ಕರಾವಳಿ

ಕಾರ್ಕಳದ ಮುನಿಯಾಲು ‘ಗೋಧಾಮ’ದಲ್ಲಿ ಸಂಭ್ರಮದ ಗೋ ಪೂಜೆ | ಗೋಧಾಮದ ಮೂಲಕ ಲೋಕಕಲ್ಯಾಣ: ಚಾರುಕೀರ್ತಿ ಶ್ರೀ ಅಭಿಮತ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಬದುಕಿನಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಸಮಯವನ್ನು ಸತ್ಕಾರ್ಯಕ್ಕೆ ಬಳಸಿಕೊಳ್ಳುವ ತಪಸ್ಸಿನ ಚಿಂತನೆ ಜೀವನದ ಮೂಲ ಉದ್ದೇಶ. ಕೃಷಿ ಪಾಲನೆಯ ಬದುಕು ಸತ್ಯಂ, ಶಿವಂ, ಸುದರಂ ಎಂಬ ನೆಲೆಗಟ್ಟಿನ ಮೇಲೆ ನಿಂತಿದೆ. ಗೋವಿನ ಎಲ್ಲಾ ಉತ್ಪನ್ನಗಳು ಕೂಡ ಸಂಪತ್ತಾಗಿದ್ದು, ಎಲ್ಲಾ ರೀತಿಯ ಔಷಧಿಗಳು ಸಿಗುತ್ತಿದೆ. ಗೋಧಾಮದ ಮೂಲಕ ಲೋಕಕಲ್ಯಾಣ ನಡೆಯಲಿ ಎಂದು ಮೂಡಬಿದ್ರೆ ಸ್ವಸ್ತಿಶ್ರೀ ಭಟ್ಟಾರಕ ನಗರದ ಶ್ರೀ ದಿಗಂಬರ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡೀತಾಚಾರ್ಯ ಮಹಾಸ್ವಾಮೀಗಳು ಹೇಳಿದರು.

ಅವರು ನ.5 ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಮುನಿಯಾಲಿನಲ್ಲಿರುವ ಸಂಜೀವಿನಿ ಫಾರ್ಮ್ ಮತ್ತು ಡೈರಿ ಟ್ರಸ್ಟ್ ವತಿಯಿಂದ ‘ಗೋ ಧಾಮ’ದಲ್ಲಿ ದೀಪಾವಳಿ ನಿಮಿತ್ತ ಹಮ್ಮಿಕೊಂಡ ಗೋ‌ಪೂಜೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಕಾರ್ಕಳದ ಉಪನ್ಯಾಸಕಿ ಅಕ್ಷಯಾ ಗೋಖಲೆ ಗೋಸ್ಮರಣೆ ಮಾತನಾಡಿ, ಗೋವಿನ ಬಗೆಗಿನ ವಿಜ್ಞಾನದ ಸಂಗತಿ ತಿಳಿದಿದ್ದರಿಂದ ಹಿಂದಿನ ಕಾಲದಲ್ಲಿ ಮನೆಯಲ್ಲಿನ ತಾಯಿ ಮಕ್ಕಳಿಗೆ ಗೋವಿನ ಮಹತ್ವವನ್ನು ತಿಳಿಯಪಡಿಸುತ್ತಿದ್ದರು. ಸಗಣಿ ಎನ್ನುವುದು ಉತ್ತಮ ವೈದ್ಯ, ಗೋ ಮೂತ್ರ ಅದ್ಭುತ ಔಷಧಿ. ಪಾಶ್ಚಿಮಾತ್ಯರು ಗೋವು ಹಾಗೂ ಅದರ ಉತ್ಪನ್ನಗಳ ಉಪಯೋಗ ತಿಳಿದಿದ್ದು ನಾವು ಗೋವನ್ನು ನಡೆದಾಡುವ ಔಷಧಾಲಯ ಎಂಬುದನ್ನು ಅರಿಯಬೇಕು. ನಮ್ಮ ಪೂರ್ವಜರು ಗೋವುಗಳ ಬಗ್ಗೆ ಅರಿತು ಬದುಕಿದ್ದರಿಂದಲೇ ದೀರ್ಘಾಯುಷಿಗಳಾಗಿದ್ದರು. ಒಬ್ಬ ಮನುಷ್ಯನ ಒಳಗಿನ ಮದ, ಮತ್ಸರ ಅಳಿಸುವ ತಾಕತ್ತು ಗೋಮಾತೆಗಿದೆ. ನಮಗಾಗಿ ಸರ್ವಸ್ವ ನೀಡುವ ಗೋ ರಕ್ಷಣೆ ಕಾರ್ಯಕ್ಕೆ ಕಠಿಬದ್ಧರಾಗಬೇಕು. ದೇಶವನ್ನು ಹಸುವಿನ ಮೂಲಕ ಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕು. ಆತ್ಮ ನಿರ್ಭರ ಪರಿಕಲ್ಪನೆ ಹಸುವಿನ ಮೂಲಕ ಕಟ್ಟಿಕೊಂಡು ಸ್ವಸ್ಥ ಭಾರತ ನಿರ್ಮಿಸಬೇಕು ಎಂದ ಅವರು ಗೋ ಶಾಲೆ ಹೇಗೆ ಇನ್ನೊಬ್ಬರಿಗೆ ಮಾದರಿಯಾಗಬೇಕು ಎನ್ನುವುದು ಮುನಿಯಾಲು ಸಂಜೀವಿನಿ ಫಾರ್ಮ್ ಗೋಧಾಮದಲ್ಲಿದೆ ಎಂದರು.

