ಕರಾವಳಿ

ಗರ್ಭಗುಡಿಯಲ್ಲಿರುವ ಶಿವನೇ ಮಂಗಳೂರು ದಸರಾ ಮಹೋತ್ಸವ ರೂವಾರಿ: ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಪೂಜಾರಿ

Pinterest LinkedIn Tumblr

ಮಂಗಳೂರು, ಅಕ್ಟೋಬರ್. 25: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ವೈಭವದ ಮಂಗಳೂರು ದಸರಾ ಮಹೋತ್ಸವವನ್ನು ಶನಿವಾರ ಸಂಜೆ ಶ್ರೀ ಕ್ಷೇತ್ರ ಕುದ್ರೋಳಿಯ ನವೀಕರಣದ ರೂವಾರಿ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಶ್ರೀ ಶಾರಾದೆಯ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮಂಗಳೂರು ದಸರಾ ಕಾರ್ಯಕ್ರಮದ ಪೂರ್ವ ಭಾವಿಯಾಗಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಜನಾರ್ದನ ಪೂಜಾರಿಯವರು ಕ್ಷೇತ್ರದ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ವೀಕ್ಷಿಸಿ, ಶ್ರೀ ಶಾರದಾ ಮಾತೆಗೆ ಧಾರ್ಮಿಕ ವಿಧಿಗಳೊಂದಿಗೆ ಪೂಜೆ ಸಲ್ಲಿಸಿದರು. ಬಳಿಕ ಅವರು ಉತ್ಸವದ ಧಾರ್ಮಿಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನಾನು ‘ಮಂಗಳೂರು ದಸರಾ’ದ ರೂವಾರಿ ಎಂದು ಹೇಳುತ್ತಾರೆ. ಆದರೆ ನಾನು ಇದರ ರೂವಾರಿಯಾಗಲು ಸಾಧ್ಯವಿಲ್ಲ ಗರ್ಭಗುಡಿಯಲ್ಲಿರುವ ಶಿವನೇ ಇದರ ರೂವಾರಿಯಾಗಿದ್ದಾನೆ ಎಂದು ಪೂಜಾರಿ ಹೇಳಿದರು.

ಶಿವನ ಆಶೀರ್ವಾದದಿಂದ ಮಂಗಳೂರು ಸಾಂಗವಾಗಿ ನಡೆದುಕೊಂಡು ಬರುತ್ತಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಶ್ರೀದೇವರು ಎಲ್ಲರಿಗೂ ಸನ್ಮಂಗಲವನ್ನು ಉಂಟುಮಾಡಲಿ ಎಂದು ಪೂಜಾರಿಯವರು ಈ ವೇಳೆ ಪ್ರಾರ್ಥಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಸರಕಾರ ರೂಪಿಸಿದ ನಿಯಮಗಳಿಗೆ ಸ್ಪಂದಿಸಿ ದಸರಾ ಹಬ್ಬವನ್ನು ಸಂಭ್ರಮಿಸ ಬೇಕು. ಕ್ಷೇತ್ರದ ಆಡಳಿತ ಮಂಡಳಿ ಸರಕಾರದ ಆದೇಶಕ್ಕೆ ಸ್ಪಂದಿಸಬೇಕು. ಗೊಂದಲಗಳಿಗೆ ಅವಕಾಶ ಮಾಡಿ ಕೊಡ ಬಾರದು. ಕ್ಷೇತ್ರಾಡಳಿತ ಮಂಡಳಿ, ಭಕ್ತರು ಜತೆಯಾಗಿ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ ಎಂದವರು ಹೇಳಿದರು.

ಹಲವು ವರ್ಷಗಳಿಂದ ಕ್ಷೇತ್ರದ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾವನ್ನು ಈಗ ಶ್ರೀ ಗೋಕರ್ಣನಾಥ ದೇವರು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಆಶೀರ್ವಾದ ನಮಗೆ, ನಮ್ಮ ಕುಟುಂಬಕ್ಕೆ ಮತ್ತು ನಮ್ಮೆಲ್ಲರಿಗೆಬೇಕು ಎಂದು ಹೇಳಿದರು.

ಸಂಜೆ 6 ಗಂಟೆ ವೇಳೆಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಜನಾರ್ದನ ಪೂಜಾರಿ ಅವರನ್ನು ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು.

ಸುಮಾರು ಅರ್ಧಗಂಟೆ ನೃತ್ಯ ಭಜನಾ ಕಾರ್ಯಕ್ರಮ ವೀಕ್ಷಿಸಿ ಪುನೀತರಾದರು. ಬಳಿಕ ಕ್ಷೇತ್ರದ ಮುಖ್ಯದ್ವಾರದ ಎದು ಹುಲಿವೇಷ ಕುಣಿತ ವೀಕ್ಷಿಸಿ ಅವರಿಗೆ ಹಾರೈಸಿದರು.

ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಡಾ. ಬಿ.ಜಿ. ಸುವರ್ಣ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಮೇಯರ್ ಪುರುಷೋತ್ತಮ ಚಿತ್ರಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮ್‌ದಾಸ್, ಕಾರ್ಪೊರೇಟರ್‌ಗಳಾದ ಅನಿಲ್ ಕುಮಾರ್, ಸುಧೀರ್ ಶೆಟ್ಟಿ, ಯೋಗೀಶ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

ನಾಳೆ ಮಂಗಳೂರು ದಸರಾ ಉತ್ಸವಕ್ಕೆ ತೆರೆ:

ಕುದ್ರೋಳಿಯ ನವರಾತ್ರಿಯ ಉತ್ಸವದ ನಡುವೆ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿರುವ ಮಂಗಳೂರು ದಸರಾ ಮಹೋತ್ಸವ ನಾಳೆ ಆಕ್ಟೋಬರ್ 26, ಸೋಮವಾರದಂದು ತೆರೆ
ಬೀಳಲಿದೆ.

ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ “ಮಂಗಳೂರು ದಸರಾ’ ಮೆರವಣಿಗೆ ಇರುವುದಿಲ್ಲ. ಆದರೆ ಈ ಬಾರಿ ನವದುರ್ಗೆಯರ ಸಹಿತ ಶಾರದಾ ಮಾತೆಯ ಶೋಭಾಯಾತ್ರೆ ಶ್ರೀ ಕ್ಷೇತ್ರದ ಪ್ರಾಂಗಾಣದಲ್ಲಿ ನಡೆಯಲ್ಲಿದ್ದು, ಬಳಿಕ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಶಾರದಾ ಮಾತೆ ಹಾಗೂ ನವದುರ್ಗೆಯರ ಮೂರ್ತಿಯನ್ನು ವಿಸರ್ಜಿಸಲಾಗುವುದು.

Comments are closed.