ಈ ಆತ್ಮಹತ್ಯೆಯ ಮಾತು ಬಂದರೆ ಸಾಕು ಎಂಥವರು ಕೂಡ ಒಂದು ಕ್ಷಣ ನಡುಗಿ ಹೋಗಿಬಿಡುತ್ತಾರೆ. ಬದುಕಿನ ಆ ಕ್ಷಣದ ದುರಂತ ನೆನೆದು ಮೂಕಾಗಿ ಬಿಡುತ್ತಾರೆ. ಪಾಪ.. ಪರಿಸ್ಥಿತಿಯ ಕ್ರೂರತೆಯ ನೆನೆದು ಮಂಕಾಗಿ ಬಿಡುತ್ತಾರೆ.
ಆತ್ಮಹತ್ಯೆಯನ್ನು ಕಂಡೇ ನಮಗೆ ಹೀಗಾಗುವುದಾದರೆ ಆತ್ಮಹತ್ಯೆ ಮಾಡಿಕೊಂಡವನ ಸ್ಥಿತಿ ಏನಾಗಿರಬಹುದು! ಇರಲಿ. ಈಗ ಮಾನವ ಕೂಡ ಪ್ರಾಣಿ ಆದರೆ ಅವನು ಕೆಲವು ಸಲ ಮೃಗ ಆದರೆ.. ಇನ್ನೂ ಕೆಲವು ಸಲ ಮೂಕ ಪ್ರಾಣಿಗಳಿಗಿಂತಲೂ ಅಸಹಾಯಕನಾಗಿಬಿಡುತ್ತಾನೆ.
ನಿಮಗೆ ಗೊತ್ತಿರಲಿ ಜೀವ ಜಗತ್ತಿನ್ನಲ್ಲಿ ಯಾವ ಪ್ರಾಣಿಯೂ ಆತ್ಮಹತ್ಯೆ ಮಾಡಿಕೊಳ್ಳದು. ಅಷ್ಟಕ್ಕೂ ಪ್ರಾಣಿಗಳಿಗೆ ಆಹಾರ ರಕ್ಷಣೆ ಮೈಥುನದ ಅವಶ್ಯಕತೆ ಬಿಟ್ಟರೆ ಪ್ರಾಣಿಗಳಿಗೆ ದುಡ್ಡು ಗೊತ್ತಿಲ್ಲ. ಜೀವದ ಭಯದ ಹೊರತಾಗಿ ಮಾನ ಮರ್ಯಾದೆ ಗೊತ್ತಿಲ್ಲ. ಸಣ್ಣತನ ದೊಡ್ಡತನ ಗೊತ್ತಿಲ್ಲ. ಅಷ್ಟಕ್ಕೂ ತೀರ ಜೂ ನಲ್ಲಿರುವ ಪ್ರಾಣಿಗಳನ್ನು ಹೊರತುಪಡಿಸಿದರೆ ಯಾವ ಒಂದು ಪ್ರಾಣಿಯೂ ಮನೋ ವ್ಯಾಧಿಯಿಂದ ಬಳಲುವದಿಲ್ಲ. ಮನೋ ವಿಕಾರತೆ ತೋರಿಸುವುದಿಲ್ಲ..
ಬಟ್.. ಪ್ರಾಣಿ ಪ್ರಪಂಚದ ಮುಕುಟವೆನಿಸಿದ ಮಾನವ ಮಾನಸಿಕ ವ್ಯಾಕುಲತೆಯಿಂದ ಬಳಲುತ್ತಾನೆ. ಸೈಕಾಲಜಿ ಕಂಡು ಹಿಡಿದ ಮಾನವ ಸೈಕೋ ಆಗುತ್ತಾನೆ.! ಮನುಷ್ಯ ಪ್ರಾಣಿ ಆಗದೆ ಮೃಗವಾದ ಪರಿಣಾಮವೇ ಈ ಆತ್ಮಹತ್ಯೆ.!
ಅದೇಗೆ ಎಂದು ನೀವು ಕೇಳಬಹುದು.
