ಅಂತರಾಷ್ಟ್ರೀಯ

ವ್ಯಾಪಕ ಹಿಂಸಾಚಾರಕ್ಕೆ ತತ್ತರಿಸಿದ ಅಮೆರಿಕಾ; ಸಿಕ್ಕ ಸಿಕ್ಕ ಅಂಗಡಿ ಮಳಿಗೆಗಳ ಲೂಟಿ-ಬೆಂಕಿಹಚ್ಚಿ ಆಕ್ರೋಶ ! ಇಲ್ಲಿದೆ ವಿಡಿಯೋ….

Pinterest LinkedIn Tumblr

ವಾಷಿಂಗ್ಟನ್: ಅಮೆರಿಕನ್ ಪೊಲೀಸರ ಕಸ್ಟಡಿಯಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ಇದೀಗ ಅಮೆರಿಕಾದ್ಯಂತ ತೀವ್ರ ಪ್ರತಿಭಟನೆ, ಹಿಂಸಾಚಾರಕ್ಕೆ ಕಾರಣವಾಗಿದೆ. ವಿಶ್ವಾದ್ಯಂತ ಹಲವು ಕಡೆಗಳಿಂದ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅಮೆರಿಕದ ಎಲ್ಲಾ ಕಡೆಯಲ್ಲೂ ಪ್ರತಿಭಟನೆ ಆಗುತ್ತಿದ್ದು ಹಲವೆಡೆ ಹಿಂಸಾಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದೊಡ್ಡ ದೊಡ್ಡ ಅಂಗಡಿ, ಮಳಿಗೆಗಳ ಲೂಟಿ ಮಾಡಲಾಗುತ್ತಿದೆ. ಜೊತೆಗೆ ಸಿಕ್ಕಸಿಕ್ಕ ಅಂಗಡಿ-ಮುಗ್ಗಟ್ಟುಗಳನ್ನು ಪುಡಿಗೈಯ್ಯಲಾಗುತ್ತಿದ್ದು, ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಪ್ಪು ವರ್ಣೀಯ ವ್ಯಕ್ತಿ ಫ್ಲೋಯ್ಡ್ ಸಾವು ಖಂಡಿಸಿ ಅಮೆರಿಕಾದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆ ಜೊತೆಗೆ ಭಾರಿ ಪ್ರಮಾಣದ ಹಿಂಸಾಚಾರ, ದೊಡ್ಡ ದೊಡ್ಡ ಮಳಿಗೆಗಳ ಲೂಟಿ, ಲೂಟಿ ತಡೆಯಲು ಬಂದವರ ಹತ್ಯೆಯಂತಹ ಘಟನೆಗಲು ನಡೆದಿದ್ದು, ಅಮೆರಿಕಾದ ಹಲವು ನಗರಗಳು ಅಗ್ನಿಕುಂಡದಂತೆ ಮಾರ್ಪಟ್ಟಿವೆ. ಹಲವರ ಜೀವ ಕೂಡ ಬಲಿಯಾಗಿದೆ.

ಅಮೆರಿಕದ ಮಿನ್ನೆಸೋಟಾ ರಾಜ್ಯದ ಮಿನ್ನೆಪೊಲೀಸ್‌ ನಗರದಲ್ಲಿ ಖೋಟಾ ನೋಟು ಚಲಾವಣೆ ಆರೋಪದ ಮೇರೆಗೆ ಬಂಧನಕ್ಕೊಳಗಾದ ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಪೊಲೀಸ್‌ ದೌರ್ಜನ್ಯದಲ್ಲಿ ಮೃತಪಟ್ಟ ಬಳಿಕ ಕಪ್ಪು ವರ್ಣೀಯರಿಂದ ಭುಗಿಲೆದ್ದ ಪ್ರತಿಭಟನೆ ಅಮೆರಿಕದಾದ್ಯಂತ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ.

ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಅಲ್ಲಿನ ಸರ್ಕಾರ ಹಲವಡೆಗೆ ಕರ್ಫ್ಯೂ ಜಾರಿ ಮಾಡಿದ್ದು, ಕರ್ಫ್ಯೂ ಉಲ್ಲಂಘಿಸಿ ಪ್ರಮುಖ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಇದರ ನಡುವೆ ದೊಡ್ಡ ದೊಡ್ಡ ಮಾಲ್ ಗಳಲ್ಲಿನ ಪ್ರಸಿದ್ಧ ಬ್ರಾಂಡ್ ಸ್ಟೋರ್ ಗಳಲ್ಲಿ ಲೂಟಿಯಂತ ಕೃತ್ಯಗಳೂ ಭಾರೀ ಪ್ರಮಾಣದಲ್ಲಿ ನಡೆಯುತ್ತಿವೆ.

