ಮಂಗಳೂರು, ಜುಲೈ.15 :ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಸೋಂಕು ಹರಡುವಿಕೆ ಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು (ಜುಲೈ 15,ಬುಧವಾರ) ರಾತ್ರಿ 8 ಗಂಟೆಯಿಂದ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೂ ಏಳು ದಿನಗಳ ಅವಧಿಗೆ ಲಾಕ್ ಡೌನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಿಂಧೂ. ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ಆಹಾರ ,ಹಾಗೂ ಹಣ್ಣು ತರಕಾರಿಗೆ ಖರೀದಿಗೆ ಬೆಳಗ್ಗೆ 8ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಅವಕಾಶ ನೀಡಲಾಗಿದ್ದು , ತುರ್ತು ಸಂದರ್ಭದಲ್ಲಿ ಮತ್ತು ವೈದ್ಯಕೀಯ ತುರ್ತು ಸೇವೆಗಳ ಪ್ರಯಾಣಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಈ ಅವಧಿಯಲ್ಲಿ ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಹಾಗೂ ಖಾಸಗಿ ವಾಹನಗಳಲ್ಲಿ ಸಂಚಾರವನ್ನು ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಾಕಿ ಸಮಯ ನಿಷೇಧಿಸಲಾಗಿದೆ. ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಮುಚ್ಚಲಿದ್ದು, ಕಂಟೋನ್ ಮೆಂಟ್ ವಲಯಗಳು ಸಂಪೂರ್ಣ ಬಂದ್ಆಗಿರುತ್ತದೆ.
ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 11ಗಂಟೆಯವರೆಗೆ ಪಡಿತರ ಅಂಗಡಿಗಳು, ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣು ತರಕಾರಿ, ಮಾಂಸದ ಅಂಗಡಿಗಳಲ್ಲಿ ಖರೀದಿಗೆ ವಿನಾಯಿತಿ ಇರುತ್ತದೆ. ಈ ಎಲ್ಲಾ ಕಾರ್ಯಗಳನ್ನು ಕೋವಿಡ್ 19 ನಿರ್ವಹಣೆಗಾಗಿ ಇರುವ ನಿಯಮಗಳನ್ನು ಅನುಸರಿಸಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್ ತಿಳಿಸಿದ್ದಾರೆ.
ಬಾರ್, ಮಾಲ್ಗಳು, ವೈನ್ಶಾಪ್ಗಳು ಸಂಪೂರ್ಣ ಬಂದ್ ಆಗಲಿದ್ದು, ವಾಣಿಜ್ಯ ಹಾಗೂ ಖಾಸಗಿ ಸಂಸ್ಥೆಗಳೂ ಬಂದ್ ಆಗಿರುತ್ತವೆ.ಜಿಮ್ನಾಷಿಯಂಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು,ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗಮಂದಿರಗಳು, ಬಾರ್ಗಳು ಹಾಗೂ ಅಡಿಟೋರಿಯಂಗಳು, ಸಭಾ ಭವನಗಳು, ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಸಭೆಗಳು ಎಲ್ಲಾ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ.
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಸೂಕ್ತ ಎನ್ನುವ ಅಭಿಪ್ರಾಯ :
ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ಕ್ರಮಕ್ಕೆ ಮುಂದಾಗಿದೆ. ಇದೇ ವೇಳೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿದ್ದು, ಸಾರ್ವಜನಿಕರಿಂದ ಕೊರೊನಾ ನಿಯಂತ್ರಣಕ್ಕಾಗಿ ಒಂದಷ್ಟು ದಿನಗಳ ಕಾಲ ಮತ್ತೆ ಲಾಕ್ ಡೌನ್ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಈ ಹಿನ್ನಲೆಯಲ್ಲಿ ಜು.16 ರಿಂದ ಒಂದು ವಾರಗಳ ಕಾಲ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಈಗಾಗಲೇ ನಾಗರೀಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಎರಡು ದಿನಗಳ ಕಾಲಾವಾಕಾಶ ನೀಡಿದ್ದು, ಅಗತ್ಯವಿರುವಷ್ಟು ದಿನಸಿ ಸಾಮಾಗ್ರಿ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿ ಮಾಡಿಟ್ಟುಕೊಳ್ಳಲು ಅವಕಾಶ ನೀಡಲಾಗಿತ್ತು.
