ಮಂಗಳೂರು, ಫೆಬ್ರವರಿ.12: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪದ್ಮಜಾ ರಾವ್ ಅವರಿಗೆ ಮಂಗಳೂರಿನ ಜೆಎಂಎಫ್‌ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ನೀಡಿದೆ.
ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ ಸಂಸ್ಥೆಗೆ ನೀಡಿದ 40 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದ ಈ ವಾರಂಟ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕನ್ನಡದ ಚಿತ್ರರಂಗದ ನಟಿ ಪದ್ಮಾಜಾ ರಾವ್ ಅವರ ವಿರುದ್ಧ ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರು ಮಂಗಳೂರಿನ ಕೋರ್ಟ್‌ನಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು.
ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್ ತಮ್ಮ ತುಳು ಚಿತ್ರದಲ್ಲಿ ನಟಿಸುತ್ತಿದ್ದಾಗ, ಆ ಸಿನೆಮಾದ ನಿರ್ದೇಶಕ ವೀರೇಂದ್ರ ಶೆಟ್ಟಿಯಿಂದ ಹಂತ ಹಂತವಾಗಿ 40 ಲಕ್ಷ ರೂ. ಪಡೆದು, ವಾಪಸ್ ನೀಡಿರಲಿಲ್ಲ ಎಂದು ಆರೋಪಿಸಿ ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಒಂದು ಲಕ್ಷ ರೂ. ಮಾತ್ರ ನಗದು ರೂಪದಲ್ಲಿ ಕೊಟ್ಟಿದ್ದು, ಉಳಿದೆಲ್ಲವನ್ನು ಚೆಕ್ ರೂಪದಲ್ಲಿ ನೀಡಲಾಗಿದೆ. ಸಂಸ್ಥೆಯ ಹೆಸರಲ್ಲೇ ಸಾಲ ನೀಡಿದ್ದೆ. ಅದರ ಎಲ್ಲ ದಾಖಲೆಗಳು ನಮ್ಮಲ್ಲಿ ಇವೆ. 2020ರ ಸೆಪ್ಟಂಬರ್‌ನಲ್ಲಿ ಚೆಕ್‌ಬೌನ್ಸ್ ಕೇಸು ದಾಖಲು ಮಾಡಿದ್ದು, ನೋಟಿಸ್ ಹೋಗಿತ್ತು. ನೋಟಿಸ್‌ಗೆ ಉತ್ತರ ನೀಡದ ಕಾರಣ ಪ್ರಕರಣ ಮತ್ತೆ ನವೆಂಬರ್‌ನಲ್ಲಿ ವಿಚಾರಣೆಗೆ ಬಂದಿತ್ತು. ಆಗಲೂ ನಟಿ ಪ್ರತಿಕ್ರಿಯಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ಇದೀಗ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ನೀಡಿದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸರಿಗೆ ಬಂಧಿಸಿ ಕರೆತರುವಂತೆ ಸೂಚನೆ ನೀಡಲಾಗಿದೆ. ಮಾರ್ಚ್ 9ಕ್ಕೆ ಪದ್ಮಜಾ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಬೇಕಿದೆ ಎಂದು ನಿರ್ದೇಶಕ ವೀರೇಂದ್ರ ಶೆಟ್ಟಿ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.