ಕರ್ನಾಟಕ

ಮಳೆಗಾಲದಲ್ಲಿ ಕೊರೊನಾ ಜತೆಗೆ ಡೆಂಗೆ ಆತಂಕ..!

Pinterest LinkedIn Tumblr


ಬೆಂಗಳೂರು ಗ್ರಾಮಾಂತರ: ಮಳೆಗಾಲ ಆರಂಭವಾಗಿದೆ. ಎಲ್ಲೆಂದರಲ್ಲಿ ನೀರು ನಿಲ್ಲೋದು ಈ ವೇಳೆ ಸಹಜ. ಹೀಗಾಗಿ, ಮೊದಲೇ ಕೊರೊನಾ ವೈರಸ್ ಹಾವಳಿಯಿಂದ ಕಂಗೆಟ್ಟಿರುವ ಜನರಿಗೆ ಇದೀಗ ಡೆಂಘಿ ಕೂಡಾ ಆತಂಕಕಾರಿಯಾಗಿ ಕಾಡುತ್ತಿದೆ.

ವೈನ್‌ ಶಾಪ್‌ಗಳ ಬಳಿ ಬಳಸಿ ಬಿಸಾಡಿರುವ ಸಾವಿರಾರು ಪ್ಲಾಸ್ಟಿಕ್‌ ಲೋಟಗಳು ಡೆಂಘಿ ಜ್ವರದ ಆತಂಕವನ್ನು ಸೃಷ್ಟಿಸಿವೆ. ಕಳೆದ ಕೆಲ ದಿನಗಳಿಂದ ಅಗಾಗ ಸುರಿಯುತ್ತಿರುವ ಮಳೆಯ ನೀರು ಲೋಟಗಳಲ್ಲಿ ಸಂಗ್ರಹಗೊಂಡು ಸೊಳ್ಳೆಗಳ ಉತ್ಪತಿಗೆ ಕಾರಣವಾಗುತ್ತಿದೆ. ಇವುಗಳ ವಿಲೇವಾರಿ ನಿರ್ವಹಣೆಯಲ್ಲಿ ವೈನ್‌ ಶಾಪ್‌ ಮಾಲೀಕರು ವಿಫಲವಾಗಿರುವುದು ಅಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮೀಣ ಭಾಗದಲ್ಲೂ ಕೊರೊನಾ ವೈರಸ್‌ ದಾಳಿ ಆರಂಭವಾಗಿದ್ದು, ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಹೆಣಗಾಡುತ್ತಿರುವ ಬೆನ್ನಲೇ ವೈನ್‌ ಶಾಪ್‌ಗಳ ಬಳಿ ಸಾವಿರಾರು ಪ್ಲಾಸ್ಟಿಕ್‌ ಲೋಟಗಳು ಪತ್ತೆಯಾಗುತ್ತಿವೆ. ವೈನ್‌ಶಾಪ್‌ಗಳಿಂದ ಮದ್ಯವನ್ನು ಖರೀದಿಸುವ ಜನರು ಅಕ್ಕಪಕ್ಕದಲ್ಲಿಯೇ ಕುಳಿತು ಸೇವಿಸುತ್ತಾರೆ. ಮದ್ಯ ಸೇವಿಸಲು ಪ್ಲಾಸ್ಟಿಕ್‌ ಲೋಟಗಳನ್ನು ಬಳಕೆ ಮಾಡಿ ಅಲ್ಲೇ ಬಿಸಾಡಿ ಹೋಗುತ್ತಾರೆ. ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ ಸಾವಿರಾರು ಪ್ಲಾಸ್ಟಿಕ್‌ ಲೋಟಗಳು ಒಂದೆಡೆ ರಾಶಿಯಾಗಿ ಬಿದ್ದಿರುತ್ತವೆ. ಪರಿಸರ ಮಾಲಿನ್ಯದ ಜೊತೆಗೆ ಡೆಂಘಿ ಜ್ವರದಂತ ಕಾಯಿಲೆಗಳು ಸೃಷ್ಟಿಯಾಗಲು ಕಾರಣರಾಗುತ್ತಿದ್ದಾರೆ.

