ಮಂಗಳೂರು: ಈಗಿಡಕ್ಕೆ ಮೈತುಂಬಾ ಮುಳ್ಳು. ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುವ, ಸ್ಪರ್ಶ ತಾಕಿದೊಡನೆ ನಾಚಿಕೆಂಪಾಗಿ ಮುಸುಕೊದ್ದು ಕುಳಿತಂತೆ ವರ್ತಿಸುವ ಸ್ವಭಾವ. ಇದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಟ್ಟಿದರೆ ಮುನಿ ಗಿಡ ಅಳವಡಿಸಿಕೊಂಡಿರುವ ತಂತ್ರ. ಕೈಬೆರಳಿನ ತುದಿತಾಕಿದರೂ ನಿಧಾನವಾಗಿ ಒಂದೊಂದೇ ಎಲೆಗಳನ್ನು ಮಡಚಿಕೊಳ್ಳುತ್ತಾ ಸಂಪೂರ್ಣ ಸಸ್ಯವೇ ನಿರ್ಜೀವವಾಗುವ ಪರಿ ನಿಜಕ್ಕೂ ಅನನ್ಯ. ಈ ವಿಶಿಷ್ಟ ಪ್ರಕ್ರಿಯೆ ಮಕ್ಕಳಿಂದ ಹಿಡಿದು ವಿಜ್ಞಾನಿಗಳಿಗೂ ಕುತೂಹಲ ಕೆರಳಿಸುತ್ತದೆ. ಈ ಗಿಡ ಇಂದಿಗೂ ಪ್ರಕೃತಿಯ ರಹಸ್ಯವಾಗಿಯೇ ಉಳಿದಿದೆ.
ಮುಟ್ಟಿದರೆ ಮುನಿ ಎಂಬುದಕ್ಕೆ ಪರ್ಯಾ ಯವಾಗಿ ಇಂಗ್ಲಿಷ್ ನಲ್ಲಿ “ಟಚ್ ಮಿ ನಾಟ್” ಎಂದು ಕರೆಸಿಕೊಂಡಿದೆ. ಆಡುಭಾಷೆಯಲ್ಲಿ ನಾಚಿಕೆ ಮುಳ್ಳು, ಲಚ್ಚಾವತಿ ಎಂದೆಲ್ಲಾ ಕರೆಸಿಕೊಳ್ಳುವ ಈ ಸಸ್ಯ ತೋಟ, ಗದ್ದೆಗಳಲ್ಲಿ ಕಳೆಯಂತೆ ಬೆಳೆಯುತ್ತದೆ. ಸಸ್ಯಶಾಸ್ತ್ರದಲ್ಲಿ ಇದಕ್ಕೆ ಮಿಮೊಸಾ ಪುಡಿಕಾ ಎಂದು ವೈಜ್ಞಾನಿಕವಾದ ಹೆಸರಿದೆ. ಸಂಸ್ಕೃತದಲ್ಲಿ ಅಂಜಿಲಿ ಕಾರಿಕೆ ಎಂದು ಹೆಸರು. ನೋಟದಲ್ಲೇ ಮನಸೂರೆಗೊಳ್ಳಯವ ಈ ಗಿಡ ಜಗತ್ತಿನೆಲ್ಲೆಡೆ ಕಂಡುಬರುತ್ತದೆ. ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ.
ಆತ್ಮ ರಕ್ಷಣಾ ತಂತ್ರ:
ಈ ಸಸ್ಯ ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಗ ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುರಲು ಆರಂಭಿಸುತ್ತದೆ. ಇಂದಕ್ಕೊಂದು ತಗಲುತ್ತಾ ಕ್ಷಣಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ್ದ ಈ ಸಸ್ಯ ಸಮೂಹವೇ ಮುದುಡಿಕೊಳುತ್ತದೆ. ಇದರಿಂದ ಮೇಯಲು ಬಂದ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳು ಇದ್ದಂತೆ ಭಾಸವಾಗುತ್ತವೆ. ಹೀಗಾಗಿ ಈ ಹೊಲವನ್ನು ಅವು ತ್ಯಜಿಸಿ ಬೇರೆಡೆಗೆ ಹೋಗುತ್ತವೆ. ಬಳಿಕ ಕೆಲವು ನಿಮಿಷದಲ್ಲೇ ಅರಳಿನಿಂತು ಹಸಿರಿನಿಂದ ಕಂಗೊಳಿಸುತ್ತವೆ.
