ಕರಾವಳಿ

ದೇಹದ ಸಮಗ್ರ ಬೆಳವಣಿಗೆಗೆ ಪುರಾತನ ಆಯುರ್ವೇದ ಆಹಾರ ಪದ್ಧತಿ

Pinterest LinkedIn Tumblr

ಆಯುರ್ವೇದ ಔಷಧ ಪದ್ಧತಿಯನ್ನು ‘ಜೀವನದ ವಿಜ್ಞಾನ’ ಎಂದು ಕರೆಯುತ್ತಾರೆ. ನಮ್ಮ ಬುದ್ಧಿ, ಮನಸ್ಸು, ದೇಹ ಮತ್ತು ಆತ್ಮ ಹೀಗೆ ದೇಹದ ಸಮಗ್ರ ಬೆಳವಣಿಗೆಗೆ ಈ ಪುರಾತನ ಆಯುರ್ವೇದ ಪದ್ಧತಿ ಕೆಲಸ ಮಾಡುತ್ತದೆ. ಸಕಾರಾತ್ಮಕ ಯೋಚನೆಗಳು, ನಿಯಮಿತ ವ್ಯಾಯಾಮ, ಧ್ಯಾನ ಮುಂತಾದ ಅಭ್ಯಾಸಗಳು ನಮ್ಮ ದೇಹವನ್ನು ಸಮತೋಲನದಲ್ಲಿ ಮತ್ತು ಸುಸ್ಥಿಯಲ್ಲಿಡುತ್ತದೆ. ನಮ್ಮ ಆಹಾರ ಪದ್ಧತಿಯೂ ದೇಹಕ್ಕೆ ಬರುವ ಹಲವಾರು ರೋಗಗಳನ್ನು ತಡೆಗಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರದಲ್ಲಿ ‘ಉಷ್ಣ’ ಮತ್ತು ‘ಶೀತ’ ಎರಡು ವಿಧಗಳಿವೆ, ಈ ದ್ವಿಗುಣಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮಕಾರಿ ಬದಲಾವಣೆ ತರುತ್ತದೆ.

‘ಉಷ್ಣ’ ಮತ್ತು ‘ಶೀತ’ ಆಹಾರಗಳು ಎಂದರೇನು?
ಇದನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಮೊದಲನೆಯದಾಗಿ, ಆಹಾರದ ಹೊರಭಾಗದ ತಾಪಮಾನ ಮತ್ತು ಎರಡನೆಯದು, ಆಯುರ್ವೇದದ ಪ್ರಕಾರ ಬಹಳ ಮುಖ್ಯವಾದುದು, ಆಹಾರದ ಒಳಭಾಗದಲ್ಲಿ ನೈಸರ್ಗಿಕವಾಗಿ ಇರುವ ತಾಪಮಾನ.ಇಂತಹ ಆಹಾರಗಳು ನಮ್ಮ ದೇಹ ಪ್ರಕಾರಗಳಾದ ವಾತ, ಪಿತ್ತ, ಕಫದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ.ಹೀಗೆ ಆಹಾರವನನ್ನು ‘ಉಷ್ಣ’ ಅಥವಾ ‘ಶೀತ’ ಎಂದು ವಿಭಾಗಿಸುವುದಕ್ಕೆ ಆಯುರ್ವೇದದಲ್ಲಿ ‘ವೈರಿಯಾ’ ಎಂದು ಕರೆಯುತ್ತಾರೆ. ನಾವು ಸೇವಿಸುವ ಯಾವ ಆಹಾರಗಳು ನಮ್ಮ ದೇಹದ ಒಳಗಡೆ ಉಷ್ಣ, ಶೀತ ವಾಗಿ ಮಾರ್ಪಡುತ್ತದೆ ಮತ್ತು ಇದು ನಮ್ಮ ಚಯಾಪಚಯ ಕ್ರಿಯೆ ಮತ್ತು ಜೀರ್ಣಕ್ರಿಯೆಯ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ಆಯುರ್ವೇದ ತಿಳಿಸಿಕೊಡುತ್ತದೆ.

