ಕರಾವಳಿ

ಶಾಲಾ ಕಟ್ಟಡಕ್ಕೆ ಜೀವ ತುಂಬಿದ ಖಾವಿಕಲೆ: ಶಾಲೆ ಸೌಂದರ್ಯ ಹೆಚ್ಚಿಸಿದ ವಿದ್ಯಾರ್ಥಿಗಳ ಕೈಚಳಕ

Pinterest LinkedIn Tumblr

ಕುಂದಾಪುರ: ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಚೆಲವಿನ ಚಿತ್ತಾರದ ನೋಟಗಳು. ಗ್ರಾಮೀಣ ಪ್ರದೇಶದ ಸಂಸ್ಕೃತಿಯ ಜತೆಗೆ ದೈನಂದಿನ ಬದುಕಿಗೆ ಸಂಬಂಧಿಸಿದ ಚಿತ್ರಗಳ ಮೂಲಕ ಗೋಡೆಗಳ ಮೇಲೆ ಸರಳ ರೇಖೆಗಳಲ್ಲಿ ತ್ರಿಭುಜಾಕಾರದಿಂದ ಖಾವಿ ಬಣ್ಣದಿಂದ ರಚಿಸಲಾದ ಖಾವಿ ಕಲೆಯ ಚಿತ್ರಗಳು. ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದಲ್ಲಿ ವಿದ್ಯಾರ್ಥಿಗಳ ಕೈಚಳಕದಿಂದ ಮೈದಳಿದು ಕಟ್ಟಡಗಳಿಗೆ ಜೀವ ತುಂಬಿ ನೋಡುಗರ ಮನ ಸೆಳೆಯುತ್ತಿದೆ. ಪ್ರೌಢಶಾಲೆಯ ಸುಮಾರು 50 ರಿಂದ 60 ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಭಾಗವಹಿಸಿ ತಮ್ಮ ಕಲಾಸಕ್ತಿಯನ್ನು ತೋರಿಸಿದ್ದಾರೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಬಾಲಕಿಯರೇ ಆಗಿದ್ದಾರೆ.

ಮಕ್ಕಳ ಶಾಲಾ ಜೀವನ ಹಾಗೂ ಹಳ್ಳಿ ಜೀವನದ ಚಿತ್ರಣಗಳು ಸೇರಿದಂತೆ ಶಾಲಾ ವಠಾರದ ಒಟ್ಟು 24 ಕಂಬಗಳಲ್ಲಿ ಪ್ರಾಚೀನ ಬುಡಕಟ್ಟು ಸಂಸ್ಕೃತಿಯ ಸಾಂಪ್ರದಾಯಿಕ ಚಿತ್ರಣಗಳನ್ನು ಖಾವಿಕಲೆಯ ಮೂಲಕ ತೋರ್ಪಡಿಸಿ ಅವರ ಭಾವನತ್ಮಕ ಸಂಬಂಧಗಳನ್ನು ಅದ್ಭುತವಾಗಿ ಕಲೆಯ ಚಿತ್ತಾರದ ಮೂಲಕ ಹೊರ ಹಾಕಿದ್ದಾರೆ. ಚಿಣ್ಣರ ಒಳಗಿನ ಮನಸ್ಸನ್ನು ಸುಲಭವಾಗಿ ಅರಳಿಸಲು ಈ ಖಾವಿಕಲೆ ಪ್ರಯೋಜನಕಾರಿಯಾಗಿ ಸಹಕರಿಸಿದಂತಿದೆ. ವಿದ್ಯಾರ್ಥಿಗಳು ಉಲ್ಲಾಸ ಮತ್ತು ಉತ್ಸಾಹ ತುಂಬಿಕೊಂಡು ಕಲಿಕೆಯಲ್ಲಿ ಸ್ಪೂರ್ತಿ ತೋರಿಸಿ ಏಕಾಗ್ರತೆ ಹಾಗೂ ಹೆಚ್ಚಿನ ಆಸಕ್ತಿಯಿಂದ ಕಲಾರಂಗಿನ ಚಟುವಟಿಕೆಯಲ್ಲಿ ಪಾಲ್ಗೊಂಡು ಅವರಿಷ್ಟದ ಚಿತ್ರಣಗಳನ್ನು ಶಾಲಾ ಗೋಡೆಯ ಮೇಲೆ ರಚಿಸಿ ತಮ್ಮೂಳಗಿನ ಭಾವನೆಗಳನ್ನು ಹೊರ ಹಾಕಿ ಸಂಪೂರ್ಣ ಖುಷಿಯಾಗಿದ್ದಾರೆ.

