ಕರಾವಳಿ

ಆಸಕ್ತಿ ಇಲ್ಲಾಂದ್ರೆ ಇಲಾಖೆ ಬಿಟ್ಟು ಹೋಗಿ: ಖಡಕ್ ಎಚ್ಚರಿಕೆ ಕೊಟ್ಟ ಸಂಸದ ಬಿ.ವೈ. ರಾಘವೇಂದ್ರ (Video)

Pinterest LinkedIn Tumblr

ಉಡುಪಿ: ಕಳಪೆ ಕಾಮಗಾರಿ, ವಿಳಂಭ ಧೋರಣೆ ಸಹಿಸಲ್ಲ. ನಾನಿಲ್ಲಿ ಯಾವುದೇ ಹರಿಕಥೆ ಕೇಳಲು ಬಂದಿಲ್ಲ. ಸ್ಪಷ್ಟವಾಗಿ ವಿಚಾರಗಳನ್ನು ಹೇಳಿ. ಆಸಕ್ತಿ ಇದ್ದರಷ್ಟೇ ಕೆಲಸಮಾಡಿ. ಇಲ್ಲವೇ ಇಲಾಖೆ ಬಿಟ್ಟು ಹೋಗಿ………ಹೀಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ. ಕಮಲಶಿಲೆಯಲ್ಲಿ ಶನಿವಾರ ಸಂಜೆ ನಡೆದ ವಿವಿಧ ಅಧಿಕಾರಿಗಳ ಜೊತೆಗಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಜನರ ಕೆಲಸವನ್ನು ಪಾರದರ್ಶಕವಾಗಿ ಹಾಗೂ ಪ್ರಾಮಾಣಿಕವಾಗಿ ಮಾಡುವಂತೆ ಸೂಚಿಸಿದರು.

ಸಭೆ ಆರಂಭದ ಮೊದಲಿಗೆ ಮರವಂತೆ ಬಂದರು, ಗಂಗೊಳ್ಳಿ ಜೆಟ್ಟಿ ಕಾಮಗಾರಿ ಬಗ್ಗೆ ಅಸಮಾಧಾನವನ್ನು ಸಂಸದರು ವ್ಯಕ್ತಪಡಿಸಿದರು. ಸಮಸ್ಯೆಯ ಬಗ್ಗೆ ಮೀನುಗಾರೊಬ್ಬರು ನೋವು ಹೇಳಿಕೊಂಡಿದ್ದು ಇದರಿಂದ ಸಂಬಂದಪಟ್ಟ ಅಧಿಕಾರಿಗಳ ವಿರುದ್ಧ ಗರಂ ಆದ ಸಂಸದ ಕಳಪೆ ಕಾಮಗಾರಿ ಮಾಡಿದವನನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ತರಾಟೆಗೆತ್ತಿಕೊಂಡರು. ಮತ್ತು ವಿಳಂಭ ಗತಿಯ ಕಾಮಗಾರಿ ಬಗ್ಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇನ್ನು ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರಸ್ತಾಪವಾಗಿದ್ದು ಗ್ರಾಮೀಣ ಭಾಗಕ್ಕೆ ಉತ್ತಮ ನೆಟ್ ವರ್ಕ್ ಸೇವೆ ಕೊಡಲು ಖಾಸಗಿ ಕಂಪೆನಿಗೆ ಸೂಚನೆ ನೀಡಿದ್ದು ಮಾತ್ರವಲ್ಲದೇ ಅದಕ್ಕಿರುವ ಕೆಲವು ಕಾನೂನು ತೊಡಕುಗಳನ್ನು ಪರಿಹರಿಸಿ ಗ್ರಾಮೀಣ ಭಾಗಕ್ಕೆ ಮೊಬೈಲ್ ಸಂಪರ್ಕ ಸೇವೆ ಉತ್ತಮಗೊಳಿಸುವಂತೆ ಡಿಸಿ, ಸಿಇಓ ಹಾಗೂ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಇದೇ ವೇಳೆ ಕೆಲವು ಕಡೆ ರಸ್ತೆಯನ್ನು ಸಗಣಿ ನೀರು ಹಾಕಿದಂತೆ ಮಾಡಲಾಗುತ್ತಿದೆ ಎಂದು ಕೆ.ಆರ್.ಐ.ಡಿ.ಎಲ್ ಕಾಮಗಾರಿ ಬಗ್ಗೆ ಬೈಂದೂರು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ಗುತ್ತಿಗೆದಾರರು ಬೇಕಾಬಿಟ್ಟಿ ಕೆಲಸ ಮಾಡ್ತಾರೆ, ಹಣ ನುಂಗುವ ವ್ಯವಸ್ಥೆಯನ್ನು ನಾನು ಸಹಿಸಲ್ಲ ಎಂದು ಅವರು ಗುಡುಗಿದರು.

ಸಭೆಯಲ್ಲಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ರಾಜಪ್ಪ, ಜಂಟಿ ಕಾರ್ಯದರ್ಶಿ ಶ್ರೀರಂಗಯ್ಯ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಜಿಲ್ಲಾಪಂಚಾಯತ್ ಸಿಇಓ ಪ್ರೀತಿ ಗೆಹ್ಲೋಟ್, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಉಪವಿಭಾಗಾಧಿಕಾರಿ ರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ್ ಉಡುಪ, ಜಿ.ಪಂ ಸದಸ್ಯರಾದ ಬಾಬು ಹೆಗ್ಡೆ, ರೋಹಿತ್ ಕುಮಾರ್ ಶೆಟ್ಟಿ, ಸುರೇಶ್ ಬಟವಾಡಿ, ಶೋಭಾ ಜಿ. ಪುತ್ರನ್, ಕುಂದಾಪುರ ತಾ.ಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್ ಮೊದಲಾದವರು ಇದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.