ಜಗತ್ತಿನ ಯಾವ ಪ್ರಾಣಿಗಳಿಗೂ ದುಡ್ಡು ಗೊತ್ತಿಲ್ಲ. ಬಟ್ ಎಲ್ಲಾ ಪ್ರಾಣಿಗಳು ಆಲ್ಮೋಸ್ಟ್ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ದುಡ್ಡು ಕಂಡು ಹಿಡಿದ ಮನುಷ್ಯ ಹಸಿವೆಯಿಂದ ಸಾಯ್ತಾನೆ. ಪ್ರಾಣಿಗಳು ನಿನ್ನೆಯನ್ನು ಮರೆಯುತ್ತವೆ. ನಾಳೆ ಅವಕ್ಕೆ ಗೊತ್ತಿಲ್ಲ. ಆ ದಿನವನ್ನ ಸಂಪೂರ್ಣವಾಗಿ ಆನಂದದಿಂದಲೇ ಕಳೆಯುತ್ತವೆ. ಆದರೆ ಮಾನವ ನಾಳೆಯ ಚಿಂತೆಯಲ್ಲಿ ನಿನ್ನೆಯ ಬೇಗುದಿಯಲ್ಲಿ ಬೇಯುತ್ತಾನೆ. ನೆಮ್ಮದಿ ಇಲ್ಲದೆ ಸಾಯುತ್ತಾನೆ.
ಈಗ ಯಾಕಾದರೂ ಸಾಯೋಣ ಅಂತ ಹೇಳಿದೆನಲ್ವಾ?ಹೌದು ಯಾಕೇ ಸಾಯಬೇಕು?
ನಾವು ಈ ಭೂಮಿಗೆ ಬಂದದ್ದು ಎಂಥದೋ ದೈವದ ವರ. ಅದರಲ್ಲೂ ಮನುಷ್ಯನಾಗಿ ಹುಟ್ಟಿದ್ದು ಮತ್ತೊಂದು ಪ್ಲಸ್ ಪಾಯಿಂಟ್. ಕುಟುಂಬದ ಕಾನ್ಸೆಪ್ಟ್ ಜೀವ ಜಗತ್ತಿನ ಸೋಜಿಗ! ಎಷ್ಟು ನೋವು ಸಹಿಸಿಕೊಂಡು ತಾಯಿ ಹೆತ್ತಿದ್ದಾಳೆ ಅಲ್ವಾ? ತಂದೆಯ ನೂರು ಕಷ್ಟಗಳ ಮಧ್ಯೆ ನಮ್ಮನ್ನು ಬೆಳೆಸಿದ್ದಾನೆ ಅಲ್ವಾ . ನಮ್ಮನ್ನೇ ನಂಬಿ ಬಂದ ಒಂದು ಹೆಣ್ಣು ಜೀವ ಹೆಂಡತಿಯಾಗಿದ್ದಾಳೆ. ನಮ್ಮ ನೂರು ಕಷ್ಟಕ್ಕೂ ಹೆಗಲಾಗುವ ಆ ಜೀವಗಳನ್ನು ಮರೆತು ಹಗ್ಗಕ್ಕೆ ಕೊರಳೋಡ್ಡೋದು ನಿಜಕ್ಕೂ ಹೇಡಿತನ ಕಂಡ್ರೀ…!
ಯುವಕರಿಗೆ ಮಾದರಿಯಾಗುವ ಕೆಲ ವ್ಯಕ್ತಿತ್ವಗಳ ಸಾವಿನ ಹಿಂದೆ ಒತ್ತಡ ಇರೋದು ಸಹಜ.. ಹಾಗಂತಾ ತೀರ ತೀರಾ ನೇಣು ಹಾಕಿಕೊಳ್ಳೋದು ಯಾವ ಜೀವನ ಪ್ರೀತಿ ಸ್ವಾಮಿ..!
ಛೇ…ಮಾನ ಮರ್ಯಾದೆ ಗೌರವ ತೀರ ಬಟ್ಟೆಯಂತೆ. ಅವೇ ಜೀವನವಲ್ಲಾ. ನಮ್ಮನ್ನು ನಂಬಿದ ಜೀವಗಳ ವಿಷಯಕ್ಕೆ ಬಂದರೆ ಚರ್ಮದಂತೆ ಅಂಟಿದ ನಮ್ಮತನ.. ಸ್ವಲ್ಪ ಒರಟುತನ.. ಆಗಿದ್ದು ಆಗಿ ಹೋಗಿದೆ ಐ ಡೋಂಟ್ಕೇರ್ ಏನ್ ಮಾಡೋದು ಈಗ ಎಂಬ ಅಸಡ್ಡೆಯ ಮಾತುಗಳು ಬೇಕು ಕಣ್ರೀ..ನಾವೇನೂ ಸತ್ತು ತಣ್ಣಗಾಗಿ ಬಿಡುತ್ತೀವಿ.