ವಿದ್ಯಾರ್ಥಿಗಳು ಶಾಲಾ ಜೀವನ ವಿಷಯವನ್ನು ಇಟ್ಟುಕೊಂಡು ಗುಂಪು ಓದು ಚಟುವಟಿಕೆ, ಪಾಠ ಪ್ರವಚನ, ವಿಜ್ಞಾನ ಪ್ರಯೋಗಾಲಯ, ಸ್ಕೂಲ್ ಡೇ, ಅಕ್ಷರ ದಾಸೋಹದ ಬಿಸಿ ಊಟ, ಹಸಿರು ತೋರಣ, ಕ್ರೀಡೆಗಳು ಸೇರಿದಂತೆ ಹಳ್ಳಿ ಜೀವನದ ವಿಭಾಗದಲ್ಲಿ ಕೃಷಿ ಚಟುವಟಿಕೆ, ಮನೆ ವಾರ್ತೆಯಲ್ಲಿ ಮುಳುಗಿದ ಮಹಿಳೆಯರು, ಕೌಟಂಬಿಕ ಜೀವನ ಪದ್ಧತಿ, ಹಳ್ಳಿ ಜೀವನದ ಎತ್ತಿನ ಗಾಡಿ ಬದುಕು, ಮೇಯ್ಯಲು ಬಿಟ್ಟ ಗೋವುಗಳ ಬಳಗ, ಹೈನುಗಾರಿಕೆ, ಹಳ್ಳಿ ಮನೆ ಹಾಗೂ ಹಳ್ಳಿ ಜೀವನದ ಚಿತ್ರಣಗಳು ಸೇರಿದಂತೆ ರಚಿಸಲಾದ ತ್ರಿಭುಜಾಕಾರದ ಅನೇಕ ಕಲಾಕೃತಿಗಳ ಚಿತ್ತಾರ ಶಾಲೆಯ ಸೌಂದರ್ಯವನ್ನು ಹೆಚ್ಚಿಸಿದೆ.

