(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಇನ್ನಿಲ್ಲದ ಪ್ರಯತ್ನಗಳಾಗುತ್ತಿದ್ದರೂ ಕೂಡ ಅಲ್ಲಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಇಲ್ಲದೆ ಕೆಲ ಶಾಲೆ ಮುಚ್ಚಿದರೆ, ಮತ್ತಷ್ಟು ಶಾಲೆ ಮುಚ್ಚುವ ಹಂತಕ್ಕೆ ಬಂದು ಮುಟ್ಟಿದೆ. ಸರ್ಕಾರಿ ಶಾಲೆ ಹಾಜರಾತಿ ಹೆಚ್ಚಿಸಲು ಹಳೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ವಾಹನ, ಸಮವಸ್ತ್ರ ಮೊದಲಾದ ಯೋಜನೆಗಳನ್ನು ನೀಡುತ್ತಿದ್ದಾರೆ. ಇನ್ನು ಕೆಲ ಶಾಲೆಗಳನ್ನು ಖಾಸಗಿ ವ್ಯಕ್ತಿಗಳು ದತ್ತು ತೆಗೆದುಕೊಂಡು ಹಾಜರಾತಿ ಹೆಚ್ಚಿಸುವ ಪ್ರಯತ್ನವೂ ನಡೆಯುತ್ತಿದೆ.
ಆದರೆ ಇಲ್ಲೊಬ್ಬ ಶಿಕ್ಷಕಿ ಹಾಜರಾತಿಗಾಗಿ ತಮ್ಮ ದುಡಿಮೆ ಹಣದಲ್ಲಿ ಶಾಲೆಗೆ ಸೇರುವ ಮಕ್ಕಳ ಹೆಸರಲ್ಲಿ ಒಂದು ಸಾವಿರ ಡಿಪಾಜಿಟ್ ಇಟ್ಟು ಬಾಂಡ್ ನೀಡುವ ಮೂಲಕ ಹಾಜರಾತಿ ಹೆಚ್ಚಿಸಿದ್ದಾರೆ. ವಿನೂತನ ಯೋಜನೆ ಅಳವಡಿದಿಕೊಂಡವರು ಕುಂದಾಪುರ ತಾಲೂಕು ಶಂಕರನಾರಾಯಣ ರೇಖಾ ಪ್ರಭಾಕರ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ನಗರ ಹೋಬಳಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ವಿನೂತನ ಯೋಜನೆ ಅಳವಡಿಸಿಕೊಂಡ ಶಾಲೆ.
ರೇಖಾ 2010ರಲ್ಲಿ ನೂಲಗ್ಗೇರಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಯಾಗಿ ಸೇರಿಕೊಂಡ ಸಂದರ್ಭದಲ್ಲಿ ಶಾಲೆಯಲ್ಲಿ 1 ರಿಂದ 7 ತರಗತಿ ಓದುವ ಮಕ್ಕಳ ಸಂಖ್ಯೆ ಕೇವಲ 20. ಹೊಸದಾಗಿ ಸೇರುವ ಹುಡುಗರು ಪ್ರತಿವರ್ಷ 2 ರಿಂದ 3. ರೇಖಾ ಮಕ್ಕಳ ಶಾಲೆಗೆ ಕರೆತರಲು ನಾನಾ ಪ್ರಯತ್ನ ಮಾಡಿದರು, ಪಾಲಕರ ಊರ ಹಿರಿಯರ ಭೇಟಿಯಾಗಿ ಮನ ಒಲಿಸುವ ಪ್ರಯತ್ನ ಕೂಡಾ ವಿಫಲವಾಯಿತು. ಆವಾಗ ಸಿಕ್ಕದ ಹೊಸ ಸೂತ್ರ ಠೇವಣಿ ಯೋಜನೆ. ನಂತರ ಪ್ರತಿ ವರ್ಷ ಹತ್ತಕ್ಕು ಅಧಿಕ ಮಕ್ಕಳು ದಾಖಲಾತಿಯಾಗುತ್ತಿದ್ದು ಪ್ರಸ್ತುತ ಶಾಲೆಯಲ್ಲಿ 83 ಮಕ್ಕಳಿದ್ದು 63 ಮಕ್ಕಳು ಬಾಂಡ್ ಸೌಲಭ್ಯ ಪಡೆಯುತ್ತಿದ್ದಾರೆ. 1 ಸಾವಿರ ಮೌಲ್ಯದ ಬಾಂಡ್ ಇದಾಗಿದ್ದು ಹತ್ತು ವರ್ಷದ ಅವಧಿಗೆ ಬ್ಯಾಂಕಿನಲ್ಲಿ ಆ ಹಣ ಠೇವಣಿ ಇಡಲಾಗುತ್ತ್ದೆ. ಹತ್ತನೇ ತರಗತಿ ಮುಗಿಸುವ ವಿದ್ಯಾರ್ಥಿಗೆ ಬಡ್ಡಿ ಸಹಿತ ಆ ಹಣ ಸಿಗಲಿದೆ.
