ಕರಾವಳಿ

ಕುಂದಾಪುರ ನೂಜಾಡಿಯಲ್ಲಿದೆ 110 ಜನ ಸದಸ್ಯರಿರುವ ‘ಮೆತ್ತಿನಮನೆ’ಯೆಂಬ ದೊಡ್ಮನೆ!

Pinterest LinkedIn Tumblr

ಕುಂದಾಪುರ: ವಿಭಕ್ತ ಕುಟುಂಬಕ್ಕೆ ಮೊರೆಹೋಗಿ ‘ನಾನೊಂದು ತೀರ, ನೀವೊಂದು ತೀರ; ಎಂಬಂತಹ ಇಂದಿನ ಕಾಲಘಟ್ಟದಲ್ಲಿ ಬರೋಬ್ಬರಿ 110 ಜನ ಸದಸ್ಯರನ್ನು ಹೊಂದಿರುವ ಅವಿಭಕ್ತ ಕುಟುಂಬವೊಂದು ತಾಲ್ಲೂಕಿನ ನೂಜಾಡಿ ಗ್ರಾಮದ ಬಗ್ವಾಡಿಯಲ್ಲಿ ಇದೆ.

ಬಗ್ವಾಡಿಯ ಮೆತ್ತಿನಮನೆ ವೆಂಕಮ್ಮ ಶೆಡ್ತಿ ಹಾಗೂ ಹೊಳ್ಮಗೆ ರಾಮಣ್ಣ ಶೆಟ್ಟಿ ದಂಪತಿಗಳಿಗೆ 5 ಹೆಣ್ಣು ಹಾಗೂ 3 ಗಂಡು ಮಕ್ಕಳು. ಹಿರಿಯ ಮಗಳು ಪಾರ್ವತಿ ಶೆಟ್ಟಿಯವರಿಗೆ 86 ವರ್ಷ, ಸಹೋದರಿಯರಾದ ಲಕ್ಷ್ಮೀ ಮಂಜಯ್ಯ ಶೆಟ್ಟಿ, ಗುಲಾಬಿ ರಘು ಶೆಟ್ಟಿ, ಸಿಂಗಾರಿ ಮಂಜಯ್ಯ ಶೆಟ್ಟಿ, ಸುಮತಿ ಆನಂದ ಶೆಟ್ಟಿ, ಹೋದರರಾದ ಗೋಪಾಲಕೃಷ್ಣ ಶೆಟ್ಟಿ, ರಾಜೀವ್‌ ಶೆಟ್ಟಿ ಹಾಗೂ ಬಿ.ಎನ್‌.ಶೆಟ್ಟಿ ಇದ್ದಾರೆ. 2006 ರಲ್ಲಿ ತನ್ನ 5ನೇ ತಲೆಮಾರಿನ ಕುಡಿ ವಿಭೂತ್‌ನನ್ನು ಚಿನ್ನದ ದೀಪದ ಬೆಳಕಿನಲ್ಲಿ ನೋಡುವ ಚಂದ್ರದರ್ಶನ ಮಾಡಿ 104 ವರ್ಷ ಬಾಳಿ ಶತಾಯುಷಿಗಳಾಗಿದ್ದ ವೆಂಕಮ್ಮ ಶೆಡ್ತಿಯವರ ನಿಧನದ ಬಳಿಕ ಕುಟುಂಬದ ಹಿರಿ ತಲೆಯಾದ ಪಾರ್ವತಿ ಶೆಟ್ಟಿ ಇದೀಗ ಮೆತ್ತಿನಮನೆ ಕುಟುಂಬದ ಯಜಮಾನ್ತಿಯಾದರೆ, ಅವರ 4 ನೇ ತಲೆಮಾರಿನ ಒಂದೂವರೆ ವರ್ಷದ ಸುಧನ್ವಾ ಕುಟುಂಬದ ಕಿರಿಯ ಕುಡಿ.

