ಕರಾವಳಿ

ಕಾರ್ಕಳ ಸಂತ ಲಾರೆನ್ಸರ ಕ್ಷೇತ್ರದಲ್ಲಿ ಭಿಕ್ಷುಕರ ಜಾತ್ರೆ; ಹೊಟ್ಟೆ ತುಂಬಾ ಊಟ, ಕೈ ತುಂಬಾ ಹಣ

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಭಿಕ್ಷುಕರಿಗೂ ಒಂದು ಜಾತ್ರೆ ನಡೆಯುತ್ತೆ ಗೊತ್ತಾ? ಇಲ್ಲಿ ಅಮ್ಮಾ ತಾಯೀ ಅಂತ ಅವರೇನು ಅಂಗಲಾಚಬೇಕುಂತಿಲ್ಲ, ಹೊಟ್ಟೆ ತುಂಬಾ ಊಟ..ಕೈ ತುಂಬಾ ಹಣ ಕೊಟ್ಟು ಭಿಕ್ಷುಕರನ್ನು ಆದರಿಸಲಾಗುತ್ತೆ.ಅತ್ತೂರಿನ ಸಂತ ಲಾರೆನ್ಸರ ಪವಾಡ ಕ್ಷೇತ್ರದಲ್ಲಿ ನಡೆಯುವ ಈ ವಿಶಿಷ್ಟ ಪದ್ಧತಿಯ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ.

ಕೆಲವರಿಗೆ ಕಾಲಿಲ್ಲ, ಇನ್ನು ಕೆಲವರಿಗೆ ಏಳೋಕೂ ಆಗಲ್ಲ, ಕಣ್ಣು ಕಾಣದವರು ಅದೆಷ್ಟೋ ಮಂದಿ, ಇನ್ನು ಭಯಾನಕ ರೋಗಗಳಿಂದ ಬಳುತ್ತಿರುವವರೂ ಇಲ್ಲಿದ್ದಾರೆ. ರಾಜ್ಯದ ನಾನಾಭಾಗಗಳಿಂದ ಬಂದ ಮೂರು ಸಾವಿರಕ್ಕೂ ಅಧಿಕ ಭಿಕ್ಷುಕರು ಒಂದೇ ಕಡೆ ಸೇರಿದ್ದಾರೆ ಅಂದ್ರೆ ಆಶ್ಚರ್ಯ ಆಗುತ್ತಲ್ವಾ. ಹೌದು ತನ್ನ ಪವಾಡಗಳ ಮೂಲಕವೇ ಸರ್ವ ಧರ್ಮೀಯ ಭಕ್ತರನ್ನು ತನ್ನತ್ತ ಸೆಳೆದ ಸಂತ ಲಾರೆನ್ಸರ ಚರ್ಚ್ ಇದು.ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ಈ ಪವಾಡ ಕ್ಷೇತ್ರವಿದೆ. ಇಲ್ಲಿನ ವಿಶೇಷ ಅಂದ್ರೆ ಮೂರು ದಿನಗಳ ಕಾಲ ನಡೆಯುವ ಅತ್ತೂರು ಜಾತ್ರೆ. ಹಿಂದೂ ಮತ್ತು ಮುಸ್ಲಿಂ ಧರ್ಮೀಯರೇ ಹೆಚ್ಚಾಗಿ ಭಾಗವಹಿಸುವ ಈ ಜಾತ್ರೆಯಲ್ಲಿ ಈ ಬಾರಿ 12 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದಾರೆ.ನಾಲ್ಕನೇ ದಿನ ನಡೆಯೋದೇ ಈ ಭಿಕ್ಷುಕರ ಜಾತ್ರೆ.

ಸಂತ ಲಾರೆನ್ಸರು ಭಿಕ್ಷುಕರ ಕಷ್ಟಕ್ಕೆ ಸ್ಪಂದಿಸಿದ ಧರ್ಮಗುರು ಅಂತಾನೇ ಪ್ರಸಿದ್ದ. ಅವರ ಸ್ಮರಣೆಯಲ್ಲಿ ಮೂರು ದಿನಗಳ ಅದ್ದೂರಿ ಉತ್ಸವ ನಡೆಸಲಾಗುತ್ತೆ.ಇಲ್ಲಿಗೆ ಬೇಟಿ ನೀಡುವ ಲಕ್ಷಾಂತರ ಭಕ್ತರು ಭಿಕ್ಷುಕರಿಗೆ ಅಂತಾನೆ ಹಣ ತರುತ್ತಾರೆ. ಈ ಹಣ ಸಂಗ್ರಹಿಸಲು ಎರಡು ಕಡೆ ಬೃಹತ್ ಗಾತ್ರದ ಭಿಕ್ಷಕುರ ಪೆಟ್ಟಿಗೆ ಇರಿಸಲಾಗುತ್ತೆ. ಈ ಪೆಟ್ಟಿಗೆಗಳಲ್ಲಿ ಸಂಗ್ರಹವಾದ ಹಣವನ್ನು ಭಿಕ್ಷುಕರ ಅರ್ಹತೆಗೆ ಅನುಸಾರವಾಗಿ ವಿತರಿಸಲಾಗುತ್ತೆ. 300 ರುಪಾಯಿಯಿಂದ ಮೂರು ಸಾವಿರ ರುಪಾಯಿವರೆಗೂ ಭಿಕ್ಷೆ ನೀಡಲಾಗುತ್ತೆ. ಈ ಬಾರಿ ಸುಮಾರು 11 ಲಕ್ಷ ರುಪಾಯಿ ಸಂಗ್ರಹವಾಗಿದ್ದು ಚಿಕ್ಕಾಸೂ ಉಳಿಸದೆ 2000 ಕ್ಕೂ ಅಧಿಕ ಭಿಕ್ಷುಕರಿಗೆ ಹಂಚಲಾಗಿದೆ. ಅದಕ್ಕೂ ಮುನ್ನ ಹೊಟ್ಟೆ ತುಂಬಾ ಊಟ ಬಡಿಸಲಾಗುತ್ತೆ.

ಅಸಹಾಯಕರ ಕಣ್ಣಲ್ಲಿ ಧನ್ಯತಾ ಭಾವ ಮೂಡಿದಾಗಲೇ ಸಂತ ಲಾರೆನ್ಸರ ಸಂದೇಶಗಳಿಗೆ ಅರ್ಥ ಬರುತ್ತೆ ಅನ್ನೋದು ಧರ್ಮಗುರುಗಳ ಅಭಿಪ್ರಾಯ. ಹಾಗಂತಲೇ ಈ ಚರ್ಚಿಗೆ ಬರುವ ಭಕ್ತರು ಭಿಕ್ಷುಕರ ಪೆಟ್ಟಿಗೆಗೆ ಲಕ್ಷಾಂತರ ರುಪಾಯಿ ಸುರಿಯುತ್ತಾರೆ ಮತ್ತು ಈ ರೀತಿಯಲ್ಲಿ ಹಣ ಸದ್ಬಳಕೆಯಾಗುತ್ತೆ.

Comments are closed.