ಕರಾವಳಿ

ನಡುರಾತ್ರಿ ಆಟೋದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಿದ ಉಡುಪಿಯ ‘ಆಶಾ’ ರಾಜೀವಿ; ಶ್ಲಾಘಿಸಿದ ಉಪರಾಷ್ಟ್ರಪತಿ!

Pinterest LinkedIn Tumblr

ಉಡುಪಿ: ರಾತ್ರಿ 3 ಗಂಟೆಯ ವೇಳೆ ಸುಮಾರು 20 ಕಿ.ಮೀ ಸ್ವತಃ ಆಟೋ ಚಲಾಯಿಸಿ ಗರ್ಭಿಣಿಯೋರ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದ ಉಡುಪಿಯ ಪೆರ್ಣಂಕಿಲದ ಆಶಾ ಕಾರ್ಯಕರ್ತೆ ರಾಜೀವಿ ಅವರ ಮಾನವೀಯ ಹಾಗೂ ಸಾಹಸಿ ಕಾರ್ಯವನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಟ್ವೀಟ್ ಮೂಲಕ ಶ್ಲಾಘಿಸಿದ್ದಾರೆ.

‘ಕರ್ನಾಟಕದ ಉಡುಪಿಯಲ್ಲಿ ಬೆಳಗಿನ ಜಾವ 3 ಗಂಟೆಯಲ್ಲಿ ಗರ್ಭಿಣಿ ಮಹಿಳೆಯನ್ನು ತಮ್ಮ ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಆಶಾ ಕಾರ್ಯಕರ್ತೆ ಶ್ರೀಮತಿ ರಾಜೀವಿ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸುತ್ತೇನೆ’ . ತಮ್ಮ ಬಿಡುವಿನ ವೇಳೆಯಲ್ಲಿ ಆಟೋ ಚಲಾಯಿಸುವ ಶ್ರೀಮತಿ ರಾಜೀವಿ ಅವರು ಗರ್ಭಿಣಿಯರಿಗೆ ಉಚಿತ ಸವಾರಿಯ ಸೇವೆ ಒದಗಿಸುತ್ತಿರುವುದು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ದೇವರು ಆಕೆಗೆ ಮಂಗಳವನ್ನುಂಟು ಮಾಡಲಿ! ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

https://twitter.com/VPSecretariat/status/1286921438897856512?s=20

ರಾಜೀವಿ ಅವರಿಗೆ ಮಧ್ಯರಾತ್ರಿ 3.15ರ ಸುಮಾರಿಗೆ ಪೆರ್ಣಂಕಿಲದ ಮಹಿಳೆಯೊಬ್ಬರು ಕರೆ ಮಾಡಿ ಹೆರಿಗೆ ನೋವು ಹೆಚ್ಚಾಗಿರುವ ವಿಷಯ ತಿಳಿಸಿದ್ದಾರೆ. ತಕ್ಷಣವೇ ರಾಜೀವಿ ಅವರು ತಮ್ಮ ಆಟೊ ರಿಕ್ಷಾ ಓಡಿಸಿ ಗರ್ಭಿಣಿಯನ್ನು ಪೆರ್ಣಂಕಿಲದಿಂದ 20 ಕಿ.ಮೀ ದೂರದಲ್ಲಿರುವ ಉಡುಪಿಯ ಸರ್ಕಾರಿ ಮಹಿಳಾ ಹಾಗೂ ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶ್ರೀಲತಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ಪೆರ್ಣಂಕಿಲ ಪ್ರದೇಶದಲ್ಲಿ ಕಡಿಮೆ ಬಸ್‌ ಸೇವೆ ಇರುವ ಕಾರಣ ಆಟೋ ಸೇವೆ ಇಲ್ಲಿ ಅನಿವಾರ್ಯವಾಗುತ್ತಿದೆ. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುವ ಇವರು ಮಧ್ಯಾಹ್ನದ ಬಳಿಕ ಜೀವನ ನಿರ್ವಹಣೆಯ ಹಿನ್ನೆಲೆ ಆಟೋ ಚಾಲಕಿಯಾಗಿ ದುಡಿಯುತ್ತಿದ್ದಾರೆ.

Comments are closed.