ಕರಾವಳಿ

200 ವರ್ಷಗಳ ಇತಿಹಾಸವಿರುವ ಮೊಳಹಳ್ಳಿ ಕಂಬಳೋತ್ಸವ ಸಂಪನ್ನ; ಮಳೆಯ ನಡುವೆಯೂ ಸಾವಿರಾರು ಮಂದಿ ಆಗಮನ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಸುಮಾರು 200 ವರ್ಷಗಳ ಇತಿಹಾಸವಿರುವ ಮೊಳಹಳ್ಳಿ ಒಂಬತ್ತು ಮನೆಯವರು ಹಾಗೂ ಗ್ರಾಮಸ್ಥರು ನಡೆಸುವ ಪ್ರಸಿದ್ಧ ‘ಮೊಳಹಳ್ಳಿ ಕಂಬಳ ಮಹೋತ್ಸವ‌’ ಸೋಮವಾರ ಹೊನಲು-ಬೆಳಕಿನಲ್ಲಿ ಸಂಪನ್ನಗೊಂಡಿತು.

ಅದ್ದೂರಿ ಕಂಬಳೋತ್ಸವ…
ಸುಮಾರು 200 ವರ್ಷಗಳಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕುಂದಾಪುರ ತಾಲೂಕಿನ ಮೊಳಹಳ್ಳಿ ಕಂಬಳ ಕೊರೋನಾ ಹಿನ್ನೆಲೆ ಸ್ಥಗಿತಗೊಂಡಿದ್ದು ಈ ಬಾರಿ ವಿಜೃಂಭಣೆಯಿಂದ ನಡೆಯಿತು. ಸುಮಾರು 5 ಎಕರೆ ವಿಸ್ತೀರ್ಣ ಹೊಂದಿರುವ ಕಂಬಳಗದ್ದೆ ಇದಾಗಿದ್ದು ಈ ಬಾರಿ ಮಳೆಯ ನಡುವೆಯೇ ಕಂಬಳ ವೈಭವೋಪೇತವಾಗಿ ಜರುಗಿತು. ಕಂಬಳದ ಉತ್ಸವ ಸಮಿತಿಯ ನೇತೃತ್ವದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಮಳೆಯ ನಡುವೆಯೂ ಕಂಬಳ ವೀಕ್ಷಣೆಗಾಗಿ ಸಾವಿರಾರು‌ ಮಂದಿ ಆಗಮಿಸಿ ಈ ಅದ್ದೂರಿ‌ ಕಂಬಳವನ್ನು‌ ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಒಂಬತ್ತು ಮನೆಯ ಪ್ರಮುಖರಾದ ನಾರಾಯಣ ಶೆಟ್ಟಿ, ವಿಜಯಾನಂದ ಶೆಟ್ಟಿ, ಮಹೇಶ್ ಕುಮಾರ್ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಾಜಿ ತಾಪಂ ಸದಸ್ಯ ಪ್ರದೀಪ್ ಕುಮಾರ್, ಮೊಳಹಳ್ಳಿ ಗ್ರಾ‌ಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಸದಸ್ಯ ಮನೋಜ್ ಕುಮಾರ್ ಶೆಟ್ಟಿ, ಬೈಂದೂರು ಕಂಬಳ ಸಮಿತಿಯ ಅಧ್ಯಕ್ಷ ವೆಂಕಟ ಪೂಜಾರಿ, ಪಿಡಬ್ಲ್ಯೂಡಿ ಗುತ್ತಿಗೆದಾರ ಚಂದ್ರಶೇಖರ್ ಶೆಟ್ಟಿ ಮೊಳಹಳ್ಳಿ ಮೊದಲಾದವರಿದ್ದರು.

ಮೊಳಹಳ್ಳಿ ಕಂಬಳದ ಇತಿಹಾಸ…
ಮೊಳಹಳ್ಳಿ ಕಂಬಳ ಮಹೋತ್ಸವ ಪಾರಂಪರಿಕವಾಗಿ ನಡೆಯುತ್ತಿದ್ದು, ಮೊಳಹಳ್ಳಿ ಒಂಬತ್ತು ಮನೆಯವರ ಮುಂದಾಳತ್ವದಲ್ಲಿ ನಡೆಯುತ್ತಿತ್ತು. ಇಲ್ಲಿನ ಹಿರಿಯ ಪಟೇಲರ ಮನೆಯವರು ಪರಂಪರಾಗತವಾಗಿ ವರ್ಷಂಪ್ರತಿ ಡಿಸೆಂಬರ್ ಮಾಸದಲ್ಲಿ ಕಂಬಳ ನಡೆಸಿಕೊಂಡು ಬಂದಿದ್ದಾರೆ. ಕಂಬಳ ಮಹೋತ್ಸವಕ್ಕೆ ಕುಟುಂಬದ ಪರಿವಾರದ ನಿಗದಿಯಂತೆ ಜಾಗವನ್ನು ಕೂಡ ಮೀಸಲಿಡಲಾಗುತ್ತದೆ. ಕಂಬಳದ ದಿನ ಪಟೇಲರ ಮನೆಯಲ್ಲಿರುವ ದೇವಿಯ ಸ್ಥಾನ, ಸ್ವಾಮಿ ಮನೆ, ನಾಗದೇವತೆ, ಉಮಾಮಹೇಶ್ವರಿ ದೇವಸ್ಥಾನ, ಮೊಳಹಳ್ಳಿ ಶಿವರಾಯ, ಜಪ್ತಿಯ‌ಲ್ಲಿರುವ ಕನ್ನಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ನಂದಿಕೇಶ್ವರ ಸನ್ನಿಧಾನದಲ್ಲಿ ಕಟ್ಟುಕಟ್ಟಳೆ ಪೂಜಾ ಸೇವೆ ನಡೆಸಲಾಗುತ್ತದೆ. ಪಟೇಲರ ಮನೆಯವರು ಸ್ವಾಮೀ ಮನೆಯ ಪ್ರಸಾದ ಗದ್ದೆಗೆ ಹಾಕುವ ಮೂಲಕ ಕಂಬಳಕ್ಕೆ ಚಾಲನೆ ಸಿಕ್ಕಿತು. ಚೈತ್ರಾ ವಿವೇಕ್ ಅವರ ಕೋಣಗಳು ಆರಂಭಿಕವಾಗಿ ಉದ್ಘಾಟನಾ ಕೋಣವಾಗಿ ಗದ್ದೆಯಲ್ಲಿ ಓಡಿದವು.

ಹಗ್ಗ ಮತ್ತು ಹಲಗೆ ವಿಭಾಗದಲ್ಲಿ ಕಿರಿಯ ಹಾಗೂ ಹಿರಿಯ ಎಂದು ಸ್ಪರ್ಧೆಗಳ ಏರ್ಪಡಿಸಲಾಗಿದ್ದು ಇದರಲ್ಲಿ ಪ್ರಥಮ ಮತ್ತು ದ್ವಿತೀಯ ವಿಭಾಗದಲ್ಲಿ ಆಯ್ಕೆ ಮಾಡಲಾಗಿದ್ದು 40 ಕ್ಕೂ ಅಧಿಕ ಜೊತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

 

 

Comments are closed.