2013-14ರಲ್ಲಿ ಠೇವಣಿ ಯೋಜನೆ ಪ್ರಾರಂಭಿಸಿದರು. 1 ನೇ ತರಗತಿಗೆ ಶಾಲೆಗೆ ಸೇರುವ ಮಗುವಿನ ಹೆಸರಲ್ಲಿ ಒಂದು ಸಾವಿರ ರೂ.ಠೇವಣಿ ಇಡುವುದು. ಆ ಮಗು ಹತ್ತನೇ ತರಗತಿ ಮುಗಿಸಿದ ತಕ್ಷಣ ಬಡ್ಡಿ ಸಮೇತ ಹಣ ದೊರಕುವಂತೆ ಮಾಡಿದ ವ್ಯವಸ್ಥೆಯೇ ಠೇವಣಿ ಯೋಜನೆ. ಠೇವಣಿಗಾಗಿ ಯಾರನ್ನೂ ಅಂಗಲಾಚದೆ ತಮ್ಮ ಸ್ವಂತ ಹಣ ಬಳಸಿಕೊಂಡಿದ್ದಾರೆ. ಪತ್ನಿಯ ಪ್ರಯತ್ನಕ್ಕೆ ಬೆಂಬಲವಾಗಿ ನಿಂತವರು ಅರಣ್ಣ ಇಲಾಖೆ ಅಧಿಕಾರಿಯಾಗಿರುವ ಪತಿ ಪ್ರಭಾಕರ್ ಕುಲಾಲ್. ಕುಂದಾಪುರದ ಬಿದ್ಕಲಕಟ್ಟೆಯಿಂದ ಬೆಳಿಗ್ಗೆ ಶಾಲೆಗೆ ತೆರಳಲು ಎರಡು ತಾಸು, ಶಾಲೆ ಅವಧಿ ಮುಗಿದ ಬಳಿಕ ಮತ್ತೆ ಮನೆ ಸೇರಲು ಎರಡು ತಾಸು ಪ್ರಯಾಣಿಸುತ್ತಾರೆ ಶಿಕ್ಷಕಿ ರೇಖಾ.
ನಾನು ಮತ್ತು ನನ್ನ ಪತಿ ಬಡತನದಲ್ಲೆ ಬೆಳೆದವರು. ನಮ್ಮ ವಿದ್ಯಾಭ್ಯಾಸಕ್ಕೆ ಸಮಾಜ ತುಂಬ ನೆರವಾಗಿದೆ. ಅದರ ಪರಿಣಾಮ ನಮ್ಮಿಬ್ಬರಿಗೆ ಸರ್ಕಾರಿ ನೌಕರಿ ಸಿಕ್ಕಿದೆ, ಅದಕ್ಕೆ ನಾವೂ ನಮ್ಮ ಕೈಲಾದಷ್ಟು ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕೆಂಬ ಅಪೇಕ್ಷೆ ಇಟ್ಟುಕೊಂಡಿದ್ದೇವೆ. ಸಮಾಜದ ಋಣ ಹೀಗಾದರೂ ಸ್ವಲ್ಪ ತೀರಿಸುವ ಅವಕಾಶ ಸಿಕ್ಕಿದೆ.
-ರೇಖಾ ಪ್ರಭಾಕರ್, ಬಾಂಡ್ ಯೋಜನೆ ಜಾರಿಗೆ ತಂದ ಶಿಕ್ಷಕಿ