ಕರಾವಳಿ

ಕೊಲ್ಲೂರು ಕ್ಷೇತ್ರದಲ್ಲಿ 22 ವರ್ಷ ಧಾರ್ಮಿಕ ಸೇವೆಗೈದ ‘ಇಂದಿರಾ’ ಸಾವಿಗೆ ಒಂದು ವರ್ಷ: ಸಾರ್ವಜನಿಕರಿಂದ ನುಡಿನಮನ (Video)

Pinterest LinkedIn Tumblr

ಕುಂದಾಪುರ: ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳಿಂದ ಧಾರ್ಮಿಕ ಸೇವೆ ಸಲ್ಲಿಸಿದ ‘ಇಂದಿರಾ’ ಹೆಸರಿನ ಹೆಣ್ಣು ಸಲಗ ಕಳೆದ ವರ್ಷ ಆ.13ರಂದು ಮೃತಪಟ್ಟಿದ್ದು ಇಂದಿಗೆ ಒಂದು ವರ್ಷ ಕಳೆದರೂ ಸ್ಥಳೀಯರು‌ ಮತ್ತು ಭಕ್ತರಲ್ಲಿ ಇನ್ನೂ ಇಂದಿರಾಳ ನೆನಪು ಅಚ್ಚಳಿಯದೆ ಉಳಿದಿದೆ. ಆದರೆ ಇಂದಿರಾ ಮೃತಪಟ್ಟು ವರ್ಷವಾದರೂ ಸಾವಿನ ತನಿಖೆ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇಂದು ನಾಗರಿಕರಿಂದ ನುಡಿನಮನ..
ದೇವಿಯ ಆಲಯದಲ್ಲಿ 22 ವರ್ಷ ಧಾರ್ಮಿಕ ಸೇವೆ ಸಲ್ಲಿಸಿದ್ದ ಆನೆ ಮರಣಹೊಂದಿ ವರ್ಷವಾದ ಹಿನ್ನೆಲೆ ಗುರುವಾರದಂದು ದೇವಸ್ಥಾನದ ಸಮೀಪ ಕೊಲ್ಲೂರಿನ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಬಿಜೆಪಿ ವತಿಯಿಂದ ನುಡಿನಮನ, ಪುಷ್ಪಾರ್ಚನೆ ಹಾಗೂ ಚಿರಸ್ಮರಣೆಯ ಮೂಲಕ ಭಾವಪೂರ್ಣ ಕಾರ್ಯಕ್ರಮ ನಡೆಸಿದರು. ಬಿಜೆಪಿ ಸ್ಥಳೀಯ ಅಧ್ಯಕ್ಷ ಸಂತೊಷ್ ಭಟ್, ವಿಶ್ವ ಹಿಂದೂ ಪರಿಷತ್ ಕೊಲ್ಲೂರು ಅಧ್ಯಕ್ಷ ವಿಜಯ ಬಳೆಗಾರ, ಸಂಚಾಲಕ ಕಿರಣ್ ಜೋಗಿ, ಸಹಸಂಚಾಲಕರಾದ ಶಿವಾನಂದ ಹಳ್ಳಿಬೇರು, ಸಂದೀಪ್, ಸಮರ್ಥ, ಕರಣ ಶೆಟ್ಟಿ, ವಿಶ್ವನಾಥ ಶೆಟ್ಟಿ, ಕೊಲ್ಲೂರು ಮಹಿಳಾಮಂಡಲದ ಉಪಾಧ್ಯಕ್ಷೆ ಲತಾ ಮೊದಲಾದವರಿದ್ದರು.

(ಇಂದಿರಾಗೆ ನುಡಿನಮನ)

ಏನಾಯ್ತು ತನಿಖೆ-ಹಳ್ಳಾ ಹಿಡೀತಾ?
ಅರವತ್ತೆರಡು ವರ್ಷವಾಗಿದ್ದ ಇಂದಿರಾ ಸಾವಿಗೂ ನಾಲ್ಕು ದಿನಗಳ ಮೊದಲು ಜ್ವರ ಬಾಧಿಸಿತ್ತು. ನುರಿತ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಿದ್ದಲ್ಲದೇ ಸುಮಾರು 50ಕ್ಕೂ ಅಧಿಕ ಬಾಟಲಿ ಗ್ಲೂಕೋಸ್ ನೀಡಿ ಇಂದಿರಾಳ ಚೇತರಿಕೆಗೆ ಹರಸಾಹಸಪಟ್ಟಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾದೇ ಇಂದಿರಾ ಇಹಲೋಕ ತ್ಯಜಿಸಿದ್ದಳು. ಆನೆ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುತ್ತೇವೆಂದು ರಾಜ್ಯದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ವೇಳೆ ಮಾದ್ಯಮಕ್ಕೆ ಹೇಳಿದ್ದರು. ಆನೆಯ ಮೇವಿನ ಹಗರಣವಾಗಿದೆ ಎಂದು ಆರೋಪವಿದೆ ಎನ್ನುವುದಕ್ಕೆ ಉತ್ತರಿಸಿದ ಅವರು, ಹಗರಣದ ನಡೆದ ಬಗ್ಗೆ ದೂರುಗಳಿದ್ದಲ್ಲಿ ಯಾವುದೇ ಮುಲಾಜಿಲ್ಲದೇ ತನಿಖೆ ನಡೆಸುತ್ತೇವೆ. ದೇವಳದ ಆನೆ ಸಾವಿನ ಹಿನ್ನೆಲೆ ಮರಣೋತ್ತರ ವರದಿ ತರಿಸಿಕೊಂಡು ಬಳಿಕ ಅದರಲ್ಲಿ ಲೋಪದೋಷ ಕಂಡುಬಂದರೆ ಸೂಕ್ತ ತನಿಖೆ ನಡೆಸುತ್ತೇವೆ ಎಂದಿದ್ದರು. ಆದರೆ ಈವರೆಗೆ ಕೂಡ ತನಿಖೆ ಏನಾಯ್ತು ಎಂಬುದು ಮಾತ್ರ ನಿಗೂಡವೇ ಆಗಿದೆ. ಆನೆಗೆ ಪೌಷ್ಟಿಕ ಆಹಾರ ನೀಡುತ್ತಿರಲಿಲ್ಲ ಮತ್ತು ಅನಾರೋಗ್ಯಕ್ಕೆ ತುತ್ತಾಗಿದ್ದರೂ ಸರಿಯಾಗಿ ಔಷದೋಪಚಾರ ಮಾಡಿಲ್ಲ ಎಂದು ಸ್ಥಳೀಯರ ಆರೋಪ ಕೂಡ ಇದೆ.

