ಕರಾವಳಿ

ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಗೋಪಾಡಿಯ ಉಡುಪರಿಗೆ ಸಾಥ್ ಕೊಟ್ಟ ಕಾರ್ಪೆಂಟರ್ ಯುವಕ..! (Video)

Pinterest LinkedIn Tumblr

ಕುಂದಾಪುರ: ಕರಾವಳಿಯಲ್ಲಿ ಕೃಷಿಗೆ ಅದರದ್ದೇ ಆದ ಪ್ರಾದಾನ್ಯತೆಯಿದೆ. ಯಾವುದು ಕೈಕೊಟ್ಟರು ಕೃಷಿ ಕೈಬಿಡಲ್ಲ ಎಂಬುದನ್ನು ಅರಿತ ಮಂದಿ ಬೇಸಾಯವನ್ನೇ ನೆಚ್ಚಿಕೊಳ್ತಾರೆ. ಕುಂದಾಪುರ ತಾಲೂಕಿನ ಗೋಪಾಡಿಯ ಕೃಷಿಕರೊಬ್ಬರ ಕೃಷಿ ಜೀವನ ಹಾಗೂ ಅವರಿಂದ ಪ್ರೇರಿಪಿತನಾದ ಯುವಕನ ಕೃಷಿ ಒಲವಿನ ಕುರಿತಾದ ಇಂಟರೆಸ್ಟಿಂಗ್ ಸ್ಟೋರಿ ಇದು.

ಮಹಾಮಾರಿ ಕೊರೋನಾ ದಿನನಿತ್ಯ ತನ್ನ ಅಟ್ಟಹಾಸ ಹೆಚ್ಚಿಸುತ್ತಲೇ ಇದೆ. ಲಾಕ್ ಡೌನ್, ಸೀಲ್ ಡೌನ್ ಮೊದಲಾದ ಕಾರಣಕ್ಕೆ ಬೆಂಗಳೂರು, ಹೈದರಾಬಾದ್, ಬಾಂಬೆ ಸೇರಿದಂತೆ ಇತರ ಪ್ರದೇಶಗಳಿಂದ ಜನರು ಊರಿನತ್ತ ಮುಖ ಮಾಡ್ತಿದ್ದಾರೆ. ಆದರೆ ಉಡುಪಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದಲೂ ಯಾವುದೇ ವ್ಯವಹಾರ ನಡೀತಾ ಇಲ್ಲ. ಒಂದಷ್ಟು ಉದ್ಯಮಗಳು ಕಳೆದ ಲಾಕ್ ಡೌನ್ ಸಮಯದಿಂದ ನಿಂತೇ ಹೋಗಿದೆ. ಹಲವು ಮಂದಿ ಬದುಕು ಕಟ್ಟಿಕೊಳ್ಳೋಕು ಹರಸಾಹಸ ಪಡುವಂತಾಗಿದೆ. ಈ ನಡುವೆ ಬಹುತೇಕ ಕಡೆಗಳಲ್ಲಿ ಬೇಸಾಯ ಕಾಯಕ ಆರಂಭಗೊಂಡಿದೆ.

