ಕರಾವಳಿ

ಸಿಯಾಚಿನ್ ಯುದ್ಧಭೂಮಿಯ ಮೊದಲ ನಾಗರಿಕ ಚಾರಣದಲ್ಲಿ ಕುಂದಾಪುರ ಮರವಂತೆ ಅಳಿಯ!

Pinterest LinkedIn Tumblr

ಕುಂದಾಪುರ: ಸಮುದ್ರ ಮಟ್ಟದಿಂದ 16,300 ಅಡಿ ಎತ್ತರದಲ್ಲಿರುವ ಪ್ರಪಂಚದ ಅತ್ಯುನ್ನತ ಯುದ್ಧಭೂಮಿ ಎನಿಸಿದ ಸಿಯಾಚಿನ್ ನೀರ್ಗಲ್ಲು ಮೆಟ್ಟಿಬಂದ ಮೊತ್ತಮೊದಲ ನಾಗರಿಕ ಚಾರಣ ಸಾಹಸ ತಂಡದ ಏಳು ಸದಸ್ಯರಲ್ಲಿ ಬೆಂಗಳೂರಿನ ಜಯಕುಮಾರ್ ಭಕ್ತವಚಲಮ್ ಒಬ್ಬರು. ಇವರು ಬೈಂದೂರು ತಾಲೂಕಿನ ಮರವಂತೆಯ ಚಂದ್ರಶೇಖರ-ಸಿಂಗಾರಿ ಟೀಚರ್ ದಂಪತಿಯ ಪುತ್ರಿ ಯೋಗಿತಾ ಬಾಲಿಯ ಪತಿ, ಅಂದರೆ ಮರವಂತೆಯ ಅಳಿಯ ಎಂಬುದು ಊರಿಗೆ ಹೆಮೆಯಾಗಿದೆ. ಅವರು ತಮ್ಮ ಸಾಹಸದ ರೋಚಕ ಅನುಭವವನ್ನು ಹಂಚಿಕೊಂಡರು.

ಕೇಂದ್ರ ಸರ್ಕಾರ ಲಡಾಖನ್ನು ಕೇಂದ್ರಾಧೀನ ಪ್ರದೇಶ ಎಂದು ಘೋಷಿಸಿದ ಬಳಿಕ ಭಾರತೀಯ ಸೇನೆ ಸಿಯಾಚಿನ್ ಪ್ರದೇಶವನ್ನು ನಾಗರಿಕರ ಚಾರಣ ಯಾತ್ರೆಗೆ ಮುಕ್ತಗೊಳಿಸಿದೆ. ಅವರದು ಅಂತಹ ಮೊದಲ ನಾಗರಿಕ ಚಾರಣ.

ನಿವೃತ್ತ ಕರ್ನಲ್ ಸುನಿಲ್ ಪೋಖ್ರಿಯಾಲ್ ಮತ್ತು ನಿವೃತ್ತ ಮೇಜರ್ ಕುಲವಂತ ಸಿಂಗ್ ಧಾಮಿ ನೇತೃತ್ವದ ತಂಡದಲ್ಲಿದ್ದ ಇನ್ನೋರ್ವ ಕನ್ನಡತಿ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರ ವ್ಯವಸ್ಥಾಪಕಿ ಮೇಘನಾ ಮೋಹನ್. ಗೋವಾದ ತುಷಾರ್ ಜೋಗಳೇಕರ್, ಪುಣೆಯ ಹರ್ಷ ಮುತಾ ಮತ್ತು ನವದೆಹಲಿಯ ಅಮೃತ್‌ಕೌರ್ ಗ್ರೋವರ್ ಉಳಿದ ಮೂವರು.

ಸಾಹಸ ಪ್ರವಾಸೋದ್ಯಮ ಸಂಘಟಿಸುವ ನವದೆಹಲಿಯ ರಾಷ್ಟ್ರೀಯ ಸಾಹಸಕಾರ್ಯ ಪ್ರತಿಷ್ಠಾನದ ಮೂಲಕ ಸಿಕ್ಕ ಮೊದಲ ಅವಕಾಶವನ್ನು ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವ ಭಾರತೀಯ ಯೋಧರ ಬದುಕಿನ ಪ್ರತ್ಯಕ್ಷ ಅರಿವು, ಅನುಭವ ಪಡೆಯಲು ಇವರು ಬಳಸಿಕೊಂಡರು. ಸರ್ಕಾರೇತರ ನಾಗರಿಕ ಸಂಸ್ಥೆ ಸಂಘಟಿಸಿದ ಮೊತ್ತಮೊದಲ ಈ ಯಾತ್ರೆಯನ್ನು ’ಸಿಯಾಚಿನ್-ಯೋಧರ ಮಾರ್ಗ’ ಎಂದು ಕರೆಯಲಾಗಿತ್ತು.

ತಿಂಗಳ ಕಾಲ ಕಠಿಣ ದೈಹಿಕ ಮತ್ತು ಮಾನಸಿಕ ಪರೀಕ್ಷೆ ಹಾಗೂ ತರಬೇತಿ ಪಡೆದ ಈ ತಂಡ 14 ಹೊರೆಯಾಳುಗಳ, ಒಬ್ಬ ಅಡುಗೆಯವನ ಮತ್ತು ಒಬ್ಬ ಮಾರ್ಗದರ್ಶಿಯ ಜತೆಗೆ ಸಪ್ಟಂಬರ್ 16ರಂದು ಆರಂಭಿಕ ನೆಲೆ ತಲಪಿ ಅಲ್ಲಿನ ಶಾಲೆಯಲ್ಲಿ ಸೈನಿಕರಿಂದ ಮಾರ್ಗದರ್ಶನ ಪಡೆದು 25ರಂದು ಆರೋಹಣ ಆರಂಭಿಸಿತು.

