ಕರಾವಳಿ

ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಹೈಟೆಕ್ ‘ವೆಂಟಿಲೇಟರ್’ ಕೊಟ್ಟ ಕುಂದಾಪುರ ರೆಡ್ ಕ್ರಾಸ್ ಸೊಸೈಟಿ; ಸಚಿವ ಕೋಟ ಹಸ್ತಾಂತರ(Video)

Pinterest LinkedIn Tumblr

ಕುಂದಾಪುರ: ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಎತ್ತರಕ್ಕೆ ಬೆಳೆದರೂ ಕೂಡ ಪ್ರಕೃತಿ ಮುಂದೆ ಶರಣಾಗಬೇಕು ಎನ್ನುವುದಕ್ಕೆ ಕೊರೋನಾ ಸಾಕ್ಷಿಯಾಗಿದೆ. ಕೊರೋನಾ ಬಂದು ಮೂರ್ನಾಲ್ಕು ತಿಂಗಳಾದರೂ ಕೂಡ ಅದನ್ನು ಹಿಮ್ಮೆಟ್ಟಿಸಲಾಗಿಲ್ಲ. ಕೊರೋನಾ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ರಾಜ್ಯ ಹಾಗೂ ಕೇಂದ್ರ ಸರಕಾರ ಒಟ್ಟಾಗಿ ಕೆಲಸ ಮಾಡುತ್ತಿದೆ. ಜೀವ ಉಳಿದರೆ ಜೀವನ ಎನ್ನುವಂತೆಯೇ ಯಾವುದೇ ಪಕ್ಷ, ರಾಜಕೀಯ, ಜಾತಿ ಮತವಿಲ್ಲದೇ ಒಗ್ಗೂಡಿ ಕೆಲಸ ಮಾಡಲಾಗುತ್ತಿದೆ. ವೆಂಟಿಲೇಟರ್ ವ್ಯವಸ್ಥೆ ಅಗತ್ಯವಿದ್ದಲ್ಲಿ ಪೂರೈಕೆಯಾಗಬೇಕಿದೆ. ಜನರಿಗಾಗಿ ಅಹರ್ನಿಶಿ ದುಡಿಯುವ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರದಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಕುಂದಾಪುರ ಘಟಕದ ವತಿಯಿಂದ ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದ ಸುಧಾರಿತ ಮಾದರಿಯ ವೆಂಟಿಲೇಟರ್ ಹಸ್ತಾಂತರಿಸಿ ಅವರು ಮಾತನಾಡಿದರು.

  

ವಿದೇಶ, ಮಹಾರಾಷ್ಟ್ರದಿಂದ ಬಂದವರಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಜಾಸ್ಥಿಯಿದೆ. ಹೊರಗಿನಿಂದ ಬಂದವರನ್ನು ಪರೀಕ್ಷೆ ಮಾಡಿ ಒಳಕ್ಕೆ ಕರೆದುಕೊಳ್ಳಬೇಕೆಂಬ ಚಿಂತನೆಯೂ ಸರಕಾರದ ಮುಂದಿದೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್, ಸೌಲಭ್ಯಗಳ ಮಾಹಿತಿ ತಿಳಿಯುವ ಕಾರ್ಯವಾಗುತ್ತಿದೆ. ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಗಳು ಕೊರೋನಾ ಸೋಂಕಿತರನ್ನು ಅತೀವ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ಮಾತುಗಳು ಜನರಿಂದ ಕೇಳಿಬರುತ್ತಿದೆ. ಪೊಲೀಸ್ ಇಲಾಖೆ, ವೈದ್ಯಾಧಿಕಾರಿಗಳು, ಆಶಾ ಕಾರ್ಯಕರ್ತರ ಸೇವೆ ನಿಜಕ್ಕೂ ಅಪಾರವಾಗಿದೆ. ತುಂಬಾ ಜಾಗೃತಿ ಮತ್ತು ಜವಬ್ದಾರಿಯ ಕಾರ್ಯನಿರ್ವಹಣೆಯ ಜೊತೆಗೆ ಪರಿಸ್ಥಿತಿಯನ್ನು ನಿಬಾಯಿಸಬೇಕು. ಜನರಲ್ಲಿ ಅರಿವು ಮೂಡಿಸುವ ಜೊತೆಗೆ ಜನರನ್ನು ಅನಗತ್ಯ ಭಯದಿಂದ ದೂರಮಾಡಬೇಕು ಎಂದರು.

