ಕರಾವಳಿ

ಅಕ್ರಮ ಕಟ್ಟಡ ತೆರವಿಗೆ ಹಿಂಜಾವೇ ಆಗ್ರಹ: ಗಂಗೊಳ್ಳಿ ಗ್ರಾ.ಪಂ ಮುತ್ತಿಗೆ, ಪ್ರತಿಭಟನೆ (Video)

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಅಕ್ರಮ ಕಟ್ಟಡ ತೆರವಿಗಾಗಿ ಆಗ್ರಹಿಸಿ ಗ್ರಾಮಪಂಚಾಯತ್ ಎದುರು ಹಿಂದೂ ಜಾಗರಣ ವೇದಿಕೆ ಗಂಗೊಳ್ಳಿ ಘಟಕದಿಂದ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.

ಗಂಗೊಳ್ಳಿ ಗ್ರಾಮಪಂಚಾಯತ್ ಹಿಂದೂ ವಿರೋಧಿ ಆಡಳಿತ ಬದಲಿಸಲು ಪ್ರತಿಭಟನಾಕಾರರು ಆಗ್ರಹಿಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಹಿಂದೂ‌ ಕಾರ್ಯಕರ್ತರು ಗಂಗೊಳ್ಳಿ ಪಂಚಾಯತ್ ಆಡಳಿತದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿ ಧಿಕ್ಕಾರ ಕೂಗಿ ಪ್ರತಿಭಟಿಸಿದರು‌. ಪ್ರತಿಭಟನೆ ಆರಂಭದಲ್ಲಿ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಬರುವ ತನಕವೂ ಪ್ರತಿಭಟನೆ ಕೈಬಿಡಲ್ಲ ಎಂದು ಪಟ್ಟು ಹಿಡಿದು ಪಂಚಾಯತ್ ಎದುರೇ ಧರಣಿ ಕುಳಿತರು‌ ಮಾತ್ರವಲ್ಲ ಸೂಕ್ತ ಕ್ರಮಕೈಗೊಳ್ಳದಿದ್ದರೆ ಪಂಚಾಯತಿಗೆ ಮುತ್ತಿಗೆ ಹಾಕಿ ಗ್ರಾ.ಪಂ ಕಚೇರಿಗೆ ಬೀಗಜಡಿಯಲು ಪ್ರತಿಭಟನಾಕಾರರು ಮುಂದಾದರು. ಕುಂದಾಪುರ ತಹಶಿಲ್ದಾರ್ ಆನಂದಪ್ಪ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಸ್ಥಳಕ್ಕಾಗಮಿಸಿ ಶೀಘ್ರ ಕಾಂಪೋಂಡ್ ಗೋಡೆ ತೆರವು ಮಾಡುವ ಬಗ್ಗೆ ಮಾತ್ರವೇ ತಿಳಿಸಿದಾಗ ಪ್ರತಿಭಟನಾಕಾರರ ಆಕ್ರೋಷ ಇನ್ನಷ್ಟು ಹೆಚ್ಚಾಗಿತ್ತು.

2 ದಿನದಲ್ಲಿ ಸೂಕ್ತ ಕ್ರಮ: ತುರ್ತು ಸಭೆಯಲ್ಲಿ ನಿರ್ಣಯ
ಪ್ರತಿಭಟನೆ ಕಾವು ಹೆಚ್ಚುತ್ತಲೇ ಮಧ್ಯಾಹ್ನ 3.30ಕ್ಕೆ ಗ್ರಾ.ಪಂ ಕಚೇರಿಯಲ್ಲಿ ಸದಸ್ಯರ ತುರ್ತು ಸಭೆ ಕರೆದು ಚರ್ಚಿಸಲಾಯಿತು. ಎರಡು ದಿನದಲ್ಲಿ ಕಾಂಪೋಂಡ್ ಗೋಡೆಯನ್ನು ತೆರವುಗೊಳಿಸುವುದು, ಅಕ್ರಮ ಕಟ್ಟಡದ ಬಗ್ಗೆ ಪಂಚಾಯತ್ ರಾಜ್ ಕಾಯ್ದೆಯಡಿ ಸಂಬಂದಪಟ್ಟವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದು ಮತ್ತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ಕ್ರಮಕ್ಕೆ ಮುಂದಾಗುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಕೇಸಿಗೆ ಹೆದರಲ್ಲ: ಗಣರಾಜ್ ಭಟ್
ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗದ ಮಾತೃಸುರಕ್ಷಾ ಪ್ರಮುಖ್ ಗಣರಾಜ್ ಭಟ್ ಕೆದಿಲಾ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ನ್ಯಾಯಕ್ಕಾಗಿ ಹೋರಾಡುವಾಗ ಯಾವುದೇ ಸುಳ್ಳು ಮೊಕದ್ದಮೆ ಹಾಕಿಸಿಕೊಳ್ಳಲು ನಮ್ಮ ಸಂಘಟನೆ ಹೆದರಲ್ಲ. ಅಕ್ರಮ ಕಟ್ಟಡಗಳ ಮೂಲಕ ದೊಡ್ಡದೊಂದು ದೇಶದ್ರೋಹದ ಷಡ್ಯಂತ್ರ ರೂಪಿಸುವ ಕಾರ್ಯ ಎಲ್ಲೆಡೆಯಾಗುತ್ತಿದ್ದು ಅದಕ್ಕೆ ಇಲ್ಲಿಯೂ ಅವಕಾಶ ಯಾವುದೇ ಕಾರಣಕ್ಕೂ ಸಿಗಬಾರದು. ಹಿಂದುಗಳ ಆಕ್ರೋಷ, ನೋವು ಮೇಲೇಳಲು, ಗಂಗೊಳ್ಳಿಯನ್ನು ಪ್ರಕ್ಷುಬ್ಧಗೊಳ್ಳಲು ಅಧಿಕಾರಿಗಳು ಬಿಡಬಾರದು. ಅಕ್ರಮ ಕಟ್ಟಡ ಕೊನೆಗಾಣುವ ತನಕ ಹೋರಾಟ ನಿಶ್ಚಿತ. ಹಿಂದೂ ವಿರೋಧಿಯಾಗಿ ಮುಂದೆ ಯಾರೇ ಬಂದರು ತಕ್ಕ ಉತ್ತರ ಕೊಡುತ್ತೇವೆ ಎಂದು ಆಕ್ರೋಷ ವ್ಯಕ್ತಪಡಿಸಿದರು.