ಬಾಡುವುದಕ್ಕೆ ಏನು ಕಾರಣ?
ಮುಟ್ಟಿದರೆ ಮುನಿಯಲ್ಲಿ ಎರಡು ವಿಧಗಳಿದ್ದು, ಒಂದು ಹೊರ ಮುದುಡುವಿಕೆ ಹಾಗೂ ಒಳ ಮುದುಡುವಿಕೆಹೊಂದಿದ ಸಸ್ಯಗಳಿವೆ. ಗಿಡ ಬಾಡುವುದಕ್ಕೆ ಇದರ ನಾಚಿಕೆ ಸ್ವಭಾವ ಕಾರಣವಲ್ಲ. ಬದಲಾಗಿ ಈ ಗಿಡದ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯ ಶಾಸ್ತ್ರಜ್ಞರು ಇದೊಂದು ರಕ್ಷಣಾ ತಂತ್ರ ಎಂದು ಕರೆದಿದ್ದಾರೆ. ಹುಳಹಪ್ಪಟೆಗಳಿಂದ ಹಿಡಿದು ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗನ್ನು ಮಡಚಿಕೊಳ್ಳುತ್ತದೆ. ಇದರಿಂದ ಗಿಡದ ಮುಳ್ಳುಗಳು ಪ್ರಾಣಿಗಳಿಗೆ ಚುಚ್ಚಿಕೊಳ್ಳುತ್ತವೆ.
ಬೇರಿನಿಂದ ಬೆಳೆಯುತ್ತದೆ:
ಇದೊಂದು ದೀರ್ಘಾವಧಿಯ ಕಳೆಗಿಡ. ಗಿಡವು ತಿಳಿ ನೇರಳೆಬಣ್ಣದ ಆಕರ್ಶಕ ಹೂವು ಬಿಡುತ್ತದೆ. ಒಂದು ಗಿಡದಿಂದ ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟು ಬೀಜ ಉತ್ಪತ್ತಿಯಾಗುತ್ತದೆ. ಆದರೆ, ಬೀಜವಿಲ್ಲದಿದ್ದರೂ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳವಣಿಗೆ ಹೊಂದುತ್ತದೆ. ಬೇರುಗಳ ಸಹಾಹದಿಂದ ಅಭಿವೃದ್ಧಿ ಹೊಂದುವುದರಿಂದ ಮೇಲಿನ ಭಾಗವನ್ನು ಕತ್ತರಿಸದರೂ ಮತ್ತೆ ಬೆಳೆದುನಿಲ್ಲುತ್ತದೆ. ಕಳೆನಾಶಕಗಳನ್ನು ಸಿಂಪಡಿಸಿದರೂ ನಾಶವಾಗುವುದಿಲ್ಲ.
ಮುಟ್ಟಿದರೆ ಮುನಿಗಿಡದ ಎಲೆ, ಹೂವು ಕಾಂಡ ಹಾಗೂ ಬೇರು ಎಲ್ಲವೂ ಔಷಧಿಯ ಗುಣ ಹೊಂದಿದೆ. ಸಾಮಾನ್ಯವಾಗಿ ಶೀತವಾದರೆ ಇದು ಉತ್ತಮ ಮದ್ದು. ಗಾಯವಾಗಿ ರಕ್ತಸ್ರಾವವಾಗಿದ್ದರೆ ಇದರ ಎಲೆಗಳನ್ನು ಜಜ್ಜಿ ಹಚ್ಚಿದರೆ ರಕ್ತಸೋರುವುದು ಕೂಡಲೇ ನಿಲ್ಲುತ್ತದೆ. ಮೂಲವ್ಯಾಧಿ, ಕಾಲರಾ ಮತ್ತು ಸಾಮಾನ್ಯ ವಾಂತಿಭೇದಿಗೂ ಮುಟ್ಟಿದರೆ ಮುನಿಗಿಡ ಉತ್ತಮ ಔಷಧಿ. ಆದರೆ ಇದರಿಂದ ಅಪಾಯವೂ ಇದೆ. ಮುಳ್ಳಿನಲ್ಲಿ ನಂಜಿನ ಅಂಶಹೆಚ್ಚಾಗಿರುವುದರಿಂದ ಮಕ್ಕಳಿಗೆ ಚುಚ್ಚಿದರೆ ಅಪಾಯವಾಗುವ ಸಂಭವವಿರುತ್ತದೆ.
