ಕರಾವಳಿ

ಶ್ರಮಿಕ ವರ್ಗದ ಜೊತೆ ಸರಕಾರವಿದೆ: ಕೊಲ್ಲೂರಿನಲ್ಲಿ ಯಕ್ಷಗಾನ ಕಲಾವಿದರಿಗೆ ಕಿಟ್ ವಿತರಿಸಿ ಸಚಿವ ಕೋಟ ಭರವಸೆ (Video)

Pinterest LinkedIn Tumblr

ಕುಂದಾಪುರ: ದೇವಸ್ಥಾನಗಳಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲದಿದರೂ ಕೂಡ ತ್ರಿಕಾಲ ಪೂಜೆ ನಡೆಯುತ್ತಿದೆ. ದೇವಸ್ಥಾನಗಳನ್ನು ತೆರೆಯುವ ಬಗ್ಗೆ ಮಾತುಗಳು ಕೇಳಿಬರುತ್ತಿದ್ದು ಎ ದರ್ಜೆ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಮಸ್ಯೆಗಳು ತಲೆದೋರುವ ಸಂಭವವಿದೆ. ಆರೋಗ್ಯ ಇಲಾಖೆಯವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಸದ್ಯದಲ್ಲೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ಅನ್ನಛತ್ರದ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ ಯಕ್ಷಗಾನ ಕಲಾವಿದರು ಮತ್ತು ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

1800 ಕಲಾವಿದ, ಕಾರ್ಮಿಕರಿಗೆ ಕಿಟ್….
ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರಿನ ಒಟ್ಟು 1800 ಮಂದಿ ಯಕ್ಷಗಾನ ಕಲಾವಿದರು ಮತ್ತು ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಲಾಗಿದೆ. ಸಚಿವ ಶ್ರೀನಿವಾಸ ಪೂಜಾರಿಯವರು ಈ ಕಿಟ್ ಗಳ ವಿತರಣೆಯ ಜವಾಬ್ದಾರಿ ಹೊತ್ತಿರುವ ಉಡುಪಿ ಯಕ್ಷಗಾನ‌ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಅವರಿಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಈ ಸಂದರ್ಭ ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ , ಸಹಾಯಕ ಇಒ ಕೃಷ್ಣಮೂರ್ತಿ, ಮೇಳಗಳ ಯಜಮಾನ ಪಿ. ಕಿಶನ್ ಹೆಗ್ಡೆ, ಕಲಾರಂಗದ ಪಧಿಕಾರಿಗಳಾದ ಎಸ್.ವಿ ಭಟ್ , ಗಂಗಾಧರ ರಾವ್, ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ರಾಜೇಶ್ ನಾವಡ, ಹೆಚ್ ಎನ್ ವೆಂಕಟೇಶ್, ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು .ಈ ಸಂದರ್ಭ ಮಾತನಾಡಿದ ಸಚಿವ ಕೋಟ, ದೇವಸ್ಥಾನ ಸಂಪನ್ಮೂಲದಿಂದ ಹೊರತಾದ ದೇವಾಲಯಗಳಲ್ಲಿ ಕಾರ್ಮಿಕರಿಗೆ ವೇತನ ಸಿಗದ ದೂರಿನ ಬಗ್ಗೆ ಚಿಂತನೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಅರ್ಚಕರಿಗೂ ಆಹಾರ ಕಿಟ್….
ಧಾರ್ಮಿಕ ದತ್ತಿ ಇಲಾಖೆಯ ಎ ದರ್ಜೆ ದೇವಸ್ಥಾನಗಳಲ್ಲಿ ಕೊರೋನಾದಿಂದ ಸಮಸ್ಯೆಗೊಳಪಟ್ಟು ಬಡವರು, ಸಂತ್ರಸ್ತರು, ವಲಸೆ ಕಾರ್ಮಿಕರಿಗೆ ಊಟ ನೀಡುವ ವ್ಯವಸ್ಥೆ ಕೈಗೊಂಡಿದ್ದು ಈವರೆಗೆ ಏಳೂವರೆ ಲಕ್ಷಕ್ಕೂ ಅಧಿಕ ಊಟ ವಿತರಿಸಲಾಗಿದೆ. ಎ,ಬಿ,ಸಿ ದರ್ಜೆಯ ದೇವಸ್ಥಾನಗಳಲ್ಲಿ ಭಕ್ತಾಧಿಗಳು ಬಾರದ ಹಿನ್ನೆಲೆ ಅರ್ಚಕರಿಗೆ ತಟ್ಟೆ ಕಾಸಿಲ್ಲ ಎನ್ನುವ ವಿಚಾರದ ಹಿನ್ನೆಲೆ 34ಸಾವಿರಕ್ಕೂ ಅಧಿಕ ಅರ್ಚಕರಿಗೆ ಆಯಾಯ ಜಿಲ್ಲೆಯಲ್ಲಿ ಆಹಾರ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿನ 900ಕ್ಕೂ ಅಧಿಕ ಅರ್ಚಕರಿಗೆ ಜಿಟ್ ನೀಡುವ ವ್ಯವಸ್ಥೆ ಸೇರಿದಂತೆ ರಾಜ್ಯದ ಎಲ್ಲೆಡೆಯೂ ಈ ಕಾರ್ಯ ನಡೆಯುತ್ತದೆ. ಇನ್ನು ಅರ್ಚಕರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುತ್ತದೆ. ಇನ್ನು ಉಚಿತ ಸಾಮೂಹಿಕ ವಿವಾಹದ ಕುರಿತು ಮಾತನಾಡಿದ ಅವರು ದಾರ್ಮಿಕ ಪರಿಷತ್ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ಸೂಕ್ತ ದಿನಾಂಕ ಪ್ರಕಟ ಮಾಡುತ್ತೇವೆಂದರು.

