ಕರಾವಳಿ

ಮತ್ತಷ್ಟು ಆಕರ್ಷಣೆಯ ತಾಣವಾಗಲಿದೆ ತ್ರಾಸಿ-ಮರವಂತೆ ಬೀಚ್; 9.95 ಕೋಟಿ ವೆಚ್ಚದ ಕಾಮಗಾರಿ ಆರಂಭ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ಪ್ರಮುಖವಾಗಿರುವ ಉಡುಪಿ ಜಿಲ್ಲೆಯ ತ್ರಾಸಿ-ಮರವಂತೆ ಕಡಲ ತೀರವನ್ನು ಇನ್ನಷ್ಟು ಸುಂದರವಾಗಿಸಿ, ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೊಸ ಕಾಮಗಾರಿ ಆರಂಭವಾಗಿದೆ.

ಅಂದಾಜು 9.95 ಕೋಟಿ ರೂ. ವೆಚ್ಚದಲ್ಲಿ ಸೀವಾಕ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಫುಡ್ ಕೋರ್ಟ್, ಸೈಕಲ್ ಟ್ರ್ಯಾಕ್, ಮಕ್ಕಳ ಪಾರ್ಕ್ ಸಹಿತ ವಿವಿಧ ಅಭಿವೃದ್ಧಿ ಕಾರ್‍ಯ ನಡೆಯುತ್ತಿದೆ.

ಕುಂದಾಪುರ-ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-66 ತ್ರಾಸಿ-ಮರವಂತೆ ಕಡಲ ತೀರದ ಸಮೀಪದಲ್ಲೇ ಕುಂದಾಪುರ – ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತಿದ್ದು, ಅದಾಗಿಯೂ ಇಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಯಾವುದೇ ಮಹತ್ವದ ಅಭಿವೃದ್ಧಿ ಕಾರ್‍ಯಗಳು ಕಳೆದ ಕೆಲವು ವರ್ಷಗಳಿಂದ ನಡೆದಿರಲಿಲ್ಲ. ರಾಜ್ಯದ ಅತ್ಯಂತ ಸುಂದರ ಬೀಚ್ ಆಗಿರುವ ಈ ತ್ರಾಸಿ – ಮರವಂತೆ ಬೀಚ್ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಈಗಾಗಲೇ ನೀಲ ನಕಾಶೆ ಸಿದ್ಧಪಡಿಸಿ, ಕಾಮಗಾರಿಯೂ ಆರಂಭವಾಗಿದ್ದು ಕರ್ನಾಟಕ ಪ್ರವಾಸೋಧ್ಯಮ ಮೂಲಸೌಕರ್ಯ ನಿಯಮಿತ (ಕೆಟಿಐಎಲ್) ಇವರು ಕಾಮಗಾರಿ ನಿರ್ವಹಿಸಲಿದ್ದಾರೆ.

ಸಂಸದರ ಮುತುವರ್ಜಿ:
ಇತ್ತೀಚೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಅವರ ಮುತುವರ್ಜಿಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಅಧಿಕಾರಿಗಳ ಸಭೆ ಕರೆದು, ಕಾಮಗಾರಿ ತ್ವರಿತಗತಿಯಲ್ಲಿ ನಿರ್ವಹಿಸುವ ಹಾಗೂ ಸ್ಥಳೀಯ ಗ್ರಾ.ಪಂ.ಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಬಗ್ಗೆ ಸೂಚಿಸಿದ್ದರು. ಆದಷ್ಟು ಬೇಗ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿಕೊಡಲು ಶಾಸಕರು ಸೂಚಿಸಿದ್ದರು. ತ್ರಾಸಿ-ಮರವಂತೆ ಬೀಚ್ ಪರಿಸರದಲ್ಲಿ ರಸ್ತೆ ಸುರಕ್ಷೆ, ಸುಂದರೀಕರಣ ಸಲುವಾಗಿ ರಾ.ಹೆದ್ದಾರಿ ಪ್ರಾಧಿಕಾರದ ಚೀಫ್ ಜನರಲ್ ಮ್ಯಾನೇಜರ್ ವಿಶಾಲ್ ಗುಪ್ತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತ್ರಾಸಿ-ಮರವಂತೆ ಬೀಚ್ ಹಾಗೂ ಪ್ರವಾಸಿ ಮಂದಿರ ಬಳಿ ಎರಡೂ ಹಂತದ ಕಾಮಗಾರಿ ನಡೆಯುತ್ತಿದೆ. ‘ಟಿ’ ಆಕಾರದ ತಡೆಗೋಡೆಯಲ್ಲಿ ಸೀವಾಕ್ ಮಾಡುವ ಯೋಜನೆಯಿದ್ದು, ಹೆದ್ದಾರಿ ಬದಿ ಸೈಕಲ್ ಟ್ರ್ಯಾಕ್ ಸಹ ಇರಲಿದ್ದು, ಇವರೆಡಕ್ಕೂ ಸಿಆರ್‌ಝಡ್ ಅನುಮತಿ ಸಿಗಬೇಕಿದೆ. ಉಳಿದಂತೆ ಎಲ್ಲ ಕಾಮಗಾರಿ ನಡೆಯಲಿದೆ ಎನ್ನುವುದಾಗಿ ಕಾಮಗಾರಿಯ ನಿರ್ವಹಿಸುತ್ತಿರುವ ಕರ್ನಾಟಕ ಟೂರಿಸಂ ಇನ್ಪಾಸ್ಟ್ರಕ್ಚರ್ ಲಿಮಿಟೆಡ್(ಕೆಟಿಐಎಲ್)ನ ಸಹಾಯಕ ಎಂಜಿನಿಯರ್ ಮುತ್ತುರಾಜ್ ತಿಳಿಸಿದ್ದಾರೆ.

