ಕರಾವಳಿ

ಕುಂದಾಪುರದಲ್ಲಿ ಪರಿಸರ ಸ್ನೇಹಿ ಗಣಪನ ತಯಾರಿ ಬಲುಜೋರು!

Pinterest LinkedIn Tumblr

ಕುಂದಾಪುರ: ನಾಳೆ ಗಣೇಶ ಚತುರ್ಥಿ. ಎಲ್ಲೆಡೆ ಪ್ರಥಮ ಪೂಜಿತ ಗಣಪನ ಹಬ್ಬದ ಗೌಜಿ ಹೆಚ್ಚುತ್ತಿದೆ. ಪರಿಸರ ಸ್ನೇಹಿ ಗಣಪನ ವಿಗ್ರಹಕ್ಕೆ ಈಗ ತುಂಬಾನೇ ಬೇಡಿಕೆ. ಕಳೆದ ೩೩ ವರ್ಷಗಳಿಂದ ಪರಿಸರ ಸ್ನೇಹಿ ಗಣಪತಿ ವಿಗ್ರಹ ತಯಾರಿಕೆಯಲ್ಲಿ ಕುಂದಾಪುರದ ವಸಂತ್ ಗುಡಿಗಾರ್ ಫೇಮಸ್. ಪರಿಸರ ಸ್ನೇಹಿ ಗಣಪನ ತಯಾರಿ ಕುರಿತಾದ ಸ್ಟೋರಿಯಿದು.

ಕುಂದಾಪುರದಲ್ಲಿ ವಸಂತ್ ಗುಡಿಗಾರ್ ಅವರ ವರ್ಕ್‌ಶಾಪ್‌ನಲ್ಲಿ ಗಣಪತಿ ವಿಗ್ರಹಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್ಯವಾಗುತ್ತಿದೆ. ಕಳೆದ ಮೂವತ್ತಮೂರು ವರ್ಷಗಳಿಂದ ಮಣ್ಣಿನ ಗಣಪತಿಯ ತರಹೇವಾರಿ ವಿಗ್ರಹಗಳನ್ನು ತಾಲೂಕಿನ ಹಲವಾರು ಕಡೆಗಳ ಗಣೇಶೋತ್ಸವಕ್ಕೆ ನಿರ್ಮಿಸಿ ಕೊಡುತ್ತಿರುವವರಲ್ಲಿ ಇವರು ಪ್ರಮುಖರು. ಏಳೆಂಟು ಮಂದಿ ಕೆಲಸಗಾರರನ್ನು ಹೊಂದಿರುವ ಇವರು ಗಣೇಶ ವಿಗ್ರಹ ತಯಾರಿಕೆಯಲ್ಲಿ ಪ್ರವೀಣರು. ತಮ್ಮ ೧೭ ನೇ ವಯಸ್ಸಿನಿಂದಲೇ ಶ್ರದ್ಧೆ ಭಕ್ತಿಯಿಂದ ಈ ಕಲೆಯನ್ನು ಕರಗತವನ್ನಾಗಿಸಿಕೊಂಡ ವಸಂತ ಗುಡಿಗಾರರು ಕುಂದಾಪುರ ಹಳೆ ಬಸ್ಸು ನಿಲ್ದಾಣದ ಕರ್ಣಾಟಕ ಬ್ಯಾಂಕ್ ಸಮೀಪದ ತಮ್ಮ ವರ್ಕ್‌ಶಾಪ್‌ನಲ್ಲಿ ವರ್ಷಂಪ್ರತಿ ೭೫ ಕ್ಕೂ ಹೆಚ್ಚು ವಿಗ್ರಹಗಳನ್ನು ಬೇಡಿಕೆಗನುಸಾರವಾಗಿ ತಯಾರಿಸಿ ಗ್ರಾಹಕರಿಗೆ ನೀಡುತ್ತಿದ್ದಾರೆ.

   

ಹೈದರಬಾದಿಗೂ ಹೋಗುತ್ತಾನೆ ಗಣಪ!
ವರ್ಷಂಪ್ರತಿ ಇವರಿಗೆ ಬರುವ ಮೂರ್ತಿಗಳ ಸಂಖ್ಯೆಯೂ ಜಾಸ್ಥಿಯಾಗುತ್ತಲಿದ್ದು ದೂರದ ಹೈದರಬಾದ್‌ಗೂ ಗಣಪತಿ ವಿಗ್ರಹ ಇಲ್ಲಿಂದ ಹೋಗುತ್ತದೆ. ೧೨ ಇಂಚಿನಿಂದ ಆರಂಭಗೊಂಡು ಐದು ಅಡಿಯ ಗಣೇಶ ಮೂರ್ತಿಗಳನ್ನು ನಿರ್ಮಿಸುವ ಇವರು ಗ್ರಾಹಕರ ಅಭಿರುಚಿಗೆ ಹಾಗೂ ಬೇಡಿಕೆಗನುಸಾರವಾಗಿ ಮೂರ್ತಿ ನಿರ್ಮಿಸುತ್ತಾರೆ. ೫ ಅಡಿಯ ೮ ಮೂರ್ತಿಗಳು ಸೇರಿದಂತೆ ೭೫ಕ್ಕೂ ಅಧಿಕ ಗಣಪನ ಮೂರ್ತಿಗಳು ಈಗ ಸಿದ್ಧಗೊಂಡಿದೆ. ಈ ಬಾರಿ ಕುಂಭಾಸಿ ಹರಿಹರ ದೇವಸ್ಥಾನಕ್ಕೆ ಕಲರ್ ಹಾಕದ ಪರಿಸರ ಸ್ನೇಹಿ ಗಣಪನು ಸಿದ್ದಗೊಂಡಿದೆ.