ಫೋಟೋಗ್ರಾಫರ್ಸ್ ಸೇರಿದಂತೆ ಇತರರ ಬಗ್ಗೆ….: ಫೋಟೋಗ್ರಾಫರ್, ಶಾಮಿಯಾನ ಕಾರ್ಮಿಕರು, ಮೀನುಗಾರರಲ್ಲಿ ಕೆಲವರು ಮತ್ತು ಟೈಲರಿಂಗ್ ಕೆಲಸ ಮಾಡುವರಿಗೂ ಫ್ಯಾಕೇಜ್ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ. ದೇವಾಡಿಗ ಸಮಾಜದವರು ವಾದ್ಯ ನುಡಿಸುವರ ಪರ, ಮಡಿವಾಳ ವೃತ್ತಿ, ಮಡಿಕೆ ಮಾಡುವರು, ಅಡುಗೆ ಕೆಲಸದವರು, ಶೇಂದಿ ತೆಗೆಯುವರ ಸಹಿತ ಅವರವರ ವೃತ್ತಿ ಹಾಗೂ ಸಮಾಜದ ಆಧಾರದಲ್ಲಿ ಬೇಡಿಕೆಯಿಟ್ಟಿದ್ದಾರೆ. ಎಲ್ಲರ ಬೇಡಿಕೆ ಈಡೆರಿಕೆ ಸಲುವಾಗಿ ಸರಕಾರ ತೀರ್ಮಾನ ಕೈಗೊಳ್ಳಬೇಕು. ಕೊರೋನಾದಿಂದ ಬದುಕು ಕಳೆದುಕೊಂಡವರು, ಆತಂಕದಲ್ಲಿರುವರ ಜೊತೆ ಸರಕಾರ ಇದೆ ಎಂದರು. ಇನ್ನು ಪತ್ರಕರ್ತರ ಆರೋಗ್ಯ ತಪಾಸಣೆ ದ.ಕ. ಜಿಲ್ಲೆಯಲ್ಲಿ ನಡೆದಿದೆ. ಉಡುಪಿಯಲ್ಲೂ ಮಾಡುವ ಬಗ್ಗೆ ಉಡುಪಿ ಡಿಸಿಯವರ ಬಳಿ ಮಾತನಾಡುವೆ. ಪತ್ರಕರ್ತರಿಗೆ ಪ್ಯಾಕೇಜ್ ಒದಗಿಸುವ ಬಗ್ಗೆ ಸಿಎಂ ಅವರ ಬಳಿ ಮಾತನಾಡುವೆ ಎಂದರು.

ಕ್ವಾರೆಂಟೈನ್ ಅತ್ಯಗತ್ಯ….
ಮುಂಬೈನಿಂದ ಉಡುಪಿ ಜಿಲ್ಲೆಗೆ ಬರುವರು ಆಪ್ ಮೂಲಕ ಪಾಸ್ ಪಡೆದು ಇಲ್ಲಿಗೆ ಆಗಮಿಸಿ 14 ದಿನಗಳ ಕಾಲ ಸರಕಾರ ನಿಗದಿ ಪಡಿಸಿದ ಸ್ಥಳದಲ್ಲಿ ಕ್ವಾರೆಂಟೈನ್ ಆಗಬೇಕು ಎಂಬ ತೀರ್ಮಾನ ಆಗಿದೆ. ಆತಂಕ ಸೃಷ್ಟಿಸುವುದು ಬೇಡ, ತಾಳ್ಮೆಯಿಂದ ಇದ್ದು ಆದೇಶ ಪಾಲನೆ ಮಾಡಿ. ಹೊರ ರಾಜ್ಯದಲ್ಲಿರುವ ಕೆಲವರು ರೈಲು ಬೇಡಿಕೆ ಇಟ್ಟಿದ್ದು ರೈಲ್ವೇ ಸಚಿವರ ಈ ಬಗ್ಗೆ ಮಾತನಾಡಿದ್ದೇನೆ ಎಂದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.