ಆದರೆ ತಂದೆ ತಾಯಿಗೆ ಮುಪ್ಪಿನ ಕಾಲಕ್ಕೆ ಆಗೋದ್ಯಾರು? ನಿಮ್ಮ ನಂಬಿ ಬಂದವಳ ಪಾಡೇನು? ಮಕ್ಕಳ ಜೀವನ? ಸಂಬಂಧಿಕರ ಮುಂದೆ ಆಡಿಕೆಯ ವಸ್ತುವಾಗಬೇಕೆ..?
ಬೇಡ.ಸಾಯೋದು ಬೇಡ.ಆತ್ಮಹತ್ಯೆ ಮಾಡಿಕೊಳ್ಳೋದು ಬೇಡ.ಏನಾಗಲ್ಲಾ. ಜೀವನ ದೊಡ್ಡದಿದೆ. ಇಂದು ಸೋತ ಮಾತ್ರಕ್ಕೆ ಸತ್ತುಹೋದೆ ಅಂತ ಫೀಲ್ಯಾಕೆ ಆಗಬೇಕು. ಮರ್ಯಾದೆ ಎಂಬುದು ಲೊಳಲೊಟ್ಟೆ.. ಜೀವಕ್ಕಿಂತ ಮರ್ಯಾದೆ ಏನೂ ದೊಡ್ಡದಲ್ಲಾ.! ಸ್ವಲ್ಪ ದಿನಗಳ ನಂತರ ಕಹಿ ಘಟನೆಯನ್ನ ಮರೆತು ಬಿಡುತ್ತಾರೆ. ಸತ್ತರೆ ನಾವು ಅವರ ಮುಂದೆ ಸಂಪೂರ್ಣ ಸೋತ ಹಾಗೇ ಅಲ್ವಾ..?ಕೊನೆಗೊಂದು ಮಾತು..
ಲವ್ ಫೇಲಾದರೆ. ಸಾಲ ಆದರೆ. ಬಡ್ಡಿ ಜಾಸ್ತಿ ಆದರೆ. ಯಾರಿಗೋ ಹೆದರಿ.. ಯಾರಿಗೋ ಬೆದರಿ. ಆ ಕ್ಷಣದ ಸಂಧಿಗ್ದಕ್ಕೆ ಹೆದರಿ ಸಾಯೋದು ಬೇಡ.. !ಈಸಬೇಕು ಇದ್ದು ಜೈಸಬೇಕು..!
ಆಗಿದ್ದು ಆಗಿ ಹೋಗಿದೆ. ನಗ್ತೀರಾ ನಗಿ .. ಅಣಕಿಸುತ್ತೀರಾ ಅಣಕಿಸಿ.. ಏನ್ಮಾಡೋದು ಪರಿಸ್ಥಿತಿ ಅಂತ ಮುಖ ಸೊಟ್ಟ ಮಾಡಿ.. ಆ ಕ್ಷಣದ ಒತ್ತಡಕ್ಕೆ ಬೆನ್ನು ಹಾಕಿ ಮಲಗಿ. ಜಾಸ್ತಿ ಯೋಚಿಸದೇ ಒಂದಷ್ಟು ತಟಸ್ಥರಾಗಿಬಿಡೋದು ಇನ್ನೂ ಉತ್ತಮ. ಯಾಕಂದರೆ ಬದುಕು ನಮ್ಮದು! ಜೀವನ ಪ್ರೀತಿ ಗೆ ಜೈ ಅನ್ನೋಣ..! ಸಾಯೋ ಆ ಮಾತಿಗೆ ಬೈ ಎನ್ನೋಣ..!! ಏನಂತೀರಿ.?
ಸಂಗ್ರಹ ಮಾಹಿತಿ : ಮೋನಾ

Comments are closed.