ಕರಾವಳಿ

ಬೀದಿ ನಾಯಿಗಳಿಗೆ 4 ತಿಂಗಳಿನಿಂದ ಮಮತೆಯ ‘ಮೃಷ್ಟಾನ್ನ’ ನೀಡುತ್ತಿರುವ ಮೊನಿಶಾ: ಭಗವದ್ಗೀತೆಯೇ ಇವರಿಗೆ ಸ್ಫೂರ್ತಿ(Video)

Pinterest LinkedIn Tumblr

ಕುಂದಾಪುರ : ಕೋವಿಡ್‌–19 ವೈರಸ್‌ನಿಂದ ಉಂಟಾದ ಸಮಸ್ಯೆಯಿಂದಾಗಿ ವಿಶ್ವವೇ ತಲ್ಲಣಸಿ ಹೋಗಿರುವ ಪ್ರಸ್ತುತ ಕಾಲಘಟ್ಟದಲ್ಲಿ ಕುಂದಾಪುರ ಸಮೀಪದ ಹಂಗಳೂರಿನ ಯುವತಿಯೊಬ್ಬರು ಕಳೆದ 125 ದಿನಗಳಿಂದ ಹಸಿದು ಕಂಗಾಲಾದ ಬೀದಿ ನಾಯಿಗಳಿಗೆ ಪ್ರತಿ ದಿನ ಅನ್ನ ನೀಡುವ ಮೂಲಕ ಮಮತೆಯ ವಾತ್ಸಲ್ಯವನ್ನು ಉಣಬಡಿಸುತ್ತಿದ್ದಾರೆ.

ಬೀದಿ ನಾಯಿಗಳ ಹಸಿವು ನೀಗಿಸಿದ ಮೋನಿಶಾ…
ಲಾಕ್‌ಡೌನ್‌ ಎನ್ನುವ ಕಠಿಣ ಸ್ಥಿತಿಯಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ತಿಂಗಳುಗಟ್ಟಲೇ ದೇಶವಿಡೀ ಸ್ತಬ್ಧವಾಗಿತ್ತು. ಹೋಟೇಲ್‌ಗಳು, ಕ್ಯಾಂಟೀನ್‌ಗಳು, ರಸ್ತೆ ಬದಿಯ ಊಟ, ತಿಂಡಿ ಅಂಗಡಿಗಳು ತಿಂಗಳುಗಳ ಕಾಲ ಮುಚ್ಚಿದ್ದವು. ಇವುಗಳನ್ನೇ ನಂಬಿಕೊಂದು ನಿತ್ಯದ ತುತ್ತು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಬೀದಿ ನಾಯಿಗಳು ಹೊಟ್ಟೆಗೆ ಹಿಟ್ಟು ಸಿಗದೆ ಅಕ್ಷರ: ಬೀದಿಗೆ ಬಿದ್ದಿದ್ದವು. ತುತ್ತು ಆಹಾರಕ್ಕಾಗಿ ಕಿ.ಮೀ ದೂರವನ್ನು ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಬೀದಿ ನಾಯಿಗಳ ಕರುಣಾಜನಕ ಸ್ಥಿತಿಯನ್ನು ಕಂಡು ತನ್ನ ಕಣ್ಣೇದುರು ಕಾಣಿಸುವ ಒಂದಷ್ಟು ನಾಯಿಗಳ ಹಸಿವನ್ನು ನೀಗಿಸಬೇಕು ಎಂದು ಸಂಕಲ್ಪ ಮಾಡಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದವರೇ, ಹಂಗಳೂರಿನ ಮೊನಿಶಾ ಗೇಬ್ರಿಯಲ್ ಕರ್ವಾಲೊ. ಕುಂದಾಪುರದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ಅವರು, ಇಂಗ್ಲೆಂಡಿನ ಲ್ಯಾಂಕಸ್ಟರ್ ವಿವಿಯಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ.

