ಕರಾವಳಿ

ವೈಜ್ಞಾನಿಕ ಪದ್ಧತಿಯ ಸಮಗ್ರ ಕೃಷಿಯಲ್ಲಿ ರೈತನ ಸಾಧನೆ | ಹಡಿಲು ಭೂಮಿ ಹಸನಾಗಿಸಿದ ಬೈಂದೂರು ನಾಗೂರಿನ ಸುಬ್ಬಣ್ಣ ಶೆಟ್ಟಿ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ವೈಜ್ಞಾನಿಕತೆ ಮತ್ತು ತಾಂತ್ರಿಕತೆ ಅಳವಡಿಸಿಕೊಂಡು ಕೃಷಿಯಲ್ಲಿ ಮುಂದುವರಿದರೆ ನಿರೀಕ್ಷಿತ ಫಲ ಪಡೆಯಲು ಸಾಧ್ಯ ಎಂಬುದನ್ನು ಬೈಂದೂರು ತಾಲೂಕಿನ ನಾಗೂರಿನ ಕೃಷಿಕ ಸುಬ್ಬಣ್ಣ ಶೆಟ್ಟಿ ತೋರಿಸಿಕೊಟ್ಟಿದ್ದು ಮಾದರಿಯಾಗಿದ್ದಾರೆ.

ಕಳೆದ ಮೂರುವರೆ ದಶಕಗಳಿಂದ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ, ಹೈನುಗಾರಿಕೆಯಲ್ಲಿಯೂ ಯಶಸ್ಸು ಕಂಡ ಸುಬ್ಬಣ್ಣ ಶೆಟ್ಟಿಯವರಿಗೆ ಇದೀಗ 52 ವರ್ಷವಾದರೂ ಕೂಡ ಅವರ ಕೃಷಿ ಉತ್ಸಾಹ ಯುವಕರನ್ನೇ ನಾಚಿಸುವಂತದ್ದು. ನಿತ್ಯ ಕೃಷಿಕಾಯಕಕ್ಕೆ ಬಹಳಷ್ಟು ಸಮಯ ಮೀಸಲಿಡುತ್ತಿದ್ದಾರೆ. ಅಜ್ಜ ಹಾಗೂ ತಂದೆ ಕಾಲದಿಂದಲೂ ಇವರದ್ದು ಕೃಷಿ ಕಾಯಕ. ನಾಗೂರಿನ 3 ಎಕ್ರೆ ಕೃಷಿಭೂಮಿಯಲ್ಲಿ ಶೇಂಗಾ, 50 ಸೆಂಟ್ಸ್ ಜಾಗದಲ್ಲಿ ಉದ್ದು, ಗಂಟಿಹೊಳೆಯ 1 ಎಕ್ರೆ ಭೂಮಿಯಲ್ಲಿ ಅಡಿಕೆ, ನಾಗೂರಿನಲ್ಲಿ ತೆಂಗಿನ ತೋಟ, ಮಾಡಿದ್ದಾರೆ.

ಹಡಿಲು ಭೂಮಿಯಲ್ಲಿ ಭತ್ತ, ಕಲ್ಲಂಗಡಿ ಬೆಳೆ..!
ನಾಗೂರಿನ ಹಳಗೇರಿ ಬಳಿಯಲ್ಲಿ ಕಳೆದ 10-15 ವರ್ಷದಿಂದ ಸುಮಾರು 10 ಎಕ್ರೆ ಹಡಿಲು ಭೂಮಿ ಲೀಸ್ ಪಡೆದು ಭತ್ತದ ಕೃಷಿ ಮಾಡಿ ಯಶಸ್ಸಾಗಿದ್ದಾರೆ. ಅಲ್ಲದೆ ಗೇಣಿ ಪಡೆದ 4 ಎಕ್ರೆ ಭೂಮಿಯಲ್ಲಿ ಎರಡು ಹಂತದಲ್ಲಿ ಕಲ್ಲಂಗಡಿ ಬೆಳೆಯುತ್ತಾರೆ. ಮೊದಲಿಗೆ 279-ನಾಮಧಾರಿ ತಳಿಯ ಕಲ್ಲಂಗಡಿ ಬೆಳೆಯುತ್ತಿದ್ದು ಸಾಗಾಟ ಹಾಗೂ ಗುಣಮಟ್ಟದ ದೃಷ್ಟಿಯಿಂದ ಮೆಲೋಡಿ ತಳಿಯ ಕಲ್ಲಂಗಡಿ ಬೆಳೆಯನ್ನು ಇತ್ತೀಚೆಗೆ ಕೆಲವು ವರ್ಷದಿಂದ ಬೆಳೆಯುತ್ತಿದ್ದಾರೆ. ಬೈಂದೂರು ಭಾಗದಲ್ಲಿ ಕಲ್ಲಂಗಡಿ ಬೆಳೆಗಾರರು ಕಮ್ಮಿಯಿದ್ದ ಸಂದರ್ಭ ಅಂದಿದ್ದ ಅಧಿಕಾರಿಯೊಬ್ಬರ ಮಾರ್ಗದರ್ಶನದಲ್ಲಿ ಬೆಳೆಗಾರರಿಗೆ ‘ಗುಚ್ಛ ಗ್ರಾಮ’ದಡಿ ಸಂಘ ರಿಜಿಸ್ಟ್ರಾರ್ ಮಾಡಿಸಿ ಬೆಳೆಗಾರರಿಗೆ ಪ್ರೋತ್ಸಾಹ ಧನ ನೀಡಿದ್ದು ಇದನ್ನು ಉಪಯೋಗಿಸಿಕೊಂಡು ಕಲ್ಲಂಗಡಿ ಬೆಳೆಯಲ್ಲಿ ತೊಡಗಿಸಿಕೊಂಡರು.