ಇನ್ನು ಹೊರಭಾಗದಲ್ಲಿ ಬಿಸಿ ಇರುವ ಆಹಾರಗಳು; ಆಗತಾನೇ ಬೇಯಿಸಿದ ಬೇಳೆಸಾರು ‘ಉಷ್ಣ’ ಎಂದೂ ಫ್ರಿಡ್ಜ್ ನಲ್ಲಿರುವ ಐಸ್ ಕ್ರೀಮ್ ‘ಶೀತ’ ವೆಂದೂ ನಾವು ತಪ್ಪು ತಿಳಿದುಕೊಳ್ಳುತ್ತೇವೆ.ಆದರೆ ಆಯುರ್ವೇದದ ಪ್ರಕಾರ ಐಸ್ ಕ್ರೀಮ್ ‘ಉಷ್ಣ’ ಆಹಾರಗಳ ಗುಂಪಿನಲ್ಲಿ ಬರುತ್ತದೆ. ಆಶ್ಚರ್ಯವಲ್ಲವೇ? ಯಾವುದೇ ಆಹಾರದ ಹೊರಭಾಗದ ತಾಪಮಾನಕ್ಕೂ, ಅದರ ಒಳಗಿರುವ ನೈಜ ತಾಪಮಾನಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಯುರ್ವೇದ ಹೇಳುತ್ತದೆ.

ಆಯುರ್ವೇದದ ಪ್ರಕಾರ ಉಷ್ಣ ಆಹಾರಗಳು:
ಹೆಚ್ಚಾಗಿ ಬಳಕೆಯಾಗುವ ಪದಾರ್ಥಗಳು – ಈರುಳ್ಳಿ, ಕಾಳುಮೆಣಸು, ಬೆಳ್ಳುಳ್ಳಿ, ಶುಂಠಿ ಮತ್ತು ಇತರ ಖಾರದಿಂದ ಕೂಡಿದ ಪದಾರ್ಥಗಳು. ಇವುಗಳನ್ನು ಆದಷ್ಟು ಕಡಿಮೆ ಬಳಸಬೇಕೆಂದು ಆಯುರ್ವೇದ ಸಲಹೆ ನೀಡುತ್ತದೆ.
ಇನ್ನು ತರಕಾರಿಯ ದೊಡ್ಡ ಪಟ್ಟಿಯೇ ಇದರಡಿಯಲ್ಲಿ ಬರುತ್ತದೆ. ಮುಖ್ಯವಾಗಿ, ಆಲೂಗಡ್ಡೆ, ಬ್ರೋಕೋಲಿ, ಪಾಲಕ್, ಬೀನ್ಸ್ ಮುಂತಾದವುಗಳು.
ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಉಷ್ಣ ತರಕಾರಿಗಳಾದ ಕ್ಯಾರೆಟ್, ಮೂಲಂಗಿ ಮತ್ತು ಇತರ ಗೆಡ್ಡೆಗಳನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.
ಇನ್ನು ಹಣ್ಣುಗಳಲ್ಲಿ, ಸೇಬು, ಕಿತ್ತಳೆ, ಮಾವು ಮುಂತಾದವು ಈ ಗುಂಪಿನಲ್ಲಿ ಬರುತ್ತದೆ.

ಮಸಾಲೆ ಪದಾರ್ಥಗಳು – ಅಜ್ವೈನ್, ಸಾಸಿವೆ ಮತ್ತು ಇಂಗು ಮುಂತಾದವುಗಳು ಉಷ್ಣ ಗುಂಪಿಗೆ ಸೇರಿದ್ದು, ಇವುಗಳನ್ನು ಶೀತ ನಿವಾರಕವಾಗಿಯೂ ನಾವು ಬಳಸುತ್ತೇವೆ ಮತ್ತು ಇವು ನಮ್ಮ ದೇಹದ ಇಮ್ಯುನಿಟಿಯನ್ನು ಉತ್ತಮಗೊಳಿಸುತ್ತದೆ.

ಸಸ್ಯಗಳು – ತುಳಸಿ, ಒರೆಗಾನೊ ಮತ್ತು ಪುದೀನಾ.

