ಕರಾವಳಿ

‘ನಾಡಿಗೆ ಬಂದಿತು ನಾಗರಪಂಚಮಿ’; ಇಂದು ಕಲಿಯುಗದ ಪ್ರತ್ಯಕ್ಷ ದೇವರು ನಾಗನ ಆರಾಧನೆ

Pinterest LinkedIn Tumblr

ವಿಶೇಷ ವರದಿ:
ಶ್ರಾವಣ ಮಾಸದಲ್ಲಿ ಮೊದಲು ಬರುವ ಭಯಭಕ್ತಿ ಶೃದ್ಧೆಯಿಂದ ಕೂಡಿದ ಹಬ್ಬವೇ ನಾಗರಪಂಚಮಿ. ಈ ಹಬ್ಬವನ್ನು ಭಾರತೀಯ ಸಂಸ್ಕೃತಿಯನ್ನು ಪಾಲಿಸುವ ಪ್ರತಿಯೊಬ್ಬರು ಬಹಳ ಶೃದ್ಧೆಯಿಂದ ಆಚರಿಸುವುದು ರೂಡಿಯಲ್ಲಿದೆ. ಪ್ರಾಥಃ ಕಾಲದಲ್ಲಿ ಪ್ರತಿಯೊಬ್ಬರು ಸ್ನಾನಾದಿ ನಿತ್ಯ ಕರ್ಮಗಳನ್ನು ಮಾಡಿ ಕುಟುಂಬದವರು ತಲೆ ತಲಾಂತರದಿಂದ ನಂಬಿ ಕೊಂಡು ಬಂದಿರುವ ನಾಗಬನದಲ್ಲಿ ಶ್ರೀ ನಾಗದೇವರಿಗೆ ತನು ಹಾಕಿಸುವುದು ಒಂದು ಕರ್ತವ್ಯ ರೂಪದಲ್ಲಿ ಮಾಡಿಕೊಂಡು ಬರುವುದು ವಾಡಿಕೆ. ನಾಗದೇವರಿಗೆ ಪ್ರಿಯವಾದ ಲವಂಚ, ಸಿಂಗಾರ ಹೂವು ಅಕ್ಕಿ ಕಾಯಿ ಬಾಳೆಹಣ್ಣು ತಂಬಿಟ್ಟು (ಅಕ್ಕಿ ಬೆಲ್ಲದಿಂದ ಅರ್ಚಕರು ತಯಾರಿಸಿತ್ತಾರೆ) ಅರಳು ಬೆಲ್ಲ ವಿವಿಧ ಹೂವುಗಳು ನಾಗದೇವರಿಗೆ ಪ್ರಿಯವಾದ ಕೇದಿಗೆಹೂವು, ಸೀಯಾಳ (ಎಳನೀರು) ಹಾಲು ಅಭಿಷೇಕವನ್ನು ತಂದಿರಿಸಿರುತ್ತಾರೆ ಅರ್ಚಕರು ವಿಧಿ ವಿಧಾನಗಳಿಂದ ನಾಗದೇವರಿಗೆ ಪೂಜಿಸುತ್ತಾರೆ.

(File Photos)

ಇಡಿ ಭೂಮಂಡಲವನ್ನೇ ಹೊತ್ತು ನಮ್ಮನ್ನು ರಕ್ಷಿಸಿ ಮಾನವರ ಸರಿ ತಪ್ಪುಗಳ ಬಗ್ಗೆ ಆಗಾಗ್ಗೆ ಪ್ರತ್ಯಕ್ಷವಾಗಿ ಎಚ್ಚರಿಸುತ್ತಾ ಸರಿದಾರಿಯಲ್ಲಿ ನಡೆಯಲು ಪ್ರೇರಣೆ ನೀಡುವ ಕಲಿಯುಗದ ಪ್ರತ್ಯಕ್ಷ ಕಣ್ಣಿಗೆ ಕಾಣುವ ನಾಗದೇವರನ್ನು ಶೃದ್ಧಾಭಕ್ತಿಯಿಂದ ಪೂಜಿಸುವ ದಿನ ಇಂದಿನದಾಗಿದೆ. ನಾಗಾರಾಧನೆಯಿಂದ ರೋಗ-ರುಜಿನಾಧಿಗಳು ಮತ್ತು ವಿವಾಹ ಸಂಬಂಧಿ ಸಮಸ್ಯೆಗಳು ದೂರಾಗುತ್ತದೆ ಎಂಬ ನಂಬಿಕೆಯಿದೆ.

Nagara_PanchamI_2016 (2)