ಇದೇ ವೇಳೆ ಲಾಕ್ ಡೌನ್ ಸಂದರ್ಭ ಏನಿರುತ್ತೆ.. ಏನಿರಲ್ಲ.. ಎಂಬ ಬಗ್ಗೆ ಲಾಕ್ ಡೌನ್ ಕುರಿತ “ಮಾರ್ಗಸೂಚಿ ಮತ್ತು ನಿಯಮ”ಗಳನ್ನು ಜಿಲ್ಲಾಧಿಕಾರಿಗಳು ಪ್ರಕಟಿಸಿದ್ದಾರೆ.
ಲಾಕ್ ಡೌನ್ ಮಾರ್ಗಸೂಚಿಗಳು ಇಂತಿವೆ:
ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಲಾಕ್ ಡೌನ್ ಜಾರಿಯಲ್ಲಿರುತ್ತದೆ.
ಕಂಟೈನ್ ಮೆಂಟ್ ಅಲ್ಲದ ವಲಯಗಳಲ್ಲಿ ಸರ್ಕಾರಿ ಕಚೇರಿಗಳು, ಆರೋಗ್ಯ, ವಿದ್ಯುತ್ , ನೀರು, ವೈದ್ಯಕೀಯ ಶಿಕ್ಷಣ,ಪೊಲೀಸ್, ಸೇರಿದಂತೆ ತುರ್ತು ಸೇವೆಗಳಿಗೆ ನಿರ್ಬಂಧ ಇರುವುದಿಲ್ಲ.
ಮಂಗಳೂರು ಮಹಾನಗರ ಪಾಲಿಕೆ, ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆ, ಹಾಗೂ ಜಿಲ್ಲಾಧಿಕಾರಿಗಳ ಮತ್ತು ಅಧೀನ ಕಚೇರಿಗಳು ಕಾರ್ಯನಿರ್ವಹಿಸಬಹುದಾಗಿದೆ.
ನ್ಯಾಯಾಲಯ ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿ ಕಚೇರಿಗಳು – ಉಚ್ಚ ನ್ಯಾಯಾಲಯ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸತಕ್ಕದ್ದು
ಕೋವಿಡ್ ಕಾರ್ಯಕ್ಕೆ ನಿಯೋಜಿಸಿದ ಎಲ್ಲಾ ಕಚೇರಿ ಅಧಿಕಾರಿ ಸಿಬ್ಬಂದಿಗಳು
ಜಿಲ್ಲಾ ಖಜಾನೆ ಮತ್ತು ಅಧೀನ ಖಜಾನೆ ಕಾರ್ಯ ನಿರ್ವಹಿಸಬಹುದಾಗಿದೆ.
ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ ಮುಂತಾದವುಗಳು ಮುಚ್ಚಿರತಕ್ಕದ್ದು.
ವಾಣಿಜ್ಯ ಮತ್ತು ಖಾಸಗಿ ಸಂಸ್ಥೆ ಮುಚ್ಚಿರತಕ್ಕದ್ದು.
ಲಾಕ್ ಡೌನ್ ವಿನಾಯಿತಿ :
ರಕ್ಷಣೆ, ಸಶಸ್ತ್ರ, ಪೊಲೀಸ್ ಪಡೆ, ದೂರ ಸಂಪರ್ಕ ಸೇವೆ ಸೇರಿ ಅಗತ್ಯ ಸೇವೆಗಳನ್ನು ನಿರ್ವಹಿಸುವ ಕಚೇರಿಗಳು ತೆರೆದಿರುತ್ತವೆ.