`ಶೀತ’ ಗುಂಪಿಗೆ ಸೇರಿದ ಆಹಾರಗಳು:
ಹಣ್ಣುಗಳು – ಬಾಳೆಹಣ್ಣು, ಸ್ಟ್ರಾಬೆರಿ, ಕಲ್ಲಂಗಡಿ, ಕಿವಿ, ಏಪ್ರಿಕಾಟ್ ಮುಂತಾದವುಗಳು. ಇವುಗಳನ್ನು ಸಾಮಾನ್ಯವಾಗಿ ನಾವು ಬೇಸಿಗೆಕಾಲದಲ್ಲಿ ಇಷ್ಟಪಟ್ಟು ತಿನ್ನುತ್ತೇವೆ.
ಡೈರಿ ಉತ್ಪನ್ನಗಳಾದ – ಹಾಲು, ಮೊಸರು, ಕ್ರಿಮ್ ಮತ್ತು ಚೀಸ್ ಮುಂತಾದವುಗಳು ದೇಹವನ್ನು ತಂಪಾಗಿಡುತ್ತವೆ.
ಎಲ್ಲಾ ಸೋಯಾ ಉತ್ಪನ್ನಗಳು
ಬಿಸಿ ಪಾನೀಯಗಳಾದ – ಗ್ರೀನ್ ಟೀ . ಇವುಗಳು ದೇಹದೊಳಗಿನ ಕಲ್ಮಶಗಳನ್ನು ಹೊರಹಾಕಿ, ದೇಹವನ್ನು ತಂಪಾಗಿಡುತ್ತದೆ.
ತರಕಾರಿಗಳು – ಅಣಬೆ, ಟೊಮ್ಯಾಟೋ, ಸೊಪ್ಪು ಮತ್ತು ಬಿಳಿಬದನೆಕಾಯಿ ಮುಂತಾದವು ಬೇಸಿಗೆಯಲ್ಲಿ ಸುಲಭವಾಗಿ ಜೀರ್ಣವಾಗುತ್ತವೆ.

‘ನಾವು ಸೇವಿಸುವ ಆಹಾರ ನಮ್ಮ ದೇಹ ಪ್ರಕಾರದ ಮೇಲೆ ಬಹುದೊಡ್ಡ ಪರಿಣಾಮ ಬೀರುತ್ತದೆ. ಉಷ್ಣ ದೇಹ ಪ್ರಕೃತಿಯವರು ಉಷ್ಣ ಆಹಾರವನ್ನು ಹೆಚ್ಚಾಗಿ ಸೇವಿಸಿದರೆ ಅವರ ದೇಹ ಇನ್ನಷ್ಟು ಉಷ್ಣತೆ ಉತ್ಪತ್ತಿ ಮಾಡಬಹುದು.ಇದು ದೇಹದ ಉಷ್ಣತೆಯನ್ನು ಹೆಚ್ಚಿಸುವುದಲ್ಲದೆ, ಪಿತ್ತ ದೋಷವನ್ನು ಜಾಸ್ತಿ ಮಾಡುತ್ತದೆ.ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಭೇದಿ, ಚರ್ಮದ ಸಮಸ್ಯೆ ಮತ್ತು ಉರಿ ಗುಳ್ಳೆಯಂತಹ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಇನ್ನು ಶೀತ ದೇಹ ಪ್ರಕೃತಿಯವರು ಹೆಚ್ಚಾಗಿ ಕೋಲ್ಡ್ ಆಹಾರಗಳನ್ನು ಸೇವಿಸುವುದರಿಂದ ಜ್ವರ, ಕೆಮ್ಮು, ನೆಗಡಿ ಸಮಸ್ಯೆಗಳು ಉಂಟಾಗಬಹುದು’ ಎನ್ನುತ್ತಾರೆ ಆಯುರ್ವೇದ ವೈದ್ಯರು.

ನಮ್ಮ ದೇಹ ಪ್ರಕಾರವನ್ನು ಅರಿಯದೇ, ನಾವು ಸೇವಿಸುವ ಆಹಾರಗಳು ನಮ್ಮ ದೇಹದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದೆಂದು ತಿಳಿದುಕೊಳ್ಳದೆ, ನಿರ್ಲಕ್ಷ್ಯ ಮಾಡಿದರೆ, ಇವು ಭವಿಷ್ಯದಲ್ಲಿ ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು’ ಎನ್ನುತ್ತದೆ ಆಯುರ್ವೇದ ವಿಜ್ಞಾನ.

Comments are closed.