ಔಷಧಿಯ ಗುಣ:
* ಮುಟ್ಟಿದರೆ ಮುನಿ ಸಸ್ಯದ ಎಲ್ಲ ಭಾಗವೂ ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು. ಗಂಟಲು ಬಾವು ಮತ್ತು ಇತರೆ ಬಾವುಗಳಿಂದ ತೊಂದರೆ ಅನುಭವಿಸುತ್ತಿರುವವರು ಇದರ ಕಾಂಡ, ಎಲೆಯನ್ನು ಚೆನ್ನಾಗಿ ಅರೆದು ಬಾವು ಆಗಿರುವ ಜಾಗದಲ್ಲಿ ಪಟ್ಟು ಹಾಕಬೇಕು.
* ಇದರಿಂದ ನೋವು ಮತ್ತು ಬಾವಿನಿಂದಾದ ಊತದ ಉಪಶಮನ ಸಾಧ್ಯವಾಗುತ್ತದೆ. ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಕುಡಿಸುವುದು ಮಂಡಿನೋವು, ಮಂಡಿ ಊತ, ಮಲಬದ್ಧತೆ, ಮೂತ್ರಪಿಂಡ ಹಾಗೂ ಲಿವರ್‌ನ ತೊಂದರೆಗೆ ಉತ್ತಮ ಔಷಧ.
* ಸಾಮಾನ್ಯ ಶೀತ ಆದರೆ ಇದು ಒಳ್ಳೆಯ ಮದ್ದು. ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ಇದರ ಎಲೆಯನ್ನು ಜಜ್ಜಿ ರಸ ಹಚ್ಚಿದರೆ ರಕ್ತ ಸೋರುವುದು ನಿಲ್ಲುತ್ತದೆ. ಗಾಯ ಬೇಗನೆ ವಾಸಿಯಾಗುತ್ತದೆ. ಮೂಲವ್ಯಾಧಿ, ಕಾಲರಾ ಮತ್ತು ಸಾಮಾನ್ಯ ವಾಂತಿಭೇದಿಗೂ ಉತ್ತಮ ಔಷಧಿ. ಚರ್ಮ ವ್ಯಾಧಿಯನ್ನೂ ಕಡಿಮೆ ಮಾಡುತ್ತದೆ. ಕೆಲವೊಂದು ಸ್ತ್ರೀರೋಗಕ್ಕೂ ಉತ್ತಮ ಮದ್ದು. ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.
* ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡವನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು.
* ಬಾಣಂತಿಯರು ನಾಚಿಕೆ ಮುಳ್ಳಿನ ಸೊಪ್ಪಿನ ರಸವನ್ನು ಕೈಗೆ ಲೇಪಿಸಿಕೊಂಡು ಪ್ರತಿನಿತ್ಯ ಹೊಟ್ಟೆಯ ಮೇಲೆ ಲೇಪಿಸುತ್ತಿದ್ದರೆ, ದಪ್ಪಗಿರುವ ಹೊಟ್ಟೆ ಕರಗುತ್ತಾ ಬರುತ್ತದೆ..
ನಿಮಗೆ ಈ ಲೇಖನ ಇಷ್ಟವಾದರೇ ಇದನ್ನು ಇತರಿಗೆ ಶೇರ್ ಮಾಡಿ ಅವರಿಗೂ ಇದರ ಉಪಯೋಗವನ್ನು ಪಡೆಯುವಂತೆ ಸಹಕರಿಸಿ.