ಏನೆಲ್ಲಾ ಅಭಿವೃದ್ಧಿ..?
ಮರವಂತೆಗೆ ಬರುವ ವಿವಿದೆಡೆಯ ಪ್ರವಾಸಿಗರಿಗೆ ಸದ್ಯ ವಾಹನ ನಿಲುಗಡೆಗೆ ಸಮಸ್ಯೆಯಾಗುತ್ತಿದ್ದು, ಎರಡೂ ಕಡೆಗಳಲ್ಲಿ ತಲಾ 100ವಾಹನಗಳು ನಿಲ್ಲಿಸುವಂತಹ ಸುವ್ಯವಸ್ಥಿತ ಪಾರ್ಕಿಂಗ್ ವ್ಯವಸ್ಥೆ, ಟಿಕೆಟ್ ಕೌಂಟರ್, ಕಡಲ ತೀರದುದ್ದಕ್ಕೂ ಫುಟ್‌ಪಾತ್, 650 ಮೀ. ಸೈಕಲ್ ಟ್ರ್ಯಾಕ್, ಫುಡ್ ಕೋರ್ಟ್, ವಿಹಾರಿಗಳಿಗೆ ಕುಳಿತುಕೊಳ್ಳುವಂತಹ ವ್ಯವಸ್ಥೆ, ತ್ರಾಸಿ ಬೀಚ್ ಬಳಿ ಬಯಲು ರಂಗ ಮಂಟಪ, ಹುಲ್ಲು ಹಾಸಿಗೆ, ಮಕ್ಕಳಿಗೆ ಆಟವಾಡಲು ಪಾರ್ಕ್, ಎರಡೂ ಕಡೆ ಪ್ರವೇಶ- ನಿರ್ಗಮನ ದ್ವಾರ, ಕಡಲಾಮೆ ಶಿಲ್ಪಾಕೃತಿ, ಶೌಚಾಲಯ ವ್ಯವಸ್ಥೆ ಸಹಿತ ಇನ್ನಿತರ ಹಲವು ಕಾಮಗಾರಿ ಈ ಅಭಿವೃದ್ಧಿ ಕಾಮಗಾರಿಯಲ್ಲಿ ಒಳಗೊಂಡಿದೆ.

ತ್ರಾಸಿ-ಮರವಂತೆ ಬೀಚ್ ಅಭಿವೃದ್ಧಿಗೆ ಕ್ರಮ
ತ್ರಾಸಿ-ಮರವಂತೆ ಸಮುದ್ರ ತೀರ ಅಭಿವೃದ್ಧಿಗೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ 9.95 ಕೋಟಿ ರೂ. ಅನುದಾನ ಬಂದಿದ್ದು ಅದರ ಕೆಲಸ ಪ್ರಗತಿಯಲ್ಲಿದೆ. ಒಂದು ಭಾಗದ ಗೆಸ್ಟ್ ಹೌಸ್ ನವೀಕರಣವಾಗುತ್ತಿದೆ. ಇನ್ನೊಂದು ಕಡೆಯ ಕೆಲಸಕ್ಕೆ ಸಿ.ಆರ್.ಝಡ್ ಅನುಮೋದನೆಗೆ ಕಳಿಸಿದ್ದು ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ನಡೆಸಲಾಗುತ್ತದೆ. ಇನ್ನು ಕೇಂದ್ರ ಸರಕಾರದ ವತಿಯಿಂದ ರಸ್ತೆ ಸುರಕ್ಷತೆ, ಸುಂದರೀಕರಣಕ್ಕೆ ಪ್ರಸ್ತಾವನೆ ಕಳಿಸಿ ಮಂಜೂರಾತಿ ಸಿಕ್ಕಿದ್ದು ಡಿ.ಪಿ.ಆರ್ ಕಾರ್ಯ ಪ್ರಗತಿಯಲ್ಲಿದೆ.
– ಬಿ.ವೈ. ರಾಘವೇಂದ್ರ (ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ)

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ಪ್ರವಾಸಿಗರನ್ನು ಆಕರ್ಷಿಸುವ ಸಲಯವಾಗಿ ತ್ರಾಸಿ- ಮರವಂತೆ ಬೀಚ್‌ನಲ್ಲಿ ಅಭಿವೃದ್ಧಿ ಕಾರ್‍ಯ ಕೈಗೊಳ್ಳಲಾಗಿದೆ. ಈಗಷ್ಟೇ ಕಾಮಗಾರಿ ಆರಂಭಗೊಂಡಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 9.95 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.
– ಕುಮಾರ ಸಿ.ಯು. (ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ ಉಡುಪಿ)

Comments are closed.