(ಕುಂದಾಪುರ ತಾಲ್ಲೂಕಿನ ನೂಜಾಡಿ ಗ್ರಾಮದ ಬಗ್ವಾಡಿಯ ಮೆತ್ತಿನಮನೆಯ ಮೂಲ ಛಾಯಾಚಿತ್ರ)

(ನೂತನವಾಗಿ ನಿರ್ಮಾಣಗೊಂಡಿರುವ ಮೆತ್ತಿನಮನೆ)

(ನೂಜಾಡಿ ಮೆತ್ತಿನಮನೆಯ ದಿ.ವೆಂಕಮ್ಮ ಶೆಡ್ತಿಯವರೊಂದಿಗೆ 12 ಮಕ್ಕಳ ಅಪರೂಪದ ಛಾಯಚಿತ್ರ)

ಮೆತ್ತಿನ ಮನೆ ಕುಟುಂಬ ಸದಸ್ಯರು ಕೃಷಿ, ವಿದೇಶ ಹಾಗೂ ಸ್ವದೇಶದಲ್ಲಿ ನೌಕರಿಯಲ್ಲಿ ಇದ್ದಾರೆ. 24 ಮಂದಿ ವಿದೇಶದಲ್ಲಿ, 12 ಮಂದಿ ವೈದ್ಯರು, 26 ಮಂದಿ ಇಂಜಿನಿಯರ್ಸ್‌ ಇದ್ದಾರೆ. ಕೇಂದ್ರ ಸರ್ಕಾರದ ಸಂಪುಟ ಸಚಿವರ ಆಪ್ತ ಕಾರ್ಯದರ್ಶಿ, ವಿದೇಶಿ ಕಂಪೆನಿಯಲ್ಲಿ ಸಿಇಓ, ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ವಿಜ್ಞಾನಿಯಾಗಿ, ಸುಪರ್‌ ಸ್ಪೇಶಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾಗಿ, ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ಎಷ್ಟೇ ದೊಡ್ಡ ಪದವಿ ಅಥವಾ ಹುದ್ದೆಗಳಿದ್ದರೂ ಈ ಕುಟುಂಬದ ಹೆಚ್ಚಿನ ಸದಸ್ಯರು ವರ್ಷದ ನವರಾತ್ರಿ, ಮಾರಣಕಟ್ಟೆ ಜಾತ್ರೆ, ಬಸ್ರೂರು ಚಿಕ್ಕು ದೈವದ ಮನೆ ಗೆಂಡ ಸೇವೆ ಹಾಗೂ ವಿಶೇಷ ಕಾರ್ಯಕ್ರಮಗಳ ಸಂದರ್ಭದಲ್ಲಿ ತಪ್ಪದೆ ಒಟ್ಟಾಗುತ್ತಾರೆ. ಕುಟುಂಬ ಸದಸ್ಯರ ಮದುವೆ ಸಮಾರಂಭಗಳಲ್ಲಿ ಶೇಖಡ 95 ಕ್ಕಿಂತಲೂ ಹೆಚ್ಚಿನ ಹಾಜರಾತಿ ಇದ್ದೆ ಇರುತ್ತದೆ. ಕುಟುಂಬ ಸದಸ್ಯರ ಚಟುವಟಿಕೆಯ ಪರಸ್ಪರ ಅರಿವಿಗಾಗಿ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದು, ದೇಶ–ವಿದೇಶದಲ್ಲಿ ಇರುವವರು ಚಾಟಿಂಗ್‌ ಮೂಲಕ ವಿಚಾರ ವಿನಿಮಯ ಮಾಡುತ್ತಿರುತ್ತಾರೆ.

ಬಿಎಂವಿಆರ್‌ ಟ್ರಸ್ಟ್‌ ರಚನೆ
ಮೊದಲ ತಲೆ ಮಾರಿನ 12 ಜನ ಮಕ್ಕಳು ಸೇರಿ ತಂದೆ ಹಾಗೂ ತಾಯಿ ಹೆಸರಿನಲ್ಲಿ ’ಬಗ್ವಾಡಿ ಮೆತ್ತಿನ ಮನೆ ಶ್ರೀಮತಿ ವೆಂಕಮ್ಮ ರಾಮಣ್ಣ ಶೆಟ್ಟಿ ಟ್ರಸ್ಟ್‌ (ರಿ). ರಚನೆ ಮಾಡಿಕೊಂಡಿದ್ದಾರೆ. ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಕುಟುಂಬ ಸದಸ್ಯರು ನೀಡುವ ಸಹಾಯಧನದಿಂದ ಕಳೆದ ಕೆಲ ಸಮಯದಿಂದ ಒಂದಷ್ಟು ಸಮಾಜಸೇವೆ ನಡೆಯುತ್ತಿದೆ.

