ಕರಾವಳಿ

ಚೂರಿ ಇರಿತ ಖಂಡಿಸಿ ಪ್ರತಿಭಟನೆ : ಮಂಜನಾಡಿ, ಮೊಂಟೆಪದವು ಸಂಪೂರ್ಣ ಬಂದ್ ; ವಾಹನ ಸಂಚಾರಕ್ಕೂ ತಡೆ

Pinterest LinkedIn Tumblr

manjanadi_bund_1

ಮಂಗಳೂರು, ನ.15: ಉಳ್ಳಾಲ ಹಾಗೂ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚೂರಿ ಇರಿತದಂತಹ ದುಷ್ಕೃತ್ಯವನ್ನು ಖಂಡಿಸಿ ಮಂಜನಾಡಿ, ಮೊಂಟೆಪದವು ಪರಿಸರದಲ್ಲಿ ಇಂದು ಬಂದ್ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಮದ್ರಾಸಗೆ ತೆರಳುತ್ತಿದ್ದ 11 ರ ಹರೆಯದ ಬಾಲಕ ರಾಝಿಕ್ ಎಂಬಾತನಿಗೆ ದುಷ್ಕರ್ಮಿಗಳು ಚೂರಿ ಇರಿದ ಘಟನೆಯನ್ನು ಖಂಡಿಸಿ ಮಂಜನಾಡಿ ಹಾಗೂ ಮೋಂಟುಗೋಳಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ನಡೆಸಿ ಆರೋಪಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.

ಇಂದು ಬೆಳಗ್ಗಿನಿಂದಲೇ ರಸ್ತೆಗಳಲ್ಲಿ ನಿಂತ ಗ್ರಾಮಸ್ಥರು ಬಾಲಕನಿಗೆ ಇರಿದ ದುಷ್ಕರ್ಮಿಗಳ ಕೃತ್ಯವನ್ನು ಕಟುವಾಗಿ ಖಂಡಿಸಿದ್ದಾರೆ. ಮಂಜನಾಡಿ ಮತ್ತು ಮೋಂಟುಗೋಳಿ ಜಂಕ್ಷನ್ ರಸ್ತೆಗಳಲ್ಲಿ ಕಲ್ಲುಗಳನ್ನು ಅಡ್ಡವಾಗಿಟ್ಟು ವಾಹನ ಸಂಚಾರ ಸಂಪೂರ್ಣ ಬಂದ್ ನಡೆಸಿದ್ದಾರೆ. ಇದರಿಂದ ಮುಡಿಪು ಮಂಜನಾಡಿ ಮಾರ್ಗವಾಗಿ ತೊಕ್ಕೊಟ್ಟು ತಲುಪುವ ವಾಹನ ಸವಾರರಿಗೆ ಅಡ್ಡಿಯುಂಟಾಯಿತು. ಬಸ್ಸುಗಳು ಮುಡಿಪು ಕೊಣಾಜೆ ಮಾರ್ಗವಾಗಿ ತೊಕ್ಕೊಟ್ಟು ತಲುಪಿತು.

ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮಂಜನಾಡಿ, ಮೊಂಟೆಪದವು, ಕಲ್ಕಟ್ಟ ಪರಿಸರದಲ್ಲಿ ಸಾರ್ವಜನಿಕರು ಸ್ವಯಂಘೋಷಿತ ಬಂದ್ ಕೈಗೊಂಡ ಹಿನ್ನೆಲೆಯಲ್ಲಿ ಪರಿಸರದಲ್ಲಿ ಬಸ್ ಸಂಚಾರ ಮೊಟಕುಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿವೆ. ಮಂಜನಾಡಿ ಗ್ರಾಪಂ ಕಚೇರಿಯನ್ನು ತೆರೆಯಲು ಸಾರ್ವಜನಿಕರು ಅವಕಾಶ ನೀಡದ ಕಾರಣ ಪಂಚಾಯತ್ ಕಚೇರಿಯೂ ಮುಚ್ಚಲ್ಪಟ್ಟಿದೆ.

ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿಕೊಂಡರೂ ಪ್ರತಿಭಟನಾಕಾರರು ಒಪ್ಪದೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಿಲ್ಲ.

ಕಳೆದೆರಡು ದಿನಗಳಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಯ ಮಂಜನಾಡಿಯಲ್ಲಿ ಇಬ್ಬರು ಯುವಕರ ಮೇಲೆ ಚೂರಿ ಇರಿತ ನಡೆದಿದ್ದರೆ, ಡಿ.ಜಿ.ಕಟ್ಟೆಯ ಜಲ್ಲಿಕ್ರಾಸ್ ಎಂಬಲ್ಲಿ ಮದ್ರಸ ವಿದ್ಯಾರ್ಥಿಯೊಬ್ಬನ ಮೇಲೆ ಚೂರಿಯಿಂದ ದುಷ್ಕರ್ಮಿಗಳು ಚೂರಿಯಿಂದ ಗಾಯಗೊಳಿಸಿದ್ದರು. ಈ ಕೃತ್ಯ ಎಸಗಿರುವ ದುಷ್ಕರ್ಮಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಈ ಬಂದ್ ನಡೆಸಲಾಗುತ್ತಿದೆ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

ಮಂಜನಾಡಿ ಪಂಚಾಯತ್ ಕಚೇರಿ ಹಾಗೂ ನೋಟು ಬದಲಾವಣೆ ಪ್ರಕ್ರಿಯೆ ಕೈಗೊಂಡಿದ್ದ ಸೇವಾ ಸಹಕಾರಿ ಬ್ಯಾಂಕನ್ನು ಮುಚ್ಚಿದ್ದರಿಂದಾಗಿ ಸಾರ್ವಜನಿಕರಿಗೆ ತೀರಾ ಅಡಚಣೆಯುಂಟಾಯಿತು. ಬಾಲಕ ಕಲಿಯುತ್ತಿದ್ದ ಶಾಲೆಗೂ ರಜೆ ಘೋಷಿಸಲಾಗಿದೆ. ಸಂಜೆವರೆಗೂ ಬಸ್ ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Comments are closed.