ಕರಾವಳಿ

ದೃಷ್ಟಿ ಸಮಸ್ಯೆಗಳಿಗೆ ಇವುಗಳು ಕಾರಣವಾಗಬಹದು, ಎಚ್ಚರ..?

Pinterest LinkedIn Tumblr

ರಾತ್ರಿ ವೇಳೆ ಸ್ಮಾರ್ಟ್‌ಫೋನ್‌ಗಳು ಮತ್ತು ಡಿಜಿಟಲ್ ಸಾಧನಗಳ ಬಳಕೆಯು ದೃಷ್ಟಿಗೆ ಹಾನಿಯನ್ನುಂಟು ಮಾಡುತ್ತವೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇದರ ಜೊತೆಗೆ ದೃಷ್ಟಿಗೆ ಹಾನಿಯನ್ನುಂಟು ಮಾಡಿ ನಿಮ್ಮನ್ನು ಯಾವುದೇ ಸಮಯದಲ್ಲಿ ಅಂಧರನ್ನಾಗಿಸುವ ಇತರ ಕಾರಣಗಳೂ ಇವೆ.

ಕಣ್ಣು ಮಾನವ ಶರೀರದ ಅತ್ಯಂತ ಮುಖ್ಯ ಇಂದ್ರಿಯಗಳಲ್ಲಿ ಒಂದಾಗಿದ್ದು,ಅಂಧರಾಗಲು ಯಾರೂ ಬಯಸುವುದಿಲ್ಲ. ಟಿವಿಯ ಹತ್ತಿರ ಕುಳಿತು ನೋಡಬೇಡಿ,ಕಣ್ಣು ಹಾಳಾಗುತ್ತದೆ ಎಂದು ಮನೆಯಲ್ಲಿ ಹಿರಿಯರು ಮಕ್ಕಳಿಗೆ ಹೇಳುವುದನ್ನು ನೀವು ಕೇಳಿರಬಹುದು. ದೃಷ್ಟಿಗೆ ಹಾನಿಯನ್ನುಂಟು ಮಾಡಬಲ್ಲ ಮತ್ತು ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದಾದ ಇತರ ಕಾರಣಗಳ ಬಗ್ಗೆ ಮಾಹಿತಿಯಿಲ್ಲಿದೆ.

ಧೂಮ್ರಪಾನ
ಧೂಮ್ರಪಾನವು ಆರೋಗ್ಯಕ್ಕೆ ಕೆಟ್ಟದ್ದು. ಧೂಮ್ರಪಾನಿಗಳಿಗಂತೂ ಇದು ಚೆನ್ನಾಗಿ ಗೊತ್ತು,ಆದರೂ ಧೂಮ್ರಪಾನದ ಚಟವನ್ನು ಬಿಡುವುದಿಲ್ಲ. ಧೂಮ್ರಪಾನವು ಶ್ವಾಸಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಆದರೆ ಧೂಮ್ರಪಾನವು ಕಣ್ಣುಗಳಿಗೂ ಹಾನಿಯನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ? ಸಿಗರೇಟ್‌ನಲ್ಲಿರುವ ರಾಸಾಯನಿಕಗಳು ರಕ್ತನಾಳಗಳನ್ನು ಸಂಕುಚಿಸುವ ಮೂಲಕ ಕಣ್ಣುಗಳಿಗೆ ಆಮ್ಲಜನಕ ಮತ್ತು ರಕ್ತದ ಹರಿವಿಗೆ ವ್ಯತ್ಯಯವನ್ನುಂಟು ಮಾಡುತ್ತವೆ. ಧೂಮ್ರಪಾನ ಮತ್ತು ಸಿಗರೇಟಿನ ಹೊಗೆ ಕ್ರಮೇಣ ಕಣ್ಣುಗಳ ಜೀವಕೋಶಗಳಿಗೆ ಶಾಶ್ವತ ಹಾನಿಯನ್ನುಂಟು ಮಾಡುತ್ತವೆ. ಇದು ಅಕ್ಷಿಪಟಲದ ಅವನತಿಗೆ ಮತ್ತು ಅಂತಿಮವಾಗಿ ಅಂಧತ್ವಕ್ಕೆ ಕಾರಣವಾಗಬಹುದು.