(File Photos)

ಕೊಲ್ಲೂರಿಗೆ ಗಜಶಾಪ..!?
ಇಂದಿರಾ ಸಾವಿನ ಬಳಿಕ ಕೊಲ್ಲೂರಿನ ಜನತೆಗೆ ಬಹಳಷ್ಟು ಸಮಸ್ಯೆಗಳಾಗಿದೆ. ವ್ಯಾಪಾರ-ವ್ಯವಹಾರವೂ ಸರಿಯಾಗಿ ನಡೆಯುತ್ತಿಲ್ಲ. ನಮಗೆ ಮಾನಸಿಕ ನೆಮ್ಮದಿಯೂ ಹಾಳಾಗಿದೆ. ಕೆಲ ಧಾರ್ಮಿಕ ಪ್ರಕ್ರಿಯೆಗಳಿಗೂ‌ ಹಿನ್ನಡೆಯಾಗಿದೆ. ಸದ್ಯ ಇನ್ನೊಂದು ಆನೆ ನೀಡಲು ಆಸಕ್ತರಿದ್ದರೂ ಕೂಡ ಇಲ್ಲಿನ ಅವ್ಯವಸ್ಥೆ ಸರಿಯಾಗುವ ತನಕ ಆನೆ ಪಡೆದುಕೊಳ್ಳುವುದು ಸರಿಯಲ್ಲ. ಆನೆ ಸಾವಿನ ಕುರಿತು ಸಮಗ್ರ ತನಿಖೆಯಾಗಲೇಬೇಕು ಎಂದು ಸ್ಥಳೀಯ ಮುಖಂಡ ಜಗದೀಶ್ ಕೊಲ್ಲೂರು ಹೇಳಿದ್ದಾರೆ.

ಭಕ್ತರ ಪ್ರೀತಿಯ ಇಂದಿರಾ…..
ಬಾಳೆಹೊನ್ನೂರಿನ ಮಧು ಎನ್ನುವರು ದೇವಳಕ್ಕೆ ದಾನ ಕೊಟ್ಟಿದ್ದ ಆನೆ ಇದಾಗಿತ್ತು. ಅರವತ್ತೆರಡು ವರ್ಷ ಪ್ರಾಯದ ಇಂದಿರಾ ಕಳೆದ ವರ್ಷದಂದು ರಾತ್ರಿ ವೇಳೆ ಮೃತಪಟ್ಟಿದ್ದು ಭಕ್ತರಲ್ಲಿ ದುಃಖವುಂಟು ಮಾಡಿತ್ತು. ದೇವಸ್ಥಾನದ ಎದುರು ಜಾಗದಲ್ಲಿ ನಿಂತಿರುತ್ತಿದ್ದ ಇಂದಿರಾಳನ್ನು ನಿತ್ಯ ಬೆಳಿಗ್ಗೆ ಕಂಡು ಅವಳ ಆಶೀರ್ವಾದ ಪಡೆಯುತ್ತಿದ್ದ ಜನ ಅವಳನ್ನು ತುಂಬಾನೆ ಮಿಸ್ ಮಾಡಿಕೊಂಡಿದ್ದರು. ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಕಾಣಿಕೆ, ಬಾಳೆಹಣ್ಣುಗಳನ್ನು ಪಡೆದು ಅವರಿಗೆ ಸೋಂಡಿಲೆತ್ತಿ ಆಶಿರ್ವಾದ ಮಾಡುತ್ತಿದ ಇಂದಿರಾ ಯಾವತ್ತು ಯಾರೊಬ್ಬ ಭಕ್ತರಿಗೆ ತೊಂದರೆಕೊಟ್ಟವಳಲ್ಲ. ಅದಕ್ಕಾಗಿಯೇ ಆಕೆ ಸಾವು ಎಲ್ಲರಿಗೂ ನುಂಗಲಾರದ ತುತ್ತಾಗಿದೆ.

ವರದಿ- ಯೋಗೀಶ್ ಕುಂಭಾಸಿ

Comments are closed.