ಕರಾವಳಿ

ಪಾಠ-ಆಟಕ್ಕೆ ಕೊಂಚ ಬ್ರೇಕ್: ತ್ಯಾಜ್ಯ ಸಂಸ್ಕರಣಾ ಘಟಕದ ಕೆಲಸ ನೋಡಲು ಬಂದ ಕುಂದಾಪುರ ಬೋರ್ಡ್ ಹೈಸ್ಕೂಲ್ ವಿದ್ಯಾರ್ಥಿಗಳು..!

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ನಿತ್ಯ ಬೆಳಿಗ್ಗೆಯಾದರೆ ಶಾಲೆಗೆ ಬಂದು ಪಾಠ-ಪ್ರವಚನ, ಆಟೋಟೋಪದಲ್ಲಿ ಬ್ಯುಸಿ ಇರೋ ಮಕ್ಕಳು ಶಾಲೆ ಬಿಟ್ಟು ಬಸ್ ಏರಿ ಒಂದು ಕಡೆ ತೆರಳಿದ್ರು. ಪಠ್ಯ ಪಾಠಗಳ ಜೊತೆ ನೈತಿಕ ಜೀವನ ಪಾಠ ಕಲಿಸಲು ಅವರನ್ನು ಉಪನ್ಯಾಸಕರು ಕರೆದೊಯ್ದಿದ್ದು ಪ್ರವಾಸಕ್ಕಲ್ಲ. ಬದಲಾಗಿ ಒಂದೊಳ್ಳೆ ಸ್ಥಳಕ್ಕೆ. ಅಷ್ಟಕ್ಕು ಆ ಸ್ಥಳ ಯಾವುದು..? ಆ ವಿದ್ಯಾರ್ಥಿಗಳು ಅಲ್ಲೇನು‌ ನೋಡಿದ್ರು ಅನ್ನೋದಕ್ಕೆ ಈ ಸ್ಟೋರಿ ಓದಿ.

ಕುಂದಾಪುರ ಬೋರ್ಡ್ ಹೈಸ್ಕೂಲ್ ಎಂದೇ ಖ್ಯಾತಿಯಾದ ಸಂಸ್ಥೆಯಿದು. ಸರ್ಕಾರಿ ಶಿಕ್ಷಣ ಸಂಸ್ಥೆಗಳ‌ ಪೈಕಿ ಬಹಳಷ್ಟು ಹೊಸತನಗಳಿಗೆ ಸಾಕ್ಷಿಯಾಗಿದ್ದು ಇದೇನು ಹೊಸದಲ್ಲ. ಗ್ರಾಮೀಣ ಭಾಗದಿಂದ ಹಿಡಿದು ವಿವಿದೆಡೆಯಿಂದ ಇಲ್ಲಿ ಶಿಕ್ಷಣವರಿಸಿ ಬಂದವರು ಹಾಗೂ ಬರುತ್ತಿರುವ ವಿದ್ಯಾರ್ಥಿಗಳ ‌ಸಂಖ್ಯೆ ಬಹಳ. ಈ ಬಾರಿ ಈ ಸಂಸ್ಥೆ ಹಾಗೂ ಕುಂದಾಪುರ ಪುರಸಭೆ ಮಾಡಿದ ಜಂಟಿ ಅಭಿಯಾನ ವಿಶೇಷವಾಗಿತ್ತು. ಕುಂದಾಪುರದಲ್ಲಿರುವ ಕುಂದಾಪುರ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಯ ಎನ್.ಎಸ್.ಎಸ್. ಸಹಿತ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿದರು. ಕುಂದಾಪುರ ನಗರದಲ್ಲಿ ಸಂಗ್ರಹವಾಗುವ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಂಗಡನೆ ಮಾಡಿ, ಸಂಪನ್ಮೂಲವಾಗಿಯೂ ಪರಿವರ್ತನೆ ಮಾಡುವ ಬೃಹತ್ ಘಟಕವನ್ನು ವಿದ್ಯಾರ್ಥಿಗಳು ವೀಕ್ಷಿಸಿದ್ರು.

ಅಂದ ಹಾಗೆ ಶುಕ್ರವಾರ ಬೆಳಿಗ್ಗೆ ಬಸ್ಸುಗಳನ್ನೇರಿ ಬಂದ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ ಕುಂದಾಪುರ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಆಗಮಿಸಿದ್ದು ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಘಟಕದಲ್ಲಿ ನಡೆಯುವ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದ್ರು. ಸುಮಾರು ಒಂದೂವರೆ ಗಂಟೆಗಳ ಕಾಲ ಈ ವಿದ್ಯಾರ್ಥಿಗಳು ಘಟಕದಲ್ಲಿ‌ ನಡೆಯುವ ಕೆಲಸ ಕಾರ್ಯಗಳನ್ನು ಲೈವ್ ಆಗಿ ನೋಡಿದ್ರು. ಬಳಿಕ ಪ್ರೌಢಶಾಲಾ ವಿಭಾಗದ 130 ಎನ್.ಎಸ್.ಎಸ್ ವಿದ್ಯಾರ್ಥಿಗಳು ಕುಂದಾಪುರ ಪುರಸಭಾ ಕಚೇರಿಗೆ ಕೂಡ ಭೇಟಿ ಕೊಟ್ರು. ಈ ವೇಳೆ‌ ಅಲ್ಲಿನ ಅಧಿಕಾರಿ‌ ಸಿಬ್ಬಂಗಳು‌ ಸ್ವಾಗತಿಸಿ ಕಚೇರಿ ಕಾರ್ಯವೈಖರಿ, ಹುದ್ದೆಗಳು‌ ಹಾಗೂ ಜವಬ್ದಾರಿ ಬಗ್ಗೆ ವಿವರ ನೀಡಿದ್ರು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್,ಉಪಾಧ್ಯಕ್ಷ ಸಂದೀಪ ಖಾರ್ವಿ, ನಾಮ ನಿರ್ದೇಶಿತ ಸದಸ್ಯೆ ಪುಷ್ಪ ಶೇಟ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿಕಾಸ್ ಹೆಗ್ಡೆ, ಪುರಸಭೆಯ ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಕಂದಾಯ ನಿರೀಕ್ಷಕಿ ಜ್ಯೋತಿ, ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯಕ್, ಗಣೇಶ ಕುಮಾರ್ ಜನ್ನಾಡಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಉದಯ ಮಡಿವಾಳ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ, ಪ್ರಾಧ್ಯಾಪಕರುಗಳು ಉಪಸ್ಥಿತರಿದ್ದರು.

ಒಟ್ಟಿನಲ್ಲಿ ಕುಂದಾಪುರ ನಗರ ಭಾಗದಲ್ಲೇ ಇರುವ ಸರಕಾರಿ‌ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಕಸದ ವಿಲೇವಾರಿ, ಸಂಸ್ಕರಣಾ ಮಹತ್ವ ತಿಳಿಸುವ ಮೂಲಕ ಸುಂದರ ನಗರ ನಿರ್ಮಾಣದಲ್ಲಿ ಇದು ಕೂಡ ಪ್ರಮುಖವಾಗುತ್ತದೆ ಎನ್ನುವ ಅರಿವು ಹಾಗೂ ಜವಬ್ದಾರಿ ಮೂಡಿಸಲು ಹಮ್ಮಿಕೊಂಡ ಈ ಕಾರ್ಯ ಶ್ಲಾಘನೀಯ.

Comments are closed.