ಕರಾವಳಿ

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸುತ್ತಿವೆ ‘ಅಟಲ್ ಟಿಂಕರಿಂಗ್ ಲ್ಯಾಬ್’

Pinterest LinkedIn Tumblr

ವಿಶೇಷ ವರದಿ: ವಿದ್ಯಾರ್ಥಿಗಳಲ್ಲಿ ಪ್ರೌಢಶಾಲಾ ಹಂತದಲ್ಲಿಯೇ ವೈಜ್ಞಾನಿಕ ಮನೋಭಾವನೆಯನ್ನು ಬೆಳಿಸಿ, ಅವರನ್ನು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಹೆಚ್ಚಿನ ಸಂಶೋಧನೆಗಳನ್ನು ನಡೆಸಲು ಪ್ರೇರೇಪಿಸಲು, ಕೇಂದ್ರ ಸರ್ಕಾರವು, ಮಾನವ ಸಂಪನ್ಮೂಲ ನೀತಿ ಆಯೋಗದ ಮೂಲಕ ರೂಪಿಸಿರುವ ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯು , ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಶ್ರೇಷ್ಠ ವಿಜ್ಞಾನಿಗಳಾಗಲು ಪ್ರೇರಣೆ ನೀಡುತ್ತಿದೆ.

ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯು 5 ವರ್ಷದ ಕಾರ್ಯಕ್ರಮವಾಗಿದ್ದು, ಈ ಯೋಜನೆಯಡಿ ಪ್ರತಿ ಶಾಲೆಗೆ ರೂ.20.00 ಲಕ್ಷ ಅನುದಾನವನ್ನು ಕೇಂದ್ರ ಸರ್ಕಾರವು, ಮಾನವ ಸಂಪನ್ಮೂಲ ಇಲಾಖೆಯಿಂದ, ನೀತಿ ಆಯೋಗದ ಮೂಲಕ ನೀಡುತ್ತಿದೆ. ಅದರಲ್ಲಿ ರೂ.10.00 ಲಕ್ಷ ಅನುದಾನದಿಂದ ಲ್ಯಾಬ್ ಗೆ ಬೇಕಾದ ಲ್ಯಾಬ್ ಸಾಮಾಗ್ರಿಗಳು, ಲ್ಯಾಬ್ ಸ್ಥಾಪನೆ, ಲ್ಯಾಬ್ ಕೊಠಡಿ ತಯಾರಿ ಮಾಡಿಕೊಳ್ಳಲು ಬಳಸಲಾಗುತ್ತದೆ. ಹಾಗೂ ಪ್ರತಿ ವರ್ಷಕ್ಕೆ ರೂ.2.00 ಲಕ್ಷ ಗಳನ್ನು ಲ್ಯಾಬ್ ನಿರ್ವಹಣೆಗಾಗಿ ಅನುದಾನ ಮಂಜೂರಾಗುತ್ತದೆ. ಹೀಗೆ ಪ್ರಾರಂಭದಲ್ಲಿ ಒಟ್ಟು ರೂ.12.00 ಲಕ್ಷ & ಪ್ರತಿ ವರ್ಷ ರೂ. 2.00 ಲಕ್ಷದಂತೆ ಅನುದಾನ ಬಿಡುಗಡೆಯಾಗುತ್ತದೆ.
ಈ ಲ್ಯಾಬ್ನಲ್ಲಿ ಎಲೆಕ್ಟ್ರಾನಿಕ್ಸ್, ರೋಬೋಟಿಕ್ಸ್, 3ಡಿ ಪ್ರಿಂಟರ್ಸ್ ಸೌಲಭ್ಯಗಳಿದ್ದು, ವಿಜ್ಞಾನ, ಗಣಿತ, ಬೌತ ಶಾಸ್ತ್ರದ ಸಮಸ್ಯೆ ಪರಿಹಾರಕ್ಕೆ ಕಾರ್ಯಗಾರ, ಪ್ರದರ್ಶನ, ಉಪನ್ಯಾಸ ನೀಡಲು ಈ ಲ್ಯಾಬ್ ಪೂರಕವಾಗಿದೆ. ಪ್ರೋಜೆಕ್ಟರ್ ಸಹಿತ ಅಡಿಯೋ ವಿಜ್ಯುವಲ್ ಕೊಠಡಿ ಹಾಗೂ ಪ್ರಯೋಗಾಲಯ ಸಹ ಇರಲಿದೆ.
ವಿದ್ಯಾರ್ಥಿಗಳಲ್ಲಿ ಕುತೂಹಲ ಆಸಕ್ತಿ ಕೆರಳಿಸಿ, ಪ್ರತಿಭೆಯ ಸೃಜನಶೀಲತೆ ಅರಳಿಸಿ, ಯುವಮನಸ್ಸುಗಳಲ್ಲಿ ಹೊಸ ಸಂಶೋಧನೆಯ ಚಿಂತನೆಗೆ ಎಟಿಎಲ್ ಸಾಣೆ ಹಿಡಿದಿದ್ದು, ಸ್ಪಷ್ಟ ರೂಪ ವಿನ್ಯಾಸ ನೀಡಲು ಸಹಕಾರಿಯಾಗಿದೆ. ಈ ಲ್ಯಾಬ್ನಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಯ ಅಡಿಪಾಯ ಹಾಕಲು ಡು.ಇಟ್ ಯುವರ್ಸೆಲ್ಪ್ (ನೀವೆ ಮಾಡಿ ನೋಡಿ) ಸಲಕರಣೆಗಳನ್ನು ನೀಡಲಾಗಿದೆ.