ಕಾಂಟ್ಯಾಕ್ಟ್ ಲೆನ್ಸ್‌ಗಳು
ಕಾಂಟ್ಯಾಕ್ಟ್ ಲೆನ್ಸ್ ಅಥವಾ ಸ್ಪರ್ಶ ಮಸೂರಗಳೂ ಅಂಧತ್ವಕ್ಕೆ ಕಾರಣವಾಗುತ್ತದೆ ಎನ್ನುವುದು ಹೆಚ್ಚಿನವರಿಗೆ ಅಚ್ಚರಿ-ಆಘಾತವನ್ನುಂಟು ಮಾಡಬಹುದು. ಇವುಗಳನ್ನು ಸರಿಯಾಗಿ ಧರಿಸದಿದ್ದರೆ ಮತ್ತು ಸೂಕ್ತವಾಗಿ ನಿರ್ವಹಿಸದಿದ್ದರೆ ಕಣ್ಣುಗಳಿಗೆ ಹಾನಿಯುಂಟಾಗಬಹುದು. ಕಾಂಟ್ಯಾಕ್ಟ್ ಲೆನ್ಸ್‌ಗಳ ವಿಷಯದಲ್ಲಿ ಒಂದು ಸಣ್ಣ ತಪ್ಪು ಕೂಡ ಕಣ್ಣುಗಳಿಗೆ ಯಾತನಾದಾಯಕ ಸೋಂಕನ್ನು ಮಾಡಬಲ್ಲದು ಮತ್ತು ಈ ಸೋಂಕು ಶಾಶ್ವತ ಅಂಧತ್ವಕ್ಕೆ ಕಾರಣವಾಗುತ್ತದೆ. ಈ ಲೆನ್ಸ್‌ಗಳನ್ನು ಧರಿಸಿಕೊಂಡು ಮಲಗಿದರೆ ಕಣ್ಣುಗಳಿಗೆ ಆಮ್ಲಜನಕದ ಪೂರೈಕೆಗೆ ಅಡ್ಡಿಯುಂಟಾಗುತ್ತದೆ ಮತ್ತು ದೃಷ್ಟಿನಾಶವುಂಟಾಗುತ್ತದೆ. ಅಲ್ಲದೆ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಸದಾ ಸ್ವಚ್ಛವಾಗಿರಿಸಿಕೊಳ್ಳುವುದು ಕೂಡ ತುಂಬ ಮುಖ್ಯವಾಗಿದೆ.

ಔಷಧಿಗಳು
ಔಷಧಿಗಳ ಅಡ್ಡಪರಿಣಾಮಗಳು ಕಣ್ಣುಗಳಿಗೆ ಮತ್ತು ದೃಷ್ಟಿಗೆ ಭಾರೀ ಬೆದರಿಕೆಯಾಗಿವೆ. ದೃಷ್ಟಿಯು ಉತ್ತಮವಾಗಿರಲು ಕಣ್ಣುಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗುತ್ತಿರಬೇಕು,ಇಲ್ಲದಿದ್ದರೆ ಅಂಧತ್ವದ ಲಕ್ಷಣಗಳು ಕಂಡುಬರುತ್ತವೆ. ಕೆಲವು ಔಷಧಿಗಳ ಕಣಗಳು ಅಕ್ಷಿಪಟಲದ ಮೇಲೆ ಸಂಗ್ರಹಗೊಂಡು ದೃಷ್ಟಿ ದೌರ್ಬಲ್ಯಕ್ಕೆ ಕಾರಣವಾಗುತ್ತವೆ. ಹೆಚ್ಚಿನ ಡೋಸೇಜ್‌ಗಳಲ್ಲಿ ಸೇವಿಸಬೇಕಾದ ಔಷಧಿಗಳಲ್ಲಿ ಈ ಅಡ್ಡಪರಿಣಾಮವು ಹೆಚ್ಚಾಗಿ ಕಂಡು ಬರುತ್ತದೆ. ಇಂತಹ ಔಷಧಿಗಳನ್ನು ಸೇವಿಸುತ್ತಿದ್ದರೆ ವೈದ್ಯರೊಂದಿಗೆ ಸಮಾಲೋಚಿಸಿ ಪರ್ಯಾಯ ಔಷಧಿಗಳ ಬಗ್ಗೆ ತಿಳಿದುಕೊಳ್ಳಿ.