  

125 ದಿನಗಳಿಂದ ಬೀದಿ ಶ್ವಾನಗಳಿಗೆ ಊಟ…
ಲಾಕ್ ಡೌನ್ ಆರಂಭವಾದಾಗಿನಿಂದ ಅಂದರೆ ಬರೋಬ್ಬರಿ 125 ದಿನಗಳಿಂದಲೂ ಅವರ ನಿತ್ಯ ಕಾಯಕ ನಡೆಯುತ್ತಿದೆ. ದಿನ ಬೆಳಿಗ್ಗೆ 7 ಗಂಟೆ ನಾಯಿಗಳಿಗಾಗಿ 14 ಕೆ.ಜಿ ಅಕ್ಕಿಯ ಅನ್ನ ಬೇಯಿಸುವ ಕಾರ್ಯ ಆರಂಭವಾಗುತ್ತಿತ್ತು. ಅನ್ನವಾದ ಬಳಿಕ ಅದರೊಂದಿಗೆ ಕೋಳಿ ಮಾಂಸ ಹಾಗೂ ಇತರ ಖಾದ್ಯಗಳನ್ನು ಬೆರೆಸಿ ಬೀದಿಗೆ ತೆರಳಿ ನಾಯಿಗಳ ಹಸಿವನ್ನು ನೀಗಿಸುವ ಕೆಲಸ ನಡೆಯುತ್ತಿದೆ. ನಾಯಿಗಳಿಗೆ ಊಟ ನೀಡಲಿಕ್ಕಾಗಿಯೇ ಹೊಸ ತಟ್ಟೆಗಳನ್ನು ಖರೀದಿಸಿದ್ದಾರೆ. ಪ್ರಾಣಿಗಳಿಗೆ ಸಿಂಪತಿ ಅಗತ್ಯವಿಲ್ಲ ಆದರೆ ಎಂಪಥಿ ಅಗತ್ಯವಿದೆ. ಅವುಗಳಿಗೆ ಪ್ರೀತಿ, ವಾತ್ಸಲ್ಯದ ಅಗತ್ಯವಿದೆ. ನಮ್ಮನಮ್ಮ ಮನಸ್ಥಿತಿ ಬದಲಾದಾಗ ಮಾತ್ರವೇ ಸಮಾಜ ಬದಲಾವಣೆ ಸಾಧ್ಯ ಎನ್ನುತ್ತಾರೆ ಮೋನಿಶಾ.

ಇವರ ಕಾರು ಕಂಡರೆ ಓಡೋಡಿ ಬರುವ ನಾಯಿಗಳು!
ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಬೀದಿ ನಾಯಿಗಳು ಒಟ್ಟಾಗಿ ಸೇರುವ ಜಾಗಗಳನ್ನು ಗುರುತಿಸಿ ಅಲ್ಲಿಗೆ ತೆರಳಿ ಊಟೋಪಚಾರವನ್ನು ನೀಡುವ ಕೆಲಸಗಳು ಆಗುತ್ತಿತ್ತು. ಮೊದ ಮೊದಲು ಪರಿಚಯವಿಲ್ಲದ ನಾಯಿಗಳಿಗೇ, ದಿನ ಕಳೆದಂತೆ ವಾತ್ಸಲ್ಯದ ಊಟವನ್ನು ನೀಡುತ್ತಿದ್ದ ಮೊನಿಶಾ ಅವರನ್ನು ಗುರುತಿಸಿ ಓಡೊಡಿ ಹತ್ತಿರಕ್ಕೆ ಬರುತ್ತಿದ್ದವು. ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸಮೀಪದ ಹಂಗಳೂರು, ಒಳ ರಸ್ತೆಯಲ್ಲಿ ಒಂದು ಕಡೆ ಹಾಗೂ ಹಳೆಅಳಿವೆ ಕಿನಾರ ಬೀಚ್ ಬಳಿಯಲ್ಲಿ ಹಸಿದ ಶ್ವಾನಗಳಿಗೆ ಅನ್ನ ಕೊಡುವ ಮಾನವೀಯ ಕೈಂಕರ್ಯ ನಡೆಯುತ್ತಿದೆ.