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಗ್ವಾಡಿ ಶಾಲೆಗೆ ನೂತನ ರಂಗ ಮಂಟಪ ನಿರ್ಮಾಣ, ಶಾಲಾ ಮಕ್ಕಳಿಗಾಗಿ ನೈತಿಕ ಮೌಲ್ಯವರ್ಧನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಂತೃಸ್ತರಿಗೆ ನೆರವು ಸೇರಿದಂತೆ ಹತ್ತು ಹಲವು ಮಾನವೀಯ ಮೌಲ್ಯದ ಕಾರ್ಯಕ್ರಮಗಳು ಟ್ರಸ್ಟ್‌ ಮೂಲಕ ನಿರಂತರವಾಗಿ ನಡೆಯುತ್ತಿದೆ.

ಮೆತ್ತಿನಮನೆಗೆ ನ್ಯೂ ಲುಕ್‌
ಹೆಂಚಿನ ಮಾಡಿನ ಮೆತ್ತಿನಮನೆಯನ್ನು ಆಧುನೀಕತೆಯ ವಿನ್ಯಾಸಕ್ಕೆ ಅನುಗುಣವಾಗಿ ಬದಲಾವಣೆ ಮಾಡಲು ಮುಂದಾದ ಸಿಂಗಾರಿ ಶೆಟ್ಟಿಯವರ ಮಕ್ಕಳ ಮುತುವರ್ಜಿಯಿಂದ ಹೊಸ ಲುಕ್‌ನಲ್ಲಿ ಮೆತ್ತಿನಮನೆ ಎದ್ದು ನಿಂತಿದೆ. ಇದಕ್ಕೆ ಕುಟುಂಬ ಸದಸ್ಯರು ಸಾಥ್‌ ನೀಡಿದ್ದಾರೆ.

ಈ ಹೊಸ ಮನೆಯ ಗೃಹ ಪ್ರವೇಶ ನ.15 ರಂದು ನಡೆದಿದ್ದು ಈ ದಿನದ ವಿಶೇಷ ಎಂದರೆ ಮೆತ್ತಿನ ಮನೆಯ ಹಿರಿಯಕ್ಕನ ಮರಿ ಮೊಮ್ಮಗ ಸುಧನ್ವ ತೊಟ್ಟಿಲ ಮಗುವಾಗಿ ಹೊಸ ಮನೆಯ ಕಿರಿಯ ಕುಡಿಯಾಗಿ ಪ್ರವೇಶ ಮಾಡಿದ್ದಾನೆ. ನಿರ್ಲಿಪ್ತ ಜೀವನಕ್ಕಾಗಿ ಗಂಡ–ಹೆಂಡತಿ ಒಂದೆ ಮಗು ಸಾಕು ಎನ್ನುವ ಈ ಕಾಲಘಟ್ಟದಲ್ಲಿ 110 ಸದಸ್ಯರ ತುಂಬು ಅವಿಭಕ್ತ ಕುಟುಂಬವಾಗಿರುವ ಮೆತ್ತಿನಮನೆ ಕುಟುಂಬ ಸದಸ್ಯರ ಒಗ್ಗಟ್ಟಿನ ಮಂತ್ರ ಎಲ್ಲರಿಗೂ ಅನುಕರಣೀಯ.

ಸಮಾಜ ನಮ್ಮ ಕುಟುಂಬ ಸದಸ್ಯರಿಗೆ ಒಂದಷ್ಟು ನೀಡಿದೆ. ನಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಸೇವೆಗೆ ಮೀಸಲಿಡುವುದರಿಂದ ಸಮಾಜದ ಋಣ ತೀರಿಸಿದ ಸಂತೃಪ್ತಿ ದೊರಕುತ್ತದೆ.
– ಬಿ.ಎನ್‌.ಶೆಟ್ಟಿ, ಅಧ್ಯಕ್ಷರು ಬಿಎಂವಿಆರ್‌ ಟ್ರಸ್ಟ್‌.

Comments are closed.