ನಾಗ ಪ್ರತ್ಯಕ್ಷ ದೇವ: ಸಮುದ್ರ ಮಥನ ಕಾಲದಲ್ಲಿ ಮಂದರಪರ್ವತಕ್ಕೆ ಹಗ್ಗವಾಗಿ ಸಹಾಯ ಮಾಡಿದ್ದಾನೆ. ಹಾಗೆಯೇ ತಕ್ಷಕ ಇಂದ್ರನ ಮಿತ್ರನಾಗಿ ಆಸ್ತಿಕ ಮಹರ್ಷಿಯ ಸಹಾಯದಿಂದ ಜನಮೇಜಯ ಮಹಾರಾಜನ ಸರ್ಪಯಾಗದಲ್ಲಿ ನಾಗಕುಲವನ್ನೇ ಬದುಕಿಸಿ ಮಹತ್ಕಾರ್‍ಯ ಮಾಡಿ ನಮ್ಮನ್ನು ನಾಗ ದೇವರು ಕಾಪಾಡುವಂತೆ ಮಾಡಿದ್ದಾನೆ. ಮಾನವನಾಗಿ ಹುಟ್ಟಿದವನು ಜೀವನೋಪಯಕ್ಕೆ ಊರಿನಿಂದ ಊರಿಗೆ ಹೋಗಿ ಜೀವಿಸುತ್ತಾನೆ ಆದರೆ ಆತ ಎಲ್ಲೇ ಇರಲಿ ಆತನ ನಂಬಿದ ಮೂಲ ನಾಗದೇವರಿಗೆ ವರ್ಷಕ್ಕೊಮ್ಮೇ ನಾಗರ ಪಂಚಮಿಯಂದು ನಾಗ ತನು ಸೇವೆ ಹಾಕಿಸಿ ನಾಗದೇವರ ಅನುಗ್ರಹ ಪಡೆಯಬೇಕು ನಾಗದೇವರಿಗೆ ವರ್ಷಕ್ಕೊಮ್ಮೆ ನಾಗನ ಕಲಶ ಮಾಡಿಸಿ (ಶುದ್ದ ಕಲಶ) ಹಾಕಿಸಿದಾಗ ಆಯುರಾರೋಗ್ಯ ಭಾಗ್ಯ ತೇಜಸ್ಸು ಸಂಪತ್ತು ನೆಮ್ಮದಿ ಸುಖ- ಸಂತೋಷ ಶ್ರೀ ನಾಗದೇವರ ಅನುಗ್ರಹದಿಂದ ಪಡೆಯಬಹುದಾಗಿದೆ.

Nagara_PanchamI_2016 (1)

ನಾಗಬನವಾಗುತಿದೆ ಕಾಂಕ್ರಿಟ್ ಗೂಡು:
ನಾಗಬನಗಳು ಪ್ರಕೃತಿ ಮಾತೆಯ ಮಡಿಲಲ್ಲಿ ಇರಬೇಕು. ನಾಗಬನ ಮರದಬುಡದಲ್ಲೇ ಇರಬೇಕು. ಗಿಡಮರ ಕಡಿದು ನಾಗಬನ ಕಾಂಕ್ರಿಟ್‌ನಿಂದ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಇದರಿಂದ ನಿಜ ನಾಗರಗಳಿಗೆ ವಾಸಿಸಲು ನೆಲೆ ಇಲ್ಲದಂತಾಗಿ ಮನುಷ್ಯ ವಾಸಿಸುವ ಮನೆಗಳಿಗೆ ಪ್ರದೇಶ ಮಾಡುವ ಕಾರಣ ಅಮಾನವನ ಕೈಗೆ ಸಿಕ್ಕು ಸಮಸ್ಯೆ ಅನುಭವಿಸುವಂತಾಗಿದೆ ಅಲ್ಲದೇ ಮನುಷ್ಯ ಮನೆಗಳಿಗೆ ಬರುವ ಹಾವುಗಳನ್ನು ಓಡಿಸುವ ಕಾರಣ ನಾಗರಹಾವುಗಳು ರಸ್ತೆಗಳಲ್ಲಿ ಅಡ್ಡ ದಿಡ್ಡಿ ಓಡಾಡಿ ವಾಹನಗಳಿಗೆ ಸಿಕ್ಕಿ ಸಾಯುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ನಿಜನಾಗರ ನಿಲ್ಲದ ಗುಡಿಯಾಗುತ್ತಿದೆ ಇಂದಿನ ನಾಗಬನಗಳು. ಮರದ ಬುಡದಲ್ಲಿ ಹಾಡಿ(ಕಾಡಿನಲ್ಲಿ)ಯಲ್ಲಿ ನಾಗಬನವಿದ್ರೆ ಅಲ್ಲಿ ನಾಗರ ಹಾವುಗಳು ಮರಿ ಮೊಟ್ಟೆಯೊಡನೆ ಜೀವಿಸುತ್ತವೆ. ಎಲ್ಲಾ ಕಡೆ ಮರ ಕಡಿದು ಪ್ರಕೃತಿ ನಾಶ ಮಾಡುವುದರಿಂದ ನಾಗನಿಗೆ ಮನೆಯಿಲ್ಲದಂತಾಗಿದೆ. ಇಡೀ ಭೂಮಿಯನ್ನು ಹೊತ್ತು ನಿಧಿ ಸಂರಕ್ಷಣೆ ಮಾಡಿ ಮನುಕುಲವನ್ನು ರಕ್ಷಿಸುತ್ತಿರುವ ನಾಗನಿಗೆ ವಾಸಿಸಲು ಯೋಗ್ಯವಾದ ಪರಿಸರಯುಕ್ತ ನಾಗಬನವಾಗಲಿ ಕಾಂಕ್ರಿಟ್ ನಾಗಬನ ನಾಗ ದೇವರಿಗೆ ಅಪ್ರಿಯವಾದುದೆಂಬ ನಂಬಿಕೆಯಿಂದಾದರೂ ಪರಿಸರ ಉಳಿಸುವ ಕೆಲಸವಾಗಬೇಕಾಗಿದೆ. ಇನ್ನೂ ಮುಂದೆ ನಾಗಬನ ಮಾಡುವವರು ಗಿಡ ಮರಗಳ ನಡುವೆ ಪ್ರಕೃತಿ ಮಡಿಲಿನ ಸ್ವಚ್ಚ ಹಸಿರಿನ ಸುಂದರ ನಾಗಬನ ನಿರ್ಮಾಣವಾಗಬೇಕಾಗಿದೆ.

‘ಕನ್ನಡಿಗ ವರ್ಲ್ಡ್’ ಓದುಗರಿಗೆ ನಾಗರಪಂಚಮಿಯ ಶುಭಾಶಯಗಳು.

Comments are closed.