ರಾತ್ರಿ, ಹಗಲೆನ್ನದೇ ಮೂರ್ತಿ ತಯಾರಿ!
ನಾಗರಪಂಚಮಿಯಂದು ಆನೆಗುಡ್ಡೆ ಗಣಪತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷದ ಚೌತಿ ವಿಗ್ರಹಗಳ ತಯಾರಿಕೆಗೆ ಅಧಿಕೃತವಾಗಿ ತೊಡಗಿಸಿಕೊಳ್ಳುತ್ತಾರೆ. ನಾಗರ ಪಂಚಮಿಯಂದು ಆಗಮಿಸುವ ಗ್ರಾಹಕರು ತೆಂಗಿನ ಕಾಯಿ, ಅಕ್ಕಿ, ಕಾಣಿಕೆ ಹಾಗೂ ಗಣಪತಿ ಪೀಠವನ್ನು ನೀಡಿ ಮೂರ್ತಿ ನಿರ್ಮಿಸಿಕೊಡುವ ಬಗ್ಗೆ ಹೇಳುತ್ತಾರೆ. ಕೊನೆ ಕ್ಷಣದಲ್ಲಿ ಮೂರ್ತಿ ತಯಾರಿಕೆಯ ಬೇಡಿಕೆ ಬರುವ ಕಾರಣ ಕಡಿಮೆ ಅವಧಿಯಲ್ಲಿ ಮೂರ್ತಿಯನ್ನು ನಿರ್ಮಿಸಿ ಗ್ರಾಹಕರಿಗೆ ನೀಡಬೇಕಾದ ಅನಿವಾರ್ತೆಯೂ ಇದ್ದು ರಾತ್ರಿ ಹಗಲು ಕೆಲಸ ಮಾಡಬೇಕಿದೆ. ವಸಂತ ಗುಡಿಗಾರರು ದಶಕಗಳ ಹಿಂದೆ ಕೆಲಸ ಆರಂಭಿಸುವ ಸಮಯದಲ್ಲಿ ಗದ್ದೆ ಮಣ್ಣು ತಂದು ಅದನ್ನು ಪುಡಿ ಮಾಡಿ ಮೂರ್ತಿ ನಿರ್ಮಿಸುತ್ತಿದ್ದರು. ಕ್ರಮೇಣ ಅದು ಬದಲಾಗಿ ಆವೆ ಮಣ್ಣಿನಿಂದ ಮೂರ್ತಿ ನಿರ್ಮಾಣ ಆರಂಭಿಸಿದ್ದು ಅದಕ್ಕೆ ವಾಟರ್ ಬೇಸ್ಡ್ ಕಲರ್ ಹಾಕುವ ಕಾರಣ ನೀರಿನಲ್ಲಿ ವಿಲೀನವಾಗುತ್ತೆ.

ಮಗನೂ ಕೂಡ ಸಾತ್…!
ವಸಂತ ಗುಡಿಗಾರರ ಮಗ ವೈಭವ ಗುಡಿಗಾರ್ ಕೂಡ ಮೂರ್ತಿ ತಯಾರಿಕೆಯಲ್ಲಿ ತಂದೆಗೆ ಸಾತ್ ನೀಡ್ತಾರೆ. ಉಳಿದಂತೆ ಕ್ರಷ್ಣಮೂರ್ತಿ ಕೋಡಿ, ಅಶೋಕ್ ಪೂಜಾರಿ, ವಸಂತ ಕುಮಾರ್ ಬಸ್ರೂರು, ಅಶೋಕ್ ಮೊಗವೀರ ಕುಂದಾಪುರ ಇವರ ತಂಡದಲ್ಲಿದ್ದಾರೆ. ವಿಭಿನ್ನ ವಿನ್ಯಾಸದಲ್ಲಿ ಮೂರ್ತಿ ನಿರ್ಮಿಸಿಕೊಡುವ ಬೇಡಿಕೆ ಬಂದರೂ ಕೂಡ ಸಮಯದ ಅಭಾವ ಒಂದೆಡೆಯಾದರೇ, ದೇವರ ನಿಂಧನೆಯಾಗುವ ಹಿನ್ನೆಲೆ ಸೌಮ್ಯ ಗಣಪತಿಯನ್ನು ಮಾತ್ರ ನಿರ್ಮಿಸುತ್ತಾರೆ. ವಸಂತ್ ಗುಡಿಗಾರ್ ಮಾಡುವ ಸೌಮ್ಯ ಮೂರ್ತಿಗಳು ಗ್ರಾಹಕರಿಗೂ ಅಚ್ಚುಮೆಚ್ಚು.

ಒಟ್ಟಿನಲ್ಲಿ ಬೆಲೆಯೇರಿಕೆ ನಡುವೆಯೂ ಗ್ರಾಹಕರಿಗೆ ಹೊರೆಯಾಗದ ರೀತಿ ವಸಂತ ಗುಡಿಗಾರ್ ಪರಿಸರ ಸ್ನೇಹಿ ಗಣಪನ ತಯಾರಿಸಿ ಕೊಡುತ್ತಿದ್ದಾರೆ. ಕಲೆಗೆ ಬೆಲೆ ಸಿಗಬೇಕು, ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕು ಎನ್ನೋದು ಅವರ ಮಾತುಗಳಾಗಿದೆ.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

Comments are closed.