ತಂದೆ, ತಾಯಿ, ಸ್ನೇಹಿತನ ಸಹಕಾರ…
ನಾಯಿಗಳ ಹೊಟ್ಟೆ ತುಂಬಿಸುವ ಇವರ ಪ್ರಾಮಾಣಿಕ ಕಾರ್ಯಕ್ಕೆ ಸಾಥ್‌ ನೀಡಿದ ಅನೇಕ ಸಮಾನ ಮನಸ್ಕರು ತಾವು ಕೂಡ ತಿಂಡಿ–ತಿನಿಸುಗಳನ್ನು ಬೀದಿ ನಾಯಿಗಳಿಗೆ ನೀಡುವ ಮೂಲಕ ಧನ್ಯತೆ ಅನುಭವಿಸಲು ಮುಂದೆ ಬರುತ್ತಿದ್ದಾರೆ. ತಂದೆ ಜೇಮ್ಸ್ ಕರ್ವಲ್ಲೋ ಹಾಗೂ ತಾಯಿ ಅನ್ಸಿಲಾ ಕರ್ವಾಲೊ ಬೆಂಬಲ ಮೊನೀಶಾ ಅವರಿಗೆ ಸಿಗುತ್ತಿದೆ. ಅಡುಗೆ ತಯಾರಾದ ಮೇಲೆ ಮೂವರು ಜೊತೆಗೆ ತೆರಳಿ ಅನ್ನವನ್ನು ನಾಯಿಗಳಿಗೆ ನೀಡಿ ವಾಪಾಸ್ಸಾಗುತ್ತಾರೆ. ಜತೆಯಲ್ಲಿ ಸದ್ಯ ದುಬೈಯಲ್ಲಿರುವ ಸ್ನೇಹಿತ ಅರವಿಂದ್ ಫೆರ್ನಾಂಡಿಸ್ ಕೂಡ ಸಹಾಯವನ್ನು ಸ್ಮರಿಸುವ ಮೊನಿಶಾ ತಮ್ಮ ಮಾನವೀಯ ಹಾಗೂ ಮೌಲ್ಯದ ಕಾರ್ಯಗಳಿಗಾಗಿ ಆದ್ಯ ಅನಿಮಲ್ ವೆಲ್ಫೇರ್ ಮೂಲಕ ತನ್ನ ಸಮಾಜ ಸೇವೆ ನಡೆಸುತ್ತಿದ್ದಾರೆ.

ಭಗವದ್ಗೀತೆಯ ಸಾಲುಗಳೇ ಸ್ಫೂರ್ತಿ…
ತಮ್ಮ ಎನ್‍ಜಿಒಗೆ ‘ಆದ್ಯಾ’ ಎನ್ನುವ ಹೆಸರಿನ್ನಿಟ್ಟಿದ್ದಾರೆ. ಭಗವದ್ಗೀತೆಯ ಸಾಲುಗಳಿಂದ ಸ್ಪೂರ್ತಿಗೊಂಡು ಪುಸ್ತಕವನ್ನು ಕೂಡ ಬರೆಯುತ್ತಿದ್ದಾರೆ. ಲೋಕಾ ಸಮಸ್ತ ಸುಖಿನೋ ಭವಂತು ಪರಿಕಲ್ಪನೆಯಡಿಯಲ್ಲಿ ಭಗವದ್ಘೀತೆಯ ‘ಕರ್ಮಣ್ಯೆ ವಾದಿಕಾರಸ್ತೆ ಮಾ ಫಲೇಶುಃ ಕದಾಚನ’ ಎನ್ನುವ ಸಾಲುಗಳಿಂದ ಸ್ಫೂರ್ತಿ ಪಡೆದ ಮೋನಿಶಾ ಗೇಬ್ರಿಯಲ್ ಅವರ ಮಾನವೀಯ ಮೌಲ್ಯ ಎತ್ತಿಹಿಡಿಯುವ ಈ ಸೇವೆ ಎಲ್ಲರಿಗೂ ಮಾದರಿಯಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.