ಹಡಿಲು ಭೂಮಿಯಲ್ಲಿ ಕೃಷಿ ಮಾಡುವ ಉತ್ಸಾಹ..!
ಮಳೆಗಾಲ ಆರಂಭವಾಗುತ್ತಲೇ ಕರಾವಳಿಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುತ್ತದೆ. ಉಳುಮೆಯಿಂದ ಆರಂಭಗೊಳ್ಳುವ ಕೃಷಿ ಕಾಯಕ ಬಿತ್ತನೆ, ನಾಟಿ, ನೇಜಿ, ಕಳೆ ಕೀಳುವಿಕೆ ಸೇರಿದಂತೆ ವಿವಿಧ ಮಜಲುಗಳಲ್ಲಿ ನಡೆಯುತ್ತದೆ. ಈ ಬಾರಿ ಅದೆಷ್ಟೋ ಮಂದಿ ಕೃಷಿಯತ್ತ ಒಲವು ತೋರಿದ್ದು ಗದ್ದೆಗಿಳಿದು ಬೇಸಾಯದತ್ತ ಮುಖ ಮಾಡಿದ್ದಾರೆ.‌ ಭತ್ತದ ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಹಡಿಲು ಭೂಮಿಗಳು ಬಹಳಷ್ಟಿದ್ದು ಅದನ್ನು ಪಾಳು ಬಿಡದೇ ಕೃಷಿ ಮಾಡುವ ಒಲವು ತೋರುತ್ತಿರುವರ ಪೈಕಿ ತಾಲೂಕಿನ ಗೋಪಾಡಿ ಗ್ರಾಮದ ರಾಘವೇಂದ್ರ ಉಡುಪ ಕೂಡ ಒಬ್ಬರು. ಅಡುಗೆ ವೃತ್ತಿ ಮಾಡಿಕೊಂಡ ಉಡುಪರು ತನ್ನ ಬಳಿ ಜಮೀನು ಇಲ್ಲದಿದ್ದರೂ ಗ್ರಾಮದಲ್ಲಿನ ಹಡಿಲು ಭೂಮಿಯನ್ನು ಪಡೆದು ಉಳುಮೆ ಮಾಡಿ ಸುಮಾರು ಮೂರ್ನಾಲ್ಕು ಎಕರೆ ಭತ್ತದ ಕೃಷಿ ಮಾಡ್ತಾರೆ.

ಉಡುಪರಿಂದ ಪ್ರೆರೇಪಿತನಾದ ಯುವಕ..!
ಕಳೆದ ಹಲವು ವರ್ಷಗಳಿಂದ ವಿಭಿನ್ನ ಪ್ರಯೋಗಗಳ ಮೂಲಕ ಯಾಂತ್ರೀಕೃತ ಕೃಷಿ ನಡೆಸುತ್ತಿರುವ ರಾಘವೇಂದ್ರ ಉಡುಪರನ್ನು ಹತ್ತಿರದಿಂದ ಬಲ್ಲ ಜೀವಿ ಆರ್ಟ್ಸ್ ಎನ್ನುವ ಕಲಾ ಸಂಸ್ಥೆಯೊಂದರ ಮ್ಯಾನೇಜರ್ ಆದ ವಿನೇಂದ್ರ ಆಚಾರ್ ಎನ್ನುವ ಯುವಕ ಕೃಷಿಯತ್ತ ಒಲವು ತೋರಿದ್ದಾರೆ. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿರುವ ಈತ ಉಡುಪರ ಬಳಿ ಉಳುಮೆ ಕಲಿತಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ಅವರ ಸಂಸ್ಥೆ ಮುಚ್ಚಿದ್ದರಿಂದ ಬೇಸಾಯದತ್ತ ಪ್ರೀತಿ ತೋರಿ ಗದ್ದೆಗಿಳಿದು ಕೆಲವೇ ದಿನದಲ್ಲಿ ಉಳುಮೆ ಕಲಿತಿದ್ದಾರೆ. ಟ್ರಾಕ್ಟರ್ ಹಾಗೂ ಟಿಲ್ಲರ್ ಮೂಲಕ ಉತ್ತಮವಾಗಿ ಉಳುಮೆ ಮಾಡಲು ಪರಿಣಿತಿ ಹೊಂದಿದ್ದಲ್ಲದೇ ವೀಡರ್ ಓಡಿಸುವುದು ಸೇರಿ ಕೃಷಿ ಕಾಯಕದ ಹಲವು ವಿಚಾರಗಳ ಬಗ್ಗೆ ಆಸಕ್ತಿಯಿಂದ ಕಲಿತಿದ್ದಾರೆ. ಉಡುಪರು ತಮ್ಮ ಕೃಷಿ ಚಟುವಟಿಕೆ ತರುವಾಯ ಇತರರ ಗದ್ದೆ ಉಳುಮೆ ಕೆಲಸ ಮಾಡುತ್ತಿದ್ದು ಈ ಬಾರಿ ಇದೇ ಯುವಕ ಅಂತಹ ಗದ್ದೆಗಳನ್ನು ಉಳುಮೆ ಮಾಡಿ ಜನರ ಪ್ರೀತಿಗೆ ಪಾತ್ರಾವಾಗಿದ್ದಾನೆ.