ಅಂಚೆ ಕಚೇರಿಗಳು, ಬ್ಯಾಂಕ್ ಗಳು, ವೇತನ, ಲೆಕ್ಕಪತ್ರ, ಹಣಕಾಸು ಸಲಹೆಗಾರರು ಹಾಗೂ ಮಹಾ ಲೆಕ್ಕ ನಿಯಂತ್ರಕರ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕಾಗುತ್ತದೆ.
* ಎಲ್ಲಾ ಆರೋಗ್ಯ ಸೇವೆಗಳು ( ಆಯುಷ್ ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳು ಕಾರ್ಯನಿರ್ವಹಿಸುವುದು ( ಕಂಟೈನ್ ಮೆಂಟ್ ವಲಯದ ಹೊರಗೆ)
ಎಲ್ಲ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ.
ಕ್ಷೀರ ಸಂಸ್ಕರಣಾ ಕೇಂದ್ರಗಳಿಗೆ ಸಾರಿಗೆ ಮತ್ತು ಪೂರೈಕೆ ಒಳಗೊಂಡಂತೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಸ್ಕರಣೆ ವಿತರಣೆ ಮತ್ತು ಮಾರಾಟಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ.
ಆಹಾರ ,ಹಾಗೂ ಹಣ್ಣು ತರಕಾರಿಗೆ ಖರೀದಿಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 11 ಗಂಟೆಯವರೆಗೆ ಅವಕಾಶ
ಮಾಧ್ಯಮ ಸಂಸ್ಥೆ , ಬ್ಯಾಂಕ್ , ವಿಮೆ ಕಚೇರಿ ಎಲ್ಲಾ ಆಹಾರ ಸಂಸ್ಕರಣೆ ಮತ್ತು ಕೈಗಾರಿಕೆ ವಿನಾಯಿತಿ
ಇ – ಕಾಮರ್ಸ್ ಮೂಲಕ ಆಹಾರ, ಔಷಧಿ, ವೈದ್ಯಕೀಯ ಸರಬರಾಜಿಗೆ ಅವಕಾಶ
ಎಲ್ಲಾ ಬಗೆಯ ಸರಕು ಸಾಗಣೆಗಳ ಅನಿರ್ಬಂಧಿತ ಚಲನೆ
ಈಗಾಗಲೇ ನಿಗದಿಯಾಗಿರುವ ವಿಮಾನ – ರೈಲು ಪ್ರಯಾಣಕ್ಕೆ ಪ್ರಯಾಣಿಕರಿಗೆ ಅವಕಾಶ
ಶಾಲೆ , ಕೊಚಿಂಗ್ ಶಾಪಿಂಗ್ ಮಾಲ್ ಹೊಟೇಲ್ , ಧಾರ್ಮಿಕ, ಸಾಮಾಜಿಕ ಸಮಾರಂಭಕ್ಕೆ ನಿಷೇಧ, ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಬೇಕು
ತುರ್ತು ಸಂದರ್ಭದಲ್ಲಿ ಮತ್ತು ವೈದ್ಯಕೀಯ ತುರ್ತು ಸೇವೆಗಳ ಪ್ರಯಾಣಕ್ಕೆ ಮಾತ್ರ ಅವಕಾಶ
“ಮಾರ್ಗಸೂಚಿ ಮತ್ತು ನಿಯಮ”ಗಳ ಇನ್ನಷ್ಟು ಸಮಗ್ರ ವಿವರ ಇಲ್ಲಿದೆ:
ಕೆಎಸ್ಆರ್ಟಿಸಿ, ಖಾಸಗಿ ಬಸ್ ಹಾಗೂ ಖಾಸಗಿ ವಾಹನಗಳ ಮೂಲಕ ಜನ ಸಂಚಾರಕ್ಕೆ ಅವಕಾಶವಿಲ್ಲ. ತುರ್ತು ಸಂದರ್ಭದಲ್ಲಿ ಅಥವಾ ಅನುಮತಿಸಲಾದ ಸಂದರ್ಭಗಳಲ್ಲಿ ಮಾತ್ರ ಪ್ರಯಾಣಿಕ ವಾಹನಗಳು ಸಂಚರಿಸಬಹುದಾಗಿದೆ. ಉಳಿದಂತೆ, ಕಂಟೈನ್ಮೆಂಟ್ ವಲಯದ ಹೊರಗಿನ ಆರೋಗ್ಯ, ವೈದ್ಯಕೀಯ,ಶಿಕ್ಷಣ, ಪೊಲೀಸ್, ಗೃಹ ರಕ್ಷಕದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಮಂಗಳೂರು ಮಹಾನಗರ ಪಾಲಿಕೆ, ಕಾರಾಗೃಹಗಳ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ.