ಸೂರ್ಯ
ಸೂರ್ಯಾಸ್ತವು ದಿನದ ಅತ್ಯಂತ ಸುಂದರ ಘಳಿಗೆಗಳಲ್ಲಿ ಒಂದಾಗಿದ್ದು,ಎಲ್ಲರೂ ಅದನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ ಸುದೀರ್ಘ ಸಮಯ ಸೂರ್ಯಾಸ್ತವನ್ನು ವೀಕ್ಷಿಸಿದರೆ ಸೂರ್ಯನ ಕಿರಣಗಳು ಅಂಧತ್ವಕ್ಕೆ ಕಾರಣವಾಗುತ್ತವೆ ಎಂದು ಕೆಲವು ಅಧ್ಯಯನಗಳು ಬಹಿರಂಗಗೊಳಿಸಿವೆ. ಇಳಿಸಂಜೆಯ ಸೂರ್ಯನ ಕಿರಣಗಳಿಗೆ ಹೆಚ್ಚು ಒಡ್ಡಿಕೊಳ್ಳುವುದರಿಂದ ಅವು ಕಣ್ಣುಗಳ ಅಕ್ಷಿಪಟಲವನ್ನು ದಹಿಸುವ ಮೂಲಕ ಅಂಧತ್ವವನ್ನುಂಟು ಮಾಡುತ್ತವೆ. ಆದರೆ ಹೀಗಾಗಲೇಬೇಕು ಎಂದೇನಿಲ್ಲ ಮತ್ತು ಎಲ್ಲರಿಗೂ ಇಂತಹ ಅಪಾಯವುಂಟಾಗುವುದಿಲ್ಲ,ಆದರೂ ಮುಂಜಾಗ್ರತೆಯು ಚಿಕಿತ್ಸೆಗಿಂತ ಒಳ್ಳೆಯದು. ಸುದೀರ್ಘ ಸಮಯ ಸೂರ್ಯಾಸ್ತವನ್ನು ವೀಕ್ಷಿಸುವುದಿದ್ದರೆ ಕಣ್ಣುಗಳಿಗೆ ಯಾವುದೇ ಸಂಭಾವ್ಯ ಹಾನಿಯನ್ನು ನಿವಾರಿಸಲು ಸಂರಕ್ಷಕ ಕನ್ನಡಕಗಳನ್ನು ಧರಿಸುವುದು ಒಳ್ಳೆಯದು.

ಅವಧಿಗೆ ಮುನ್ನವೇ ಋತುಬಂಧ
ಮಹಿಳೆಯರು ಅವಧಿಗೆ ಮುನ್ನವೇ ಋತುಬಂಧಕ್ಕೊಳಗಾಗುವುದು ಅವರ ಶರೀರದಲ್ಲಿ ಬದಲಾವಣೆಗಳನ್ನು ತರುವ ಜೊತೆಗೆ ದೃಷ್ಟಿ ಸಮಸ್ಯೆಗಳಿಗೂ ಕಾರಣವಾಗಬಹುದು. ಋತುಬಂಧದ ಸಂದರ್ಭದಲ್ಲಿ ಹಾರ್ಮೋನ್‌ಗಳಲ್ಲಿ ಏರಿಳಿತಗಳು ದೃಷ್ಟಿ ದೌರ್ಬಲ್ಯಕ್ಕೆ ಕಾರಣವಾಗಬಹುದು. ಇಂತಹ ಮಹಿಳೆಯರು ಅಂಧತ್ವದ ಅಪಾಯವನ್ನು ಹೆಚ್ಚಿಸುವ ನೇತ್ರರೋಗ ಗ್ಲಾಕೊಮಾಕ್ಕೆ ತುತ್ತಾಗಬಹುದು. ಹೀಗಾಗಿ 45 ವರ್ಷಕ್ಕೇ ಮೊದಲೇ ಋತುಬಂಧವಾಗಿರುವ ಮಹಿಳೆಯರು ತಮ್ಮ ಕಣ್ಣುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಯಮಿತವಾಗಿ ಅವುಗಳ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗುತ್ತದೆ.

Comments are closed.