ಯುವಕರು ಕೃಷಿಯಿಂದ ವಿಮುಖರಾಗ್ತಿದ್ದಾರೆ ಎಂಬ ಮಾತುಗಳ ನಡುವೆಯೂ ಕೃಷಿಕಾಯಕದ ಬಗ್ಗೆ ಕಲಿತು ಅದರಲ್ಲಿ ತೊಡಗಿಸಿಕೊಂಡ ಯುವಕ ಹಾಗೂ ಆತನಿಗೆ ಕೃಷಿ ಗುರುವಾದ ಉಡುಪರ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಬೇಕಿದೆ.

ಜೂನ್ ತಿಂಗಳು ಬಂದರೆ ಕೃಷಿ ಮಾಡುವ ಹುಮ್ಮಸ್ಸು ಬರುತ್ತದೆ. ತಾನು ಹಲವು ವರ್ಷಗಳಿಂದ ಕೃಷಿ ಮಾಡುತ್ತಿದ್ದು ಈ ಬಾರಿ ಲಾಕ್ಡೌನ್ ಇದ್ದಿದ್ದರಿಂದ ಅಡುಗೆ ಕೆಲಸ ಇರಲಿಲ್ಲ. ಆದ್ದರಿಂದ ಈ ಬಾರಿ ಬೇಸಾಯ ಕಾರ್ಯಕ್ಕೆ ಇನ್ನಷ್ಟು ಹೆಚ್ಚು ಒತ್ತು ಕೊಟ್ಟು ಈ ಭಾಗದಲ್ಲಿನ ಹಡಿಲು ಭೂಮಿಗಳನ್ನು ಪಡೆದು ಕೃಷಿ ಮಾಡಲಾಗುತ್ತಿದೆ. ಕೃಷಿ ಭೂಮಿ ಕೃಷಿ ಭೂಮಿಯಾಗಿಯೇ ಉಳಿಯಬೇಕು. ಅದು ರೀಯಲ್ ಎಸ್ಟೇಟ್ ಉದ್ಯೋಗವಾಗಿ ಭೂಮಿ ನಾಶವಾಗಬಾರದು ಎನ್ನುವ ಆಶಯ ನನ್ನದು. ಸರಕಾರ ಕೃಷಿ ಮಾಡುವರಿಗೆ ಹಡಿಲು ಭೂಮಿ ನೀಡುವ ಕಾರ್ಯ ಮಾಡಬೇಕು.
– ಎಚ್. ರಾಘವೇಂದ್ರ ಉಡುಪ (ಕೃಷಿಕರು)

ಜೀವಿ ಆರ್ಟ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ. ಲಾಕ್ಡೌನ್ ಸಮಯದಲ್ಲಿ ತಿಂಗಳುಗಟ್ಟಲೇ ಕೆಲಸ ಇರಲಿಲ್ಲ. ಮೊದಲೇ ಕೃಷಿ ಬಗ್ಗೆ ಒಲವಿದ್ದು ನಮ್ಮ ಹತ್ತಿರದ ರಾಘವೇಂದ್ರ ಉಡುಪರು ಕೃಷಿಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಹುಮ್ಮಸ್ಸು ಬಂತು. ಅವರಲ್ಲಿ ವಿನಂತಿಸಿಕೊಂಡು ಕೆಲವೇ ದಿನದಲ್ಲಿ ಟ್ರಾಕ್ಟರ್ ಹಾಗೂ ಟಿಲ್ಲರ್ ಓಡಿಸುವುದು ಕಲಿತು ಹಲವಾರು ಕೃಷಿ ಭೂಮಿ ಉಳುಮೆ ಮಾಡಿದೆ. ರೈತರು ತೋರುವ ಪ್ರೀತಿ ನಿಜಕ್ಕೂ ಉತ್ತಮ ಕ್ಷಣಗಳು.
– ವಿನೇಂದ್ರ ಆಚಾರ್ (ಕೃಷಿ ಆಸಕ್ತ)

(ವರದಿ-ಯೋಗೀಶ್ ಕುಂಭಾಸಿ)

Comments are closed.