ಹಿಂತುತ್ವದ ಹೆಸರಲ್ಲಿ ಓಟು ಪಡೆದಿಲ್ಲವೇ…?
ಜನರನ್ನು ಪಂಥಾಹ್ವಾನಕ್ಕಾಗಿ ಕರೆಕೊಟ್ಟು ಪಂಚಾಯತ್ ಆಡಳಿತ ಮಾಡಿಸಿಕೊಂಡ ಪ್ರತಿಭಟನೆ ಇದಾಗಿದ್ದು ಯಾವುದೇ ಪಕ್ಷ, ಸಂಘಟನೆ. ಪಂಥದ ವಿರುದ್ಧ ಅಲ್ಲ. ಪವಿತ್ರವಾದ ಹಿಂದೂ ರಾಷ್ಟ್ರದಲ್ಲಿ ಹುಟ್ಟಿ ಹಿಂದುತ್ವದ ಹೆಸರಿನಲ್ಲಿ ಮತ ಪಡೆದು ಗೆದ್ದು ಅಕ್ರಮ ಕಟ್ಟಡ ತೆರವುಗೊಳಿಸಲು ಧೈರ್ಯವಿಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಎರಡು ಮೂರು ವರ್ಷ ಹಿಂದಿನ ನೋವಿನ ಉರಿ ಈ ಪ್ರತಿಭಟನೆಗೆ ಕಾರಣವಾಗಿದೆ. ನ್ಯಾಯ ಪಡೆಯಲು ನಾವು ಯಾರಿಗೂ ಧಮ್ಕಿ ಹಾಕದೇ ಕೇವಲ ನ್ಯಾಯ ಕೇಳಿದ್ದು ಇಷ್ಟು ವರ್ಷವಾದರೂ ನಮಗೆ ನ್ಯಾಯ ಸಿಕ್ಕಿಲ್ಲ. ನಿರ್ಣಯಗಳು, ನೋಟಿಸುಗಳಿಗೆ ಇಲ್ಲಿ ಬೆಲೆಯೇ ಇಲ್ಲವೇ? ನ್ಯಾಯಕ್ಕಾಗಿ ಜೊತೆಗಿದ್ದೇವೆ ಎಂದ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆಯೇ ಮೊಕದ್ದಮೆ ಹೇರಿದ್ದು ಎಷ್ಟು ಸರಿ ಎಂದು ಪಂಚಾಯತ್ ಆಡಳಿತವನ್ನು ಅವರು ಪ್ರಶ್ನಿಸಿದರು.

ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕುಕ್ಕೆಹಳ್ಳಿ, ಹಿಂಜಾವೇ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ಕಾರ್ಕಳ, ಜಿಲ್ಲಾ ಉಪಾಧ್ಯಕ್ಷ ವಾಸುದೇವ ಗಂಗೊಳ್ಳಿ, ಕಾರ್ಯದರ್ಶಿ ಶಂಕರ್ ಕೋಟ, ಜಿಲ್ಲಾ ಪ್ರಚಾರಕ್ ಪ್ರಮುಖ್ ಅವಿನಾಶ್ ಶೆಟ್ಟಿ ಬೆಳ್ವೆ, ಗಂಗೊಳ್ಳಿ ಹಿಂಜಾವೇ ಪ್ರಧಾನ ಕಾರ್ಯದರ್ಶಿ ಯಶವಂತ್, ಕುಂದಾಪುರ ತಾಲೂಕು ಪ್ರಧಾನ ಕಾರ್ಯದರ್ಶಿ ನವೀನ್ ಗಂಗೊಳ್ಳಿ, ಬೈಂದೂರು ತಾಲೂಕು ಮಾತೃ ಸುರಕ್ಷಾ ಪ್ರಮುಖ್ ರತ್ನಾಕರ ಗಂಗೊಳ್ಳಿ ಮೊದಲಾದವರಿದ್ದರು.

ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಗಂಗೊಳ್ಳಿ ಪಿಎಸ್ಐ ಭೀಮಾಶಂಕರ್ ವಿವಿಧ ಠಾಣೆಯ ಉಪನಿರೀಕ್ಷಕರಾದ ಸುಬ್ಬಣ್ಣ, ನಾಸೀರ್ ಹುಸೇನ್, ಶ್ರೀಧರ ನಾಯ್ಕ್, ಸಂಗೀತಾ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಡಿಎಆರ್ ವಾಹನ ಸ್ಥಳದಲ್ಲಿ ನಿಯೋಜಿಸಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments are closed.