ಕರಾವಳಿ

ಕಂಬಳ ನಿರ್ಬಂಧಕ್ಕೆ ಆಗ್ರಹಿಸಿ ಮೂಡಬಿದ್ರೆಯಲ್ಲಿ ಬೃಹತ್ ಹಕ್ಕೋತ್ತಾಯ ಸಭೆ : ಐದು ಸಾವಿರಕ್ಕೂ ಅಧಿಕ ಮಂದಿಯಿಂದ ಜಾಥ

Pinterest LinkedIn Tumblr

ಮಂಗಳೂರು, ಜನವರಿ.28 : ಕಂಬಳ ನಿರ್ಬಂಧಿಸಿರುವುದನ್ನು ವಿರೋಧಿಸಿ ಹಾಗೂ ಶೀಘ್ರ ಅನುಮತಿ ನೀಡುವಂತೆ ಒತ್ತಾಯಿಸಿ ಮೂಡಬಿದ್ರೆಯ ಕಡಲಕೆರೆಯ ಮೈದಾನದಲ್ಲಿ ಶನಿವಾರ ಬೆಳಗ್ಗೆ ಬೃಹತ್ ಹಕ್ಕೊತ್ತಾಯ ಸಭೆ ನಡೆಯಿತು.

ಕರಾವಳಿಯ ಜಾನಪದ ಕ್ರೀಡೆ ಕಂಬಳ ಪರ ಹೋರಾಟ ಪ್ರಬಲಗೊಳ್ಳುತ್ತಿದ್ದು, ಇಂದು ಮೂಡುಬಿದಿರೆಯಲ್ಲಿ ಕಂಬಳ ನಿಷೇಧದ ವಿರುದ್ಧ ಮೂಡುಬಿದಿರೆ ಕಂಬಳ ಸಮಿತಿಯ ಶಾಸಕ ಕೆ.ಅಭಯಚಂದ್ರ ನೇತೃತ್ವದಲ್ಲಿ ನಡೆದ ಹಕ್ಕೊತ್ತಾಯ ಮೆರವಣಿಗೆ ಹಾಗೂ ಪ್ರತಿಭಟನೆಯಲ್ಲಿ ಭಾರೀ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಪಾಲ್ಗೊಂಡು, ಶಕ್ತಿ ಪ್ರದರ್ಶನ ಮಾಡಿದರು.

ಬೆಳಗ್ಗೆ 9 ಗಂಟೆಗೆ ಮೂಡಬಿದ್ರೆಯ ಸ್ವರಾಜ್ ಮೈದಾನದಿಂದ ಕಡಲಕೆರೆ ಕೋಟಿ ಚೆನ್ನಯ್ಯ ಕಂಬಳ ಕರೆಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಅದರಲ್ಲೂ ಮುಖ್ಯವಾಗಿ ೨೫೦ ಜೋಡಿ ಕೋಣಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಮುಖ್ಯ ಆಕರ್ಷಣೆಯಾಗಿತ್ತು. ಕೋಣಗಳ ಸಮೇತ ಬೀದಿಗಳಿದ ಸಾವಿರಾರು ಸಂಖ್ಯೆಯ ಕಂಬಳ ಪ್ರಿಯರು ಮೂಡಬಿದರೆಯ ಸ್ವರಾಜ್ ಮೈದಾನದಿಂದ ಪ್ರತಿಭಟನೆ ಜಾಥಾ ಪ್ರಾರಂಭಿಸಿದರು. ಈ ಜಾಥಾ ಸ್ವರಾಜ್‌ ಮೈದಾನದಿಂದ ಕಡಲಕೆರೆವರೆಗೆ ಸಾಗಿತು.

ಮೆರವಣಿಗೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ವಿನಯಕುಮಾರ್ ಸೊರಕೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕನ್ನಡ, ತುಳು ಚಿತ್ರರಂಗ ಹಾಗೂ ತುಳು ರಂಗ ಕಲಾವಿದರು ಸೇರಿದಂತೆ ಐದು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದು, ಕಂಬಳ ಪರ ಘೋಷಣೆಗಳನ್ನು ಕೂಗಿದರು. ಚೆಂಡೆ, ವಾದ್ಯಗಳೊಂದಿಗೆ ಆರಂಭಗೊಂಡ ಮೆರವಣಿಗೆಯು ಕಡಲಕೆರೆಯಲ್ಲಿ ಸಮಾಪನಗೊಂಡಿತ್ತು.

ಪ್ರತಿಭಟನಾ ಮೆರವಣೆಗೆಯಲ್ಲಿ ಕಂಬಳದ ಮೇಲಿನ ನಿಷೇಧಕ್ಕೆ ವಿರೋಧ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, ಕಂಬಳ ಆಚರಣೆಗೆ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿದರು.

ಶುಕ್ರವಾರ ಕಂಬಳ ಬೆಂಬಲಿಸಿ ಹಾಗೂ ನಿಶೇಧ ಖಂಡಿಸಿ ಮಂಗಳೂರಿನ ಹಂಪನಕಟ್ಟೆ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ಈ ವೇಳೆ ತುಳು ಚಿತ್ರರಂಗದ ಪ್ರಮುಖರು ಸೇರಿದಂತೆ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.