ಡಲ್ಲಾಸ್ ನಲ್ಲಿ ಮಳಿಗೆಯೊಂದನ್ನು ಲೂಟಿ ಮಾಡಿದ ಗುಂಪೊಂದು ಅದನ್ನು ತಡೆಯಲು ಬಂದ ಅಂಗಡಿ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಇನ್ನು ವಾಷಿಂಗ್ಟನ್ ಡಿಸಿಯಲ್ಲಿನ ಐಫೋನ್ ಮಳಿಗೆಯನ್ನು ದುಷ್ಕರ್ಮಿಗಳ ಗುಂಪು ಕೆಲವೇ ನಿಮಿಷಗಳಲ್ಲಿ ಲೂಟಿ ಮಾಡಿಕೊಂಡು ಪರಾರಿಯಾಗಿದೆ. ಇನ್ನು ಎರಡು ಪ್ರಕರಣಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.

ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ, ಹಿಂಸಾಚಾರದ ದೃಶ್ಯಗಳ ವರದಿಗೆ ಹೋಗಿದ್ದ ಪತ್ರಕರ್ತರ ಮೇಲೂ ದಾಳಿ ನಡೆಸಲಾಗಿದೆ. ಇನ್ನು ಲಾಸ್ ಏಂಜಲೀಸ್ ನಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಾರಿಸಿದ ರಬ್ಬರ್ ಗುಂಡು, ಖ್ಯಾತ ನಟ ಕೆಂಡ್ರಿಕ್ ಸ್ಯಾಂಪ್ಸನ್’ಗೆ ತಗುಲಿದ ಘಟನೆಯೂ ನಡೆದಿದೆ.

1968ರ ಬಳಿಕ ಅಮೆರಿಕ ನಾಗರಿಕರ ಆಕ್ರೋಶವನ್ನು ಈ ಮಟ್ಟಿಗೆ ಎದುರಿಸುತ್ತಿರುವುದು ಇದೇ ಮೊದಲು ಎಂದು ಮಾಧ್ಯಮಗಳು ವಿಶ್ಲೇಷಿಸಿವೆ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮರು ಆಯ್ಕೆ ಬಯಸಿರುವ ಡೊನಾಲ್ಡ್‌ ಟ್ರಂಪ್‌ ಅವರಿಗೆ ಇದು ಭಾರಿ ಪೆಟ್ಟು ನೀಡಲಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದಿದ್ದು 20 ರಾಜ್ಯಗಳ 140 ನಗರಗಳಿಗೆ ಕಿಚ್ಚು ವ್ಯಾಪಿಸಿದೆ. ಭಾನುವಾರ ರಾತ್ರಿ ಶ್ವೇತ­ಭವನದ ಉದ್ಯಾನದ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಉದ್ರಿಕ್ತರ ಮೇಲೆ ಪೊಲೀಸರು ಅಶ್ರುವಾಯು ಸಿಡಿಸಿ, ಪೆಪ್ಪರ್‌ ಸ್ಪ್ರೇ ಮಾಡಿ ಚದುರಿಸುವ ಪ್ರಯತ್ನ ಮಾಡಿದರೂ ಗಲಭೆ ಹತೋಟಿಗೆ ಬಂದಿಲ್ಲ. ಪ್ರತಿಭಟನಾಕಾರರ ಆಕ್ರೋಶಕ್ಕೆ 140 ನಗರಗಳಲ್ಲಿ ಕಾರುಗಳು, ಪೊಲೀಸ್‌ ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ಹಿಂಸಾಚಾರ ತಡೆಯಲು ಹಲವು ಪ್ರದೇಶಗಳಲ್ಲಿ ನ್ಯಾಷನಲ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ. ಈ ವರೆಗೆ ಹಿಂಸೆಯಲ್ಲಿ ತೊಡಗಿದ್ದ 1500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಫೋಯ್ಜ್ ಹತ್ಯೆಗೆ ಕಾರಣವೆಂಬ ಆರೋಪ ಹೊತ್ತಿರುವ ಡೆರಿಕ್ ಚುವಿನ್ ಬಂಧನದ ಬೆನ್ನಲ್ಲೇ, ಘಟನೆ ನಡೆದಾಗ ಆತನ ಜೊತೆಯಲ್ಲಿದ್ದ ಇನ್ನೂ ನಾಲ್ವರು ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.

ಈ ನಡುವೆ ಪ್ರತಿಭಟನಾಕಾರರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬಂದಿರುವುದು ದೇಶದಲ್ಲಿ ಮತ್ತೊಂದು ಸುತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹಬ್ಬುವ ಭೀತಿಗೂ ಕಾರಣವಾಗಿದೆ.

Comments are closed.