ಕಲ್ಲಂಗಡಿ ಬೆಳೆಯಲ್ಲಿ ಬಂಪರ್..!
ಸುಬ್ಬಣ್ಣ ಶೆಟ್ಟಿಯವರ ಅಜ್ಜ ಕೂಡ ಕಲ್ಲಂಗಡಿ ಬೆಳೆಗಾರರು.‌ ಅಜ್ಜ ಹಾಗೂ ತಂದೆಯ ಕಾಲದಲ್ಲಿ ಬೀಜ ಸಂಗ್ರಹಣೆಯ ವಿಧಾನವನ್ನು ಕರಗತ ಮಾಡಿಕೊಂಡಿದ್ದ‌ ಸುಬ್ಬಣ್ಣ ಅವರಿಗೆ ಕಲ್ಲಂಗಡಿ ಬೆಳೆ ಬಗ್ಗೆ ವಿಶೇಷ ಪ್ರೀತಿ. ಪ್ರತಿ ವರ್ಷ ಬೆಳೆ ಆರಂಭಿಸುವ ಸಂದರ್ಭದಿಂದ ಮೊದಲ್ಘೊಂಡು ಬೆಳೆ ಕಟಾವಿನ ತನಕವೂ ತಾಂತ್ರಿಕತೆ ಬಳಸುತ್ತಾರೆ. ಸಿಂಪಡನೆ ಯಂತ್ರ, ಕಳೆಯಂತ್ರದ ಜೊತೆಗೆ ಕಲ್ಲಂಗಡಿ ಗಿಡಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಯಾವುದೇ ರಾಸಾಯನಿಕ ಬಳಸಬಾರದು ಎಂಬುದು ಇವರ ಅಭಿಪ್ರಾಯ. ಅಂಗಡಿ ಗೊಬ್ಬರ, ರಾಸಾಯನಿಕ ಬದಲು ಮನೆ ಮದ್ದು ಕಲ್ಲಂಗಡಿ ಬೆಳೆಗೆ ಉಪಯೋಗಕಾರಿ. ಮಜ್ಜಿಗೆ, ಕಹಿಬೇವಿನ ಎಣ್ಣೆ, ತುಂಬೆ ಸೊಪ್ಪಿನ ರಸದಂತಹ ಮನೆಮದ್ದು ಕಲ್ಲಂಗಡಿ ಗಿಡದ ಕೀಟ ನಾಶಕವಾಗಿ ಸಹಕಾರಿ. ತರಬೇತಿಯ ಜೊತೆಗೆ ವೈಜ್ಞಾನಿಕ ಮಾದರಿ ಅಳವಡಿಸಿಕೊಂಡರೆ ಕಲ್ಲಂಗಡಿ ಲಾಭದ ಬೆಳೆ ಎನ್ನುತ್ತಾರೆ ಸುಬ್ಬಣ್ಣ ಶೆಟ್ಟಿ.