ಗೋಧಾಮ, ಸಂಜೀವಿನಿ ಫಾರ್ಮ್, ಡೈರಿಯ ಮ್ಯಾನೇಜಿಂಗ್ ಟ್ರಸ್ಟಿ ಜಿ. ರಾಮಕೃಷ್ಣ ಆಚಾರ್ ಮಾತನಾಡಿ, ವ್ಯವಸ್ಥೆಯಡಿಯಲ್ಲಿ ನೈಜ ಗೋ ಪ್ರೇಮಿಗಳು ಸಮಸ್ಯೆ ಅನುಭವಿಸುವಂತಾಗುತ್ತಿದ್ದು‌ ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪಟ್ಟಣದಿಂದ ಹಳ್ಳಿಯೆಡೆಗೆ ಜನರು ಬರಬೇಕು ಎನ್ನುವ ಕಲ್ಪನೆಯಡಿಯಲ್ಲಿ ಹಳ್ಳಿಯಲ್ಲೇ ಸ್ವಾವಲಂಬಿಯಾಗಿ ಉದ್ಯಮ ನಡೆಸಲು ಕೃಷಿ, ಹೈನುಗಾರಿಕೆ ಮೂಲಕ ಸಾಧ್ಯವಿದೆ. ಮುಂದಿನ ದಿನದಲ್ಲಿ ನಮ್ಮ ದೇಶವನ್ನು ರೈತರು ಆಳುತ್ತಾರೆ ಎಂದರು.

ಪಾಂಡೇಶ್ವರ ಯೋಗ ಗುರುಕುಲದ ಡಾ. ವಿಜಯ ಮಂಜರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕಾರ್ಕಳ ವೃತ್ತನಿರೀಕ್ಷಕ ಸಂಪತ್ ಕುಮಾರ್ ಇದ್ದರು.

ಗೋಧಾಮ, ಸಂಜೀವಿನಿ ಫಾರ್ಮ್, ಡೈರಿಯ ಟ್ರಸ್ಟಿಗಳಾದ ಸವಿತಾ ಆರ್. ಆಚಾರ್ ಸ್ವಾಗತಿಸಿ, ಡಾ. ಜಯಪ್ರಕಾಶ್ ಮಾವಿನಕುಳಿ ಕಾರ್ಯಕ್ರಮ ನಿರ್ವಹಿಸಿದರು‌. ಜಾಗೃತಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಯೋಗಧಾಮದಲ್ಲಿನ ದೇಸಿ ತಳಿಯ ಗೋವುಗಳಿಗೆ ಹುಲ್ಲು, ಸಿಹಿ ತಿನ್ನಿಸಿ, ಆರತಿ ಮಾಡಿ‌ ಸಾಮೂಹಿಕವಾಗಿ ಗೋ ಪೂಜೆಯನ್ನು ವಿಶಿಷ್ಟವಾಗಿ ನೆರವೇರಿಸಲಾಯಿತು.

Comments are closed.