ಪುರಾತನ ಕಾಲದಿಂದಲೂ ಖಾವಿಕಲೆ, ವರ್ಲಿ ಪೈಂಟ್, ಬುಡಕಟ್ಟು ಜನರ ಸಂಕೇತಾತ್ಮಕ ಚಿತ್ರಗಳಿಂದ ಗುರುತಿಸಲ್ಪಟ್ಟಿದೆ. ಮಕ್ಕಳಿಗೆ ಪಾಠದಲ್ಲಿನ ಬೇಸರ ತೆಗೆಯಲು ಮತ್ತು ಲವಲವಿಕೆಯಿಂದಿರಲು ಈ ಖಾವಿಕಲೆ ಮತ್ತಷ್ಟು ಮನಸ್ಸನ್ನು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಹೊರಹೊಮ್ಮಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಬಳಸಿಕೊಂಡ ಈ ಅವಕಾಶ ಅವರ ಮುಂದಿನ ವೃತ್ತಿ ಜೀವನದ ಸಂದರ್ಭದಲ್ಲಿ ಒಂದೊಮ್ಮೆ ಶಾಲೆ ಕಡೆ ಮುಖ ಮಾಡಿದಾಗ ತನ್ನ ವಿದ್ಯಾರ್ಥಿ ಜೀವನ ಮೆಲಕು ಹಾಕುವ ಸಂದರ್ಭದಲ್ಲಿ ಸಿಗುವ ಖುಷಿ ಮತ್ತೇಲ್ಲೂ ಸಿಗುವುದಿಲ್ಲಾ. ಒಂದೇ ಬಣ್ಣದಿಂದ ಕೂಡಿರುವುದರಿಂದ ಯಾವುದೇ ಅಡ್ಡ ಪರಿಣಾಮ ಮಕ್ಕಳ ಮೇಲೆ ಬೀರುವುದಿಲ್ಲಾ. ಕೆಲವು ಸಲ ಹಲವು ಬಣ್ಣಗಳಿಂದ ಕೂಡಿದ ಚಿತ್ರಗಳನ್ನು ಬಿಡುಸುವಾಗ ಅಥವಾ ನೋಡುವಾಗ ದೃಷ್ಟಿಯ ಮೇಲೆ ಪ್ರಭಾವ ಬಿರುತ್ತದೆ. ಆದರೆ ಇದು ಯಾವುದು ಅಡ್ಡಪರಿಣಾಮಗಳಿಲ್ಲದೇ ಸೂಕ್ತವಾದ ಮನಸ್ಸಿನ ಒಳನೋಟವನ್ನು ವಿದ್ಯಾರ್ಥಿಗಳಿಗಾಗಿ ಪ್ರಸ್ತುತಿ ಪಡಿಸಲು ಅವಕಾಶ ನೀಡಲಾಗಿದೆ.
– ಡಾ.ಉಪಾಧ್ಯಾಯ ಮೂಡುಬೆಳ್ಳೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಕಲಾವಿದ ಶಿಕ್ಷಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ನುರಿತ ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ
ಮಕ್ಕಳ ಕಲಿಕೆ ಆಸಕ್ತಿ ತುಂಬುವಲ್ಲಿ ಯಾವುದೇ ಹೆಚ್ಚಿನ ಖರ್ಚು ವೆಚ್ಚ ಇಲ್ಲದೇ ಶಾಲೆ ಕಟ್ಟಡಗಳನ್ನು ಸಿಂಗರಿಸಲು ಅವಕಾಶವಾಗಿದೆ. ವಿದ್ಯಾರ್ಥಿಗಳಲ್ಲಿ ಕಲಾಸಕ್ತಿಯನ್ನು ಹೆಚ್ಚಿಸಲು ಮತ್ತು ಅವರ ಮನಸ್ಸಿನ ಮೇಲಿನ ಒತ್ತಡವನ್ನು ನಿವಾರಿಸಲು ಇದೊಂದು ಸೂಕ್ತ ವೇದಿಕೆಯಾಗಿ ಮಾಡಿಕೊಟ್ಟಿದ್ದೇವೆ.
ಚಂದ್ರಶೇಖರ ಶೆಟ್ಟಿ, ಉಪಪ್ರಾಂಶುಪಾಲರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ

ಮನಸ್ಸಿಗೆ ತುಂಬಾ ಖುಷಿ ಕೊಟ್ಟಿದೆ. ಗುರುಗಳ ಮಾರ್ಗದರ್ಶನದಲ್ಲಿ ರಚಿಸಲಾದ ಈ ಚಿತ್ರಗಳು ನಮ್ಮ ಮುಂದಿನ ಜೀವನದಲ್ಲೂ ಮೆಲಕು ಹಾಕುವಂತಹ ಅವಕಾಶ ಸಿಕ್ಕಂತಾಗಿದೆ. ತುಂಬ ಸರಳವಾಗಿ ರೇಖೆ ಮತ್ತು ತ್ರಿಭುಜಾಕಾರದಿಂದ ಚಿತ್ರಗಳನ್ನು ರಚಿಸುವಾಗ ಮತ್ತಷ್ಟು ಕಲಿಯುವ ಹಾಗಾಗುತ್ತೆ.
-ಶ್ರೇಯಾ ಮೊಗವೀರ ಕೋಟೇಶ್ವರ, ವಿದ್ಯಾರ್ಥಿ.

 

 

 

 

 

Comments are closed.