ಹೈನುಗಾರಿಕೆಯಲ್ಲೂ ಎತ್ತಿದ ಕೈ..!
ಪೂರ್ವಜರ ಕಾಲದಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಸುಬ್ಬಣ್ಣ ಶೆಟ್ಟಿಯವರು ಕಿರಿಮಂಜೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಕಳೆದ ಮೂರು ಅವಧಿಯಿಂದ ಅಧ್ಯಕ್ಷರಾಗಿದ್ದಾರೆ. ಮನೆಮನೆಗೆ ಬೆಳಿಗ್ಗೆ ಹಾಗೂ ಸಂಜೆ ಹಾಲು ಸಂಗ್ರಹಣೆ ವಾಹನ ಕಳಿಸಿ ಹಾಲು ಸಂಗ್ರಹಿಸುವ ವಿಧಾನ ಅಳವಡಿಸಿಕೊಳ್ಳುವ ಮೂಲಕ ಮೊದಲು 700ಲೀಟರ್ ಇದ್ದ ಹಾಲು ಸಂಗ್ರಹಣೆ ಇದೀಗಾ 1000 ಲೀಟರಿಗೆ ಏರಿಕೆಯಾಗಿದೆ. ಸುಬ್ಬಣ್ಣ ಶೆಟ್ಟಿಯವರು ಕಿರಿಮಂಜೇಶ್ವರ ಗ್ರಾ‌ಪಂ ಹಾಲಿ ಪಕ್ಷೇತರ ಸದಸ್ಯರೂ ಕೂಡ ಆಗಿದ್ದಾರೆ.

ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆಯಲ್ಲಿ ಮೊದಲಿನಿಂದಲೂ ಆಸಕ್ತಿಯಿತ್ತು. ಹಡಿಲು ಭೂಮಿಗಳಿಗೆ ಜೀವ ತುಂಬುವ ನಿಟ್ಟಿನಲ್ಲಿ ಅಂತಹ ಭೂಮಿ ಲೀಸ್ ಪಡೆದು ಕೃಷಿ ಮಾಡುತ್ತಿರುವೆ. ಉತ್ಸಾಹ, ಇಚ್ಚಾಶಕ್ತಿಯಿಂದ ಕೃಷಿ ಮಾಡಬೇಕು ಮತ್ತು ವೈಜ್ಞಾನಿಕ ಮಾದರಿ ಅಳವಡಿಸಿಕೊಂಡರೆ ಲಾಭ ಖಂಡಿತ ಬರುತ್ತದೆ. ಯುವ ಜನಾಂಗ ಕೂಡ ಕೃಷಿ, ಹೈನುಗಾರಿಕೆ ಬಗ್ಗೆ ಹೆಚ್ಚಿನ ಒಲವು ತೋರಬೇಕಿದೆ. ಸರಕಾರ ಮತ್ತು‌ ಇಲಾಖೆ ಕಲ್ಲಂಗಡಿ ಬೆಳೆಗೆ ಇನ್ನಷ್ಟು ಪ್ರೋತ್ಸಾಹಧನ, ಸಬ್ಸಿಡಿ ಮೊದಲಾದವುಗಳನ್ನು ನೀಡಬೇಕು.
– ಸುಬ್ಬಣ್ಣ ಶೆಟ್ಟಿ ನಾಗೂರು (ಪ್ರಗತಿಪರ ಕೃಷಿಕ)

ಬಹಳ ವರ್ಷಗಳಿಂದ ಸುಬ್ಬಣ್ಣ ಶೆಟ್ಟಿಯವರು ಕೃಷಿ-ತೋಟಗಾರಿಕೆಯಲ್ಲಿ ಸಕ್ರೀಯರಾಗಿದ್ದು ನೂತನ ಅನ್ವೇಷಣೆ, ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಕಲ್ಲಂಗಡಿ ಬೆಳೆಯಲ್ಲಿ ಅವರು ನೂತನ ವಿಧಾನಗಳನ್ನು ಪರಿಚಯಿಸಿದ್ದು ಕಳೆದ ವರ್ಷ ತೋಟಗಾರಿಕೆ ಇಲಾಖೆ ವತಿಯಿಂದ ವಿಡಿಯೋ ದಾಖಲೀಕರಣ ಮಾಡಿದ್ದು ಇಲಾಖೆಯಿಂದ ನಡೆಯುವ ಮೇಳಗಳು ಹಾಗೂ ಕಾರ್ಯಾಗಾರಗಳಲ್ಲಿ ಇದನ್ನು ಪ್ರಸಾರ ಮಾಡಲಾಗಿತ್ತು. ಸುಬ್ಬಣ್ಣ ಶೆಟ್ಟಿಯವರ ಕೃಷಿ ಉತ್ಸಾಹ ಯುವಕರಿಗೆ ಮಾದರಿಯಾಗಿದೆ.
– ನಿಧೀಶ್ ಕೆ.ಜೆ., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ, ಕುಂದಾಪುರ

Comments are closed.