ಅಲ್ಲಿಂದ ಸಿಯಾಚಿನ್ ನೀರ್ಗಲ್ಲಿಗೆ 60 ಕಿಲೋಮೀಟರು ದೂರ; ನೀರ್ಗಲ್ಲಿನ ಏರು ದಾರಿಯಲ್ಲಿ ಹವಾಮಾನ ವೈಪರೀತ್ಯದ ನಡುವೆ ಅತ್ಯಂತ ಕಠಿಣ ಪಯಣ; ದಿನಕ್ಕೆ ಸರಾಸರಿ 12 ಕಿಲೋಮೀಟರು ಕ್ರಮಿಸುತ್ತ ನಾಲ್ಕು ದಿನಗಳ ಬಳಿಕ ತಂಡ ಅಂತಿಮ ಗುರಿಯಾದ ಕುಮಾರ ನೆಲೆ ಎಂಬ ಬ್ರಿಗೇಡ್ ಹೆಡ್‌ಕ್ವಾರ್ಟರ್ ತಲಪಿ ಸಂಭ್ರಮ ಆಚರಿಸಿತು. ಅಲ್ಲಿ ಭಾರತೀಯ ಸೈನಿಕರ ಜತೆ ಒಂದು ದಿನ ಮತ್ತು ಒಂದು ರಾತ್ರಿ ಕಳೆದು ನಮ್ಮ ವೀರ ಜವಾನರು ಚಳಿಗಾಲದಲ್ಲಿ -40 ರಿಂದ -70 ಸಿ ಡಿಗ್ರಿಗೆ ಕುಸಿಯುವ, ಆಹಾರ, ವಸತಿ, ಸಂಚಾರ ಎಲ್ಲವೂ ಸವಾಲಾಗಿರುವ ಭೂಪ್ರದೇಶದಲ್ಲಿ ಹವಾಗುಣವನ್ನೂ, ಶತ್ರು ದಾಳಿಯ ಸಂಭಾವ್ಯತೆಯನ್ನೂ ಎದುರಿಸುತ್ತ ನಿರಂತರ ಕಟ್ಟೆಚ್ಚರದಲ್ಲಿ ನಡೆಸುವ ದೇಶರಕ್ಷಣೆಯ ಕಾಯಕವನ್ನು ಹತ್ತಿರದಿಂದ ಕಂಡಿತು. ಮರುದಿನ ಮರುಪಯಣ ಆರಂಭಿಸಿ, ಅಕ್ಟೋಬರ್ ೪ರಂದು ಮೂಲ ನೆಲೆ ಸೇರಿತು.

‘ಎಲ್ಲ ಸದಸ್ಯರೂ ಸದೃಢರೂ, ಉತ್ಸಾಹಿಗಳೂ ಆಗಿದ್ದರಿಂದ ಪಯಣದಲ್ಲಿ ತೊಂದರೆ ಎದುರಾಗಲಿಲ್ಲ. ಇಡೀ ಪಯಣ ಅತ್ಯಂತ ರೋಚಕ ಅನುಭವ ನೀಡಿತು. ಎಲ್ಲಕ್ಕಿಂತ ಮಿಗಿಲಾಗಿ ಭಾರತೀಯ ಸೈನಿಕರ ಬಗೆಗಿನ ಗೌರವ ಮತ್ತಷ್ಟು ಹೆಚ್ಚಿತು’ ಎನ್ನುತ್ತಾರೆ ಜಯಕುಮಾರ್.

ಚಾರಣಪ್ರಿಯ, ಸಾಹಸಿಗ…
ಸಾಹಸವನ್ನು ಬದುಕಿನ ಒಂದು ಭಾಗವಾಗಿಸಿಕೊಂಡಿರುವ ಜಯಕುಮಾರ್ ಮೆಕ್ಯಾನಿಕಲ್ ಎಂಜಿನಿಯರ್. ಬ್ಯಾಂಕ್‌ನಲ್ಲಿ ಉನ್ನತ ಹುದ್ದೆ ನಿರ್ವಹಿಸಿದ್ದ ಅವರು ಈಗ ತನ್ನದೇ ಫಿನ್ಟೆಕ್ ಕಂಪನಿಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ. 2018ರ ಜೂನ್‌ನಲ್ಲಿ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಚಾರಣ ನಡೆಸಿದ್ದರು. 2019ರ ಜೂನ್‌ನಲ್ಲಿ ರಷ್ಯಾದಲ್ಲಿ ಎಕ್ಸಿಲರೇಟೆಡ್ ಫ್ರೀ ಫಾಲ್ ಸ್ಕೈಡೈವಿಂಗ್ ತರಬೇತಿ ಪಡೆದು ಸ್ಕೈಡೈವ್ ಮಾಡುವ ಮೂಲಕ ’ಎ’ ಅರ್ಹತಾ ಪತ್ರ ಸಂಪಾದಿಸಿಕೊಂಡಿದ್ದಾರೆ.

Comments are closed.