ಮಂಗಳೂರು: ಮಹಿಳೆ ಗರ್ಭಿಣಿಯಾದಾಗ ಕೇವಲ ಆಕೆಗೆ ಮಾತ್ರ ಪೌಷ್ಠಿಕಾಂಶದ ಅವಶ್ಯಕತೆ ಇರುವುದಿಲ್ಲ. ಜೊತೆಗೆ ಮುಂದೆ ಹುಟ್ಟಲಿರುವ ಹಸುಗೂಸಿಗೆ ಕೂಡ ಸಾಕಷ್ಟು ಪೌಷ್ಠಿಕಾಂಶ ತನ್ನ ಮೂಲಕ ಸಿಗುವಂತೆ ನೋಡಿಕೊಳ್ಳಬೇಕು. ಸಾಮಾನ್ಯ ದಿನಗಳಿಗಿಂತ 300-350 ಕ್ಯಾಲೋರಿ ಹೆಚ್ಚುವರಿ ಗರ್ಭಿಣಿಗೆ ಬೇಕಾಗುತ್ತದೆ ಎಂಬ ಅಂಶ ಅಧ್ಯಯನಗಳಿಂದ ದೃಢಪಟ್ಟಿವೆ.
ಅದರಲ್ಲೂ ಮುಖ್ಯವಾಗಿ ಬೆಳಗಿನ ಉಪಹಾರದಲ್ಲಿ ಹೆಚ್ಚುವರಿ ಕ್ಯಾಲೋರಿ ಸೇವನೆ ಪ್ರಮುಖ ಪಾತ್ರ ವಹಿಸುವುದರ ಜೊತೆಗೆ ಅವಶ್ಯಕವಾದಷ್ಟು ಎನರ್ಜಿಯನ್ನು ದೇಹಕ್ಕೆ ಒದಗಿಸುತ್ತದೆ.
ಧಾನ್ಯಗಳು : ಸಂಸ್ಕರಿತ ಸಕ್ಕರೆಯಿಂದ ಮಾಡಿದ ವೈಟ್ ಬ್ರೆಡ್‌ನ ಬದಲಾಗಿ ಗೋಧಿಯಿಂದ ಮಾಡಿದ ಬ್ರೆಡ್ ಉತ್ತಮ. ಯಾಕೆಂದರೆ ಇದರಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್ ಇರುವುದರಿಂದ ಆಹಾರ ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ಗರ್ಭಿಣಿಯ ಬೆಳಗಿನ ಉಪಹಾರಕ್ಕೆ ಸಾಕಷ್ಟು ಕ್ಯಾಲೋರಿ, ಫೈಬರ್ ಮತ್ತು ವಿಟಾಮಿನ್-ಸಿ ಒದಗಿಸುವ ಓಟ್‌ಮೀಲ್ ಮತ್ತು ತಾಜಾ ಹಣ್ಣಿನಷ್ಟು ಉತ್ತಮ ಆಯ್ಕೆ ಮತ್ತೊಂದಿಲ್ಲ. ಇದರ ಜೊತೆಗೆ ಓಟ್‌ಮೀಲ್ ಜನ್ಮಜಾತ ನ್ಯೂನತೆಗಳನ್ನು ಹೋಗಲಾಡಿಸುವ ಫೊಲೇಟ್ ಎಂಬ ಅಂಶವನ್ನು ಹೊಂದಿರುತ್ತದೆ ಎಂಬುದು ನಿಮಗೆ ತಿಳಿದಿರಲಿ.
ಹಾಲಿನ ಉತ್ಪನ್ನ : ಹೊಟ್ಟೆಯಲ್ಲಿ ಮಗುವನ್ನು ಹೊತ್ತುಕೊಂಡಿರುವಾಗ ಕ್ಯಾಲ್ಸಿಯಂ ನಿಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೇರಬೇಕು. ಇದರಿಂದಾಗಿ ಹುಟ್ಟಲಿರುವ ಮಗುವಿನ ಮೂಳೆಗಳ ಬೆಳವಣಿಗೆಗೆ ನೆರವಾಗುತ್ತದೆ. ಕಡಿಮೆ ಕೊಬ್ಬಿನ ಹಾಲನ್ನು ಬೆಳಗಿನ ಉಪಹಾರದಲ್ಲಿ ಸೇರಿಸಿಕೊಳ್ಳಿ. ಒಂದು ವೇಳೆ ಬೊಜ್ಜಿನ ಭೀತಿಯಿದ್ದರೆ, ಹಾಲಿನ ಬದಲು ಯೋಗ್ಹರ್ಟ್ ಮತ್ತು ಬೀಜ ಮತ್ತು ಹಣ್ಣುಗಳನ್ನು ಸೇವಿಸಿ. ಕ್ಯಾಲ್ಸಿಯಂ ಮತ್ತು ವಿಟಾಮಿನ್-ಸಿಯನ್ನು ದೇಹಕ್ಕೆ ಒದಗಿಸುವ ಒಂದು ಗ್ಲಾಸ್ ಕಿತ್ತಳೆ ರಸದೊಂದಿಗೆ ಊಟವನ್ನು ಮುಗಿಸಿ. ಈ ಮೂಲಕ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ.
ಪ್ರೊಟೀನ್ : ಇನ್ನು ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಯಲ್ಲಿ ಪ್ರೊಟೀನ್ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಅದರಲ್ಲೂ ಮುಖ್ಯವಾಗಿ ಎರಡು ಮತ್ತು ಮೂರನೇ ತಿಂಗಳ ಗರ್ಭಿಣಿಯಲ್ಲಿ ಮಗುವಿನ ಬೆಳವಣಿಗೆ ಪ್ರಮಾಣ ಏರುಗತಿಯಲ್ಲಿರುತ್ತದೆ. ಹೀಗಾಗಿ ಮೊಟ್ಟೆ, ಕಡಿಮೆ ಕೊಬ್ಬಿನ ಚೆಡ್ಡರ್ ಚೀಸ್ ಮತ್ತು ಕಾಟೇಜ್ ಚೀಸ್ ಸೇವಿಸಿದರೆ ಸಾಕಷ್ಟು ಪ್ರಮಾಣ ಪ್ರೊಟೀನ್ ದೊರೆಯುತ್ತದೆ.
ಈ ಬಾರಿ ಬೆಳಗಿನ ಉಪಹಾರ ಸೇವನೆ ಮುನ್ನ ಹುಟ್ಟಲಿರುವ ಕಂದಮ್ಮನ ಆರೋಗ್ಯದ ದೃಷ್ಟಿಯಿಂದ ಮೇಲಿನ ಆಹಾರ ವಸ್ತುಗಳನ್ನು ನಿಮ್ಮ ಉಪಹಾರದಲ್ಲಿ ಸೇರಿಸಿಕೊಳ್ಳಿ.