಡಲ್ಲಿ ವಿದ್ಯುತ್ ಇರದ ಕಾರಣ ಮೊಬೈಲ್ ಚಾರ್ಜ್ ಮಾಡಲು ಬ್ಯಾಟರಿ, ಚಾರ್ಜರ್ ಖರೀದಿಸಿದ್ದಾರೆ. ನಿತ್ಯವೂ ಕ್ಲಾಸ್ ಆರಂಭದ ಮುನ್ನ ಮೊಬೈಲ್,ಬ್ಯಾಟರಿ ಹಾಗೂ ಪುಸ್ತಕಗಳನ್ನು ಹೊತ್ತುಕೊಂಡು ಗುಡ್ಡ ಏರುತ್ತಾರೆ. ಅನಾರೋಗ್ಯ‌ ಕಾರಣದಿಂದ ಐದು ವರ್ಷದಿಂದ ಊರಲ್ಲಿಯೇ ಇರುವ ಗೋಪಾಲ ಗೌಡ ಅಲ್ಲಿಲ್ಲಿ ಕೂಲಿ ಕಾರ್ಯ ಮಾಡಿಕೊಂಡಿದ್ದರಾದರೂ ಕೊರೋನಾ ಹಿನ್ನೆಲೆ ಕೆಲಸವೂ ಇಲ್ಲದಾಗಿದೆ. ವಾಸವಿರುವ ಮನೆ ಕೂಡಾ ಶಿಥಿಲಾವಸ್ಥೆಯಲ್ಲಿದೆ. ಮಗಳು ಡಾಕ್ಟರ್, ಮಗ ಐ‌ಎ‌ಎಸ್ ಅಥವಾ ಐಪಿಎಸ್ ಆಗಬೇಕೆನ್ನುವ ಕನಸು ಈಡೇರಿಸಲು ನನ್ನಿಂದ ಆಗುತ್ತದಾ ಎನ್ನೋದು ಗೋಪಾಲ ಗೌಡ ಮುಂದಿರುವ ಸವಾಲಾಗಿದೆ.

ಒಟ್ಟಿನಲ್ಲಿ ಸಂಸಾರ ನಿರ್ವಹಣೆ ಜೊತೆಗೆ ಕಲಿಕೆಯಲ್ಲಿ‌ ಆಸಕ್ತಿ ಹೊಂದಿರುವ ಮಕ್ಕಳಿಗೆ ಶಿಕ್ಷಣ ಕೊಡುವುದು ಪೋಷಕರಿಗೆ ಕಬ್ಬಿಣಿದ ಕಡಲೆಯಾಗಿದ್ದು ಶಿಕ್ಷಣ ಪ್ರೇಮಿಗಳು‌ ಮುಂದೆ ಬಂದಲ್ಲಿ ಈ ವಿದ್ಯಾರ್ಥಿಗಳ‌ ಭವ್ಯ ಭವಿಷ್ಯ ರೂಪುಗೊಳ್ಳುವುದು ಖಂಡಿತ.

(ಚಿತ್ರ, ವರದಿ-ಯೋಗೀಶ್ ಕುಂಭಾಸಿ)

Comments are closed.