ಕರಾವಳಿ

ಪ್ರವಾಹ ಪರಿಸ್ಥಿತಿ ಎದುರಿಸಲು ಉಡುಪಿ ಜಿಲ್ಲಾಡಳಿತ ಸನ್ನದ್ಧ: ಡಿಸಿ ಜಿ. ಜಗದೀಶ್ (Video)

Pinterest LinkedIn Tumblr

ಕುಂದಾಪುರ: ಮೂರ್ನಾಲ್ಕು ದಿನದಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಬೈಂದೂರು ತಾಲೂಕಿನ ನಾವುಂದ ಹಾಗೂ ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಹಲವೆಡೆ ನೆರೆ ನೀರು ಹೆಚ್ಚಿದ್ದು ನೆರೆ ಪೀಡಿತ ಪ್ರದೇಶಗಳಿಗೆ ಉಡುಪಿ‌ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಭಾನುವಾರ ಭೇಟಿ ನೀಡಿದರು. ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಉಪವಿಭಾಗಾಧಿಕಾರಿ ಕೆ. ರಾಜು ಸಾತ್ ನೀಡಿದರು.

ನಾಡಾ ಗ್ರಾಮಪಂಚಾಯತ್ ವ್ಯಾಪ್ತಿಯ ಹಡವು ಹಾಗೂ‌ ನಾವುಂದದಲ್ಲಿ ನೆರೆಗೆ ತುತ್ತಾದ ಸ್ಥಳಗಳನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ, ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಪ್ರವಾಹ ಹೆಚ್ಚಿರುವ ಕಡೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಭೇಟಿ ನೀಡಲಾಗುತ್ತಿದೆ. ಮುಂದಿನ ಮೂರು ದಿನ ಆರೆಂಜ್ ಅಲರ್ಟ್ ಇರಲಿದ್ದು ಮಳೆಯ ಪ್ರಮಾಣ ಕಡಿಮೆಯಾಗುವ ನಿರೀಕ್ಷೆಯಿದೆ. ಜನರು ಆತಂಕಕ್ಕೆ ಒಳಗಾಗುವುದು ಬೇಡ..ಪ್ರವಾಹ ಸ್ಥಿತಿ ಎದುರಿಸಿ ಜನರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಉಡುಪಿ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ. ಪ್ರಸ್ತುತ ಕುದ್ರು ಇರುವಂತಹ ಪ್ರದೇಶಗಳಲ್ಲಿ ನೆರೆ ಹೆಚ್ಚಿದ್ದು ಅಲ್ಲಿನ ಜನರಿಗೆ ಓಡಾಟಕ್ಕೆ ಅನುಕೂಲವಾಗುವಂತೆ ಸರಕಾರದಿಂದ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಮಳೆಯಿಂದಾಗಿ ಮನೆ ಹಾನಿ, ಪ್ರಾಣಹಾನಿ ಹಾಗೂ ಜಾನುವಾರು ನಷ್ಟಕ್ಕೆ ತಕ್ಷಣ ಪರಿಹಾರ ನೀಡಲು ಸರಕಾರ ಆದೇಶ ನೀಡಿದ್ದು ಅದರಂತೆಯೇ‌ ಜಿಲ್ಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ತುರ್ತು ಪರಿಹಾರನಿಧಿ ಖಾತೆಯಲ್ಲಿ ಸುಮಾರು 5 ಕೋಟಿ ಹಣವಿದ್ದು ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.

ಸ್ಥಳೀಯರ ಬೇಡಿಕೆಗೆ ಡಿಸಿ ಅಸ್ತು..
ಪ್ರತಿ ಮಳೆಗಾಲದಲ್ಲಿ ಸಂಪರ್ಕ ಸಮಸ್ಯೆಯಾಗುತ್ತೆ ಸರ್….ಶಾಲಾ ಮಕ್ಕಳಿಗೂ ಹೋಗೋಕು ಕಷ್ಟ…ಸಮಸ್ಯೆ ಬಗೆಹರಿಸಿ ಸರ್… ಎಂದು ನಾವುಂದ ಕುದ್ರು ಪ್ರದೇಶದ ಗ್ರಾಮಸ್ಥರು‌ ಡಿಸಿ ಬಳಿ ಅಹವಾಲು ಇಟ್ಟರು. ಸೇತುವೆ ವಿಚಾರವನ್ನು ಜನಪ್ರತಿನಿಧಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದ ಡಿಸಿ ಜಿ. ಜಗದೀಶ್ ಅವರು ತಾತ್ಕಾಲಿಕ ವ್ಯವಸ್ಥೆಗೆ ಇಲ್ಲಿಗೊಂದು ಬೋಟ್ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿಯೇ ಬೈಂದೂರು ತಹಶಿಲ್ದಾರ್ ಅವರಿಗೆ ಸೂಚನೆ ನೀಡಿದರು.

ಬೈಂದೂರು ತಹಶಿಲ್ದಾರ್ ಬಸಪ್ಪ ಪೂಜಾರಿ, ಸಿಪಿಐ ಸುರೇಶ್ ನಾಯಕ್, ಕಂದಾಯ ನಿರೀಕ್ಷಕ ಇ. ಕುಮಾರ್, ಗ್ರಾಪಂ ನಾವುಂದ ಕಾರ್ಯದರ್ಶಿ ಗಣೇಶ್ ದೇವಾಡಿಗ, ನಾವುಂದ ಗ್ರಾಮಕರಣಿಕ ಹನುಮಂತ ಹಾಗೂ ಸ್ಥಳೀಯರು ಈ ಸಂದರ್ಭ ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.