ಜಿಲ್ಲೆಯಲ್ಲಿ 2016-17 ರಲ್ಲಿ 1 ಶಾಲೆ, 2017-18ರಲ್ಲಿ 23 ಶಾಲೆಗಳು, 18-19ರಲ್ಲಿ 5 ಶಾಲೆಗಳು, 2019-20 ರಲ್ಲಿ 17 ಶಾಲೆಗಳು ಹೀಗೆ ಒಟ್ಟು 46 ಶಾಲೆಗಳಿಗೆ ಅಟಲ್ ಮಂಜೂರಾಗಿದ್ದು, ಅದರಲ್ಲಿ ಒಟ್ಟು 26 ಸರಕಾರಿ ಶಾಲೆಗಳು, 10 ಅನುದಾನಿತ ಶಾಲೆಗಳು, 07 ಅನುದಾನರಹಿತ ಶಾಲೆಗಳು & ಒಂದು ನವೋದಯ ವಿದ್ಯಾಲಯ & 2 ಕೇಂದ್ರಿಯ ವಿದ್ಯಾಲಯ ಸೇರಿವೆ.

ಉಡುಪಿಯ ಒಳಕಾಡು ಪ್ರೌಢಶಾಲೆಯಲ್ಲಿ ಆರಂಭಿಸಲಾಗಿರುವ ಅಟಲ್ ಲ್ಯಾಬ್ನಲ್ಲಿ ವಿದ್ಯಾರ್ಥಿಗಳು, ರೋಬೋಟಿಕ್ ಆರ್ಮ್, ಗ್ರಾಸ್ಕಟ್ಟರ್ (ಸೆನ್ಸಾರ್ ಅಳವಡಿಸಿದೆ) , ರೋಬೋಟ್ (ರೆಡಿಮೇಡ್, ಕಂಟ್ರೋಲ್ಡ್ ಬೈ ಮೊಬೈಲ್), ಡ್ರೋಣ್, ರೋಬೋಟಿಕ್ ಕಾರ್, ಮುಂತಾದ ವೈವಿಧ್ಯಮಯ ಎಲೆಕ್ಟ್ರಾನಿಕ್ ಮಾದರಿಗಳನ್ನು ಹಾಗೂ 3 ಡಿ ಪ್ರಿಂಟರ್ ಮೂಲಕ ಪ್ಲಾಸ್ಟಿಕ್ನಿಂದ ಐನ್ಸ್ಟೀನ್ ಮುಂತಾದ ಪ್ರತಿಮೆಗಳನ್ನು ತಯಾರಿಸಿದ್ದು, ಇವು ಪರಿಸರಕ್ಕೆ ಹಾನಿಯಾಗದೇ ಮಣ್ಣಿನೊಂದಿಗೆ ಬರೆಯುವ ಗುಣ ಹೊಂದಿವೆ.

ಅಟಲ್ ಲ್ಯಾಬ್ನಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಪ್ರತ್ಯೇಕ ಶಿಕ್ಷಕರು ಇಲ್ಲ, ಪ್ರಸ್ತುತ ಶಾಲೆಯಲ್ಲಿರುವ ವಿಜ್ಞಾನ ಶಿಕ್ಷಕರೇ ತಮ್ಮ ದೈನಂದಿನ ಕರ್ತವ್ಯದ ಜೊತೆಗೆ ಹೆಚ್ಚುವರಿಯಾಗಿ ಲ್ಯಾಬ್ನಲ್ಲಿ ತರಬೇತಿ ನೀಡುತ್ತಿದ್ದು, ಕನಿಷ್ಠ ಎಲೆಕ್ಟ್ರಾನಿಕ್ಸ್ ಡಿಪ್ಲೊಮೋ ಪಡೆದಿರುವ ಶಿಕ್ಷಕರನ್ನು ಗೌರವಧನದ ಆಧಾರದ ಮೇಲೆ ನೇಮಿಸಿದಲ್ಲಿ, ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ತರಬೇತಿ ನೀಡಬಹುದಾಗಿದೆ. ಈ ಲ್ಯಾಬ್ನಲ್ಲಿ ವಿದ್ಯಾರ್ಥಿಗಳ ತಾಂತ್ರಿಕ ಮತ್ತು ವೈಜ್ಞಾನಿಕ ಜ್ಞಾನ ಅಭಿವೃಧ್ದಿಗಾಗಿ ಇದುವರೆಗೆ 10 ಕ್ಕೂ ಹೆಚ್ಚು ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಾಗಾರಗಳನ್ನು ನಡೆಸಲಾಗಿದೆ ಎನ್ನುತ್ತಾರೆ ವಳಕಾಡು ಪ್ರೌಢಶಾಲೆಯ ಮುಖ್ಯೋಪಧ್ಯಾಯನಿ ನಿರ್ಮಲ ಅವರು.
ಅಟಲ್ ಲ್ಯಾಬ್ಗಳ ಮೂಲಕ ಭಾರತದಲ್ಲಿ ಮುಂದಿನ ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ ಕ್ಷೇತ್ರವನ್ನು ಅಂತರಾಷ್ಟ್ರಿಯ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ನೈಪುಣ್ಯತೆಯನ್ನು ನೀಡಿ, ಅವರಿಂದ ಉತ್ತಮ ಆವಿಷ್ಕಾರಗಳನ್ನು ಮಾಡುವುದು ಈ ಯೋಜನೆಯ ಗುರಿಯಾಗಿದ್ದು, ವಿಶ್ವಕ್ಕೆ ಉತ್ತಮ ವಿಜ್ಞಾನಿಗಳನ್ನು ಕೊಡುಗೆ ನೀಡಲಿದೆ.

Comments are closed.