ಕರಾವಳಿ

ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ದೇಶ ಪ್ರಗತಿಯತ್ತ: ವಂಡ್ಸೆಯಲ್ಲಿ ‘ಗೃಹಲಕ್ಷ್ಮಿ ಯೋಜನೆ ಅನುಷ್ಠಾನ’ ಕಾರ್ಯಕ್ರಮದಲ್ಲಿ ಕುಂದಾಪುರ ಎಸಿ ರಶ್ಮಿ ಎಸ್.ಆರ್.

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ 2 ಲಕ್ಷದ‌ 8 ಸಾವಿರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೊಂದಾಯಿಸಿದ್ದು ಪ್ರಯೋಜನ ಪಡೆಯಲಿದ್ದಾರೆ. ಖಾತೆಗೆ ಬರುವ 2 ಸಾವಿರ ರೂ. ಹಣವನ್ನು ಕುಟುಂಬದ ಉತ್ತಮ ಬೇಡಿಕೆ ಪೂರೈಸಲು ಸಹಕಾರಿಯಾಗುವ ವಿಶ್ವಾಸವಿದೆ. ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡಾಗ ದೇಶ ಉನ್ನತಿ, ಪ್ರಗತಿಪತದತ್ತ ಸಾಗಲಿದೆ ಎಂದು ಕುಂದಾಪುರ ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಉಡುಪಿ, ತಾ.ಪಂ ಕುಂದಾಪುರ, ಮಹಿಳಾ ಮತ್ತು‌ ಮಕ್ಕಳ‌ ಅಭಿವೃದ್ಧಿ ಇಲಾಖೆ, ವಂಡ್ಸೆ ಗ್ರಾ.ಪಂ ಸಹಯೋಗದಲ್ಲಿ ಬುಧವಾರ ವಂಡ್ಸೆಯ ಮಹಾತ್ಮಗಾಂಧಿ ಸಭಾಭವನದಲ್ಲಿ ಹಮ್ಮಿಕೊಂಡ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಗೃಹಲಕ್ಷ್ಮಿ ಯೋಜನೆ ಅನುಷ್ಠಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಪರಿಕಲ್ಪನೆಯಂತೆ ಮಹಿಳೆಯರಿಗೆ ಶಿಕ್ಷಣ ನೀಡಿದಲ್ಲಿ ಕುಟುಂಬದ ಅಭಿವೃದ್ಧಿ ಸಾಧ್ಯ.‌ ಅದರಂತೆಯೇ ಪ್ರತಿ ಮನೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಒಳ್ಳೆಯ ಬದುಕು ಕಟ್ಟಿಕೊಳ್ಳಲು ಪೂರಕ ವ್ಯವಸ್ಥೆ ಮಾಡಬೇಕು. ಸರಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು. ವಂಡ್ಸೆ ಗ್ರಾ.ಪಂ ಹಾಗೂ ಉಡುಪಿ ಜಿಲ್ಲಾ ಕೇಂದ್ರದಲ್ಲಿ ಈ‌ ಕಾರ್ಯಕ್ರಮ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಕ್ಕೂ ದ್ವಿಮುಖ ಸಂವಹನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಐದು ಭರವಸೆಗಳನ್ನು ಜನರಿಗೆ ನೀಡಿದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಸಹಿಯಿರುವ ಗ್ಯಾರೆಂಟಿ ಕಾರ್ಡುಗಳನ್ನು ಪ್ರತಿ ಮನೆಗೆ ತಲುಪಿಸಲಾಗಿತ್ತು. ಮಹಿಳೆಯರ ಸ್ವಾವಲಂಬಿ ಬದುಕು ರೂಪಿಸಲು ಗೃಹಲಕ್ಷ್ಮಿ ಯೋಜನೆ ಸಂಚಲನ‌ ಮೂಡಿಸಿದ್ದು ಕಾಂಗ್ರೆಸ್ ಸರಕಾರಕ್ಕೆ ನೂರು ದಿನಗಳು ತುಂಬುತ್ತಿರುವ ಹೊತ್ತಿನಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರುತ್ತಿದೆ ಎಂದು ಹೇಳಿದರು.

ಯೋಜನೆಯ ಫಲಾನುಭವಿಗಳಾದ ಹಿರಿಯ ಮಹಿಳೆಯರಿಬ್ಬರಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು. ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್., ವಂಡ್ಸೆ ಗ್ರಾ.ಪಂ ಅಧ್ಯಕ್ಷೆ ಗೀತಾ ಅವಿನಾಶ್, ಉಪಾಧ್ಯಕ್ಷ ಗೋವರ್ಧನ ಜೋಗಿ, ಕುಂದಾಪುರ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜೆ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಕೃಷ್ಣಪ್ಪ ಬಿ.ಎಚ್., ಸಹಾಯಕ ತೋಟಗಾರಿಕಾ ಅಧಿಕಾರಿ ಉಮೇಶ್‌ ಎನ್. ಬಂಟ್, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ತಾ.ಪಂ ಮಾಜಿ ಮಾಜಿ ಸದಸ್ಯ ಉದಯ್ ಜಿ. ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಇದ್ದರು.

ವಂಡ್ಸೆ ಗ್ರಾ.ಪಂ ಮಾಜಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಡಿಒ ರೇಣುಕಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಂಜೀವಿನಿ ಸಂಘದ ಸದಸ್ಯರು ಪ್ರಾರ್ಥಿಸಿದರು.

ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಾಯಕತ್ವದ ಸರಕಾರವು ನೀಡಿದ 5 ಭರವಸೆಗಳ ಪೈಕಿ ನಾಲ್ಕನೆಯದಾಗಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನಗೊಂಡಿದೆ. ನೇರ ನಗದು ವರ್ಗಾವಣೆ ಮೂಲಕ ಪ್ರಪಂಚದಲ್ಲಿಯೇ ಇದೊಂದು ಅತ್ಯುತ್ತಮ ಕಾರ್ಯಕ್ರಮ. ಬೆಲೆ ಏರಿಕೆಯಿಂದ ತತ್ತರಿಸಿದ ಜನರಿಗೆ ಈ 2 ಸಾವಿರ ಹಣದ ಮೂಲಕ ಕುಟುಂಬ ನಿರ್ವಹಣೆಗೆ ಅನುಕೂಲ ಕಲ್ಪಿಸಲಾಗಿದೆ. ಉಡುಪಿ ಜಿಲ್ಲೆಯ ಎಲ್ಲಾ‌ ಗ್ರಾ.ಪಂ.ಗಳ ಕೇಂದ್ರ ಸ್ಥಾನವಾಗಿ ವಂಡ್ಸೆಯಲ್ಲಿನ ಸಮಾರಂಭದಲ್ಲಿ ಕಾರ್ಯಕ್ರಮಗಳ ನೇರಪ್ರಸಾರ, ಸಂವಾದವನ್ನು ಏರ್ಪಡಿಸಿದ್ದು ನಮಗೆಲ್ಲಾ ಹೆಮ್ಮೆ ವಿಚಾರವಾಗಿದೆ.
– ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು (ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ)

Comments are closed.