ಈಗಾಗಲೇ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಲಾಕ್ಡೌನ್ ಅವಧಿಯಲ್ಲಿನ ಸಂಚಾರವನ್ನು ನಡೆಸಲಿದೆ. ವಿಮಾನ ಮತ್ತು ರೈಲು ಟಿಕೆಟ್ಗಳನ್ನು ವಿಮಾನ ಮತ್ತು ರೈಲುಗಳಲ್ಲಿ ಓಡಾಡುವ ಪ್ರಯಾಣಿಕರ ಪಾಸುಗಳೆಂದು ಪರಿಗಣಿಸಲಾಗುವುದು. ಅದಲ್ಲದೇ ಟ್ಯಾಕ್ಸಿ, ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿಸಿದೆ. ತುರ್ತು ಪರಿಸ್ಥಿತಿಗಾಗಿ ಬಾಡಿಗೆ ತೆಗೆದುಕೊಂಡಿರುವುದನ್ನು ಹೊರತುಪಡಿಸಿ ಟ್ಯಾಕ್ಸಿಗಳು ಮತ್ತು ಕ್ಯಾಬ್ ಚಾಲನೆ ನಿಷೇಧಿಸಲಾಗಿದೆ.
ಶಾಲೆಗಳು, ಕಾಲೇಜುಗಳು, ಶಿಕ್ಷಣ, ತರಬೇತಿ ಕೋಚಿಂಗ್ ಮೊದಲಾದ ಸಂಸ್ಥೆಗಳು ಮುಚ್ಚಿರುತ್ತವೆ. ಆನ್ಲೈನ್ ದೂರಶಿಕ್ಷಣ ಕಲಿಕೆಗೆ ಅವಕಾಶ ಮುಂದುವರಿಸಿ ಪ್ರೋತ್ಸಾಹಿಸುವುದು. ಆದರೆ ಈಗಾಗಲೇ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್ 19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ ನೀಡಲಾಗಿದೆ.
ಆರೋಗ್ಯ, ಪೊಲೀಸ್, ಸರಕಾರಿ ಸೇವಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗರು ಸೇರಿದಂತೆ ಉದ್ದೇಶಿಸಿದಮತ್ತು ಕ್ವಾರಂಟೈನ್ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೊಟೇಲ್ಗಳು, ರೆಸ್ಟೋರೆಂಟ್ಗಳು ಮತ್ತು ಇತರ ಆತಿಥ್ಯ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಹೊಟೇಲ್ ಮತ್ತು ರೆಸ್ಟೋರೆಂಟ್ಗಳನ್ನು ಆಹಾರ ತಯಾರಿಕೆಗೆ, ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿಸಲಾಗಿದೆ. ವೈದ್ಯಕೀಯ ತುರ್ತು ಸೇವೆಗಳಿಗೆ ಅವಕಾಶವಿರಲಿದೆ.
ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನೇ ಪ್ರಯಾಣದ ಪರವಾನಿಗೆಯನ್ನಾಗಿ ಬಳಸಬಹುದು. ಅವರಿಗೆ ಲಭ್ಯವಿರುವ ಟ್ಯಾಕ್ಸಿ, ಆಟೋರಿಕ್ಷಾ ಸಾರಿಗೆಯನ್ನು ಬಳಸಬಹುದು. ಎಸೆಸೆಲ್ಸಿ ಮೌಲ್ಯಮಾಪನಾ ಕೇಂದ್ರಗಳಿಗೆ ತೆರಳುವ ಶಿಕ್ಷಕರಿಗೆ ಅನುಮತಿ ನೀಡಲಾಗುತ್ತದೆ. ಎಲ್ಲಾ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು, ಬ್ಯಾಂಕುಗಳು, ವಿಮಾ ಕಚೇರಿಗಳು, ಎಟಿಎಂ, ಪತ್ರಿಕೆ ಮತ್ತುವಿದ್ಯುನ್ಮಾನ ಮಾಧ್ಯಮಕ್ಕೆ ವಿನಾಯಿತಿ ಇರುತ್ತದೆ.
ದೂರ ಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅಗತ್ಯ ಸೇವೆಗಳಿಗೆ ವಿನಾಯಿತಿ. ನಿರ್ವಹಣಾ ಸೇವೆಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಅಗತ್ಯ ಸೇವೆಗಳನ್ನು ನಿರ್ವಹಿಸುವುದು ಹಾಗೂ ಸಾಧ್ಯವಾದಷ್ಟು ಮನೆಯಿಂದಲೇ ನಿರ್ವಹಿಸುವುದು.
ಇ ಕಾಮರ್ಸ್ ಮೂಲಕ ಆಹಾರ, ಔಷಧಿಗಳು, ವೈದ್ಯಕೀಯ ಸಲಕರಣೆಗಳಂತೆ ಅಗತ್ಯ ವಸ್ತುಗಳ ಸರಬರಾಜು, ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತುಸೇವೆಗಳು, ಭಾರತೀಯ ಭದ್ರತೆಗಳು, ವಿನಿಮಯ ಮಂಡಳಿಯ ಬಂಡವಾಳ ಹಾಗೂ ಋಣ ಮಾರುಕಟ್ಟೆ ಸೇವೆಗಳು, ಶೀತಲೀಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು, ಇ ಕಾಮರ್ಸ್ ಮೂಲಕ ಸರಕು ಸರಬರಾಜಿಗೆ ವಿನಾಯಿತಿ ಇರಲಿದೆ.ಉಳಿದ ಸಂಸ್ಥೆಗಳು ಅಗತ್ಯವಿರುವಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದು ಎಂದು ಜಿಲ್ಲಾಧಿಕಾರಿ ನೀಡಿರುವ ಮಾರ್ಗಸೂಚಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆಯ ಜನತೆ ಲಾಕ್ ಡೌನ್ ಹಾಗೂ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ದ.ಕ.ಜಿಲ್ಲಾಧಿಕಾರಿ ಸಿಂಧೂ. ಬಿ. ರೂಪೇಶ್ ಮನವಿ ಮಾಡಿದ್ದಾರೆ.
ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ:
ಆದೇಶದಲ್ಲಿ ನೀಡಲಾಗಿರುವ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು ಮಂಗಳೂರು ನಗರ ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು , ಸಹಾಯಕ ಆಯುಕ್ತರು, ತಹಶೀಲ್ದಾರ್ ಗೆ ಆದೇಶಿಸಿದ್ದಾರೆ.
ಒಂದು ವೇಳೆ ಕೊವೀಡ್ ನಿರ್ವಹಣೆಯ ಲಾಕ್ ಡೌನ್ ಕ್ರಮಗಳನ್ನು ಉಲ್ಲಂಘಿಸಿದರೆ, ಯಾವುದೇ ವ್ಯಕ್ತಿಯ ವಿರುದ್ದ ವಿಪತ್ತು ನಿರ್ವಹಣೆಯ ಕಾಯ್ದೆ , ಹಾಗೂ ಭಾರತೀಯ ದಂಡ ಸಂಹಿತೆ 188 ಅಡಿಯಲ್ಲಿ ಕಾನೂನು ಕ್ರಮ ಜರಗಿಸುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
Comments are closed.