ಕುಂದಾಪುರ: ಕುಂದಾಪುರ ಕ್ಷೇತ್ರ ಬಿಜೆಪಿ ಯುವಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಯುವ ಹಸಿರು’ ಅಭಿಯಾನಕ್ಕೆ ಬೀಜಾಡಿ ಮಹಾಶಕ್ತಿಕೇಂದ್ರ ವ್ಯಾಪ್ತಿಯ ಉಳ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಚಾಲನೆ ನೀಡಲಾಯಿತು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವ ಹಸಿರು ಅಭಿಯಾನದ ಮೊದಲ ಕಾರ್ಯಕ್ರಮ ಇದಾಗಿದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ಆಯಾಯ ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ನಡೆಯಲಿದೆ. ಭಾನುವಾರ 200 ಕ್ಕೂ ಅಧಿಕ ಸಸಿಗಳನ್ನು ನೆಡಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ, ‘ಯುವ ಹಸಿರು’ ಶೀರ್ಷಿಕೆಯಡಿಯಲ್ಲಿ ಗಿಡಗಳನ್ನು ನೆಡುವ ಈ ಕಾರ್ಯಕ್ರಮವು ಮಾದರಿಯಾಗಲಿದ್ದು ಸಾಲುಮರದ ತಿಮ್ಮಕ್ಕನಂತಹ ಹಿರಿಯರು ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಯುವ ಸಮುದಾಯ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಬೇರೆ ವಿಚಾರದಲ್ಲಿ ಚಾಲೆಂಜ್ ನೀಡುವ ಕೆಲಸ ಮಾಡುತ್ತಿದ್ದು ಇಂತಹ ಗಿಡ ನೆಡುವ ಸಮಾಜಮುಖಿ ವಿಚಾರಗಳನ್ನು ತಾವು ಮಾಡುವುದಲ್ಲದೇ ಇತರರಿಗೆ ಚಾಲೇಂಜ್ ನೀಡುವ ಮೂಲಕ ಇತರರು ಕೂಡ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಕರೆಕೊಟ್ಟರು.
ಕುಂದಾಪುರ ಬಿಜೆಪಿ ಯುವನೋರ್ಚಾ ಅಧ್ಯಕ್ಷ ಅವಿನಾಶ್ ಉಳ್ತೂರು ಮಾತನಾಡಿ, ಬಿಜೆಪಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಇನ್ನೂರು ಸಸಿಗಳನ್ನು ರಸ್ತೆ ಬದಿಗಳಲ್ಲಿ ನೆಡುವ ಸಂಕಲ್ಪವನ್ನು ಯುವಮೋರ್ಚಾ ಮಾಡಿಕೊಂಡಿದೆ. ಆರು ಮಹಾಶಕ್ತಿ ಕೇಂದ್ರಗಳಲ್ಲಿ ನಿರಂತರವಾಗಿ ಈ ಕಾರ್ಯ ನಡೆಯಲಿದೆ ಎಂದರು.
ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ ಮಾತನಾಡಿ, ಯುವಕರು ಹಸಿರಿನತ್ತ ಗಮನಹರಿಸುವುದು ಅಗತ್ಯವಾಗಿರುವ ಈ ಕಾಲಘಟ್ಟದಲ್ಲಿ ದೇಶಾದ್ಯಂತ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪನವರ ನೇತ್ರತ್ವದ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆ ಈ ಕಾರ್ಯಕ್ರಮವನ್ನು ನಡೆಸಲು ಪಕ್ಷ ಸೂಚಿಸಿದಂತೆ ಎಲ್ಲಾ ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ನಡೆಸಲಾಗುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಜಿಲ್ಲಾಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ತಾ.ಪಂ ಸದಸ್ಯೆ ರೂಪಾ ಪೈ, ಬಿಜೆಪಿಯ ಮುಖಂಡರಾದ ಸದಾನಂದ ಬಳ್ಕೂರು, ಸುನೀಲ್ ಶೆಟ್ಟಿ ಹೇರಿಕುದ್ರು, ಶರತ್ ಶೆಟ್ಟಿ ಉಪ್ಪುಂದ, ಪ್ರವೀಣ್ ಕುಮಾರ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ಸತೀಶ್ ಪೂಜಾರಿ ವಕ್ವಾಡಿ, ಸುರೇಶ್ ಶೆಟ್ಟಿ ಗೋಪಾಡಿ, ಸುಧೀರ್ ಕೆ.ಎಸ್., ಸುಧೀರ್ ಮಲ್ಯಾಡಿ, ವಿನೋದ್ ರಾಜ್, ಕುಂದಾಪುರ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಅಭಿಷೇಕ್ ಅಂಕದಕಟ್ಟೆ, ಕುಂದಾಪುರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಬಂಗೇರ ಮತ್ತು ಸುನಿಲ್ ಖಾರ್ವಿ, ಮಹಾಶಕ್ತಿಕೇಂದ್ರ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಳ್ತೂರು, ಪ್ರತಾಪ್ ಶೆಟ್ಟಿ ಉಳ್ತೂರು,ಯುವ ಮೋರ್ಚಾದ ಮಂಡಲ ಮತ್ತು ಎಲ್ಲಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷ,ಪ್ರಧಾನ ಕಾರ್ಯದರ್ಶಿಗಳು ,ಕಾರ್ಯಕಾರಿಣಿ ಸದಸ್ಯರು ಹಾಗೂ ಬಿಜೆಪಿ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.