ರೆಡ್ ಕ್ರಾಸ್ ಸೊಸೈಟಿ ಚೇರ್ಮನ್ ಜಯಕರ್ ಶೆಟ್ಟಿ ಮಾತನಾಡಿ, ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಸಮಾಜಮುಖಿ ಕೆಲಸ ಮಾಡುತ್ತಿದೆ. ರಕ್ತನಿಧಿ ಕೇಂದ್ರ, ಜನೌಷಧಿ ಕೇಂದ್ರವನ್ನು ನಿರ್ಮಿಸಿ ಸೇವೆ ನೀಡುತ್ತಿದೆ. ಕಳೆದ ಐದು ವರ್ಷದಿಂದ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕದಲ್ಲಿ ಅತ್ಯುತ್ತಮ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಾಕ್ ಡೌನ್ ಸಮಯದಲ್ಲಿಯೂ ಅಗತ್ಯವುಳ್ಳವರಿಗೆ ಊಟ, ಆಹಾರ ಸಾಮಾಗ್ರಿ ಕಿಟ್ ವಿತರಣೆ, ಮಾಸ್ಕ್ ವಿತರಣೆ ಮಾಡುತ್ತಿದೆ. ಕುಂದಾಪುರ ಸಾರ್ವಜನಿಕ ಆಸ್ಪತ್ರೆಯು ಒಂದು ಮಾದರಿ ಆಸ್ಪತ್ರೆಯಾಗಿ ಸೇವೆ ಮಾಡುತ್ತಿದ್ದು ವೆಂಟಿಲೇಟರ್ ಅಗತ್ಯವಿರುವುದನ್ನು ಅರಿತು ಅದನ್ನು ನೀಡುವ ಕಾರ್ಯ ಮಾಡಿದ್ದೇವೆ ಎಂದರು.

ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಬರ್ಟ್ ರೆಬೆಲ್ಲೋ ಮಾತನಾಡಿ, ರೆಡ್ ಕ್ರಾಸ್ ಸೊಸೈಟಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಮೂಲ್ಯ ಸೇವೆ ನೀಡುತ್ತಿದೆ. ಕುಂದಾಪುರ ಕೋವಿಡ್ ಆಸ್ಪತ್ರೆಯಲ್ಲಿ ಪಿಜಿಶಿಯನ್ ಡಾ. ನಾಗೇಶ್ ಹಾಗೂ ತಂಡದವರ ಕಾರ್ಯಬದ್ಧತೆಯಲ್ಲಿ ಈವರೆಗೆ 607 ಸೋಂಕಿತರನ್ನು ದಾಖಲಿಸಿಕೊಂಡಿದ್ದು 441 ಮಂದಿಯನ್ನು ಯಾವುದೇ ಸಮಸ್ಯೆಯಿಲ್ಲದೇ ಡಿಶ್ಚಾರ್ಜ್ ಮಾಡಲಾಗಿದೆ. ಕೋವಿಡ್-19 ವಿಚಾರದಲ್ಲಿ ಜಾಗ್ರತಿ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ರೆಡ್ ಕ್ರಾಸ್ ಸೊಸೈಟಿ ಉಡುಪಿ ‌ಜಿಲ್ಲಾಧ್ಯಕ್ಷ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಪದಾಧಿಕಾರಿಗಳು ಉಪಸ್ಥಿತರಿದ್ದರು. ರೆಡ್ ಕ್ರಾಸ್ ಸೊಸೈಟಿ ಉಪಾಧ್ಯಕ್ಷ ಉಮೇಶ್ ಪುತ್ರನ್ ಸ್ವಾಗತಿಸಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಶಿವರಾಮ ಶೆಟ್ಟಿ ವಂದಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.