ರಾಶಿ ಕಂಡು ಹೌಹಾರಿದ ಅಧಿಕಾರಿಗಳು: ಸೂಲಿಬೆಲೆಯಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದ್ದ ಕಾರಣ, ಹೊಸಕೋಟೆ ತಾಪಂ ಇಒ ಶ್ರೀನಾಥಗೌಡ ಅವರು ಮಾಸ್ಕ್‌ ಧರಿಸುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಕಾರ್ಯಚರಣೆ ನಡೆಸುತ್ತಿದ್ದರು. ಈ ವೇಳೆ, ವೈನ್‌ ಶಾಪ್‌ ಬಳಿ ಬಿದ್ದಿದ್ದ ರಾಶಿಗಟ್ಟಲೇ ಪ್ಲಾಸ್ಟಿಕ್‌ ಲೋಟಗಳನ್ನು ಕಂಡು ಹೌಹಾರಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲೋಟಗಳು ಬಿಸಾಡಿದ್ದು ಇವುಗಳಲ್ಲಿ ಮಳೆ ನೀರು ತುಂಬಿಕೊಂಡು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘಿ ಜ್ವರ ಹರಡಿದರೆ ಇದಕ್ಕೆ ಯಾರು ಹೊಣೆ ಎಂದು ಮಾಲೀಕರನ್ನು ಕರೆಸಿ ತೀವ್ರ ತರಾಟೆಗೆ ತೆಗೆದುಕೊಂಡರು. ಮಾಲೀಕರು ವ್ಯಾಪಾರಕ್ಕಷ್ಟೇ ಆದ್ಯತೆ ನೀಡಿದರೆ ಸಾಲದು. ವೈನ್‌ ಶಾಪ್‌ ಸುತ್ತಮುತ್ತ ಪರಿಸರವನ್ನು ಕಾಪಾಡುವಂತೆ ಕೆಲಸ ಮಾಡಬೇಕು. ಲೋಟಗಳು ಈ ರೀತಿ ಹೇರಳವಾಗಿ ಬಿಸಾಡಿರುವುದರಿಂದ ಮಳೆಯ ನೀರು ಸಂಗ್ರಹಗೊಂಡು ಸೊಳ್ಳೆಗಳು ಉತ್ಪತಿಯಾಗುತ್ತವೆ. ಜನರಿಗೆ ರೋಗ ಹರಡಲು ನೀವೆ ಕಾರಣರಾಗತ್ತೀರಿ ಎಂದು ಎಂದು ಬಿಸಿ ಮುಟ್ಟಿಸಿದರು.

ಸೂಲಿಬೆಲೆ ಪಟ್ಟಣದಲ್ಲಿರುವ ವೈನ್‌ ಶಾಪ್‌ ಆಜುಬಾಜು ಇರುವ ಬಯಲು ಪ್ರದೇಶದಲ್ಲಿ ಕುಡುಕರು ಗುಂಪು ಗೂಡುತ್ತಾರೆ. ಇಲ್ಲೂ ಕೂಡ ಸಾಮಾಜಿಕ ಅಂತರವಿರಲಿಲ್ಲ. ವೈನ್‌ ಶಾಪ್‌ ಅವರನ್ನು ಕೇಳಿದರೆ ನಾವು ಪಾರ್ಸಲ್‌ ಮಾತ್ರ ಕೊಟ್ಟಿದ್ದೇವೆ ಅಂತೇಳಿ ಕೈ ತೊಳೆದುಕೊಂಡಿದ್ದಾರೆ. ಡೆಂಘಿ ಜ್ವರ ಮತ್ತು ಕೊರೊನಾ ವೈರಸ್‌ ಹರಡಲು ಪರೋಕ್ಷವಾಗಿ ವೈನ್‌ಶಾಪ್‌ಗಳು ಕಾರಣವಾಗುತ್ತಿವೆ ಎಂಬ ಆರೋಪವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ವೈನ್‌ ಶಾಪ್‌ ಸುತ್ತಮುತ್ತ ಪರಿಸರವನ್ನು ಕಾಪಾಡಲು ಹಾಗೂ ಪ್ಲಾಸ್ಟಿಕ್‌ ಲೋಟಗಳನ್ನು ಒಂದಡೆ ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ಮಾಲೀಕರು ಮಾಡಬೇಕು. ಇದರ ಬಗ್ಗೆ ಕ್ರಮಕ್ಕೆ ಅಬಕಾರಿ ಇಲಾಖೆಯವರಿಗೆ ಸೂಚನೆ ನೀಡಿದ್ದೇನೆ ಎಂದು ಹೊಸಕೋಟೆ ಇಒ ಶ್ರೀನಾಥ್‌ ಗೌಡ ತಿಳಿಸಿದ್ದಾರೆ.

Comments are closed.